6

‘ನಗರ ಕೋಟೆ’ ಸಮೀಪ ಪತ್ತೆಯಾಗಿದ್ದ ಕಬ್ಬಿಣದ ಸಾಮಗ್ರಿಗಳು ಟಿಪ್ಪು ಕಾಲದ ರಾಕೆಟ್‌ಗಳು!

Published:
Updated:
‘ನಗರ ಕೋಟೆ’ ಸಮೀಪ ಪತ್ತೆಯಾಗಿದ್ದ ಕಬ್ಬಿಣದ ಸಾಮಗ್ರಿಗಳು ಟಿಪ್ಪು ಕಾಲದ ರಾಕೆಟ್‌ಗಳು!

ಶಿವಮೊಗ್ಗ: ಕೆಳದಿ ಅರಸರ ಕೊನೆಯ ರಾಜಧಾನಿ ‘ನಗರ ಕೋಟೆ’ ಸಮೀಪ ಪತ್ತೆಯಾಗಿದ್ದ 150 ಕಬ್ಬಿಣದ ಸಾಮಗ್ರಿಗಳು ಟಿಪ್ಪು ಸುಲ್ತಾನನ ಕಾಲದ ರಾಕೆಟ್‌ಗಳು ಎಂದು ಪುರಾತತ್ವ ಇಲಾಖೆ ಹಾಗೂ ಇತಿಹಾಸ ಸಂಶೋಧಕರು ಖಚಿತಪಡಿಸಿದ್ದಾರೆ.

ಅವುಗಳನ್ನು ಶಿವಪ್ಪ ನಾಯಕ ಅರಮನೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದ್ದು, ಶೀಘ್ರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಆ ಮೂಲಕ ವಿಶ್ವದ ಮೊದಲ ರಾಕೆಟ್‌ ತಂತ್ರಜ್ಞಾನದ ಅಧಿಕ ರಾಕೆಟ್ ಹೊಂದಿರುವ ವಿಶ್ವದ ಮೊದಲ ಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗುತ್ತಿದೆ.

ಮಲೆನಾಡು ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಾಗಿದ್ದು, ಹೊಸನಗರ ತಾಲ್ಲೂಕಿನ ನಗರ ಗ್ರಾಮದ ನಾಗರಾಜ್ ರಾವ್ ಅವರು ನೀರಿನ ಕೊರತೆ ನೀಗಿಸಲು ಕೆಲವು ತಿಂಗಳ ಹಿಂದೆ ಬಾವಿ ತೋಡಿಸುವಾಗ ವಿಭಿನ್ನ ಅಳತೆಯ ಕಬ್ಬಿಣದ ರಾಕೆಟ್‌ಗಳು ದೊರೆತಿದ್ದವು.

ಆರಂಭದಲ್ಲಿ ಅವುಗಳು ಐತಿಹಾಸಿಕ ಮಹತ್ವದ ಸಾಮಗ್ರಿಗಳು ಎಂಬ ಅರಿವು ಅವರಿಗೆ ಇರಲಿಲ್ಲ. ಆದರೂ, ಕೋಟೆ ಸಮೀಪದ ಹೊಲದಲ್ಲಿ ಸಿಕ್ಕಿದ್ದ ಕಾರಣ ಅವುಗಳನ್ನು ಶಿವಮೊಗ್ಗದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡಿದ್ದರು. ಇಲಾಖೆಯ ನಿವೃತ್ತ ಅಧಿಕಾರಿ ಎಚ್‌.ಎಂ.ಸಿದ್ದನಗೌಡ, ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ, ಇತಿಹಾಸ ಸಂಶೋಧಕ ನಿಧಿನ್ ಜಿ. ಓಲೇಕಾರ್ ಆಳವಾದ ಅಧ್ಯಯನ ನಡೆಸಿದ ಬಳಿಕ ಅವು ಟಿಪ್ಪು ಕಾಲದ ಕಬ್ಬಿಣದ ರಾಕೆಟ್‌ ಎಂಬುದು ಖಚಿತಪಡಿಸಿದ್ದಾರೆ.

ರಾಕೆಟ್‌ ಇತಿಹಾಸ: ಕರ್ನಾಟಕದ ಪ್ರಸಿದ್ಧ ರಾಜವಂಶಗಳಲ್ಲಿ (1499-1763) ಕೆಳದಿ ಅರಸರು ಪ್ರಮುಖರು. ಅವರ ಕೊನೆಯ ರಾಜಧಾನಿ ಬಿದನೂರು. 1763ರಲ್ಲಿ ಈ ಕೋಟೆಗೆ ಮುತ್ತಿಗೆ ಹಾಕಿದ ಹೈದರಾಲಿ ಮೈಸೂರು ಸಂಸ್ಥಾನಕ್ಕೆ ಸೇರ್ಪಡೆ ಮಾಡಿದ್ದ. ಅಂದಿನಿಂದ ಇದು ಹೈದರ್‌ ನಗರ ಎಂದು ಹೆಸರಾಯಿತು. ಅದೇ ಈಗಿನ ಹೊಸನಗರ ತಾಲ್ಲೂಕಿನ ನಗರ. ಹಾಗಾಗಿ, ನಗರ ಕೋಟೆ ಎಂದೇ ಕರೆಯಲಾಗುತ್ತಿದೆ.

ಹೈದರಾಲಿ ನಂತರ ಈ ಕೋಟೆಯಲ್ಲಿ ಟಿಪ್ಪು ಟಂಕಸಾಲೆ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಥಾಪಿಸಿದ್ದ. ಈ ಕೋಟೆಯಲ್ಲೇ ಕಬ್ಬಿಣದ ರಾಕೆಟ್‌ಗಳನ್ನೂ ತಯಾರಿಸಲಾಗುತ್ತಿತ್ತು. 1799ರಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಆಂಗ್ಲೊ–ಮೈಸೂರು ಯುದ್ಧದಲ್ಲಿ ಟಿಪ್ಪು ಮೃತಪಟ್ಟ ನಂತರ ಬ್ರಿಟಿಷರು ರಾಕೆಟ್ ಮಾದರಿಯನ್ನು ತೆಗೆದುಕೊಂಡು ಹೋದರು. ಸರ್ ವಿಲಿಯಂ ಕಾಂಗ್ರೀವ್ 1804ರಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಿದ್ದರು. ಮುಂದೆ ಈ ತಂತ್ರಜ್ಞಾನ ಕಾಂಗ್ರೀವ್ ರಾಕೆಟ್‌ ಎಂದೇ ಪ್ರಸಿದ್ಧಿ ಪಡೆಯಿತು.

‘ನಗರದ ನಾಗರಾಜ್ ರಾವ್ ಅವರು ಕೆಲ ತಿಂಗಳ ಹಿಂದೆ ಕಬ್ಬಿಣದ ಸಾಮಗ್ರಿ ಕೊಟ್ಟಿದ್ದರು. ಅವನ್ನು ಸಂಶೋಧಕರು, ಇತಿಹಾಸ ತಜ್ಞರಿಗೆ ಕಳುಹಿಸಲಾಗಿತ್ತು. ಅವುಗಳು ಟಿಪ್ಪು ಕಾಲದ ರಾಕೆಟ್‌ ಎಂದು ಎಲ್ಲರೂ ದೃಢಪಡಿಸಿದ್ದಾರೆ.

(ಟಿಪ್ಪು ಕಾಲದ ಸೈನಿಕ ಬಿದಿರಿನ ಕೋಲಿಗೆ ಕಬ್ಬಿಣದ ರಾಕೆಟ್ ಸಿಕ್ಕಿಸಿ, ಉಡಾಯಿಸಲು ಸಿದ್ಧತೆ ನಡೆಸುತ್ತಿದ್ದ ಚಿತ್ರ. (ಪುರಾತತ್ವ  ಇಲಾಖೆ ಸಂಗ್ರಹದಲ್ಲಿರುವ ಚರಿತ್ರೆಯ ಪುಸ್ತಕದಲ್ಲಿನ ಚಿತ್ರ)

ಇಷ್ಟೊಂದು ರಾಕೆಟ್ ಇದೇ ಮೊದಲು

ವಿಶ್ವದಲ್ಲೇ ಮೊದಲ ಬಾರಿ ಯದ್ಧದಲ್ಲಿ ರಾಕೆಟ್ ಬಳಸಿದ ಶ್ರೇಯ ಮೈಸೂರು ಸಂಸ್ಥಾನ ಆಳಿದ ಟಿಪ್ಪುಗೆ ಸಲ್ಲುತ್ತದೆ. ಟಿಪ್ಪುವನ್ನು ರಾಕೆಟ್ ಜನಕ ಎಂದೇ ಬಿಂಬಿಸಿದ್ದರೂ, ಪಳವಳಿಕೆಗಳು ಸಿಕ್ಕಿದ್ದು ಮಾತ್ರ ಅತ್ಯಲ್ಪ. ಪ್ರಸ್ತುತ ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಮೂರು, ಇಂಗ್ಲೆಡ್‌ನಲ್ಲಿರುವ ಯುದ್ಧಗಳಲ್ಲಿ ಉಪಯೋಗಿಸಿದ ಆಯುಧಗಳ ಸಂಗ್ರಹಾಲಯದಲ್ಲಿ ಎರಡು ರಾಕೆಟ್‌ಗಳು ಇವೆ. ಇಷ್ಟೊಂದು ಪ್ರಮಾಣದ ಕಬ್ಬಿಣದ ರಾಕೆಟ್‌ಗಳು ದೊರೆತಿರುವುದು ಇದೇ ಮೊದಲು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry