ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊಗೊಬ್ಬ ಹೊಸ ‘ಟಾಸ್ಕ್ ಮಾಸ್ಟರ್’

Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

ಆ ಬಡ ರೈತ ಕುಟುಂಬದ ಹುಡುಗನಿಗೆ ಇದ್ದದ್ದು ಒಂದೇ ಗುರಿ, ‘ಉತ್ತಮ ಶಿಕ್ಷಣ ಪಡೆಯಬೇಕು; ಜೀವನದಲ್ಲಿ ಮುಂದೆ ಬರಬೇಕು’ ಎಂಬುದು. ಅದಕ್ಕೆ ಆತ ಕಂಡುಕೊಂಡ ದಾರಿ ಎಂದರೆ ಕಠಿಣ ಪರಿಶ್ರಮ.

ಬಾಲ್ಯದಿಂದಲೂ ಅಪ್ಪನಿಗೆ ಕೃಷಿ ಕಾರ್ಯದಲ್ಲಿ ನೆರವು ನೀಡುತ್ತಲೇ ಶಿಕ್ಷಣವನ್ನು ಮುಂದುವರಿಸಿದ್ದ. ಮಗನ ಅಚಲ ಶ್ರದ್ಧೆ ಮತ್ತು ಪರಿಶ್ರಮ ಕಂಡು ಅಪ್ಪ ಕರಗಿ ಹೋದರು. ಉನ್ನತ ಅಧ್ಯಯನಕ್ಕೆ ಕಳುಹಿಸಲು ತಮ್ಮಲ್ಲಿದ್ದ ಕೃಷಿ ಭೂಮಿಯ ಸ್ವಲ್ಪ ಭಾಗ ಮಾರಿ ಹಣವನ್ನು ನೀಡಿದರು. ಅವರೆಂದೂ ರಾಕೆಟ್ ವಿಜ್ಞಾನಿ ಆಗುವ ಕನಸು ಕಂಡವರಲ್ಲ. ಆದರೆ ಆಗಿದ್ದು ರಾಕೆಟ್ ವಿಜ್ಞಾನಿ. ಗಾಡ್‌ಫಾದರ್‌ ಇಲ್ಲದೆಯೇ ಭವಿಷ್ಯವನ್ನು ಸ್ವಯಂ ರೂಪಿಸಿಕೊಂಡವರು ಕೆ. ಶಿವನ್. ಪೂರ್ಣ ಹೆಸರು ಕೈಲಾಸವಾದಿವೊ ಶಿವನ್. ಇವರು ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಹೊಸ ಅಧ್ಯಕ್ಷರು.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆ ತಾರಕ್ಕನವಿಲೈ ಗ್ರಾಮದಲ್ಲಿ ಶಿವನ್ ಜನಿಸಿದ್ದು. ಸರ್ಕಾರಿ ಶಾಲೆಯಲ್ಲಿ ಮಾತೃಭಾಷೆ ತಮಿಳಿನಲ್ಲೇ ಶಿಕ್ಷಣ ಪಡೆದರು. ವಿಜ್ಞಾನವೆಂದರೆ ಅಚ್ಚುಮೆಚ್ಚು. ಪಟ್ಟು ಬಿಡದೆ ಬಾಹ್ಯಾಕಾಶ ವಿಜ್ಞಾನದ ವಿಷಯಗಳನ್ನು ಸಿದ್ಧಿಸಿಕೊಂಡರು. ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಯ ಉನ್ನತ ಹುದ್ದೆಗೆ ಏರಿದ್ದು, ದೇಶದ ಕೋಟಿಗಟ್ಟಲೆ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿ ಮತ್ತು ಪ್ರೇರಣಾದಾಯಕ.

70ರ ದಶಕ ದೇಶ ಅನೇಕ ತುಮುಲ, ಸಂಘರ್ಷಗಳನ್ನು ಎದುರಿಸುತ್ತಿದ್ದ ಕಾಲ. ತಮಿಳುನಾಡೂ ಅದಕ್ಕೆ ಹೊರತಾಗಿರಲಿಲ್ಲ. ಸಣಕಲು ಆದರೆ ಗಟ್ಟಿಮುಟ್ಟಾದ ಯುವಕ ಬೇಸಾಯಕ್ಕೆ ಕೈಗೆ ಸಿಕ್ಕಾನು ಎಂಬ ಬಯಕೆ ಅಪ್ಪನಿಗೆ ಸಹಜವಾಗಿಯೇ ಇತ್ತು. ಬೇಸಾಯದ ಉತ್ತರಾಧಿಕಾರಿಯಾಗಬೇಕೆಂಬ ಅಪ್ಪನ ಆಸೆ ಈಡೇರಿಸುವ ಸ್ಥಿತಿಯಲ್ಲಿ ಶಿವನ್ ಇರಲಿಲ್ಲ. ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದರು. ಎಂಜಿನಿಯರಿಂಗ್‌ಗೆ ಹೋಗಬೇಕು ಎಂಬುದು ಶಿವನ್‌ ಬಯಕೆ ಆಗಿತ್ತು. ಅದರೆ, ಮನೆಯ ಹಣಕಾಸು ಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ. ಬದಲಿಗೆ ಅವರು ನಾಗರಕೊಯಿಲ್‌ನ ಎಸ್‌.ಟಿ. ಹಿಂದು ಕಾಲೇಜಿನಲ್ಲಿ ಬಿಎಸ್‌ಸಿ ಪದವಿಗೆ ಸೇರಿಕೊಂಡರು.

ಗಣಿತ ಅವರ ನೆಚ್ಚಿನ ವಿಷಯವಾಗಿತ್ತು. ಪದವಿಯಲ್ಲಿ ವಿಜ್ಞಾನದ ನಾಲ್ಕೂ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು. ಇದಕ್ಕಾಗಿ ‘ಮದ್ರಾಸ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ’ ಸಂಸ್ಥೆಯ ಶಿಷ್ಯ ವೇತನವೂ ಸಿಕ್ಕಿತು. ಬಳಿಕ ಅದೇ ಸಂಸ್ಥೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿಯನ್ನೂ ಪಡೆದರು (ಕುಟುಂಬದ ಮೊದಲ ಪದವೀಧರರೂ ಹೌದು). ಮುಂದೆ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಇ. ಕೂಡ ಮಾಡಿದರು.

ಶಿವನ್‌ 1982ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೇರಿದರು. ಭಾರತೀಯ ಬಾಹ್ಯಾಕಾಶ ವಿಜ್ಞಾನದ ದಂತಕತೆ ಎನಿಸುವ ವಿಜ್ಞಾನಿಗಳ ಜೊತೆಯಲ್ಲಿ ಬೆಳೆದು ಬಂದ ಶಿವನ್, ಇಸ್ರೊಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸುದೀರ್ಘ ಅವಧಿಯಲ್ಲಿ ಹಲವು ಮಹತ್ವದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರು. ಹಲವು ಯೋಜನೆಗಳಿಗೆ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಪುನರ್ ಬಳಕೆ ರಾಕೆಟ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ, ಜಿಎಸ್ಎಲ್‌ವಿ ಯೋಜನಾ ನಿರ್ದೇಶಕ, ಲಿಕ್ವಿಡ್ ಪ್ರೊಪೆಲ್ಷನ್ ಸಿಸ್ಟಮ್ ಸೆಂಟರ್‌ನ ಯೋಜನಾ ನಿರ್ದೇಶಕ.

ಅತ್ಯಂತ ಸಂಕೀರ್ಣ ತಂತ್ರಜ್ಞಾನ ಎನಿಸಿರುವ ಬಾಹ್ಯಾಕಾಶ ಸಾಗಣಾ ವ್ಯವಸ್ಥೆಯ ಎಂಜಿನಿಯರಿಂಗ್‌ನಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಡ್ಡಯನ ವಾಹನದ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಶಿವನ್ ಕೊಡುಗೆ ಬಾಹ್ಯಕಾಶ ಯೋಜನೆಗಳನ್ನು ಇನ್ನಷ್ಟು ಸದೃಢಗೊಳಿಸಲು ಸಾಧ್ಯವಾಗಿಸಿದೆ. ಪಿಎಸ್ಎಲ್‌ವಿ, ಜಿಎಸ್ಎಲ್‌ವಿ, ಜಿಎಸ್ಎಲ್‌ವಿ ಮಾರ್ಕ್‌-3 ರಾಕೆಟ್‌ಗಳ ವಿನ್ಯಾಸ, 6 ಡಿ ಟ್ರಾಜೆಕ್ಟರಿ ಸಿಮ್ಯುಲೇಷನ್ ಸಾಫ್ಟ್‌ವೇರ್‌ ‘ಸಿತಾರಾ’ದ ಅಭಿವೃದ್ಧಿಯಲ್ಲಿ ಇವರ ಪಾತ್ರ ದೊಡ್ಡದು. ಉಡ್ಡಯನ ವಾಹನ ತಂತ್ರಜ್ಞಾನದ ಸಂಪೂರ್ಣ ಜ್ಞಾನ ಕರಗತ ಮಾಡಿಕೊಂಡವರು ಎಂಬ ತುರಾಯಿ ಅವರಿಗಿದೆ.

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಬಲ ದೇಶವಾಗಿ ಹೊರಹೊಮ್ಮುವ ಕಾಲಘಟ್ಟದಲ್ಲಿದೆ. ಇಸ್ರೊ ವಿಶ್ವದ ಇತರ ಬಾಹ್ಯಾಕಾಶ ಶಕ್ತಿಗಳೊಂದಿಗೆ ಪೈಪೋಟಿಗೂ ಇಳಿದಿದೆ. ತಿಂಗಳಿಗೊಂದು ಉಡ್ಡಯನದ ಕನಸು ಇಟ್ಟುಕೊಂಡಿದ್ದು, ಈ ವರ್ಷ ಎಂಟು ಉಡಾವಣೆಗಳು ಆಗಲಿವೆ. ಭವಿಷ್ಯದಲ್ಲಿ ಇನ್ನೂ ಹೆಚ್ಚು ಉಡಾವಣೆಗಳು ಮತ್ತು ಯೋಜನೆಗಳನ್ನು ಇಸ್ರೊ ಹೊಂದಿದೆ. ದೇಶದ ವಿವಿಧ ಕ್ಷೇತ್ರಗಳಿಗೆ ಅಗತ್ಯವಿರುವ ಉಪಗ್ರಹಗಳ ಬೇಡಿಕೆಗಳನ್ನು ಈಡೇರಿಸುವುದು ಇಸ್ರೊಗೆ ದೊಡ್ಡ ಸವಾಲು ಎನಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಖಾಸಗಿಯವರಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ, ಉಪಗ್ರಹ ನಿರ್ಮಾಣ, ರಾಕೆಟ್ ತಯಾರಿಕೆಗೆ ಅವಕಾಶ ನೀಡಿದೆ. ಇಂತಹ ಮಹತ್ವದ ಘಟ್ಟದಲ್ಲಿ ಇದರ ಚುಕ್ಕಾಣಿ ಹಿಡಿದು ಮುನ್ನಡೆಸುವವರು ಗಟ್ಟಿಗರು ಮತ್ತು ಛಾತಿಯುಳ್ಳವರೇ ಆಗಿರಬೇಕು. ಸಮರ್ಥ ಉತ್ತರಾಧಿಕಾರಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದ ಹಿಂದಿನ ಅಧ್ಯಕ್ಷ ಕಿರಣ್‌ಕುಮಾರ್‌ ಅವರು ಶಿವನ್ ಅವರಲ್ಲಿ ಈ ಗುಣವನ್ನು ಮೊದಲೇ ಗ್ರಹಿಸಿದ್ದರು. ಅದಕ್ಕೆ ಪೂರಕವಾಗಿ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಅಗತ್ಯ ತರಬೇತಿ ಮತ್ತು ಪ್ರೋತ್ಸಾಹ ನೀಡುತ್ತಲೇ ಬಂದಿದ್ದರು.

‘ಅಧ್ಯಕ್ಷ ಹುದ್ದೆ ಒಲಿದು ಬಂದಿದ್ದು ಅನಿರೀಕ್ಷಿತ’ ಎಂದು ಶಿವನ್ ವಿನಯವಂತಿಕೆಯಿಂದಲೇ ಹೇಳಿದ್ದಾರೆ. ಆದರೆ, ‘ಶಿವನ್ ಅವರೇ ಮುನ್ನಡೆಸಲು ಸೂಕ್ತ’ ಎಂಬ ಮಾಹಿತಿಯನ್ನು ಕಿರಣ್‌ಕುಮಾರ್, ಕೇಂದ್ರ ಸರ್ಕಾರಕ್ಕೂ ನೀಡಿ ಒಪ್ಪಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಚಂದ್ರಯಾನ- 2, ಜಿಸ್ಯಾಟ್- 6 ಉಡಾವಣೆ ಈ ವರ್ಷದ ಮಹತ್ವದ ಉಡಾವಣೆಗಳಾಗಿವೆ. ‘ಅಧ್ಯಕ್ಷ ಹುದ್ದೆಗೆ ಅರ್ಹರೂ ಆಗಿದ್ದಾರೆ ಮತ್ತು ಉತ್ತಮ ಕ್ಯಾಪ್ಟನ್ ಆಗಬಲ್ಲ ಸಾಮರ್ಥ್ಯವೂ ಇದೆ’ ಎನ್ನುತ್ತಾರೆ ಅವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯ ವಿಜ್ಞಾನಿಗಳು.

ಯಾವುದೇ ಮಿಷನ್‌ನ ಆಳವಾದ ಜ್ಞಾನ ಮತ್ತು ಅದನ್ನು ಕಾರ್ಯಗತಗೊಳಿಸುವ ಜಾಣ್ಮೆ ಶಿವನ್‌ ಅವರಿಗೆ ಸಿದ್ಧಿಸಿದೆ. ಮಿಷನ್ ಯಶಸ್ಸು ಆಗುವವರೆಗೆ ಹಗಲು ರಾತ್ರಿ ಎನ್ನದೆ ಮೈಮುರಿದು ಕೆಲಸ ಮಾಡುವುದರ ಜೊತೆಗೆ ಇತರರಿಂದಲೂ ಕೆಲಸವನ್ನು ತೆಗೆಯುವ ಚಾಕಚಕ್ಯತೆಯೂ ಇದೆ. ಹೀಗಾಗಿ ತಿರುವನಂತಪುರದ ಇಸ್ರೊ ಕೇಂದ್ರದಲ್ಲಿ ‘ಟಾಸ್ಕ್ ಮಾಸ್ಟರ್’ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

ಒಂದೇ ಸಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಕ್ರಮ ಸಾಧಿಸಿದ್ದು ಯಾವ ಭಾರತೀಯ ಮರೆಯಲು ಸಾಧ್ಯ? ಈ ಯೋಜನೆಯಲ್ಲಿ ಅಷ್ಟೂ ಉಪಗ್ರಹಗಳನ್ನು ಜೋಡಿಸಿ ನಭಕ್ಕೆ ಹಾರಿಸುವಲ್ಲಿ ಶಿವನ್ ಪಾತ್ರ ದೊಡ್ಡದ್ದು. ರಾಕೆಟ್ ನಿಗದಿತ ಕಕ್ಷೆ ತಲುಪಿದ ಬಳಿಕ ಉಪಗ್ರಹಗಳನ್ನು ಮಾತೃ ನೌಕೆಯಿಂದ ಬೇರ್ಪಡಿಸುವ ಕಾರ್ಯಕ್ಕೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದೂ ಅಲ್ಲದೆ, ಅದಕ್ಕೆ ಪರಿಹಾರ ಮಾರ್ಗವನ್ನೂ ಕಂಡು ಹಿಡಿದಿದ್ದರು.

ಇಸ್ರೊ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ತಮಿಳುನಾಡಿನ ಮೊದಲ ವ್ಯಕ್ತಿ ಇವರು. ತಿರುವನಂತಪುರ ಇಸ್ರೊ ಕೇಂದ್ರದ ಮಾಜಿ ನಿರ್ದೇಶಕ ಡಾ.ಬಿ.ಎನ್.ಸುರೇಶ್ ಅವರೊಂದಿಗೆ ಶಿವನ್ ಸುದೀರ್ಘ ಕಾಲ ಕೆಲಸ ಮಾಡಿದವರು. ಸುರೇಶ್ ಅವರು ಶಿವನ್ ಅವರನ್ನು ನೆನಪಿಸಿಕೊಳ್ಳುವುದು ಹೀಗೆ, ‘ತುಂಬಾ ದಕ್ಷ ಮತ್ತು ಕಠಿಣ ಪರಿಶ್ರಮಿ. ವಿನಯವಂತಿಕೆ ಇವರ ಬಹು ದೊಡ್ಡ ಗುಣ. ಪಿಎಸ್ಎಲ್‌ವಿ, ಏವಿಯಾನಿಕ್ಸ್‌ನಲ್ಲಿ ನನ್ನ ಜತೆ ಕೆಲಸ ಮಾಡಿದ್ದರು’.

‘ಕಠಿಣ ಪರಿಶ್ರಮ ಫಲವನ್ನು ಕೊಟ್ಟೇ ಕೊಡುತ್ತದೆ ಎಂಬುದು ನನ್ನ ಅಚಲ ನಂಬಿಕೆ. ಯಾವುದೇ ಕೆಲಸವನ್ನು ಅಪೂರ್ಣಗೊಳಿಸಬೇಡಿ. ನಿಮ್ಮ ಕೆಲಸವನ್ನು ನೀವೆ ಪೂರ್ಣಗೊಳಿಸಬೇಕು. ಯಾವುದೇ ಗುರಿಯನ್ನು ಸಫಲಗೊಳಿಸಬೇಕಾದರೆ ವರ್ತಮಾನದ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು. ಫಲಾಫಲದ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ’ ಎಂಬ ವೇದಾಂತದ ಮಾತುಗಳನ್ನು ಆಡುವ ಶಿವನ್, ಇಸ್ರೊ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಗುರಿ ಇಟ್ಟುಕೊಂಡಿದ್ದಾರೆ. ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ.

ಅಧ್ಯಕ್ಷರಾದ ಸಂಗತಿ ಹೊರಬಿದ್ದ ದಿನ ಸಂಜೆ ಶಿವನ್‌, ಬಿಳಿ ಅಂಗಿ–ಪಂಚೆ ತೊಟ್ಟು ಅಮ್ಮನವರ ದೇವಸ್ಥಾನಕ್ಕೆ ಹೋದರು. ‘ನೀವು ದೇವರನ್ನು ನಂಬುತ್ತೀರೇ’ ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬಂತು. ‘ಹೌದು, ವಿಜ್ಞಾನವನ್ನು ಕಲಿತ್ತಿದ್ದೇವೆ ಎಂದ ಮಾತ್ರಕ್ಕೆ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ಅರ್ಥವಲ್ಲ. ವಿಜ್ಞಾನ ಸಾಕಷ್ಟು ಮುಂದುವರಿದಿದ್ದರೂ ಬ್ರಹ್ಮಾಂಡದಲ್ಲಿ ನಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳಿವೆ. ವಿಶ್ವ ನಡೆಯುತ್ತಿರಲು ಕಾರಣವಾಗಿರುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದೇನೆ ಮತ್ತು ಗೌರವಿಸುತ್ತೇನೆ’ ಎಂಬ ಉತ್ತರ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT