‘ಹಲ್ಲೆ ನಡೆಸಿದರೆ ಕಾಲಿಗೆ ಗುಂಡು ಹಾರಿಸಿ’

7

‘ಹಲ್ಲೆ ನಡೆಸಿದರೆ ಕಾಲಿಗೆ ಗುಂಡು ಹಾರಿಸಿ’

Published:
Updated:
‘ಹಲ್ಲೆ ನಡೆಸಿದರೆ ಕಾಲಿಗೆ ಗುಂಡು ಹಾರಿಸಿ’

ಬೆಂಗಳೂರು: ವಾರದಿಂದೀಚೆಗೆ 13 ಪೊಲೀಸರ ಮೇಲೆ ಹಲ್ಲೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್, ಕರ್ತವ್ಯದ ವೇಳೆ ತಮ್ಮ ಮೇಲೆ ಹಲ್ಲೆಗೆ ಮುಂದಾಗುವವರ ಕಾಲಿಗೆ ಗುಂಡು ಹೊಡೆಯಿರಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಿಗೇಹಳ್ಳಿ, ಜಗಜೀವನ್‌ರಾಮನಗರ, ಜೀವನ್‌ಬಿಮಾನಗರ, ಕಬ್ಬನ್‌ಪಾರ್ಕ್‌, ಬಾಣಸವಾಡಿ ಹಾಗೂ ಕಾಡುಗೊಂಡನಹಳ್ಳಿ ಠಾಣೆಗಳ ಗಸ್ತು ಸಿಬ್ಬಂದಿ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿದೆ. ಸಾರ್ವಜನಿಕರ ನೆಮ್ಮದಿ ಕಾಪಾಡಲು ಕಾವಲುಗಾರರಂತೆ ಕೆಲಸ ಮಾಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ, ಇಂಥ ಪ್ರಕರಣಗಳು ಮರುಕಳಿಸಿದರೆ ಮುಲಾಜಿಲ್ಲದೆ ಹಲ್ಲೆಕೋರರ ಮೇಲೆ ಗುಂಡು ಹಾರಿಸುವಂತೆ ಸಿಬ್ಬಂದಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

‘ಅಪರಾಧ ತಡೆಗಟ್ಟಲು ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಹುದು ಎಂದು ಪೊಲೀಸ್ ಕೈಪಿಡಿಯಲ್ಲಿದೆ. ಬಂದೂಕಿನ ಪ್ರಯೋಗವನ್ನೇ ಮಾಡಬೇಕು ಎಂದಾದರೆ, ಸಿಬ್ಬಂದಿ ಅದೇ ಅಸ್ತ್ರವನ್ನು ಬಳಸಲಿ.’

‘ಸಿಬ್ಬಂದಿ ಇನ್ನು ಮುಂದೆ ಗಸ್ತು ಹೋಗುವಾಗ ಬಂದೂಕನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಸೂಕ್ಷ್ಮ ಪ್ರದೇಶಗಳು ಹಾಗೂ ಬೀದಿ ದೀಪಗಳಿಲ್ಲದ ರಸ್ತೆಗಳಲ್ಲಿ ಕನಿಷ್ಠ ನಾಲ್ವರು ಪೊಲೀಸರು ಗಸ್ತಿಗೆ ಹೋಗಬೇಕು. ನಿಯಂತ್ರಣ ಕೊಠಡಿ, ಪೊಲೀಸ್ ಠಾಣೆ ಹಾಗೂ ಹೊಯ್ಸಳ ಸಿಬ್ಬಂದಿ ಜತೆ ನಿರಂತರ ಸಂಪರ್ಕದಲ್ಲಿರಬೇಕು.’

‘ರೌಡಿಯಿಂದಾಗಲೀ, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಿಂದಾಗಲೀ ಸಿಬ್ಬಂದಿ ಮೇಲೆ ಹಲ್ಲೆ ನಡೆದಿಲ್ಲ. ಮದ್ಯ ಹಾಗೂ ಮಾದಕ ವಸ್ತುಗಳ ನಶೆಯಲ್ಲಿ ವಿದ್ಯಾವಂತ ಯುವಕರೇ ದಾಂದಲೆ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಹಲ್ಲೆಕೋರರ ಬಂಧನಕ್ಕೆ ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಮಾಹಿತಿ ನೀಡಿದರು.

ಬಾರ್‌ಗಳು ಬಂದ್: ‘ಕೆಲ ಪುಂಡರ ಗುಂಪು ಬೆಳಗಿನ ಜಾವದವರೆಗೂ ನಡುರಸ್ತೆಯಲ್ಲಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಅಷ್ಟು ಹೊತ್ತಿಗೆ ಅವರಿಗೆ ಮದ್ಯ ಹೇಗೆ ಸಿಗುತ್ತಿದೆ ಎಂಬ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅವಧಿ ಮೀರಿ ಮದ್ಯ ಪೂರೈಸುವ ಬಾರ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಕಮಿಷನರ್ ಹೇಳಿದರು.

‘ಪರವಾನಗಿ ನಿಯಮಗಳನ್ನು ಉಲ್ಲಂಘಿಸುವ ಬಾರ್‌ ಮಾಲೀಕರ ವಿರುದ್ಧ ಮೊದಲು ಪ್ರಕರಣ ಮಾತ್ರ ದಾಖಲಿಸಲಾಗುತ್ತಿತ್ತು. ಕಲಾಸಿಪಾಳ್ಯದ ಕೈಲಾಶ್ ಬಾರ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ ನಂತರ ಕಠಿಣ ಕ್ರಮ ಜರುಗಿಸುತ್ತಿದ್ದೇವೆ. ನಿಯಮ ಪಾಲಿಸದ ಬಾರ್‌ಗಳ ವಹಿವಾಟನ್ನು ತಿಂಗಳವರೆಗೆ ಸ್ಥಗಿತ ಮಾಡಿಸುತ್ತಿದ್ದೇವೆ. ಈಗಾಗಲೇ ಇಂಥ 30 ಬಾರ್‌ಗಳನ್ನು ಮುಚ್ಚಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಕ್ಯಾಮೆರಾ ಕಡ್ಡಾಯ

‘ಸಂಚಾರ ಪೊಲೀಸರು ಪಾನಮತ್ತ ಚಾಲಕರ ಜತೆ ಹೆಚ್ಚು ವ್ಯವಹರಿಸಬೇಕಾಗುತ್ತದೆ. ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ದಂಡ ವಿಧಿಸುಲು ಹೋದಾಗ ಜಗಳ ಪ್ರಾರಂಭವಾಗುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೈ–ಕೈ ಮಿಲಾಯಿಸುವ ಹಂತವನ್ನೂ ತಲುಪುತ್ತದೆ. ತಪ್ಪು ಯಾರಿಂದ ಆಗಿದೆ ಎಂಬುದನ್ನು ತಿಳಿಯಲು ಬಾಡಿ ವೋರ್ನ್‌ ಕ್ಯಾಮೆರಾ ನೆರವಾಗುತ್ತದೆ. ಹೀಗಾಗಿ, ಸಿಬ್ಬಂದಿ ಆ ಕ್ಯಾಮೆರಾವನ್ನು ಧರಿಸಿಕೊಂಡೇ ಕರ್ತವ್ಯ ನಿರ್ವಹಿಸಬೇಕು’ ಎಂದು ಕಮಿಷನರ್ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry