ಹೈಕೋರ್ಟ್‌ನಿಂದ ಪಾಲನೆ

7

ಹೈಕೋರ್ಟ್‌ನಿಂದ ಪಾಲನೆ

Published:
Updated:
ಹೈಕೋರ್ಟ್‌ನಿಂದ ಪಾಲನೆ

ಬೆಂಗಳೂರು: ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ 2002’ ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಫೆ. 9ರಂದು ನೀಡಿದ್ದ ಆದೇಶದಂತೆ ಸಿಬ್ಬಂದಿಯ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿರುವ ಹೈಕೋರ್ಟ್‌, 70 ನೌಕರರಿಗೆ ಹಿಂಬಡ್ತಿ ಆದೇಶ ನೀಡಿದೆ.

ಹಿಂಬಡ್ತಿ ಪಡೆದವರಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್‌, ಅಸಿಸ್ಟೆಂಟ್‌ ರಿಜಿಸ್ಟ್ರಾರ್‌, ಸೆಕ್ಷನ್‌ ಆಫೀಸರ್‌ಗಳೂ ಸೇರಿದ್ದಾರೆ. ಈ ಸಂಬಂಧದ ಕಡತವನ್ನು ಅನುಮೋದನೆಗಾಗಿ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೈಕೋರ್ಟ್‌ ಮೂಲಗಳು ತಿಳಿಸಿವೆ.

ಅಲ್ಲದೆ, ಅಷ್ಟೇ ಸಂಖ್ಯೆಯ ಸಿಬ್ಬಂದಿಗೆ ಮುಂಬಡ್ತಿ ನೀಡಿರುವ ಕಡತವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ. ರಮೇಶ ಅವರಿಗೆ ಸಲ್ಲಿಸಲಾಗಿದೆ.

ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿಯನ್ನು 1978 ಏ. 24ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ, ತತ್ಪರಿಣಾಮ ಜ್ಯೇಷ್ಠತೆಗೆ ಅನುಗುಣವಾಗಿ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್‌ ಫೆ. 9ರ ಆದೇಶದಲ್ಲಿ ತಿಳಿಸಿತ್ತು. ಆರು ತಿಂಗಳ ಒಳಗೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹೇಳಿತ್ತು.

ಆದರೆ, ಆರು ತಿಂಗಳ ಮುಗಿಯುತ್ತಿದ್ದಂತೆ ರಾಜ್ಯ ‌ಸರ್ಕಾರ ಮತ್ತಷ್ಟು ಕಾಲಾವಕಾಶ ಕೋರಿತ್ತು. ಈ ಬಗ್ಗೆ ಸೆ. 9ರಂದು ಆದೇಶ ನೀಡಿದ್ದ ಕೋರ್ಟ್‌, ನ.30ರೊಳಗೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಬೇಕು. ಜನವರಿ 15 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶಿಸಿತ್ತು.

ಸುಪ್ರೀಂ ಆದೇಶದಂತೆ ಸಿಬ್ಬಂದಿಯ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ್ದ ಹೈಕೋರ್ಟ್‌, ಇದೀಗ ತತ್ಪರಿಣಾಮ ಜ್ಯೇಷ್ಠತೆಗೆ ಅನುಗುಣವಾಗಿ ಮುಂಬಡ್ತಿ– ಹಿಂಬಡ್ತಿ ನೀಡಲು ಮುಂದಾಗಿದೆ.

ಉಳಿದಂತೆ, ಕೆಪಿಟಿಸಿಎಲ್ ಮಾತ್ರ ಸುಪ್ರೀಂ ಕೋರ್ಟ್ ಆದೇಶದಂತೆ ಏಳು ಸೂಪರಿಂಟೆಂಡೆಂಟ್‌ ಎಂಜಿನಿಯರ್‌ಗಳಿಗೆ ಮುಖ್ಯ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಿದೆ.

ಬಡ್ತಿ ಅವಕಾಶದಿಂದ ವಂಚಿತರಾಗಿದ್ದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎಂ.ಎಸ್. ಪ್ರಭಾಕರ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ‘ನಾನು ಇದೇ 31ರಂದು (ಡಿಸೆಂಬರ್‌) ವಯೋನಿವೃತ್ತಿ ಹೊಂದಲಿದ್ದೇನೆ. ಹೀಗಾಗಿ ಪರಿಷ್ಕೃತ ಅಂತಿಮ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಬಡ್ತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಬಡ್ತಿ ನೀಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿದ್ದರಿಂದ, ಖಾಲಿ ಇದ್ದ ಎಲ್ಲ ಏಳು ಮುಖ್ಯ ಎಂಜಿನಿಯರ್ ಹುದ್ದೆಗಳಿಗೆ ಸರ್ಕಾರ ಬಡ್ತಿ ನೀಡಿತ್ತು.

ಅರ್ಜಿ ವಿಚಾರಣೆ 29ಕ್ಕೆ:

ಕೋರ್ಟ್ ಆದೇಶ ಪಾಲಿಸಲು ವಿಫಲವಾದ ಕಾರಣ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಮತ್ತು ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಇದೇ 29ರಂದು ವಿಚಾರಣೆಗೆ ಬರಲಿದೆ.

‘ಸುಪ್ರೀಂ ಕೋರ್ಟ್‌ ಆದೇಶ ನೀಡಿ ವರ್ಷವಾಗುತ್ತಿದೆ. ಈ ಅವಧಿಯಲ್ಲಿ ಬಡ್ತಿ ಅವಕಾಶದಿಂದ ವಂಚಿತರಾಗಿ ಸುಮಾರು 3,000 ಸಿಬ್ಬಂದಿ ನಿವೃತ್ತಿ ಆಗಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಗಮನ ಸೆಳೆಯಲಾಗುವುದು’ ಎಂದು ನ್ಯಾಯಾಂಗ ನಿಂದನೆ ಅರ್ಜಿದಾರ, ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರ) ಒಕ್ಕೂಟ ಅಧ್ಯಕ್ಷ ಎಂ. ನಾಗರಾಜ ತಿಳಿಸಿದರು.

‌ಸರ್ಕಾರ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿದೆಯಾದರೂ ತತ್ಪರಿಣಾಮ ಜ್ಯೇಷ್ಠತೆ (ಹಿಂಬಡ್ತಿ–ಮುಂಬಡ್ತಿ) ನೀಡುವ ಕುರಿತು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

‘ನಾವು ಆದೇಶ ಪಾಲನೆ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಇದಕ್ಕೆ ಹೆಚ್ಚಿನ ಸಮಯ ಅಗತ್ಯವಿದ್ದು, ಮೂರು ತಿಂಗಳ ಕಾಲಾವಕಾಶ ನೀಡಬೇಕು’ ಎಂದು ಕೋರಿರುವ ಸರ್ಕಾರ, ರಾಷ್ಟ್ರಪತಿಗೆ ಕಳುಹಿಸಿರುವ ಬಡ್ತಿ ಮೀಸಲು ಮಸೂದೆಯನ್ನು ಕಾಯುತ್ತಿರುವುದಾಗಿಯೂ ಅರ್ಜಿಯಲ್ಲಿ ಉಲ್ಲೇಖಿಸಿದೆ.

ರಾಷ್ಟ್ರಪತಿ ಭವನಕ್ಕೆ ಇನ್ನೂ ತಲುಪದ ಮಸೂದೆ

ರಾಷ್ಟ್ರಪತಿ ಅಂಕಿತಕ್ಕಾಗಿ ರಾಜ್ಯ ಸರ್ಕಾರ ಕಳುಹಿಸಿರುವ ಬಡ್ತಿ ಮೀಸಲು ಮಸೂದೆ ಇನ್ನೂ ಕೇಂದ್ರ ಗೃಹ ಸಚಿವಾಲಯದಲ್ಲೇ ಇದೆ. ವಿವಿಧ ಇಲಾಖೆಗಳು ಅಭಿಪ್ರಾಯ ನೀಡಿದ ಬಳಿಕ ಗೃಹ ಸಚಿವರ ಸಹಿ ಪಡೆದು ಮಸೂದೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗುತ್ತದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ, ಕಾನೂನು ಇಲಾಖೆ ಸೇರಿದಂತೆ ಐದು ಇಲಾಖೆಗಳು ಪ್ರತ್ಯೇಕವಾಗಿ ಅಭಿಪ್ರಾಯ ನೀಡಬೇಕಿದೆ. ಕೆಲವು ಇಲಾಖೆಗಳು ಇನ್ನೂ ಅಭಿಪ್ರಾಯ ನೀಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry