ಜಯನಗರದಲ್ಲಿ ಕಡಲತಡಿಯ ಬೆಡಗು

7

ಜಯನಗರದಲ್ಲಿ ಕಡಲತಡಿಯ ಬೆಡಗು

Published:
Updated:
ಜಯನಗರದಲ್ಲಿ ಕಡಲತಡಿಯ ಬೆಡಗು

ಬೆಂಗಳೂರು: ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಕಡಲ ತಡಿಯ ಬೆಡಗಿನ ಲೋಕ ಅನಾವರಣಗೊಂಡಿದೆ. ಕಣ್ಮನ ತಣಿಸುವ ಯಕ್ಷಗಾನ, ತಾಳಮದ್ದಲೆ, ಜಿಹ್ವಾ ಚಾಪಲ್ಯ ತಣಿಸುವಂತಹ ಕರಾವಳಿ ಖಾದ್ಯಗಳು, ವೈವಿಧ್ಯಮಯ ಆಟಗಳು, ಆಚರಣೆಗಳನ್ನೆಲ್ಲ ಒಂದೇ ಕಡೆ  ನೋಡುವ ಅವಕಾಶ ಇಲ್ಲಿದೆ.

ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿರುವ ‘ನಮ್ಮೂರ ಹಬ್ಬ’ ಕರಾವಳಿಯ ಸಾಂಸ್ಕೃತಿಕ ಸಡಗರವನ್ನು ಕಟ್ಟಿಕೊಟ್ಟಿದೆ.

ಇಡೀ ಕ್ರೀಡಾಂಗಣದಲ್ಲಿ ಕರಾವಳಿಯ ಪರಿಸರವನ್ನು ಮರುಸೃಷ್ಟಿಸಲಾಗಿದೆ. ಯಕ್ಷಗಾನ ಕಲಾವಿದನ, ಕಿರೀಟ, ಅಲ್ಲಿನ ಜಾತ್ರೆಗಳಲ್ಲಿ ಬಳಸುವ ತೇರುಗಳ ಪ್ರತಿಕೃತಿಗಳು, ಕೋಳಿ ಅಂಕದ ಚಿತ್ತಾರಗಳು ತೀರ ಪ್ರದೇಶದ ಶ್ರೀಮಂತ ಸಂಸ್ಕೃತಿಯ ಕತೆ ಹೇಳುತ್ತಿವೆ.

ಕರಾವಳಿ ಖಾದ್ಯಗಳ ವೈವಿಧ್ಯ: ಇಲ್ಲಿ ಒಟ್ಟು 35 ಮಳಿಗೆಗಳನ್ನು ತೆರೆಯಲಾಗಿದೆ. ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳು, ತರಕಾರಿ, ಹಣ್ಣುಗಳು, ತಂಪುಪಾನೀಯಗಳು ಕರಾವಳಿಯ ಸ್ವಾದವನ್ನು ರಾಜಧಾನಿಯ ನಿವಾಸಿಗಳಿಗೆ ಪರಿಚಯಿಸುತ್ತಿವೆ. ಕರಕುಶಲ ವಸ್ತುಗಳು, ವಿವಿಧ ಉಡುಪುಗಳ ಮಳಿಗೆಗಳು ಇಲ್ಲಿವೆ.

ಕರಾವಳಿಯ ಖಾದ್ಯಗಳ ಸ್ವಾದಕ್ಕೆ ಜನರು ಮನಸೋತರು. ಹಾಲ್‌ ಬಾಯಿ, ಪತ್ರೊಡೆ, ಸುಕ್ಕಿನ ಉಂಡೆ, ನೀರ್‌ ದೋಸೆ, ಉಪ್ಪುದೋಸೆ, ಹೋಳಿಗೆ, ಕೊಟ್ಟೆ ಕಡಬು, ಒತ್ತು ಶಾವಿಗೆ, ಬನ್ಸ್‌, ಬಿಸ್ಕೆಟ್‌ ರೊಟ್ಟಿ, ಕಡ್ಲೆ ಉಸ್ಲಿ, ಉಪ್ಪಿಟ್ಟು ಅವಲಕ್ಕಿ, ನೆಯ್ಯಪ್ಪ, ಗುಳಿಯಪ್ಪ ಪಡ್ಡು ಹಾಗೂ ಹಯಗ್ರೀವ ಖಾದ್ಯಗಳು ಆಹಾರ

ಪ್ರಿಯರ ಜಿಹ್ವಾ ಚಾಪಲ್ಯ ತಣಿಸಿದವು.

ಮಾಂಸಾಹಾರ ಖಾದ್ಯದ ಮಳಿಗೆಗಳಲ್ಲಿ ಚಿಕನ್‌ ಸುಕ್ಕ, ನೀರ್‌ ದೋಸೆ ಚಿಕನ್‌, ಚಟ್ಲಿ ಸುಕ್ಕ, ಬೊಂಡಾಸ್‌ ಸುಕ್ಕ, ಜಾರಿ ಸುಕ್ಕ, ಅಂಜಲ್‌ ಮೀನಿನ ಫ್ರೈ, ಬಂಗುಡೆ ಮೀನಿನ ಫ್ರೈ, ಬಿರಿಯಾನಿ ರೈಸ್‌, ಚಿಕನ್‌ ಬಿರಿಯಾನಿ, ಇಡ್ಲಿ ಚಿಕನ್‌, ಕಂದಾಪುರ ಚಿಕನ್‌, ಕೋರಿ ರೊಟ್ಟಿ, ಮೀನು ಊಟದಂತಹ ತರಹೇವಾರಿ ತಿನಿಸುಗಳನ್ನು ರುಚಿ ನೋಡಲು ಜನ ಮುಗಿಬಿದ್ದರು.

‘ಈ ಉತ್ಸವಕ್ಕೆ ಮೊದಲ ಬಾರಿ ಬರುತ್ತಿದ್ದೇವೆ. ಇಲ್ಲಿನ ಅಪ್ಪಟ ಗ್ರಾಮೀಣ ವಾತಾವರಣ ನೋಡಿ ಖುಷಿಯಾಯಿತು. ಕರಾವಳಿ ಭಾಗದ ತಿಂಡಿ–ತಿನಿಸು, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ ಇಲ್ಲಿದೆ. ಕರಾವಳಿ ಖಾದ್ಯಗಳ ರುಚಿಗೆ ನಾವು ಮಾರು ಹೋಗಿದ್ದೇವೆ. ಇಂತಹ ಉತ್ಸವಗಳು ಪ್ರತಿ ವರ್ಷ ನಡೆಯುತ್ತಿರಬೇಕು’ ಎಂದು ಚಾಮರಾಜಪೇಟೆಯ ಕಾರ್ತಿಕ್‌–ಅರ್ಚನಾ ದಂಪತಿ ತಿಳಿಸಿದರು.

‘ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ಆದರೆ, ನಮ್ಮೂರ ಪರಿಸರ, ಆಹಾರ, ಸಾಂಸ್ಕೃತಿಕ ವಾತಾವರಣದ ನೆನಪು ಸದಾ ಕಾಡುತ್ತಿರುತ್ತದೆ. ಈ ಉತ್ಸವವು ಹಳೆಯ ದಿನಗಳನ್ನು ನೆನಪಿಸುತ್ತಿದೆ’ ಎಂದು ಉದ್ಯೋಗಿ ರವಿ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ: ವೀರಮಣಿ ಕಾಳಗ ಹಾಗೂ ಕಾರ್ತವೀರ್ಯ– ರಾವಣ ಯಕ್ಷಗಾನ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಯಿತು. 5 ವರ್ಷದೊಳಗಿನ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ನಡೆಯಿತು. ಸುಬ್ರಹ್ಮಣ್ಯ ಚಿಟ್ಟಾಣಿ ಹಾಗೂ ಸಹಕಲಾವಿದರಿಂದ ‘ಸಾಂಸ್ಕೃತಿಕ ರಸೋಲ್ಲಾಸ’, ಓಷನ್ ಕಿಡ್ಸ್‌ ತಂಡದಿಂದ ನೃತ್ಯೋತ್ಸವ, ದೀಕ್ಷಾ ರಾಮಕೃಷ್ಣ, ಧನುಷ್‌ ಜಗದೀಶ್‌, ಸಂಜಿತ್‌ ಹೆಗಡೆ, ರಚನಾ ಚಂದ್ರಶೇಖರ್‌ ಹಾಗೂ ಸಾನ್ವಿ ಶೆಟ್ಟಿ ಅವರಿಂದ ಹಾಡು ಹಬ್ಬ ಕಾರ್ಯಕ್ರಮಗಳು ನಡೆದವು.

ಕ್ರೀಡೋತ್ಸವ: ಬಯಲಾಟ ಗ್ರಾಮೀಣ ಕ್ರೀಡಾಕೂಟವನ್ನು ಭಾನುವಾರ ಹಮ್ಮಿಕೊಳ್ಳಲಾಗಿದೆ. ಹೂವಾಡಗಿತ್ತಿ, ಕಾಯಿಮಿಳ್ಳಿ ಓಟ, ರಥದ ಓಟ, ಹನಿಬೊಂಡ ಚಕ್ರದ ಓಟ, ಹನಿಬೊಂಡ ಹಿಡಿಯುವುದು, ಹಸ್ತ ಭವಿಷ್ಯ, ದೋಣಿ ಓಟ, ಕಂಬಳದ ಓಟ, ಬುಟ್ಟಿ ಓಟ, ಸಪ್ತಪದಿ ಆಟ, ಬೋಟಿ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಯಕ್ಷಗಾನ ತೆರೆದ ವಿದ್ಯಾಲಯದಂತೆ

‘50 ವರ್ಷಗಳ ಹಿಂದೆ ಯಕ್ಷಗಾನ ಅವಿದ್ಯಾವಂತರಿಗೆ ವಿದ್ಯಾಪೀಠ ಹಾಗೂ ತೆರೆದ ವಿಶ್ವವಿದ್ಯಾಲಯವಾಗಿತ್ತು’ ಎಂದು ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಕರಾವಳಿ ಭಾಗದ ಜನರ ಬದುಕಿನಲ್ಲಿ ಯಕ್ಷಗಾನ ಹಾಸುಹೊಕ್ಕಾಗಿದೆ. 150ಕ್ಕೂ ಹೆಚ್ಚು ಯಕ್ಷಗಾನ

ಮೇಳಗಳಿವೆ. ಯಕ್ಷಗಾನದ ಶಕ್ತಿಯನ್ನು ಇದು ಸಾಕ್ಷೀಕರಿಸುತ್ತದೆ’ ಎಂದರು.

ಉದ್ಯಮಿ ಸದಾನಂದ ಮಯ್ಯ, ‘ದಕ್ಷಿಣ ಕನ್ನಡ ಜಿಲ್ಲೆ ಹೋಟೆಲ್‌, ಬ್ಯಾಂಕ್‌ ಹಾಗೂ ಯಕ್ಷಗಾನಕ್ಕೆ ಪ್ರಸಿದ್ಧ. ಆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ.

ಈ ಕ್ಷೇತ್ರದಲ್ಲೂ ಕರಾವಳಿಯ ಜನರು ಛಾಪು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕರಾವಳಿಯ ಖಾದ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಂಗಳೂರಿಗೆ ಪರಿಚಯಿಸುವ ಉದ್ದೇಶದಿಂದ 5 ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದು ಪತ್ರಕರ್ತ ರಾಘವೇಂದ್ರ ಕಾಂಚನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry