₹ 21 ಕೋಟಿ ದುರ್ಬಳಕೆ: ಆರೋಪ

7
ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ಭ್ರಷ್ಟಾಚಾರ: ಅಧ್ಯಕ್ಷೆ ಶಶಿಕಲಾ ಕವಲಿ

₹ 21 ಕೋಟಿ ದುರ್ಬಳಕೆ: ಆರೋಪ

Published:
Updated:

ಹುಬ್ಬಳ್ಳಿ:‘ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮಂಡಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ₹ 21 ಕೋಟಿ ದುರ್ಬಳಕೆ ಆಗಿದೆ’ ಎಂದು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ಶನಿವಾರ ಇಲ್ಲಿ ನೇರ ಆರೋಪ ಮಾಡಿದರು.

ನಗರದ ಮೂರುಸಾವಿರ ಮಠದ ಹೈಸ್ಕೂಲ್ ಆವರಣದಲ್ಲಿ ಆರಂಭವಾದ ಒಣಮೆಣಸಿನಕಾಯಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಧಿಕಾರ ವಹಿಸಿಕೊಂಡ ದಿನದಿಂದ ಮಂಡಳಿಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಆದರೆ, ನನಗೆ ಅಧಿಕಾರಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಮಂಡಳಿಗೆ ಸರ್ಕಾರ ನೀಡಿರುವ ಅನುದಾನ ಸದ್ಬಳಕೆ ಆಗಿಲ್ಲ. ಕೋಟ್ಯಂತರ ರೂಪಾಯಿ ಅನುದಾನವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರ ಬಡ್ಡಿ ಹಣದಲ್ಲಿ ಅಧಿಕಾರಿಗಳು ಮಜಾ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕಿಂಚಿತ್ತೂ ಲಾಭ ಆಗುತ್ತಿಲ್ಲ’ ಎಂದು ಅವರು ದೂರಿದರು.

‘ತೋಟಗಾರಿಕಾ ಇಲಾಖೆ ಆಯುಕ್ತರಾಗಿದ್ದ ಪಿ.ಸಿ.ರೇ ಹಾಗೂ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಬಿ.ರುಂಡಿ, ಮಂಡಳಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಹಕಾರ ನೀಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಅವರು ದೂರಿದರು.

ಅಧ್ಯಕ್ಷರ ಆರೋಪ ಕುರಿತು ಪ್ರತಿಕ್ರಿಯಿಸಿದ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಹುಲ್ಲೊಳ್ಳಿ, ‘ಮಂಡಳಿ ಆರಂಭವಾದಾಗಿನಿಂದ ಅವ್ಯವಹಾರ ನಡೆದಿರಬಹುದು. ಈ ಮೊದಲಿನ ₹21 ಕೋಟಿ ಕುರಿತು ನನಗೇನು ಮಾಹಿತಿ ಇಲ್ಲ. ಆದರೆ, ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಪ್ರಸ್ತುತ ಮಂಡಳಿಯಲ್ಲಿ ₹12 ಕೋಟಿ ಠೇವಣಿ ಇದೆ. ₹3 ಕೋಟಿ ಅಭಿವೃದ್ಧಿ ಅನುದಾನ ಬಂದಿದೆ. ಮಂಡಳಿಯಲ್ಲಿ ಉನ್ನತಾಧಿಕಾರಿಗಳ ಹಸ್ತಕ್ಷೇ‍ಪ ಇಲ್ಲ. ಆದರೆ, ಇಲಾಖಾ ಆಯುಕ್ತರು ನೀಡಿದ ನಿರ್ದೇಶನಗಳನ್ನು ನಾವು ಪಾಲಿಸಬೇಕಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry