ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ

7

ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ

Published:
Updated:

ಮೈಸೂರು: ಗೋಹತ್ಯೆ ನಿಷೇಧಿಸಬೇಕು ಹಾಗೂ ದೇಸಿ ಗೋತಳಿ ರಕ್ಷಿಸುವಂತೆ ಕೋರಿ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಐವರು ಸ್ವಾಮೀಜಿಗಳು ಶನಿವಾರ ರಕ್ತದಲ್ಲಿ ಪತ್ರ ಬರೆದರು.

ತಮ್ಮದೇ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಹೊಸಮಠದ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು. ನೀಲಕಂಠ ಮಠದ ಸಿದ್ದಮಲ್ಲ ಸ್ವಾಮೀಜಿ, ಸವಿತಾ ಸಮಾಜದ ಶ್ರೀಕರ ಬಸವಾನಂದ ಸ್ವಾಮೀಜಿ, ಮೇಲುಕೋಟೆ ಇಳೈ ಆಳ್ವಾರ ಸ್ವಾಮೀಜಿ, ತ್ರಿಪುರ ಭೈರವಿ ಮಠದ ಶ್ರೀಕೃಷ್ಣ ಮೋಹನಾನಂದಗಿರಿ ಗೋಸ್ವಾಮೀಜಿ ಕೈಜೋಡಿಸಿದರು.

ಭಾರತೀಯ ಗೋ ಪರಿವಾರ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದ ಕೊನೆಯ ದಿನ ಪತ್ರ ಚಳವಳಿ ನಡೆಯಿತು. ಅಗ್ರಹಾರದ ಹೊಸಮಠದಲ್ಲಿ ಸ್ವಾಮೀಜಿಗಳ ದೇಹದಿಂದ 10 ಗ್ರಾಂ ರಕ್ತವನ್ನು ಪ್ರಯೋಗಾಲದ ಸಿಬ್ಬಂದಿ ಹೊರತೆಗೆದರು. ಇದು ಹೆಪ್ಪುಗಟ್ಟದಂತೆ ಸಲ್ಯೂಷನ್‌ ಬೆರೆಸಿ ಬಾಟಲಿಯಲ್ಲಿ ಇಡಲಾಯಿತು. ಬಳಿಕ ರಕ್ತದಲ್ಲಿ ಪೆನ್ನನ್ನು ಅದ್ದಿ ಸ್ವಾಮೀಜಿಗಳು ಪತ್ರ ಬರೆದರು.

‘ನನ್ನ ಬದುಕಿನ, ಭಾವನೆಯ ಮತ್ತು ಭಾರತೀಯ ಸಂವಿಧಾನದ 48ನೇ ಪರಿಚ್ಛೇದವನ್ನು ಪಾಲಿಸುವ ದೃಷ್ಟಿಯಿಂದ ಗೋಹತ್ಯೆ ನಿಷೇಧವನ್ನು ಜಾರಿಗೆ ತರಬೇಕು ಎಂದು ಭಾರತೀಯ ಪ್ರಜೆಯಾಗಿ ನಾನು ಸ್ವ ಇಚ್ಛೆಯಿಂದ ಹಾಗೂ ಸ್ವಹಸ್ತಾಕ್ಷರದಿಂದ ಒತ್ತಾಯಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಐವರು ಸಂತರು ರಕ್ತದಲ್ಲಿ ಬರೆದ ಪತ್ರ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಕಿರುವ ಸಹಿಯನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಲಾಗುವುದು’ ಎಂದು ಭಾರತೀಯ ಗೋ ಪರಿವಾರದ ಮುಖಂಡ ರಾಕೇಶ್‌ ಭಟ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry