ಜಾನುವಾರುಗಳಲ್ಲಿ ಮತ್ತೆ ಬ್ರುಸಲ್ಲೋಸಿಸ್‌ ಉಲ್ಬಣ

7

ಜಾನುವಾರುಗಳಲ್ಲಿ ಮತ್ತೆ ಬ್ರುಸಲ್ಲೋಸಿಸ್‌ ಉಲ್ಬಣ

Published:
Updated:
ಜಾನುವಾರುಗಳಲ್ಲಿ ಮತ್ತೆ ಬ್ರುಸಲ್ಲೋಸಿಸ್‌ ಉಲ್ಬಣ

ರಾಮನಗರ: ಜಾನುವಾರುಗಳನ್ನು ಕಾಡುವ ಬ್ರುಸಲ್ಲೋಸಿಸ್‌ (ಕಂದು) ರೋಗ ಉಲ್ಬಣಗೊಳ್ಳುತ್ತಿದ್ದು, ಹೈನುಗಾರಿಕೆ ನಂಬಿದವರನ್ನು ಹೈರಾಣಾಗಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ಡೇರಿ ಹಾಗೂ ಪಶುಪಾಲನಾ ಇಲಾಖೆಯು ತರಾತುರಿಯಲ್ಲಿ ಲಸಿಕೆ ಕಾರ್ಯ ಆರಂಭಿಸಿವೆ.

ಕಳೆದ ವರ್ಷ ಕೋಲಾರದಲ್ಲಿ ಹಸುಗಳಲ್ಲಿ ಈ ರೋಗ ಪತ್ತೆಯಾಗಿ ಹೆಚ್ಚು ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಬೆಂಗಳೂರು ಸಹಕಾರ ಹಾಲು ಒಕ್ಕೂಟವು (ಬೆಂಗಳೂರು ಡೇರಿ) ತನ್ನ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿನ ಹಾಲು ಉತ್ಪಾದಕ ಸಂಘಗಳ ಹಾಲಿನ ಮಾದರಿಗಳ ಪರೀಕ್ಷೆಗೆ ಮುಂದಾಗಿತ್ತು. ಇದರಲ್ಲಿ 337 ಸಂಘಗಳಲ್ಲಿನ ಹಾಲಿನ ಮಾದರಿಯಲ್ಲಿ ಬ್ರುಸಲ್ಲೋಸಿಸ್‌ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ.

ಮಿಲ್ಕ್‌ ರಿಂಕ್‌ ಟೆಸ್ಟ್‌ (ಎಂಆರ್‌ಟಿ) ವಿಧಾನದ ಮೂಲಕ ಹಾಲಿನಲ್ಲಿ ಬ್ರುಸಲ್ಲೋಸಿಸ್ ಬ್ಯಾಕ್ಟೀರಿಯಾ ಇರುವಿಕೆಯನ್ನು ಪತ್ತೆ ಮಾಡಲಾಗುತ್ತದೆ. ಬೆಂಗಳೂರು ಡೇರಿ ವ್ಯಾಪ್ತಿಯಲ್ಲಿ 2012ರಲ್ಲಿ ಎಲ್ಲ ಸಂಘಗಳ ಹಾಲಿನ ಮಾದರಿಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಶೇ 6ರಿಂದ 8ರಷ್ಟು ಪ್ರಮಾಣದ ಮಾದರಿಗಳಲ್ಲಿ ಈ ರೋಗಾಣು ಪತ್ತೆಯಾಗಿತ್ತು. 2017ರ ನವೆಂಬರ್‌ನಲ್ಲಿ ನೀಡಲಾದ ವರದಿಯಲ್ಲಿ ಈ ಪ್ರಮಾಣವು ಶೇ 16ಕ್ಕೆ ಏರಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಹಸು ಮಾತ್ರವಲ್ಲದೆ ದನ, ಹೋರಿ, ಎಮ್ಮೆ, ಮೇಕೆ, ಕುರಿಗಳು ಈ ರೋಗಕ್ಕೆ ತುತ್ತಾಗುತ್ತಿವೆ.

ಆತಂಕ ಏಕೆ?: ಬ್ರುಸಲ್ಲೋಸಿಸ್ ಕಾಯಿಲೆಯು ಒಂದು ಜಾನುವಾರಿನಿಂದ ಮತ್ತೊಂದಕ್ಕೆ ಹಾಗೂ ಜಾನುವಾರಿನಿಂದ ಮನುಷ್ಯನಿಗೂ ಹರಡಬಲ್ಲದು. ಈ ರೋಗಕ್ಕೆ ತುತ್ತಾದ ಜಾನುವಾರಿನ ಹಾಲು, ಜೊಲ್ಲು, ಅಂಡಾಣು ಮೊದಲಾದ ಜೈವಿಕ ದ್ರವಗಳಿಂದ ರೋಗ ಮತ್ತೊಂದು ಪ್ರಾಣಿ ಅಥವಾ ಮನುಷ್ಯನಿಗೆ ಹರಡುತ್ತದೆ.

‘ರೋಗಕ್ಕೆ ತುತ್ತಾಗುವ ಜಾನುವಾರು ಅಥವಾ ಮನುಷ್ಯ ಕ್ರಮೇಣ ಸಂತಾನಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಹಸುವಾದರೆ ಗರ್ಭ ಕಟ್ಟಿದ ನಾಲ್ಕೈದು ತಿಂಗಳ ಬಳಿಕ ಹೊಟ್ಟೆಯಲ್ಲಿಯೇ ಕರು ಸಾಯುತ್ತದೆ. ಪುರುಷರಲ್ಲಿ ಸಂತಾನ ಸಾಮರ್ಥ್ಯ ಕ್ಷೀಣಿಸುತ್ತದೆ. ಮಹಿಳೆಯರು ಗರ್ಭಪಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದಲ್ಲದೆ ಜ್ವರ, ಮಂಡಿ ನೋವು ಮೊದಲಾದ ತೊಂದರೆಗಳು ಬಾಧಿಸುತ್ತವೆ’ ಎಂದು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗ ಕಂಡುಬಂದ ಹಸುಗಳನ್ನು ಕೊಲ್ಲುವುದೇ ಸದ್ಯ ಈ ರೋಗ ನಿಯಂತ್ರಣಕ್ಕೆ ಇರುವ ಪರಿಹಾರ. ಆದರೆ ಜಾನುವಾರುಗಳ ಮೇಲೆ ರೈತರು ಭಕ್ತಿ ಭಾವ ಹೊಂದಿರುವುದರಿಂದ ಅವುಗಳನ್ನು ಕೊಲ್ಲಲು ಬಯಸುವುದಿಲ್ಲ. ಹೀಗಾಗಿ ರೋಗಬಾಧೆಗೆ ಒಳಗಾದ ಹಸುವನ್ನು ಪ್ರತ್ಯೇಕವಾಗಿ ಸಲಹುವಂತೆ, ಅದರ ಉತ್ಪನ್ನಗಳನ್ನು ಬಳಸದಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ’ ಎನ್ನುತ್ತಾರೆ ಡಾ. ಸಿದ್ದರಾಮಯ್ಯ.

ಜಾನುವಾರುಗಳಲ್ಲಿ ಬ್ರುಸಲ್ಲೋಸಿಸ್‌ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ಜೊತೆ ಜಂಟಿ ಲಸಿಕೆ ಅಭಿಯಾನ ಆರಂಭವಾಗಿದೆ. ರೋಗ ಸಂಪೂರ್ಣ ನಿರ್ಮೂಲನೆಗೆ ಒಂದರೆಡು ವರ್ಷ ಬೇಕಾಗಬಹುದು

-ಎ.ರಂಗಸ್ವಾಮಿ

ಬ್ರುಸಲ್ಲೋಸಿಸ್‌ ರೋಗವು ಮನುಷ್ಯರಲ್ಲಿ ಸಂತಾನಶಕ್ತಿ ಸಾಮರ್ಥ್ಯವನ್ನು ಕುಂದಿಸುತ್ತದೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದು ಒಳಿತು

-ಡಾ. ಸಿದ್ದರಾಮಯ್ಯ

ಉಪನಿರ್ದೇಶಕ, ಪಶು ವೈದ್ಯಕೀಯ ಇಲಾಖೆ

ಅಂಕಿ–ಅಂಶ

2124 -ಬೆಂಗಳೂರು ಡೇರಿ ವ್ಯಾಪ್ತಿಯಲ್ಲಿರುವ ಒಟ್ಟು ಹಾಲು ಉತ್ಪಾದಕರ ಸಂಘಗಳು

2086 - ಮಿಲ್ಕ್ ರಿಂಕ್‌ ಪರೀಕ್ಷೆಗೆ ಬಳಸಿಕೊಳ್ಳಲಾದ ಹಾಲಿನ ಮಾದರಿಗಳು

337 -ಸಂಘಗಳಲ್ಲಿನ ಹಾಲಿನ ಮಾದರಿಯಲ್ಲಿ ಬ್ರುಸಲ್ಲೋಸಿಸ್ ಬ್ಯಾಕ್ಟೀರಿಯಾ ಪತ್ತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry