ದಶಕದ ನಂತರ ಪಾಕ್‌ನಲ್ಲಿ ಹಾಕಿ

7

ದಶಕದ ನಂತರ ಪಾಕ್‌ನಲ್ಲಿ ಹಾಕಿ

Published:
Updated:
ದಶಕದ ನಂತರ ಪಾಕ್‌ನಲ್ಲಿ ಹಾಕಿ

ಕರಾಚಿ: ಪಾಕಿಸ್ತಾನದ ನೆಲದಲ್ಲಿ ದಶಕದ ನಂತರ ಹಾಕಿ ಚಟುವಟಿಕೆ ಗರಿಗೆದರಿದೆ. ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ ವಿಶ್ವ ಇಲೆವನ್‌ ತಂಡ 5–1 ಗೋಲುಗಳಿಂದ ಪಾಕಿಸ್ತಾನ ರಾಷ್ಟ್ರೀಯ ಜೂನಿಯರ್‌ ತಂಡವನ್ನು ಮಣಿಸಿದೆ.

ಸೂಕ್ತ ಭದ್ರತೆ ಇಲ್ಲದ ಕಾರಣ 2008ರ ನಂತರ ಯಾವ ತಂಡವೂ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿರಲಿಲ್ಲ. ಇದರಿಂದ ಪಾಕಿಸ್ತಾನ ಹಾಕಿ ಫೆಡರೇಷನ್‌ (ಪಿಎಚ್‌ಎಫ್‌) ಆರ್ಥಿಕ ಸಂಕಷ್ಟ ಎದುರಿಸಿತ್ತು.

ಪಿಎಚ್‌ಎಫ್‌ಗೆ ನೆರವಾಗುವ ಉದ್ದೇಶದಿಂದ ಹಾಕಿ ಬದುಕಿಗೆ ವಿದಾಯ ಹೇಳಿದ್ದ ನೆದರ್ಲೆಂಡ್ಸ್‌, ಜರ್ಮನಿ, ಸ್ಪೇನ್‌, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದ ಆಟಗಾರರನ್ನೊಳಗೊಂಡ ವಿಶ್ವ ಇಲೆವನ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ.

ಬಿಗಿ ಭದ್ರತೆಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಜೂನಿಯರ್‌ ತಂಡದ ಆದಿಲ್‌ ಲತೀಫ್‌ 5ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು.

ಕೊನೆಯ 15 ನಿಮಿಷಗಳಲ್ಲಿ ರಾಡ್ರಿಕ್ ವೆಯುಸ್ಟೋಫ್‌ ಸಾರಥ್ಯದ ವಿಶ್ವ ಇಲೆವನ್‌ ತಂಡದವರು ಪ್ರಾಬಲ್ಯ ಮೆರೆದರು. ನೆದರ್ಲೆಂಡ್‌ನ ವೆಯುಸ್ಟೋಫ್‌ ಎರಡು ಗೋಲು ದಾಖಲಿಸಿ ಮಿಂಚಿದರು. ಆಸ್ಟ್ರೇಲಿಯಾದ ಗ್ರ್ಯಾಂಟ್‌ ಶುಬರ್ಟ್‌ ಮತ್ತು ನೆದರ್ಲೆಂಡ್ಸ್‌ನ ಫಿಲಿಪ್‌ ಮೆಯುಲೆನ್‌ಬ್ರೋಕ್‌ ತಲಾ ಒಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿ 4–1ರ ಮುನ್ನಡೆ ತಂದುಕೊಟ್ಟರು.

ಸ್ಪೇನ್‌ನ ಡೇವಿಡ್‌ ಅಲೆಗ್ರೆ, 48ನೇ ನಿಮಿಷದಲ್ಲಿ ವಿಶ್ವ ಇಲೆವನ್‌ ತಂಡದ ಐದನೇ ಗೋಲು ದಾಖಲಿಸಿ ಸಂಭ್ರಮಿಸಿದರು.

10 ವರ್ಷಗಳ ನಂತರ ಅಂತರರಾಷ್ಟ್ರೀಯ ಪಂದ್ಯ ನಡೆದಿದ್ದರಿಂದ ಕ್ರೀಡಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದ ಬಳಿಕ ಅಭಿಮಾನಿಗಳು ವಿಶ್ವ ಇಲೆವನ್‌ ತಂಡದ ಆಟಗಾರರ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು. ಇನ್ನು ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ಎರಡನೇ ಪಂದ್ಯ ಭಾನುವಾರ ಲಾಹೋರ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry