ಎಚ್‌ಪಿಸಿಎಲ್‌ ಷೇರು ಖರೀದಿಸಲಿರುವ ಒಎನ್‌ಜಿಸಿ

7

ಎಚ್‌ಪಿಸಿಎಲ್‌ ಷೇರು ಖರೀದಿಸಲಿರುವ ಒಎನ್‌ಜಿಸಿ

Published:
Updated:

ಮುಂಬೈ: ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ (ಎಚ್‌ಪಿಸಿಎಲ್‌) ಕೇಂದ್ರ ಸರ್ಕಾರ ಹೊಂದಿರುವ ಪೂರ್ತಿ ಪಾಲು ಬಂಡವಾಳವನ್ನು (ಶೇ 51.11ರಷ್ಟು) ಖರೀದಿ ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ತಿಳಿಸಿದೆ.

77.8 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹ 473.97 ರಂತೆ ಒಟ್ಟು ₹ 36,915 ಕೋಟಿಗೆ ಖರೀದಿ ಮಾಡಲಾಗುವುದು ಎಂದು ಹೇಳಿದೆ.

ಷೇರು ಖರೀದಿಗಾಗಿ ಅಲ್ಪಾವಧಿಯ ಸಾಲ ಪಡೆಯಲಾಗುವುದು. ಸಂಪೂರ್ಣ ವಾಗಿ ನಗದು ರೂಪದಲ್ಲಿಯೇ ವಹಿವಾಟು ನಡೆಯಲಿದ್ದು,  ಈ ತಿಂಗಳ ಅಂತ್ಯದೊಳಗೆ ಪ್ರಕ್ರಿಯೆ ಅಂತ್ಯಗೊಳ್ಳಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ಸದ್ಯ ಕಂಪನಿ ಬಳಿ ನಗದು ರೂಪದಲ್ಲಿ ₹ 12,000 ಕೋಟಿ ಇದೆ.

ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಒಎನ್‌ಜಿಸಿ ಕೊಡುಗೆ ಶೇ 70 ರಷ್ಟಿದೆ.

ಎಚ್‌ಪಿಸಿಎಲ್‌ 2016–17ರಲ್ಲಿ ₹ 2.13 ಲಕ್ಷ ಕೋಟಿ ವಹಿವಾಟು ನಡೆಸಿದ್ದು, ₹ 6,502 ಕೋಟಿ ನಿವ್ವಳ ಲಾಭ ಗಳಿಸಿತ್ತು. ಸದ್ಯ ಎಚ್‌ಪಿಸಿಎಲ್‌ ಮಾರುಕಟ್ಟೆ ಮೌಲ್ಯ ₹ 63,475 ಕೋಟಿ ಇದೆ.

ಷೇರು ವಿಕ್ರಯದ ಗುರಿ ಸಾಧನೆ: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಷೇರು ವಿಕ್ರಯದ ಗುರಿ ತಲುಪಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ (2017–18) ಜನವರಿ 11ರವರೆಗೆ ಷೇರು ವಿಕ್ರಯದ ಮೂಲಕ ₹ 54,337.60 ಕೋಟಿ ಸಂಗ್ರಹವಾಗಿದೆ.

ಎಚ್‌ಪಿಸಿಎಲ್‌ನಲ್ಲಿರು ಷೇರು ಮಾರಾಟದಿಂದ ಷೇರು ವಿಕ್ರಯದ ಮೊತ್ತವು ₹ 91,252.60 ಕೋಟಿಗಳಿಗೆ ತಲುಪಲಿದೆ.

ಬಜೆಟ್‌ ಅಂದಾಜಿನಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಹೊಂದಿರುವ ಷೇರು ಬಂಡವಾಳ ತಗ್ಗಿಸುವ ಮೂಲಕ ₹ 72,500 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಷೇರು ವಿಕ್ರಯದಿಂದ ಹೆಚ್ಚಿನ ಮೊತ್ತ ಬಂದರೆ ವಿತ್ತೀಯ ಕೊರತೆ ನಿಯಂತ್ರಣದಲ್ಲಿ ಇಡಲು ಅನುಕೂಲ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry