‘ಭಾರತ್ ಕೆ ವೀರ್’ ಗೀತೆ ಲೋಕಾರ್ಪಣೆ

7
ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ಕಾರ್ಯಕ್ರಮ

‘ಭಾರತ್ ಕೆ ವೀರ್’ ಗೀತೆ ಲೋಕಾರ್ಪಣೆ

Published:
Updated:
‘ಭಾರತ್ ಕೆ ವೀರ್’ ಗೀತೆ ಲೋಕಾರ್ಪಣೆ

ನವದೆಹಲಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಅರೆಸೇನಾ ಪಡೆ ಯೋಧರ ಕುಟುಂಬಗಳಿಗೆ ನೆರವು ನೀಡುವ ಸಲುವಾಗಿ ಮೂಲ ನಿಧಿ ಸಂಗ್ರಹಿಸಲು ಆರಂಭಿಸಿದ ‘ಭಾರತ್ ಕೆ ವೀರ್’ ಉಪಕ್ರಮದ ಅಧಿಕೃತ ಗೀತೆಯನ್ನು ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಸಾಹಿತ್ಯ ರಚಿಸಿ ಹಾಡಿರುವ ಗೀತೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಖಾತೆ ರಾಜ್ಯ ಸಚಿವರಾದ ಕಿರಣ್ ರಿಜಿಜು ಹಾಗೂ ಹಂಸರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೊಬಾಲ್, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ನಟ ಅಕ್ಷಯ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.

‘ಈ ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸಂಗೀತ ಪ್ರೇಮಿಗಳಲ್ಲಿ ಕೇಳಿಕೊಳ್ಳುತ್ತೇನೆ. ಅದರಿಂದ ಬಂದ ಹಣವನ್ನು ಈ ಯೋಜನೆಗೆ ನೀಡಲಾಗುತ್ತದೆ’ ಎಂದು ಕೈಲಾಶ್ ಖೇರ್ ಹೇಳಿದರು.

ಅಭಿಯಾನ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ ಅಕ್ಷಯ್ ಕುಮಾರ್ ಅವರನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. ‘ಹೋರಾಟದಲ್ಲಿ ಅಂಗವಿಕಲರಾದ ಯೋಧರಿಗೆ ನೆರವು ನೀಡಲೂ ಇಂಥದ್ದೇ ಅಭಿಯಾನ ಆರಂಭಿಸಬೇಕು’ ಎಂದು ‘ಭಾರತ್ ಕೆ ವೀರ್’ನ ರಾಯಭಾರಿ ಅಕ್ಷಯ್ ಕುಮಾರ್ ಕೇಳಿಕೊಂಡರು.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಯೋಧರ ಕಥೆಯನ್ನು ಹೇಳುವ ಅನುರಾಗ್ ಅಗರ್ವಾಲ್ ಅವರ ಗ್ರಾಫಿಕ್ ಕಾದಂಬರಿಯನ್ನೂ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಯಿತು. ಸೈನಿಕರು ಮತ್ತು ಅವರ ಕುಟುಂಬಗಳ ಬಗೆಗೆ ಆದಿ ಪೋಚಾ ನಿರ್ದೇಶಿಸಿದ ಕಿರುಚಿತ್ರವೂ ಬಿಡುಗಡೆ ಆಯಿತು.

ಅಕ್ಷಯ್ ಕುಮಾರ್, ಕೈಲಾಶ್ ಖೇರ್ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಕೊಡುಗೆ ನೀಡಿದ್ದರಿಂದಾಗಿ ಕಾರ್ಯಕ್ರಮದಲ್ಲಿಯೇ ₹ 12.93 ಕೋಟಿ ಸಂಗ್ರಹವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry