ಭಯದ ನೆರಳಲ್ಲಿ ನರಳಿದ ಸಾಕ್ಷಿ...!

7

ಭಯದ ನೆರಳಲ್ಲಿ ನರಳಿದ ಸಾಕ್ಷಿ...!

Published:
Updated:
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಹಾಡ ಹಗಲಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ನಡೆಯುವ ಕೊಲೆ ಮತ್ತು ಘೋರ ಅಪರಾಧಿಕ ಕೃತ್ಯಗಳನ್ನು ಕಣ್ಣಾರೆ ಕಾಣುವ ಜನರು ನ್ಯಾಯಾಲಯಗಳಿಗೆ ಪ್ರತ್ಯಕ್ಷ ಸಾಕ್ಷಿ ಎನಿಸಿದರೂ ಅವರೆಲ್ಲಾ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯದೇ ಹೋಗಬಹುದು. ಇದರಿಂದ ಬಹಳಷ್ಟು ಬೀಭತ್ಸ ಪ್ರಕರಣಗಳಲ್ಲಿ ದುಷ್ಕರ್ಮಿಗಳು ನಿರ್ದೋಷಿಗಳೆಂದು ಬಿಡುಗಡೆಯಾಗುವುದು ಹೊಸತೇನೂ ಅಲ್ಲ..!

ಈ ರೀತಿಯ ಪ್ರಕರಣಗಳಲ್ಲಿ ಪ್ರತ್ಯಕ್ಷ ಹಾಗೂ ಪಂಚನಾಮೆ ಸಾಕ್ಷಿಗಳು ಬಲವಾಗಿಯೇ ಇದ್ದರೂ ಅವರಿಗೆ ಮುಂದೇನಾದೀತೊ ಎಂಬ ಆತಂಕವಿದ್ದೇ ಇರುತ್ತದೆ. ಇಂತಹ ಪರಿಣಾಮಗಳ ಹೊಣೆಯನ್ನು ಸಮಾಜವೇ ಹೊರಬೇಕಾಗುತ್ತದೆ. ಭವಿಷ್ಯದಲ್ಲಿ ತಮ್ಮ ಜೀವಕ್ಕೆ ಒದಗಬಹುದಾದ ಅಪಾಯ ಹಾಗೂ ನಷ್ಟಗಳಿಗೆ ಎದೆಗೊಡಲು ಬಹಳಷ್ಟು ಪ್ರತ್ಯಕ್ಷ ಸಾಕ್ಷಿಗಳು ತಯಾರಾಗುವುದೇ ಇಲ್ಲ. ಎಷ್ಟೋ ವೇಳೆ ಆರೋಪಿಗಳು ಅಥವಾ ಅವರ ಸಹಚರರಿಂದ ಬೆದರಿಕೆ, ರಾಜಕಾರಣಿಗಳು, ಬಲಾಢ್ಯರು ಹಾಗೂ ಹತ್ತಿರದವರ ಭಾವನಾತ್ಮಕ ಒತ್ತಡಗಳಿಗೆ ಸಿಲುಕಿ ಪ್ರಾಸಿಕ್ಯೂಷನ್‌ ಬೆಂಬಲಕ್ಕೆ ನಿಲ್ಲದೇ ಹಿಂದೆ ಸರಿದುಬಿಡುತ್ತಾರೆ.

ಇಂತಹುದೊಂದು ಘಟನೆಗೆ ಸಾಕ್ಷಿಯಾದದ್ದು ಮಂಡ್ಯದ ಪ್ರಕರಣ. ಇದು 2007ರಲ್ಲಿ ನಡೆದದ್ದು. ಮಂಡ್ಯದ ಮಣ್ಣಿಗೆ ‘ಸಕ್ಕರೆ ನಾಡು’ ಎಂಬ ಖ್ಯಾತಿಯ ಜೊತೆಜೊತೆಗೇ ಲಾಂಗ್, ಮಚ್ಚುಗಳ ಕಲರವದ ಮುಖಾಂತರ ದಾದಾಗಿರಿಯ ಕಮಟೂ ಅಂಟಿದೆ.

ಟೀಂ ಲೀಡರ್‌ ಅಲೋಕ್ ಅಲಿಯಾಸ್ ಪೈ ಮತ್ತು ಅವನ 33 ಜನ ಸಹಚರರಿಗೆ ರಿಯಲ್‌ ಎಸ್ಟೇಟ್‌, ಕೃಷಿ ಹಾಗೂ ಸಣ್ಣಪುಟ್ಟ ವ್ಯವಹಾರಗಳು ಜೀವನೋಪಾಯಕ್ಕೆ ದಾರಿಯಾಗಿದ್ದರೂ ಅವರ ತೋಳ್ಬಲದ ಆರ್ಭಟ ಸುತ್ತಲಿನ ಹತ್ತಾರು ಹಳ್ಳಿಗಳಿಗೂ ಹರಡಿತ್ತು. ಆ ದಿನಗಳಲ್ಲಿ ಪೈ ತಂಡದ ದರ್ಬಾರು ಚೆನ್ನಾಗಿಯೇ ನಡೆಯುತ್ತಿತ್ತು. ಇವರ ತಂಡದಲ್ಲಿದ್ದ ಚೀರನಹಳ್ಳಿ ಮಹೇಶ 28ರ ವಯಸ್ಸಿನ ಕಟ್ಟುಮಸ್ತಾದ ಹುಡುಗ.

ಪೈ ತಂಡಕ್ಕೆ ಪ್ರತಿಯಾಗಿ ಎಂಬಂತೆ ಜಡೇಜಾ ಸೂರ್ಯನ ತಂಡದ ಸದಸ್ಯರೂ ಮಂಡ್ಯದ ಸುತ್ತಮುತ್ತ ತಮ್ಮ ಪ್ರಭಾವ ವಿಸ್ತರಿಸಿಕೊಂಡಿದ್ದರು. ಎರಡೂ ತಂಡಗಳ ನಡುವೆ ಆಗಾಗ್ಗೆ ಸಣ್ಣಪುಟ್ಟ ಘರ್ಷಣೆ, ಹೊಡೆದಾಟ ಮಾಮೂಲು ಎಂಬಂತಿದ್ದವು. ಹಬ್ಬ ಹರಿದಿನಗಳಲ್ಲಿ, ಚುನಾವಣೆಗಳಲ್ಲಿ, ಮಹತ್ವದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎರಡೂ ತಂಡಗಳು ತಮ್ಮ ಮೇಲುಗೈ ಸಾಧಿಸಲು ಹೆಣಗುತ್ತಿದ್ದವು. ಇಬ್ಬರಿಗೂ ತಮ್ಮ ಅಸ್ತಿತ್ವ ಮತ್ತು ಪ್ರತಿಷ್ಠೆಗಳೇ ಮುಖ್ಯವಾಗಿದ್ದವು. ಇವಕ್ಕೆ ಕೊರತೆಯಾದರೆ ಯಾವ ಹಂತಕ್ಕೆ ಹೋಗಲೂ ತಯಾರಿದ್ದಂತೆ ವರ್ತಿಸುತ್ತಿದ್ದರು. ಈ ಕಡು ವೈರತ್ವ ಹೀಗೆಯೇ ಮುಂದುವರಿದಿದ್ದ ಒಂದು ಕೆಟ್ಟ ಗಳಿಗೆಯಲ್ಲಿ ಪೈ ತಂಡದ ಸದಸ್ಯ ಚೀರನಹಳ್ಳಿ ಮಹೇಶನನ್ನು ಜಡೇಜಾ ಸೂರ್ಯನ ತಂಡದ ಸದಸ್ಯರು ಕೊಲೆ ಮಾಡಿಬಿಟ್ಟರು.

ಈ ಘಟನೆಯನ್ನು ಪೈ ತಂಡದ ಸದಸ್ಯರು ತಮ್ಮ ಪ್ರತಿಷ್ಠೆಗೆ ಉಂಟಾದ ಮರ್ಮಾಘಾತ ಎಂದೇ ಭಾವಿಸಿದರು. ಗೆಳೆಯನನ್ನು ಕಳೆದುಕೊಂಡ ದುಃಖ ಮತ್ತು ಆವೇಶಗಳಲ್ಲಿ ಕ್ಷಣವೂ ತಡಮಾಡದೆ ಶಪಥಗೈದೇ ಬಿಟ್ಟರು. ‘ಮಹೇಶಾ, ನಿನ್ನನ್ನು ಮುಗಿಸಿದವರನ್ನು ಸುಮ್ಮನೇ ಬಿಡೋದಿಲ್ಲ. ಯಾವೋನು ನಿನ್ನನ್ನು ಕಡಿದಿದ್ದಾನೋ ಅವನ ಕೈಯನ್ನು; ನಿನ್ನ ಹೆಣಕ್ಕೆ ಹಚ್ಚಿದ ಹಣತೆ ಆರಿಹೋಗುವ ಮುನ್ನ ಸಮಾಧಿಯ ಮುಂದೆ ತಂದಿಡದಿದ್ದರೆ ನಾವು ನಿನ್ನ ಗೆಳೆಯರೇ ಅಲ್ಲ. ನಮ್ಮ ಗಂಡಸ್ತನಕ್ಕೂ ಮರ್ಯಾದೆ ಇಲ್ಲ’ ಎಂಬ ರಣವೀಳ್ಯ ಸ್ವೀಕರಿಸಿಯೇ ಬಿಟ್ಟರು!

ಮಹೇಶನ ಹೆಣದ ಬಳಿಯಿಂದ ಕದಲುವ ಮುನ್ನ ಪ್ರತೀಕಾರಕ್ಕೆ ಸ್ಕೆಚ್‌ ಹಾಕಲು ಸ್ಥಳದಲ್ಲೇ ಸಜ್ಜಾದರು. ಇದಕ್ಕಾಗಿ ಮಹದೇವಗೌಡ ಕಲ್ಯಾಣ ಮಂಟಪದ ಬಳಿ ಒಟ್ಟಿಗೇ ಕಲೆತರು. ಅಲ್ಲಿ ಸ್ಪಲ್ಪಹೊತ್ತು ಇದ್ದು ಒಂದಷ್ಟು ಮಾತುಕತೆಯ ನಂತರ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಬಳಿ ಸೇರಿ ಯಾರ‍್ಯಾರು ಏನೇನು ಮಾಡಬೇಕೆಂಬ ಹುನ್ನಾರಗಳನ್ನೆಲ್ಲಾ ಹಂಚಿಕೊಂಡು ಚದುರಿದರು.

ಅದು 2007ರ ಡಿಸೆಂಬರ್ 7ರ ಬೆಳಗಿನ 11.15ರ ಸಮಯ. ಮಂಡ್ಯ ನಗರ ಎಂದಿನಂತೆ ತನ್ನ ದೈನಂದಿನ ಚಟುವಟಿಕೆಯಲ್ಲಿ ನಿಧಾನವಾಗಿ ಹಗಲಿನ ಬಿಸಿಲಿಗೆ ಮೈ ತೆರೆದುಕೊಂಡಿತ್ತು. ಯಲಿಯೂರು ವೃತ್ತದ ಬಳಿ ತಿಥಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜಡೇಜಾ ಸೂರ್ಯನ ತಂಡ ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿತ್ತು. ಈ ವೃತ್ತದ ಬಳಿಯೇ ಪೈ ತಂಡ ಪ್ರತೀಕಾರದ ಬೇಟೆಗೆ ಹೊಂಚು ಹಾಕಿ ಕುಳಿತಿತ್ತು. ಸ್ಕಾರ್ಪಿಯೊ ಕಾರು ಯಲಿಯೂರು ವೃತ್ತದ ಬಳಿ ಬರುತ್ತಿದ್ದಂತೆಯೇ ಎದುರು ಬದಿಯಿಂದ ಬಂದ ಪೈ ತಂಡದ ಸದಸ್ಯರ ಟಾಟಾ ಸುಮೊ, ಸ್ಕಾರ್ಪಿಯೊಗೆ ಧಡಲ್‌ ಎಂದು ಡಿಕ್ಕಿ ಹೊಡೆಯಿತು. ಏನಾಗುತ್ತಿದೆ ಎಂಬುದನ್ನು ತಿಳಿದು ಎಚ್ಚೆತ್ತುಕೊಳ್ಳುವ ಮುನ್ನವೇ ಸ್ಕಾರ್ಪಿಯೊ ಹಿಂಭಾಗಕ್ಕೆ ಮತ್ತೊಂದು ಟಾಟಾ ಇಂಡಿಕಾ ಕಾರು ಬಂದು ಗುದ್ದಿತು. ಜಡೇಜಾ ತಂಡ ನಡು ರಸ್ತೆಯಲ್ಲಿ ಲಾಕ್‌ ಆಗುತ್ತಿದ್ದಂತೆಯೇ ಪೈ ತಂಡದ ಸದಸ್ಯರು ಸ್ಕಾರ್ಪಿಯೊದೊಳಗಿದ್ದವರ ಮೇಲೆ ಹಸಿದ ಹುಲಿಗಳಂತೆ ಎರಗಿದರು. ಒಳಗಿದ್ದವರನ್ನು ಬಾಗಿಲು ತೆಗೆದು ಹೊರಗೆಳೆದು ಅವರ ಮೇಲೆ ಮಚ್ಚು, ಲಾಂಗುಗಳಿಂದ ದಾಳಿ ನಡೆಸಿದರು. ಮಾರಣಾಂತಿಕ ಏಟುಗಳಿಗೆ ಜಡೇಜಾ ಸೂರ್ಯ ನಿಂತಲ್ಲೇ ನೆಲಕ್ಕುರುಳಿದ. ನೋಡನೋಡುತ್ತಿದ್ದಂತೆ ಅವನು ಸ್ಥಳದಲ್ಲೇ ಪರಂಧಾಮಗೈದರೆ, ಉಳಿದವರು ಎದ್ದೆವೊ ಬಿದ್ದೆವೊ ಎಂದು ಕಾಲ್ಕಿತ್ತರು.

ಪೈ ತಂಡಕ್ಕೆ ತಮ್ಮ ಶಪಥ ಮುಖ್ಯವಾಗಿತ್ತು. ಅದಕ್ಕೆಂದೇ ಜಡೇಜಾ ಸೂರ್ಯನ ಎಡಗೈಯನ್ನು ಕಬ್ಬಿನ ಕೋಲು ಕತ್ತರಿಸಿದಂತೆ ಕಚಕ್ಕೆಂದು ಕತ್ತರಿಸಿತು. ಛಿಳ್ಳನೆ ಚಿಮ್ಮುತ್ತಿದ್ದ ರಕ್ತಸಿಕ್ತ ಕೈಯನ್ನು ಅಂಬುಚ್ಛೇದಗೈದವರಂತೆ, ವೀರಭೂಮಿಯಿಂದ ಕೊಂಡೊಯ್ಯುವ ವಿಜಯದ ಸಂಕೇತದಂತೆ ರಣಕೇಕೆ ಹಾಕುತ್ತಾ ತಮ್ಮೊಂದಿಗೆ ಕೊಂಡೊಯ್ದು ಮಹೇಶನ ಸಮಾಧಿಯ ಮುಂದಿಟ್ಟರು...! ಮಣ್ಣೊಳಗೆ ಮಣ್ಣಾದವನ ಮುಂದೆ ಕುಳಿತು ಒತ್ತಿ ಬರುತ್ತಿದ್ದ ದುಃಖವನ್ನೆಲ್ಲಾ ಹೊರ ಚೆಲ್ಲಿಕೊಂಡರು. ಅಗಲಿದ ಗೆಳೆಯನಿಗೆ ಅಕ್ಷರಶಃ ರಕ್ತತರ್ಪಣ ನೀಡಿ ಗಂಟಲು ಒಣಗುವತನಕ ಅವನ ಗುಣಗಾನ ಮಾಡಿದರು. ತಮ್ಮ ಗಂಡಸ್ತನ ಮತ್ತು ಮರ್ಯಾದೆಗಳನ್ನು ಅವನ ಆತ್ಮಕ್ಕೆ ಮುಟ್ಟಿಸುವ ಪ್ರಯತ್ನ ಮಾಡಿದರು...!

ಒಂದರ ಬೆನ್ನ ಹಿಂದೆ ಮತ್ತೊಂದರಂತೆ ನಡೆದ ಈ ಕೊಲೆಗಳು ನಗರದ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದವು. ಪೊಲೀಸರು ಪೈ ಗುಂಪಿನ 31 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಜಡೇಜಾ ಸೂರ್ಯನ ಜೊತೆ ಸ್ಕಾರ್ಪಿಯೊದಲ್ಲಿದ್ದವರು ಹರ್ಷ, ಸೀನ ಮತ್ತು ಕೇಬಲ್ ರಘು ಎಂದು ಗುರುತಿಸಿದರು. ಇವರ ಜೊತೆಗೇ ಘಟನೆಯನ್ನು ಪ್ರತ್ಯಕ್ಷ ಕಂಡಿದ್ದ ಶಿವರಾಮು ಎಂಬ ಮತ್ತೊಬ್ಬ ವ್ಯಕ್ತಿಯನ್ನೂ ಸಾಕ್ಷಿಯನ್ನಾಗಿಸಲಾಯಿತು.

ಸಮಾಧಿಯ ಮುಂದೆ ಇರಿಸಲಾಗಿದ್ದ ಜಡೇಜಾ ಸೂರ್ಯನ ಎಡಗೈಯನ್ನು ಪತ್ತೆಹಚ್ಚಿ ಸಾಕ್ಷಿಗಳ ಸಮ್ಮುಖದಲ್ಲಿ ಅದನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣಾ ನ್ಯಾಯಾಲಯ ಅಂತಿಮವಾಗಿ 19 ಆರೋಪಿಗಳನ್ನು ಬಿಡುಗಡೆ ಮಾಡಿ 12 ಜನರಿಗೆ ಶಿಕ್ಷೆ ವಿಧಿಸಿತ್ತು.

ಶಿಕ್ಷೆಗೆ ಒಳಗಾದ 12 ಜನರೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನನ್ನ ಬಳಿ ಬಂದು ಪ್ರಕರಣ ನಡೆಸುವಂತೆ ಕೇಳಿಕೊಂಡರು. ಮೂವರು ಪ್ರಮುಖ ಆರೋಪಿಗಳ ಪರ ನಾನು ವಕಲಾತ್ತು ವಹಿಸಿದೆ.

ಪ್ರಕರಣದಲ್ಲಿ ಯಾವುದೇ ಸಾಕ್ಷಿಯು ಪ್ರಾಸಿಕ್ಯೂಷನ್‌ ವಾದಕ್ಕೆ ಪುಷ್ಟಿ ನೀಡದೇ ಇದ್ದುದನ್ನು ಮನಗಂಡ ಹೈಕೋರ್ಟ್‌ ಎಲ್ಲ ಆರೋಪಿಗಳನ್ನೂ ಖುಲಾಸೆಗೊಳಿಸಿತು.

ನನ್ನ ಕಕ್ಷಿದಾರರು ಆರೋಪ ಮುಕ್ತರಾದುದು ನನ್ನಲ್ಲಿ ತೃಪ್ತಿಯ ಭಾವನೆಯನ್ನೇನೊ ತಂದಿತು. ಆದರೆ, ಇದೇ ಸಮಯದಲ್ಲಿ ಇಂತಹ ಭೀಕರವಾದ ಕೊಲೆ ಪ್ರಕರಣದಲ್ಲಿ ಆರೋಪಿಗಳು ದೋಷಮುಕ್ತರಾಗಲು ಕಾರಣವಾದ ರೀತಿ ನನ್ನನ್ನು ಈವರೆಗೂ ಕಾಡುತ್ತಲೇ ಇದೆ.

ಇದು ಸಾಮಾಜಿಕ ಸೋಲು. ಸಾಕ್ಷಿಯ ಸೋಲಲ್ಲ. ಸತ್ಯವನ್ನು ನುಡಿಯುವ ಸಾಕ್ಷಿಗೆ ಸಮಾಜ ರಕ್ಷಣೆ ನೀಡಬೇಕು. ಒಂದು ವೇಳೆ ಅಂತಹವರಿಗೆ ಸಾಮಾಜಿಕ ರಕ್ಷಣೆ ದೊರೆಯದೇ ಹೋದರೆ ಸತ್ಯಕ್ಕೆ ಅವಮಾನವಾಗುತ್ತದೆ. ಹಾಗೆಯೇ ಸತ್ಯವನ್ನು ನುಡಿದರೆ ಅಂತಹ ಸಾಕ್ಷಿ ಒಂಟಿಯಾಗುತ್ತಾನೆ. ಸಮಾಜ ಅವನ ಕೈಬಿಡುತ್ತದೆ. ಇದು ನಮ್ಮೊಳೊಗಿನ ವಿಪರ್ಯಾಸ.

ಜಡೇಜಾ ಸೂರ್ಯನ ಜೊತೆಗಿದ್ದು ಹಲ್ಲೆಗೊಳಗಾದವರೇ ಪ್ರಕರಣಕ್ಕೆ ಸಾಕ್ಷಿಯಾಗಿದ್ದರು. ಸೂರ್ಯನ ಎಡಗೈ ಕತ್ತರಿಸಿ ತೆಗೆದುಕೊಂಡು ಹೋಗಿದ್ದನ್ನು ನೋಡಿದ್ದರೂ ಅವರು, ‘ಈ ಘಟನೆಯನ್ನು ನೋಡೇ ಇಲ್ಲ ಎನ್ನುವುದರ ಜೊತೆಗೆ ಯಾವುದೇ ಆರೋಪಿಗಳೂ ನಮಗೆ ಗೊತ್ತಿಲ್ಲ’ ಎಂದು ಕೋರ್ಟ್‌ನಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು.

ಸಾಕ್ಷಿಗಳು ಈ ರೀತಿ ಪ್ರತಿಕೂಲವಾಗಿ ಪರಿವರ್ತನೆಯಾಗಲು ಇರುವ ಪ್ರಾಥಮಿಕ ವಾಸ್ತವಾಂಶವೆಂದರೆ, ಅವರ ಹಾಗೂ ಅವರ ಕುಟುಂಬದವರ ಜೀವಕ್ಕೆ ಉಂಟಾಗಬಹುದಾದ ಆಪತ್ತಿನ ಭಯ. ಇಂತಹ ಪ್ರಕರಣಗಳ ವಿಚಾರಣೆ ಕುರಿತಂತೆ ಅಪರಾಧ ಪ್ರಕ್ರಿಯಾ ಸಂಹಿತೆಯನ್ನು (ಸಿಆರ್‌ಪಿಸಿ) ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬರುವ ಅಂಶವೆಂದರೆ, ಸಾಕ್ಷಿಗಳ ರಕ್ಷಣೆಗೆ ಪರಿಣಾಮಕಾರಿಯಾದ ಯಾವುದೇ ಅಳತೆಗೋಲು ಇಲ್ಲದೇ ಇರುವುದು. ಹೆಚ್ಚಿನ ಅಪರಾಧಿಕ ಪ್ರಕರಣಗಳಲ್ಲಿ ಯಾವುದೇ ಸಾಕ್ಷಿ ನಿಜವನ್ನು ನುಡಿಯಲು ಮುಂದೆ ಬರುವುದಕ್ಕೆ ಅವನಿಗಿರುವ ಭೀತಿ ಎಷ್ಟರಮಟ್ಟಿಗೆ ಅಡ್ಡಿಯಾಗಿರುತ್ತದೆ ಎಂಬುದು ನಮಗೆ ಗೋಚರಿಸುತ್ತದೆ.

ಆದರೆ, ಇದೇ ಅಂಶಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿನಿಯಮದಲ್ಲಿ ಗಮನಿಸಿದಾಗ ಸಾಕ್ಷಿಗಳ ರಕ್ಷಣೆಗೆ ಮಾನದಂಡ ಕಲ್ಪಿಸಿರುವುದು ಕಂಡು ಬರುತ್ತದೆ. ಭಯೋತ್ಪಾದಕ ಚಟುವಟಿಕೆಗಳು ಸಾಮಾನ್ಯ ಅಪರಾಧಿಕ ಪ್ರಕರಣಗಳಿಗಿಂತ ಭಿನ್ನ ಎನಿಸಿದರೂ ಸಾಕ್ಷಿಗಳ ರಕ್ಷಣೆಗೆ ಈಗಲೂ ನಾವು ಪರದಾಡಬೇಕಿದೆ.

ಎನ್‌ಐಎ ಅಧಿನಿಯಮದ ಅನುಸಾರ, ಪ್ರಕರಣವೊಂದರಲ್ಲಿ ಸಾಕ್ಷಿಯ ಹೇಳಿಕೆಯನ್ನು ಏಕಾಂತದಲ್ಲಿ ದಾಖಲಿಸಬಹುದು (ಇನ್ ಕ್ಯಾಮೆರಾ), ಸಾಕ್ಷಿಯ ಹೆಸರು ಮತ್ತು ವಿಳಾಸವನ್ನು ಪ್ರಕರಣದ ಯಾವುದೇ ದಾಖಲೆಗಳಲ್ಲಿ ನಮೂದಿಸಬಾರದು ಎಂಬುದಾಗಿ ನ್ಯಾಯಾಲಯ ನಿರ್ದೇಶಿಸಬಹುದು. ಅಂತೆಯೇ, ಸಾಕ್ಷಿದಾರರ ಗುರುತು, ವಿಳಾಸವನ್ನು ಬಹಿರಂಗಗೊಳಿಸದಂತೆ, ಗೋಪ್ಯತೆ ಕಾಪಾಡುವಂತೆ, ನ್ಯಾಯಾಲಯದ ವ್ಯವಹರಣೆಯನ್ನು ಯಾವುದೇ ವಿಧದಲ್ಲಿಯೂ ಪ್ರಕಟಿಸದಂತೆ ನಿರ್ದೇಶನ ನೀಡಬಹುದು. ಈ ಆದೇಶಗಳನ್ನು ಉಲ್ಲಂಘಿಸುವ ವ್ಯಕ್ತಿಯನ್ನು ಮೂರು ವರ್ಷಗಳವರೆವಿಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ.

ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಎನ್‌ಐಎ ಒಳಗಿರುವಂತಹ ಉಪಬಂಧಗಳನ್ನು ಅಳವಡಿಸಲು ಇದು ಸಕಾಲ ಎಂದೆನಿಸುತ್ತದೆ. ಇದರಿಂದ ಸಾಕ್ಷಿಗಳ ನೈತಿಕತೆ ಹೆಚ್ಚುತ್ತದೆ ಮತ್ತು ಅವರು ಆತ್ಮವಿಶ್ವಾಸದಿಂದ ವಿಚಾರಣಾ ನ್ಯಾಯಾಲಯಗಳಲ್ಲಿ ಸಾಕ್ಷಿ ನುಡಿಯಲು ದಾರಿ ಮಾಡಿಕೊಡುತ್ತದೆ.

ನಿತೀಶ್ ಕಟಾರಿಯಾ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ಸಾಕ್ಷಿಗಳಿಗೆ ರಕ್ಷಣೆ ಕೊಡುವ ಸಲುವಾಗಿ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸಿದೆ. ಇಷ್ಟೇ ಅಲ್ಲ; ಕಾನೂನು ಆಯೋಗ ತನ್ನ 198ನೇ ವರದಿಯಲ್ಲಿ ನಮ್ಮ ಪ್ರಚಲಿತ ನ್ಯಾಯ ವ್ಯವಸ್ಥೆಯ ಲೋಪವನ್ನು ಸ್ಪಷ್ಟವಾಗಿ ಗುರುತಿಸಿದೆ. ಅಮೆರಿಕ ಮತ್ತು ಬ್ರಿಟನ್‌ನಲ್ಲಿರುವಂತೆ ಸಮರ್ಥ ಸಾಕ್ಷಿ ರಕ್ಷಣಾ ವ್ಯವಸ್ಥೆಗೆ ಶಿಫಾರಸು ಮಾಡಿದೆ.

ಜಡೇಜಾ ಸೂರ್ಯನ ಪ್ರಕರಣವನ್ನು ಬೆನ್ನಿಗಿಟ್ಟುಕೊಂಡು ನೋಡಿದಾಗ; ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 171ರ ಪ್ರಕಾರ, ಕೊಲೆ ಅಥವಾ ಅಪರಾಧಿಕ ಕೇಸುಗಳಲ್ಲಿ ಸಮನ್ಸ್‌ ಪಡೆದು ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿಯಲು ಹೋಗುವ ಸಾಕ್ಷಿದಾರನ ಜೊತೆಯಲ್ಲಿ ಯಾವುದೇ ಪೊಲೀಸ್‌ ಅಧಿಕಾರಿ ಹೋಗಬಾರದು ಎಂದು ಹೇಳುತ್ತದೆ! ಹೀಗಾಗಿ ಈ ಕಲಂ ಸಾಕ್ಷಿಗಳ ರಕ್ಷಣೆ ಮಾಡಬೇಕೆನ್ನುವ ಕೂಗಿಗೆ ತದ್ವಿರುದ್ಧವಾಗಿದೆ!!

(ಹೆಸರುಗಳನ್ನು ಬದಲಾಯಿಸಲಾಗಿದೆ)

ಲೇಖಕ ಹೈಕೋರ್ಟ್‌ನ ಸಿಬಿಐ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry