ರಾಷ್ಟ್ರಪತಿ ಭವನದ ಕದ ಬಡಿದ ಎಎಪಿ ಶಾಸಕರು

7
ಅನರ್ಹತೆ ಭೀತಿ ಎದುರಿಸುತ್ತಿರುವ 20 ಶಾಸಕರೊಂದಿಗೆ ಕೇಜ್ರಿವಾಲ್‌ ಸಭೆ

ರಾಷ್ಟ್ರಪತಿ ಭವನದ ಕದ ಬಡಿದ ಎಎಪಿ ಶಾಸಕರು

Published:
Updated:
ರಾಷ್ಟ್ರಪತಿ ಭವನದ ಕದ ಬಡಿದ ಎಎಪಿ ಶಾಸಕರು

ನವದೆಹಲಿ: ಲಾಭದಾಯಕ ಹುದ್ದೆ ಹೊಂದಿರುವ ಪ್ರಕರಣದಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿರುವ ಆಮ್‌ ಆದ್ಮಿಪಾರ್ಟಿಯ (ಎಎಪಿ) 20 ಶಾಸಕರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಚುನಾವಣಾ ಆಯೋಗದ ಶಿಫಾರಸಿನ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ತಮ್ಮ ಅಭಿಪ್ರಾಯ ಕೇಳಬೇಕು ಎಂದು ಮನವಿ ಮಾಡಲಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ 20 ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘ರಾಷ್ಟ್ರಪತಿ ಭೇಟಿಗಾಗಿ ಸಮಯ ಕೇಳಲಿದ್ದೇವೆ. ಶಾಸಕರು ಅವರನ್ನು ಭೇಟಿ ಮಾಡಿ, ತಮ್ಮ ಪ್ರಕರಣಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಮಂಡಿಸಲಿದ್ದಾರೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಸಿದ್ಧ: ‘ನಾವು ಕನಿಷ್ಠ ಒಂದು ರೂಪಾಯಿಯಷ್ಟಾದರೂ ವೇತನ ಅಥವಾ ಮನೆ ಅಥವಾ ಕಾರು ಸೌಲಭ್ಯ ಪಡೆದಿದ್ದೇವೆ ಎಂಬುದನ್ನು ಚುನಾವಣಾ ಆಯೋಗ ಸಾಬೀತು ಪಡಿಸಲಿ ಎಂದು ಸವಾಲು ಹಾಕುತ್ತೇನೆ. ಯಾವುದೇ ನ್ಯಾಯಾಲಯಕ್ಕೆ ಹೋಗಲು ನಾವು ಸಿದ್ಧ. ಬೇರೆ ಯಾವ ಆಯ್ಕೆಯೂ ನಮ್ಮ ಮುಂದಿಲ್ಲದಿದ್ದರೆ, ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ’ ಎಂದು ಅನರ್ಹತೆಯ ಭೀತಿ ಎದುರಿಸುತ್ತಿರುವ ಶಾಸಕರಲ್ಲಿ ಒಬ್ಬರಾಗಿರುವ ಜರ್ನೈಲ್‌ ಸಿಂಗ್‌ ಹೇಳಿದ್ದಾರೆ.

ತಕ್ಷಣಕ್ಕೆ ರಾಷ್ಟ್ರಪತಿ ಅವರ ಭೇಟಿಗೆ ಸಮಯ ಸಿಗುವುದು ಕಷ್ಟ. ಕೋವಿಂದ್‌ ಅವರು ಎರಡು ದಿನಗಳ ಭೇಟಿಗಾಗಿ ಭಾನುವಾರ ಗುಜರಾತ್‌ಗೆ ತೆರಳಲಿದ್ದು, ಸೋಮವಾರ ರಾತ್ರಿ ದೆಹಲಿಗೆ ಮರಳುವ ಸಾಧ್ಯತೆ ಇದೆ.

ಕಾಂಗ್ರೆಸ್‌ ವಿರುದ್ಧ ಎಎಪಿ ಅಸಮಾಧಾನ: 20 ಶಾಸಕರು ಅನರ್ಹಗೊಳ್ಳುವುದು ಸನ್ನಿಹಿತವಾಗುತ್ತಿರುವಂತೆಯೇ ತನ್ನ ವಿರುದ್ಧ ಆಕ್ರಮಣಕಾರಿಯಾಗಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ವಿರುದ್ಧ ಎಎಪಿ ತೀವ್ರ ಅಸಮಾಧಾನವ್ಯಕ್ತಪಡಿಸಿದೆ.

ಬಿಜೆಪಿಯ ರಾಜಕೀಯ ತಂತ್ರ ಅರ್ಥಮಾಡಿಕೊಳ್ಳದೆ ಕಾಂಗ್ರೆಸ್‌ ಅತಿಯಾಗಿ ವರ್ತಿಸುತ್ತಿದೆ. ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ನಡೆಸಲು ಉದ್ದೇಶಿಸಿರುವ ಹೋರಾಟದ ಮೇಲೆ ಕಾಂಗ್ರೆಸ್‌ನ ಈ ವರ್ತನೆ ಪ್ರಭಾವ ಬೀರಲಿದೆ ಎಂದು ಎಎಪಿ ಎಚ್ಚರಿಕೆ ನೀಡಿದೆ.

ಶಾಸಕರ ಅನರ್ಹತೆ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್‌, ಸಿಪಿಎಂ ಮತ್ತು ಶರದ್‌ ಯಾದವ್‌ ನೇತೃತ್ವದ ಜೆಡಿಯು ಬಣ ಎಎಪಿಗೆ ಬೆಂಬಲ ವ್ಯಕ್ತಪಡಿಸಿದೆ. ಆದರೆ, ದೆಹಲಿ ಕಾಂಗ್ರೆಸ್‌ ಘಟಕವು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜೀನಾಮೆಗೆ ಒತ್ತಾಯಿಸಿದೆ.

ಪುದುಚೇರಿಯಲ್ಲೂ ಸದ್ದು: ಲಾಭದಾಯಕ ಹುದ್ದೆ ಹೊಂದಿದ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಡಿಎಂಕೆ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ವಿರೋಧ ಪಕ್ಷ ಎಐಎಡಿಎಂಕೆ ಶನಿವಾರ ನಿರ್ಧರಿಸಿದೆ. ಲಾಭದಾಯಕ ಹುದ್ದೆಗಳಿಗೆ ರಾಜೀನಾಮೆ ನೀಡಲು ಶಾಸಕರಿಗೆ 15 ದಿನಗಳ ಗಡುವು ನೀಡಿದೆ.

‘ಆಯೋಗದ ನಿರ್ಧಾರ ಅಸಾಂವಿಧಾನಿಕ’

‘ಚುನಾವಣಾ ಆಯೋಗದ ಶಿಫಾರಸು ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಎಂದು ಸಿಸೋಡಿಯಾ ಹೇಳಿದ್ದಾರೆ.

‘ವಿಚಾರಣೆಯೇ ನಡೆದಿಲ್ಲ. ತಮ್ಮ ಅಭಿಪ್ರಾಯಗಳನ್ನು ಹೇಳಲು ಶಾಸಕರಿಗೆ ಅವಕಾಶವೂ ನೀಡಿಲ್ಲ. ನಮ್ಮ ನಿಲುವನ್ನು ಕೇಳಬೇಕು ಎಂದು ನಾವು ರಾಷ್ಟ್ರಪತಿ ಅವರಿಗೆ ಮನವಿ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ದೇಶದ ರಾಜಧಾನಿಯಲ್ಲಿ ಮಾಡುತ್ತಿರುವ ಪ್ರಾಮಾಣಿಕ ಕೆಲಸಕ್ಕಾಗಿ ಎಎಪಿಯನ್ನು ಗುರಿಯಾಗಿಸಲಾಗುತ್ತಿದೆ. ನಾವು ಅನುಸರಿಸುತ್ತಿರುವ ಪ್ರಾಮಾಣಿಕ ರಾಜಕಾರಣದ ಹಾದಿಗೆ ಅಡ್ಡಿಪಡಿಸಲು ಕೇಂದ್ರ ಸರ್ಕಾರ ನಡೆಸಿರುವ ಮತ್ತೊಂದು ಯತ್ನ ಇದು’ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ಮಿನಿ–ಚುನಾವಣೆಗೆ ಸಿದ್ಧತೆ: ದೆಹಲಿ: ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ತಡೆಯಲು ಎಎಪಿ ಕಾರ್ಯತಂತ್ರ

ನವದೆಹಲಿ: ಎಎಪಿಯ 20 ಶಾಸಕರ ಅನರ್ಹತೆಗೊಂಡರೆ, ನಂತರ ನಡೆಯಲಿರುವ ‘ಮಿನಿ–ಚುನಾವಣೆ’ಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಸಿದ್ಧತೆ ಆರಂಭಿಸಿವೆ.

ಚುನಾವಣಾ ಆಯೋಗದ ನಿರ್ಧಾರದಿಂದ ಪಕ್ಷದ ಮೇಲಾಗಿರುವ ಪರಿಣಾಮಗಳನ್ನು ದೂರಮಾಡಲು ಹೊಸ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಕೂಡ ಹೆಜ್ಜೆ ಇಟ್ಟಿದೆ.

ಪಕ್ಷದ ಉನ್ನತ ಮುಖಂಡರು ಶನಿವಾರ ಸರಣಿ ಸಭೆಗಳನ್ನು ನಡೆಸಿದರು. ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿಯೂ ಪಕ್ಷ ಹೋರಾಡಲಿದೆ ಎಂದು ಎಎಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಈ ವಿಚಾರವನ್ನು ಉನ್ನತ ನ್ಯಾಯಾಂಗಕ್ಕೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ. ಇದು ಚುನಾವಣಾ ಆಯೋಗದ ‘ಸ್ವೇಚ್ಛಾಚಾರ’ದ ನಿರ್ಧಾರ ಎಂದು ಬಿಂಬಿಸಲು ಅದು ನಿರ್ಧರಿಸಿದೆ. ಅಲ್ಲದೇ, ನಿವೃತ್ತರಾಗಲಿರುವ ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ಅವರನ್ನು ಗುರಿಯಾಗಿಸಿಕೊಂಡು ಇದನ್ನು ರಾಜಕೀಯ ವಿಷಯವನ್ನಾಗಿಸಲು ಪಕ್ಷ ತೀರ್ಮಾನಿದೆ ಎಂದು ಮೂಲಗಳು ಹೇಳಿವೆ.

ಈ ವಿಚಾರದಲ್ಲಿ ತನ್ನನ್ನು ‘ಬಲಿಪಶು’ ಮಾಡಲಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಎಪಿ ಬಿಂಬಿಸುವ ಸಾಧ್ಯತೆ ಇದೆ.

ಬಂಡಾಯಗಾರರ ಮೇಲೆ ನಿಗಾ: ಅರವಿಂದ ಕೇಜ್ರಿವಾಲ್‌ ಮತ್ತು ಇತರ ಉನ್ನತ ಕಾರ್ಯತಂತ್ರ ನಿಪುಣರು ಪಕ್ಷದ ಬಂಡಾಯ ಶಾಸಕರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕಾಗಿದೆ. ಬಂಡಾಯ ಎದ್ದಿರುವ ಕುಮಾರ್‌ ವಿಶ್ವಾಸ್‌ ಮತ್ತು ಕಪಿಲ್‌ ಮಿಶ್ರಾ ಅವರಿಗೆ ನಿಷ್ಠರಾಗಿರುವ ಶಾಸಕರೂ ಇದ್ದಾರೆ. ಆಂತರಿಕವಾಗಿ ಇವರನ್ನು ‘ಸ್ಲೀಪರ್‌ ಸೆಲ್‌ಗಳು’ ಎಂದೇ ಕರೆಯಲಾಗುತ್ತಿದೆ.

ಶಾಸಕರನ್ನು ಅನರ್ಹಗೊಳಿಸುವ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಹಿ ಹಾಕಿದ ಕೂಡಲೇ, ವಿಶ್ವಾಸ್‌ ಮತ್ತು ಮಿಶ್ರಾ ಅವರೊಂದಿಗೆ ಇರುವ ಶಾಸಕರು ರಾಜೀನಾಮೆ ನೀಡಿ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಲಾಭದ ಲೆಕ್ಕಾಚಾರ: ಇತ್ತ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕೂಡ ಈಗಿನ ರಾಜಕೀಯ ಬೆಳವಣಿಗೆಯ ಲಾಭ ಪಡೆಯಲು ಯತ್ನಿಸುತ್ತಿವೆ. ಎಎಪಿಯ ಕನಸು ನುಚ್ಚುನೂರಾಗಲಿದೆ ಎಂಬ ನಿರೀಕ್ಷೆಯ ಅವುಗಳದ್ದು. ಎರಡೂ ಪಕ್ಷಗಳ ನಾಯಕರೂ ಶನಿವಾರ ಸರಣಿ ಸಭೆ ನಡೆಸಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ.

ಎಎಪಿಯ ರೀತಿಯಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್‌ಗಳು 20 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿವೆ. ಅಲ್ಲದೇ, ಸ್ಥಳೀಯ ಸಮಸ್ಯೆಗಳು ಮತ್ತು ಎಎಪಿಯ ಬಂಡಾಯ ಸದಸ್ಯರನ್ನು ಗುರುತಿಸುವ ಕಾರ್ಯಕ್ಕೂ ಕೈ ಹಾಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry