ಎನ್‌ಪಿಎಸ್ ಹಿಂಪಡೆಯಲು ಸರ್ಕಾರಿ ನೌಕರರ ಒತ್ತಾಯ

7

ಎನ್‌ಪಿಎಸ್ ಹಿಂಪಡೆಯಲು ಸರ್ಕಾರಿ ನೌಕರರ ಒತ್ತಾಯ

Published:
Updated:
ಎನ್‌ಪಿಎಸ್ ಹಿಂಪಡೆಯಲು ಸರ್ಕಾರಿ ನೌಕರರ ಒತ್ತಾಯ

ಬೆಂಗಳೂರು: ಹೊಸ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ರ‍್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ನೌಕರರು ಭಾಗಹಿಸಿದರು. ಪ್ರತಿಭಟನಾಕಾರರು  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ನಿಶ್ಚಿತ ಪಿಂಚಣಿ ನೌಕರರಿಗೆ ನೀಡುವ ಭಿಕ್ಷೆಯಲ್ಲ. ಪಿಂಚಣಿಯು ನೌಕರರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ 1993ರಲ್ಲಿ ಆದೇಶ ನೀಡಿದೆ. ಆದರೂ ಸರ್ಕಾರಿ ನೌಕರರಲ್ಲೂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಿಂಚಣಿ ಇದೆ. ಈ ತಾರತಮ್ಯ ಏಕೆ’ ಎಂದು ಪ್ರಶ್ನಿಸಿದರು.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಕಾಯ್ದೆ 2013ರಡಿ ಎನ್‌ಪಿಎಸ್ ಅಳವಡಿಸಿಕೊಳ್ಳುವ ಅಥವಾ ನಿರಾಕರಿಸುವ ಅಧಿಕಾರ ರಾಜ್ಯಗಳಿಗಿದೆ. ಅದನ್ನು ಚಲಾಯಸಿ ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಸಂಘದ ಅಧ್ಯಕ್ಷ ಶಾಂತಾರಾಮ ಒತ್ತಾಯಿಸಿದರು.

ಎನ್‌ಪಿಎಸ್ ಅಡಿ ಪಿಂಚಣಿ ನೀಡಲು ನೌಕರರ ವೇತನದ ಶೇ 10 ರಷ್ಟು ಮೊತ್ತ ಕಡಿತಗೊಳಿಸಲಾಗುತ್ತದೆ. ಆ ಮೊತ್ತಕ್ಕೆ ಸಮಾನವಾಗಿ ಶೇ 10 ರಷ್ಟು ಹಣವನ್ನು ವಂತಿಗೆ ರೂಪದಲ್ಲಿ ಸರ್ಕಾರ ನೀಡುತ್ತದೆ. ಹೀಗೆ ಸಂಗ್ರಹವಾಗುವ ಮೊತ್ತವನ್ನು ಕಾರ್ಪೊರೇಟ್ ಕಂಪನಿಗಳು ಪಡೆದು ಷೇರುಪೇಟೆಯಲ್ಲಿ ತೊಡಗಿಸಲು ಅವಕಾಶ ನೀಡಲಾಗಿದೆ. ಒಂದು ವೇಳೆ, ಷೇರುಪೇಟೆಯಲ್ಲಿ ನಷ್ಟ ಉಂಟಾದರೆ ಪಿಂಚಣಿ ಮೊತ್ತವೂ ವ್ಯತ್ಯಯವಾಗುತ್ತದೆ. ರಾಜ್ಯದಲ್ಲಿರುವ ಸುಮಾರು 1.80 ಲಕ್ಷ ನೌಕರರು ಪಿಂಚಣಿ ವಂಚಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ ಕರೆಗೆ ಪ್ರಧಾನಿ ತಲೆಬಾಗಬೇಕು: ಎನ್‌ಪಿಎಸ್‌ ಯೋಜನೆ ಹಿಂಪ‍ಡೆದು ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸುವಂತೆ ದೇಶವೇ ಕರೆ ನೀಡಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆಬಾಗಬೇಕು ಎಂದು ಎನ್‌ಪಿಎಸ್ ನೌಕರರ ಸಂಘದ ರಾಷ್ಟ್ರೀಯ ಅಧ್ಯಕ್ಷ ವಿಜಯಕುಮಾರ್ ಬಂಧು ಆಗ್ರಹಿಸಿದರು.

‘ನಮ್ಮ ಕೂಗು ಪ್ರಧಾನಿಗೆ ಕೇಳಿಸುವವರೆಗೆ ಹೋರಾಡಬೇಕಿದೆ. ಈ ಸಲುವಾಗಿ ನವದೆಹಲಿಯಲ್ಲಿ ಎನ್‌ಪಿಎಸ್‌ ನೌಕರರ ರಾಷ್ಟ್ರೀಯ ಸಮಾವೇಶ ಆಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸಬೇಕು’ ಎಂದು ಅವರು ಮನವಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ‘ಬಿಜೆಪಿ ಪ್ರಣಾಳಿಕೆಯಲ್ಲಿ ಪಿಂಚಣಿ ಸಂಬಂಧಿತ ಬೇಡಿಕೆಗಳನ್ನು ಸೇರಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರತಿಭಟನೆಗೆ ದೇವೇಗೌಡ ಬೆಂಬಲ

ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೋರಾಟಕ್ಕೆ ಬೆಂಬಲ ಸೂಚಿಸಿದರು.

‘ಪಿಂಚಣಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೌಕರರ ಜತೆಗೆ  ಆಟವಾಡುತ್ತಿವೆ. ಯಾರಿಗೋ ಲಾಭ ಮಾಡಿಕೊಡಲು ನೌಕರರನ್ನು ಬಲಿಪಶು ಮಾಡುವುದು ಯಾವ ನ್ಯಾಯ. ಈ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಹೇಳಿದರು.

ಸವಾರರಿಗೆ ತಟ್ಟಿದ ಪ್ರತಿಭಟನೆ ಬಿಸಿ

ಎನ್‌ಪಿಎಸ್ ವಿರೋಧಿಸಿ ನಡೆದ ಪ್ರತಿಭಟನೆ ಸಲುವಾಗಿ ಕೆಲವು ಕಡೆ ಶನಿವಾರ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಪ್ರಮುಖ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ದವು.

ಪ್ರತಿಭಟನಾ ರ‍್ಯಾಲಿಗಾಗಿ ಶೇಷಾದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಕೆಲಕಾಲ ನಿರ್ಬಂಧಿಸಲಾಯಿತು. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ವಾಹನಗಳನ್ನು ಬದಲಿ ಮಾರ್ಗದ ಮೂಲಕ ಕಳುಹಿಸಲಾಯಿತು. ಹಾಗಾಗಿ, ಯಶವಂತಪುರ, ಮಾಗಡಿ ರಸ್ತೆ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಮೆಜೆಸ್ಟಿಕ್‌ನತ್ತ ಹೊಗುತ್ತಿದ್ದ ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕಿಕೊಂಡರು.

ರೇಸ್‌ಕೋರ್ಸ್‌ ರಸ್ತೆ, ಚಾಲುಕ್ಯ ವೃತ್ತ, ಅರಮನೆ ರಸ್ತೆ, ರಾಜಭವನ ರಸ್ತೆ, ನೃಪತುಂಗ ರಸ್ತೆ, ಲಾಲ್‌ಬಾಗ್‌ ಉದ್ಯಾನ, ಕಾರ್ಪೊರೇಷನ್‌ ವೃತ್ತ, ಶಾಂತಿನಗರ, ರಿಚ್ಮಂಡ್‌ ವೃತ್ತ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ವಾಹನಗಳ ಸಂಚಾರವೂ ಕೆಲಕಾಲ ವ್ಯತ್ಯಯವಾಯಿತು.

ಶೇಷಾದ್ರಿ ಮೇಲ್ಸೇತುವೆ ಹಾಗೂ ಆನಂದರಾವ್‌ ವೃತ್ತದಲ್ಲಿ ಸಂಚಾರ ಬಂದ್‌ ಆಗಿದ್ದರಿಂದ ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಕೆ.ಜಿ.ರಸ್ತೆ, ಮಿನರ್ವಾ ವೃತ್ತ ಹಾಗೂ ಸುತ್ತಮುತ್ತಲೂ ದಟ್ಟಣೆ ಕಂಡುಬಂತು. ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಿಂದ ಓಕಳಿಪುರದ ರೈಲು ಕೆಳಸೇತುವೆವರೆಗೂ ವಾಹನಗಳು ನಿಂತುಕೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry