11 ತಾಸು ಕಾರ್ಯಾಚರಣೆ ಯಶಸ್ವಿ; ಚಿರತೆ ಸೆರೆ

7

11 ತಾಸು ಕಾರ್ಯಾಚರಣೆ ಯಶಸ್ವಿ; ಚಿರತೆ ಸೆರೆ

Published:
Updated:
11 ತಾಸು ಕಾರ್ಯಾಚರಣೆ ಯಶಸ್ವಿ; ಚಿರತೆ ಸೆರೆ

ತುಮಕೂರು: ಸುದೀರ್ಘ 11 ತಾಸುಗಳ ಕಾರ್ಯಾಚರಣೆ ನಂತರ ಇಲ್ಲಿನ ಜಯನಗರದ ರಂಗನಾಥ್ ಎಂಬುವವರ ಮನೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅರವಳಿಕೆ ತಜ್ಞರು ಸೆರೆ ಹಿಡಿದರು.

ಶನಿವಾರ ಬೆಳಿಗ್ಗೆ 9ರ ಸಮಯದಲ್ಲಿ ರಂಗನಾಥ್ ಹಾಗೂ ಅವರ ಸೊಸೆ ವಿನುತಾ ಮನೆಯ ಹಾಲ್‌ನಲ್ಲಿ ಟಿವಿ ನೋಡುತ್ತಿದ್ದರು. ಬಾಗಿಲನ್ನು ಯಾರೋ ಬಡಿದಂತೆ ಕೇಳಿಸಿ, ವಿನುತಾ ಬಾಗಿಲು ತೆರೆದಿದ್ದಾರೆ. ಆಗ ಏಕಾಏಕಿ ಚಿರತೆ ಮನೆಯ ಒಳಗೆ ನುಗ್ಗಿದೆ.

ರಂಗನಾಥ್ ಸೊಸೆ ರಕ್ಷಣೆಗೆ ಮುಂದಾಗಿದ್ದಾರೆ. ಸ್ನಾನದ ಕೋಣೆಯಲ್ಲಿದ್ದ ಪತ್ನಿ ವನಜಾಕ್ಷಿ ಅವರಿಗೆ ‘ಚಿರತೆ ಮನೆಯೊಳಗೆ ಬಂದಿದೆ. ಹೊರಗೆ ಬರಬೇಡ’ ಎಂದು ಕೂಗಿ ಹೇಳಿದ್ದಾರೆ. ಸೊಸೆಯನ್ನು ಸಹ ಸ್ನಾನದ ಕೊಠಡಿಗೆ ಕಳುಹಿಸಿ, ಮನೆಯಿಂದ ಹೊರಗೆ ಓಡಿ ಬಂದು ಬಾಗಿಲು ಮುಚ್ಚಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಒಬ್ಬರಿಂದ ಒಬ್ಬರಿಗೆ ಮಾಹಿತಿ ಹರಡಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಚಿರತೆ ಮನೆಯ ಯಾವ ಸ್ಥಳದಲ್ಲಿ ಇದೆ, ಯಾವ ರೀತಿ ಸೆರೆ ಹಿಡಿಯ ಬೇಕು ಎನ್ನುವ ಗೊಂದಲ ಅಧಿಕಾರಿಗಳಲ್ಲಿ ಮನೆ ಮಾಡಿತ್ತು. ಉದ್ದನೆಯ ಕೋಲಿಗೆ ಮೊಬೈಲ್ ಕಟ್ಟಿ ಕ್ಯಾಮೆರಾ ಚಾಲನೆ ಮಾಡಿ ಚಿರತೆಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಲಾಯಿತು.

ಈ ನಡುವೆ ಸ್ನಾನದ ಕೋಣೆಯಲ್ಲಿದ್ದ ವನಿತಾ ಹಾಗೂ ವನಜಾಕ್ಷಿ ಅವರನ್ನು ಕಿಟಕಿಯ ಮೂಲಕ ಸಂಪರ್ಕಿಸಲಾಯಿತು. ಅವರಿಗೆ ಮೊಬೈಲ್ ಸಹ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಅವರು ಕಿಟಕಿಯ ಬಳಿ ಹೋಗಿ ಇಬ್ಬರಿಗೂ ಧೈರ್ಯ ತುಂಬಿದರು.

ಮಧ್ಯಾಹ್ನದ ವೇಳೆಗೆ ಹಾಸನ ಮತ್ತು ಬನ್ನೇರುಘಟ್ಟದಿಂದ ಅರಿವಳಿಕೆ ತಜ್ಞರ ತಂಡ ಬಂದಿತು. ಬಾಗಿಲಿಗೆ ಹೊಂದಿಕೊಂಡಂತೆ ಬೋನು ಇಡಲಾಯಿತು. ಕಿಟಕಿಯನ್ನು ಒಡೆದು ಸ್ನಾನದ ಕೋಣಿಯಲ್ಲಿದ್ದ ಅತ್ತೆ ಮತ್ತು ಸೊಸೆಯನ್ನು ಮಧ್ಯಾಹ್ನ 3ರ ವೇಳೆಗೆ ಹೊರಗೆ ಕರೆದುಕೊಂಡು ಬರಲಾಯಿತು.

ನಂತರ ಚಿರತೆ ಸೆರೆ ಕಾರ್ಯಾಚರಣೆ ಮತ್ತಷ್ಟು ಚುರುಕು ಪಡೆಯಿತು. ಬಾಗಿಲು ತೆಗೆದು ನೇರವಾಗಿ ಕಾರ್ಯಾಚರಣೆ ನಡೆಸಬೇಕು ಎನ್ನುವ ಬಗ್ಗೆ ಅರಿವಳಿಕೆ ತಜ್ಞರು ಚರ್ಚಿಸಿದರು. ಅಷ್ಟರಲ್ಲಿ ಅಡುಗೆ ಕೋಣಿಯಲ್ಲಿ ಸದ್ದಾಗಿದ್ದು ಅಲ್ಲಿ ಚಿರತೆ ಇರುವುದು ಗಮನಕ್ಕೆ ಬಂದಿದೆ.

ತಜ್ಞರಾದ ಡಾ.ಸುಜಯ್ ಹಾಗೂ ಡಾ.ಮುರಳೀಧರ್ ಎರಡು ಬಾರಿ ಅರಿವಳಿಕೆ ಪ್ರಯೋಗಿಸಿದರು. ಚಿರತೆಗೆ ಮಂಪರು (ಮೂರ್ಛೆ) ಆವರಿಸಿ ನೆಲಕ್ಕೊರಗಿತು. 20 ನಿಮಿಷ ಪರಿಶೀಲನೆಗೆ ಇಡಲಾಯಿತು. ಬಳಿಕ ಬಾಗಿಲು ತೆರೆದು ಚಿರತೆಯನ್ನು ಹೊರಕ್ಕೆ ತರಲಾಯಿತು. ನಂತರ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳ ಕಚೇರಿಗೆ ಕೊಂಡೊಯ್ದರು.

ಬೆಳಿಗ್ಗೆಯೇ ನಗರಕ್ಕೆ ಕಾಲಿಟ್ಟ ಚಿರತೆ

ಬೆಳಿಗ್ಗೆ 8ರ ಹೊತ್ತಿಗೆ ಜಯನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಾರ್ವಜನಿಕರು ಜಯನಗರ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚಿರತೆಗಾಗಿ ಬಡಾವಣೆಯಲ್ಲಿ ಹುಡುಕಾಟ ನಡೆಸಿದಾಗ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅವಿತು ಕುಳಿತಿದ್ದು ಕಂಡಿದೆ. ಸೆರೆಗೆ ಮುಂದಾದಾಗ ಗಾಬರಿಗೊಂಡು ಕಟ್ಟಡದಿಂದ ಹೊರಗೆ ಜಿಗಿದಿದೆ.

ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗೋವಿಂದರಾಜ್ ಅವರ ಮೇಲೆ ದಾಳಿ ನಡೆಸಿದೆ. ಅವರ ಬೆನ್ನಿಗೆ ಪರಚಿದೆ. ಅಲ್ಲಿಂದ ಓಡಿ ರಂಗನಾಥ್ ಅವರ ಮನೆ ಸೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry