ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

7

ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

Published:
Updated:
ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

ಧಾರವಾಡ: ಉದಾಹರಣೆ 1: ವಿದ್ಯಾರ್ಥಿಯೊಬ್ಬ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ, ನಂತರ ವೈದ್ಯಕೀಯ ಕೋರ್ಸ್‌ನಲ್ಲೂ ಮೊದಲಿಗನಾಗಿ ದೇಶದ ಅತ್ಯುನ್ನತ ಶಸ್ತ್ರಚಿಕಿತ್ಸಕರಲ್ಲಿ ಒಬ್ಬನಾಗುತ್ತಾನೆ. ಆತನಿಗೆ ಮಾನವೀಯತೆ, ಕರುಣೆ, ನಗು, ಉಲ್ಲಾಸ ಇಲ್ಲವೆಂದಾದಲ್ಲಿ ಆತ ಎಷ್ಟು ಕಲಿತರೂ ಪ್ರಯೋಜನವಿಲ್ಲ.

ಉದಾಹರಣೆ 2: ಮಳೆ ಹೆಚ್ಚು ಬರುವ ಪ್ರದೇಶಗಳಲ್ಲಿ ಹಿಂದಿನ ಕಾಲದ ಜನರು ಈಚಲು ಮರದ ಗರಿಗಳಿಂದ ಗೊಬ್ಬೆಗಳನ್ನು ಮಾಡುತ್ತಿದ್ದರು. ಅದು ಮಳೆಯಿಂದ ರಕ್ಷಣೆ ನೀಡುವುದರ ಜೊತೆಗೆ ದೇಹವನ್ನು ಬಿಸಿಯಾಗಿಡುತ್ತಿತ್ತು. ಅದರ ಜಾಗವನ್ನೀಗ ಪ್ಲಾಸ್ಟಿಕ್ ಆವರಿಸಿದೆ. ಆದರೆ ಪ್ಲಾಸ್ಟಿಕ್‌ಗೆ

ಅದರ ಗುಣವಿಲ್ಲ. ಗೊಬ್ಬೆಯಂಬ ದೇಸೀ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಮಳೆ ಹೆಚ್ಚು ಬೀಳುವ ರಾಷ್ಟ್ರಗಳಿಗೆ ರಫ್ತು ಮಾಡುವ ಕೌಶಲವನ್ನು ನಮ್ಮ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸದಿರುವುದು ವಿಪರ್ಯಾಸ.

ಈ ಉದಾಹರಣೆಗಳ ಮೂಲಕ ‘ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?’ ಗೋಷ್ಠಿಯಲ್ಲಿ, ಇಂದಿನ ಶಿಕ್ಷಣ ನೀತಿ ಹಾಗೂ ಜ್ಞಾನಶಿಸ್ತು ವೃದ್ಧಿಸದ ವಿಶ್ವವಿದ್ಯಾಲಯಗಳ ಬೇಜವಾಬ್ದಾರಿತನ ಕುರಿತು ಬೆಳಕು ಚೆಲ್ಲುವ ಪ್ರಯತ್ನ ನಡೆಯಿತು.

‘ಹೊಸತು ಎಂದರೇನು? ಅದನ್ನು ಕಂಡು ಹಿಡಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ಪಾಶ್ಚಿಮಾತ್ಯರು ಸಿದ್ಧಾಂತಗಳನ್ನು ರೂಪಿಸಿ, ವಿವರಣೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಿದರು. ಆದರೆ ನಮ್ಮಲ್ಲಿ ಆ ಪ್ರಶ್ನೆಗಳಿಗೆ ಉತ್ತರ ದೊರೆತಿದೆಯೇ? ಹೊಸ ಜ್ಞಾನ ಸೃಷ್ಟಿ ಭಾರತದಲ್ಲಿ ಹೇಗಿದೆ?’ ಎಂಬ ಮತ್ತಷ್ಟು ಪ್ರಶ್ನೆಗಳೊಂದಿಗೆ ಗೋಷ್ಠಿಯ ನಿರ್ದೇಶಕ ರಾಜಾರಾಮ ಹೆಗಡೆ ಚರ್ಚೆಗೆ ಚಾಲನೆ ನೀಡಿದರು.

ಚರ್ಚೆಯಲ್ಲಿ ಭಾಗವಹಿಸಿದ ಪೃಥ್ವಿದತ್ತ ಚಂದ್ರಶೋಭಿ, ‘ಜ್ಞಾನಕ್ಕಿಂಥ ಹೆಚ್ಚಾಗಿ ಇಂದು ಸಿದ್ಧಾಂತಗಳು ಜನರಿಗೆ ಬೇಕೆನಿಸಿವೆ. ಹೊಸತನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಹೊರಗಿನ ಜ್ಞಾನ ಸಂಪತ್ತನ್ನು ಅರ್ಥ ಮಾಡಿಕೊಳ್ಳಲು ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿಲ್ಲ. ಇರುವ ಜ್ಞಾನ ಹಾಗೂ ಚಿಂತನೆಗಳ ಉಪಯುಕ್ತತೆ ಕುರಿತೂ ಖಚಿತತೆ ಇಲ್ಲದಂತಾಗಿದೆ. ಪ್ರಾಧ್ಯಾಪಕರನ್ನು ಸ್ವತಂತ್ರವಾಗಿ ಬಿಡದೆ, ಬಯೋಮೆಟ್ರಿಕ್ ಹಾಜರಾತಿಗೆ ಸೀಮಿತಗೊಳಿಸಿರುವುದು ಈ ವೈಫಲ್ಯಗಳಿಗೆ ಕಾರಣಗಳಲ್ಲೊಂದು’ ಎಂದು ತಮ್ಮ ವಾದ ಮಂಡಿಸಿದರು.

ಪ್ರಾಥಮಿಕ ಶಿಕ್ಷಣ ಕುರಿತು ಮಾತನಾಡಿದ ಮೋಹನ ಆಳ್ವಾ, ‘ಶಿಕ್ಷಣ ಸಂಸ್ಥೆ ಕಟ್ಟಿ 26 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ನನಗೆ ಇಂದಿನ ಶಿಕ್ಷಣ ನೀತಿಯಿಂದ ಉತ್ತಮ ಜ್ಞಾನ ಸಿಗುವ ನಂಬಿಕೆ ಇಲ್ಲ’ ಎಂದು ಮಾರ್ಮಿಕವಾಗಿಯೇ ತಮ್ಮ ವಾದವನ್ನು ಮುಂದಿಟ್ಟರು.

ಹತ್ತನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮ ವಿದ್ಯಾರ್ಥಿಗಳು ಶೇ 62ರಷ್ಟು ಪಾಸಾದರೆ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದ ವಿದ್ಯಾರ್ಥಿಗಳು ಶೇ 99ರಷ್ಟು ಜನ ಪಾಸಾಗುತ್ತಿದ್ದಾರೆ. ಇದು ಪಾಲಕರಲ್ಲಿ ಗೊಂದಲವನ್ನು ಹುಟ್ಟುಹಾಕುತ್ತದೆ. ಎಲ್ಲರೂ ಅಂಕಗಳ ಬೆನ್ನು ಹತ್ತುತ್ತ, ಬಯಲು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಮನಸ್ಸಿನ ಆನಂದ ಹೆಚ್ಚಿಸುವ, ಕಲೆ–ಕ್ರೀಡೆ ಬೆರೆತ ಏಕರೂಪ ಶಿಕ್ಷಣ

ಪದ್ಧತಿ ಬೇಕಿದೆ. ಮನಸ್ಸು ಕಟ್ಟಲು ಶಾಲೆಯೇ ಬೇಕೆಂದೇನೂ ಇಲ್ಲ’ ಎಂದು ಜ್ಞಾನ ಸಂಪತ್ತಿಗೆ ಸಂಬಂಧಿಸಿದಂತೆ ಹೊಸ ವಾದವನ್ನು

ಮುಂದಿಟ್ಟರು.

ಚರ್ಚೆಯ ಮತ್ತೊಂದು ಮಗ್ಗುಲನ್ನು ಪ್ರಸ್ತಾಪಿಸಿದ ಅರವಿಂದ ಚೊಕ್ಕಾಡಿ, ‘ಮರ್ಕೆಂಟಾನಿಸಮ್ ಆರ್ಥಿಕ ನೀತಿಯನ್ನು ಅನುಕರಿಸುತ್ತಿರುವ ಇಂದಿನ ಶಿಕ್ಷಣ ನೀತಿ, ವಿದ್ಯಾರ್ಥಿಗಳನ್ನು ಅನಗತ್ಯ ಒತ್ತಡಕ್ಕೆ ಸಿಲುಕಿಸುತ್ತಿದೆ. ಆರ್ಥಿಕ ನೀತಿ ಹಾಗೂ ಜ್ಞಾನ ಸೃಷ್ಟಿ ಎರಡೂ ಸಮನಾಂತರದಲ್ಲಿ ಸಾಗುವುದರಿಂದ ಒಂದನ್ನೊಂದು ಬಿಟ್ಟು ನೋಡಲು ಸಾಧ್ಯವಿಲ್ಲ. ಹಾಗೆಯೇ ಇಂಥ ಆರ್ಥಿಕ ನೀತಿಯಿಂದ ಹೊರಬಂದು ಕಲಿಕೆಯಲ್ಲಿ ಅಂತರ್ಮುಖಿಗಳಾಗಿ ಜ್ಞಾನ ಸೃಷ್ಟಿಸಿಕೊಳ್ಳುತ್ತ, ಬಹಿರಂಗದಲ್ಲಿ ಚಟುವಟಿಕೆಯಿಂದ ಕೂಡಿರುವ ಒತ್ತಡರಹಿತ ಶಿಕ್ಷಣ ವ್ಯವಸ್ಥೆಯನ್ನು ನಾವು ರೂಪಿಸಬೇಕಿದೆ’ ಎಂದು ಅವರು ಹೇಳಿದರು.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಣ್ಣಪುಟ್ಟ ಹೊಸತನ ಕಾಣುತ್ತಿದ್ದೇವೆಯೇ ಹೊರತು, ಮೂಲ ವಿಜ್ಞಾನದಲ್ಲಿ ಹೊಸತು ಎಂಬುದೇ ಇಲ್ಲದಂತಾಗಿದೆ. ಬಯಲು ಕಲಿಕೆಗೆ ಒತ್ತು ನೀಡಿದಲ್ಲಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಆ ಮೂಲಕ ಹೊಸ ಜ್ಞಾನ ಸೃಷ್ಟಿಗೆ ವೇದಿಕೆಯನ್ನು ಈಗಿನಿಂದಲೇ ಸೃಷ್ಟಿಸಲು ಸಾಧ್ಯ’ ಎಂದರು.

* ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದಿದೆ. ಏಕೆ ಹೀಗಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಶ್ರೀಸಾಮಾನ್ಯನಿಗೆ ಬೇಕಾಗಿದೆ. ‌

–ಪೃಥ್ವಿದತ್ತ ಚಂದ್ರಶೋಭಿ, ಲೇಖಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry