ಅಧಿಕಾರಿಗಳ ವರ್ಗಾವಣೆಗೆ ನಿರ್ದೇಶನ

7

ಅಧಿಕಾರಿಗಳ ವರ್ಗಾವಣೆಗೆ ನಿರ್ದೇಶನ

Published:
Updated:
ಅಧಿಕಾರಿಗಳ ವರ್ಗಾವಣೆಗೆ ನಿರ್ದೇಶನ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ಅನುಕೂಲವಾಗುವಂತೆ ಒಂದೇ ಸ್ಥಳದಲ್ಲಿ ಮೂರು ವರ್ಷ ‍ಪೂರೈಸಿರುವ ಪೊಲೀಸ್‌ ಮತ್ತು ಇತರ ಇಲಾಖೆಗಳ  ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಒಂದೇ ಜಿಲ್ಲೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ಹಾಗೂ ಮೇ 31ಕ್ಕೆ ಮೂರು ವರ್ಷ ಪೂರ್ಣಗೊಳಿಸಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗದ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್‌. ಬುಟೋಲಿಯಾ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಮುಖ್ಯ ಚುನಾವಣಾ ಅಧಿಕಾರಿ ಸಂಜಯ್ ಕುಮಾರ್‌ ಅವರಿಗೂ ಕಳುಹಿಸಿದ್ದಾರೆ.

ಚುನಾವಣಾ ಕರ್ತವ್ಯಗಳಿಗೆ ನೇಮಿಸಿದ ಅಧಿಕಾರಿಗಳನ್ನು ಹೊರತುಪಡಿಸಿ, ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಪ ವಿಭಾಗದ ಅಧಿಕಾರಿಗಳು, ಉಪ ಅಥವಾ ಜಂಟಿ ಕಲೆಕ್ಟರ್‌ಗಳು, ತಹಶೀಲ್ದಾರ್‌ಗಳು ಮತ್ತು ಬ್ಲಾಕ್‌ ಅಭಿವೃದ್ಧಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.

ಅಲ್ಲದೆ, ಭದ್ರತಾ ವ್ಯವಸ್ಥೆ ಅಥವಾ ಚುನಾವಣೆ ಸಮಯದಲ್ಲಿ ಸಿಬ್ಬಂದಿಯನ್ನು ನಿಯೋಜಿಸುವ ಅಧಿಕಾರ ಹೊಂದಿದ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯಿಂದ ಐಜಿ ಹುದ್ದೆವರೆಗಿನ ಎಲ್ಲ ಪೊಲೀಸ್‌ ಅಧಿಕಾರಿಗಳನ್ನು ಸ್ಥಳಾಂತರಿಸುವಂತೆ ಆಯೋಗ ಸೂಚಿಸಿದೆ.

ಯಾವೊಬ್ಬ ಅಧಿಕಾರಿಯನ್ನೂ ‌ಅವರ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಬಾರದು. ಈ ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಕ್ಷೇತ್ರದಲ್ಲೇ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ವರ್ಗಾವಣೆಗೊಳ್ಳುವ ಅಧಿಕಾರಿಗಳು ಬದಲಿ ಅಧಿಕಾರಿಗಳು ಬರುವವರೆಗೆ ಕಾಯದೆ, ತಕ್ಷಣ ಅಧಿಕಾರ ಹಸ್ತಾಂತರಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಅಥವಾ ಸಂಬಂಧಿಸಿದ ಜಿಲ್ಲಾ ಅಧಿಕಾರಿಗಳು ನಿಗಾ ವಹಿಸಬೇಕು ಎಂದೂ ಆಯೋಗ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry