ಅಮೆರಿಕ ಸರ್ಕಾರ ಸ್ಥಗಿತ

7
ಸೆನೆಟ್‌ನಲ್ಲಿ ವೆಚ್ಚ ಮಸೂದೆ ತಿರಸ್ಕಾರ: ಟ್ರಂಪ್‌ ಆಕ್ರೋಶ

ಅಮೆರಿಕ ಸರ್ಕಾರ ಸ್ಥಗಿತ

Published:
Updated:
ಅಮೆರಿಕ ಸರ್ಕಾರ ಸ್ಥಗಿತ

ವಾಷಿಂಗ್ಟನ್: ಅಲ್ಪಾವಧಿಗೆ ಅಗತ್ಯವಿದ್ದ ವೆಚ್ಚ ಮಸೂದೆಯನ್ನು ಸೆನೆಟ್ ತಿರಸ್ಕರಿಸಿದ ಪರಿಣಾಮ ಅಮೆರಿಕದ ಆಡಳಿತ ಸ್ಥಗಿತಗೊಂಡಿದೆ.

ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರವಹಿಸಿಕೊಂಡು ಸರಿಯಾಗಿ ಒಂದು ವರ್ಷ ಪೂರ್ಣಗೊಳಿಸಿದ ದಿನದಂದೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಅಮೆರಿಕ ಕಾಲಮಾನದ ಪ್ರಕಾರ ಶುಕ್ರವಾರ ಮಧ್ಯರಾತ್ರಿ 12.01ಕ್ಕೆ ಆಡಳಿತ ಅಧಿಕೃತವಾಗಿ ಸ್ಥಗಿತಗೊಂಡಿತು.ಸೆನೆಟ್‌ನಲ್ಲಿ ಮಸೂದೆ ಅಂಗೀಕಾರವಾಗಲು 60 ಮತಗಳ ಅಗತ್ಯವಿತ್ತು. ಆದರೆ, 50–48 ಮತಗಳಿಂದ ಮಸೂದೆ ತಿರಸ್ಕೃತವಾಯಿತು. ಗುರುವಾರ ಜನಪ್ರತಿನಿಧಿಗಳ ಸಭೆಯಲ್ಲಿ ವೆಚ್ಚ ಮಸೂದೆ ಅಂಗೀಕಾರಗೊಂಡಿತ್ತು.

(ಶ್ವೇತಭವನ)

ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ನಾಯಕ ಚಕ್ ಶುಮರ್ ಜತೆ ಕೊನೆಯ ಕ್ಷಣದವರೆಗೂ ಮಾತುಕತೆ ನಡೆಸಿ ಮಸೂದೆಗೆ ಒಪ್ಪಿಗೆ ನೀಡುವಂತೆ ಮನವೊಲಿಸಲು ಯತ್ನಿಸಿದರು. ಆದರೆ, ಮಾತುಕತೆ ವಿಫಲವಾಯಿತು. ಫೆಬ್ರುವರಿ 16ರವರೆಗೆ ಆಡಳಿತ ನಡೆಸಲು ಅಗತ್ಯವಿದ್ದ ಹಣಕಾಸು ಒದಗಿಸುವ ಮಸೂದೆ ಅಂಗೀಕಾರಗೊಳ್ಳಲಿಲ್ಲ.

ಡೆಮಾಕ್ರಟಿಕ್ ಪಕ್ಷದ ಜತೆ ಕೆಲವು ರಿಪಬ್ಲಿಕನ್ ಸಂಸದರು ಸಹ ಈ ಮಸೂದೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. ಈ ಮಸೂದೆ ಅಂಗೀಕಾರಗೊಂಡಿದ್ದರೆ ವಿವಿಧ ಇಲಾಖೆಗಳು ಅಲ್ಪಾವಧಿಗೆ ಕಾರ್ಯ ನಿರ್ವಹಿಸಲು ಅಗತ್ಯವಿದ್ದ ಅನುದಾನ ದೊರೆಯುತ್ತಿತ್ತು.

ಟ್ರಂಪ್‌ ಆಕ್ರೋಶ: ಡೆಮಾಕ್ರಟಿಕ್‌ ಪಕ್ಷದ  ಧೋರಣೆಯಿಂದಲೇ ಆಡಳಿತ ಸ್ಥಗಿತಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರಿದ್ದಾರೆ.

‘ಅಧ್ಯಕ್ಷ ಹುದ್ದೆಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದ್ದೇನೆ. ದೇಶ ಅತ್ಯುತ್ತಮ ಸ್ಥಿತಿಯಲ್ಲಿದೆ. ಆರ್ಥಿಕತೆಯೂ ಉತ್ತಮವಾಗಿದೆ. ಆದರೆ, ಡೆಮಾಕ್ರಟಿಕ್‌ ಪಕ್ಷಕ್ಕೆ ನಮ್ಮ ಸೇನಾಪಡೆ ಅಥವಾ ಅಪಾಯದಲ್ಲಿರುವ  ದಕ್ಷಿಣ ಪ್ರದೇಶದ ಗಡಿಗಿಂತಲೂ ಅಕ್ರಮ ವಲಸಿಗರ ಕುರಿತು ಹೆಚ್ಚು ಕಾಳಜಿ ಹೊಂದಿದ್ದಾರೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ನೌಕರರಿಗೆ ವೇತನರಹಿತ ರಜೆ: ಸೋಮವಾರದಿಂದ ಅಂದಾಜು 8 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಅನಿವಾರ್ಯವಾಗಿ ವೇತನರಹಿತ ರಜೆ ಮೇಲೆ ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

**

'ಶುಮರ್ ಶಟ್‌ಡೌನ್’

ಅಮೆರಿಕ ಸರ್ಕಾರ ಸ್ಥಗಿತವನ್ನು ’ಶುಮರ್‌ ಶಟ್‌ಡೌನ್‌’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸರಾಹ್‌ ಸ್ಯಾಂಡರ್ಸ್ ಕರೆದಿದ್ದಾರೆ.

ಚಕ್ ಶುಮರ್ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದಾರೆ.

’ಇದು ಶುಮರ್ ಶಟ್‌ಡೌನ್. ದೇಶದ ಆರ್ಥಿಕತೆಯನ್ನು  ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಸರ್ಕಾರ ಸ್ಥಗಿತಗೊಳಿಸುವಷ್ಟು ನಿರಾಸೆಯಾಗಿದೆಯೇ’ ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ಸರಾಹ್‌ ಸ್ಯಾಂಡರ್ಸ್ ಕಿಡಿಕಾರಿದ್ದಾರೆ.

(ಚಕ್ ಶುಮರ್)

‘ಸೆನೆಟ್‌ನ ಡೆಮಾಕ್ರಟಿಕ್ ಸದಸ್ಯರು ನಮ್ಮ ದೇಶದ ಸಾಮರ್ಥ್ಯವನ್ನು ಕಡೆಗಣಿಸಿ ರಾಜಕೀಯ ಮಾಡುತ್ತಿದ್ದಾರೆ.  ಜತೆಗೆ ಅಪಾಯಕಾರಿ ಬೇಡಿಕೆ ಇರಿಸುತ್ತಿದ್ದಾರೆ. ಇದು ಸಂಸದರ ವರ್ತನೆ ಅಲ್ಲ. ಅಕ್ರಮ ವಲಸಿಗರ ವಿಷಯದಲ್ಲಿ ನಾವು ರಾಜಿ ಆಗುವುದಿಲ್ಲ’ ಎಂದು ಸ್ಯಾಂಡರ್ಸ್ ತಿಳಿಸಿದ್ದಾರೆ.

‘ಎಲ್ಲ ಪ್ರಮುಖ ವಿಷಯಗಳನ್ನು ನಾವು ಸುದೀರ್ಘವಾಗಿ ಚರ್ಚೆ ಮಾಡಿದೆವು. ಕೆಲವು ವಿಷಯಗಳಲ್ಲಿ ಒಮ್ಮತ ಮೂಡಿದರೂ, ಒಪ್ಪಿಕೊಳ್ಳಲಾಗದ ವಿಷಯಗಳು ಸಾಕಷ್ಟಿವೆ. ಚರ್ಚೆ ಮುಂದುವರಿಯುತ್ತದೆ’ ಎಂದು ಟ್ರಂಪ್ ಜತೆಗಿನ ಸಭೆ ಮುಗಿದ ತಕ್ಷಣ ಶುಮರ್ ಪ್ರತಿಕ್ರಿಯಿಸಿದ್ದರು.

**

ಯಾವ ಸೇವೆ ಲಭ್ಯ?

ಸರ್ಕಾರ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಅಗತ್ಯ ಸೇವೆಗಳು ಮಾತ್ರ ಲಭ್ಯ ಇರುತ್ತವೆ. ಸೇನೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ, ಅಂಚೆ ಕಚೇರಿ ಮತ್ತು ಸಾರಿಗೆ ಇಲಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಗಡಿಯಲ್ಲಿ ಗಸ್ತು ತಿರುಗಲಾಗುತ್ತದೆ. ಉದ್ಯಾನಗಳು ತೆರೆದಿರುತ್ತವೆ. ಆದರೆ, ಆಡಳಿತ ಪುನಃ ಆರಂಭವಾಗುವ ತನಕ ಈ ಕೆಲಸಗಳನ್ನು ನಿರ್ವಹಿಸುವವರಿಗೆ ಯಾವುದೇ ರೀತಿಯ ವೇತನ ದೊರೆಯುವುದಿಲ್ಲ.

**

2013ರಲ್ಲೂ ಸ್ಥಗಿತಗೊಂಡಿದ್ದ ಸರ್ಕಾರ

ಈ ಹಿಂದೆ ಒಬಾಮ ಆಡಳಿತ ಅವಧಿಯಲ್ಲಿ 2013ರ ಅಕ್ಟೋಬರ್ 1ರಿಂದ 16ರವರೆಗೆ ಆಡಳಿತ ಸ್ಥಗಿತಗೊಂಡಿತ್ತು.‌ ಇದಕ್ಕೂ ಮೊದಲು 1995 ಡಿಸೆಂಬರ್ 16ರಿಂದ 1996 ಜನವರಿ 6ವರೆಗೆ ಸರ್ಕಾರ ಸ್ಥಗಿತವಾಗಿತ್ತು.

‘ಈ ಪರಿಸ್ಥಿತಿ ನಿರ್ವಹಿಸಲು ಸಿದ್ಧರಾಗುತ್ತಿದ್ದೇವೆ. 2013ರಲ್ಲಿ ತೀವ್ರ ಪರಿಣಾಮ ಉಂಟಾಗಿತ್ತು. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಲು ಶ್ರಮಿಸಲಾಗುತ್ತಿದೆ. ಆದರೂ, ಹಣಕಾಸು ಹೊಂದಿಸಲು ಸೆನೆಟ್ ನೆರವು ಬೇಕು’ ಎಂದು ಬಜೆಟ್ ನಿರ್ವಹಣಾ ಕಚೇರಿ ನಿರ್ದೇಶಕ ಮಿಕ್ ಮವೆನಿ ತಿಳಿಸಿದ್ದಾರೆ.

**

ತೆರಿಗೆ ಕಡಿತದಿಂದ ದೊರೆತಿರುವ ಭಾರಿ ಯಶಸ್ಸು ಹಾಳುಗೆಡವಲು ಡೆಮಾಕ್ರಟಿಕ್ ಪಕ್ಷದವರು ಬಯಸುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಅವರು ಏನು ಕೊಡುಗೆ ನೀಡುತ್ತಿದ್ದಾರೆ?

-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

 

**

ಭಾರತದ ಮೇಲೂ ಪರಿಣಾಮ

ನವದೆಹಲಿ: ಅಮೆರಿಕ ಆಡಳಿತ ಸ್ಥಗಿತದ ಆದೇಶ ಹೊರ ಬೀಳುತ್ತಲೇ ದೆಹಲಿ ಮತ್ತು ಕೋಲ್ಕತ್ತದಲ್ಲಿರುವ ಅಮೆರಿಕ ರಾಜತಾಂತ್ರಿಕ ಕಚೇರಿಗಳಿಗೆ ಶನಿವಾರ ಅನಿರ್ಧಿಷ್ಟ ಅವಧಿಯವರೆಗೆ ಬೀಗ ಹಾಕಲಾಗಿದೆ.

ಮುಂಬೈ, ಚೆನ್ನೈ, ಹೈದರಾಬಾದ್‌ ಮತ್ತು ಅಹಮದಾಬಾದ್‌ನಲ್ಲಿರುವ ಅಮೆರಿಕದ ಕಚೇರಿಗಳು ಕೂಡ ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳಲಿವೆ. ಆದರೆ, ಕಾನ್ಸುಲೇಟ್‌ಗಳು ವೀಸಾ ನೀಡುವ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry