ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಕರ್ನಾಟಕಕ್ಕೆ ಮಹತ್ವದ ಪಂದ್ಯ

Last Updated 20 ಜನವರಿ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಉತ್ತುಂಗದಲ್ಲಿ ತೇಲುತ್ತಿರುವ ಕರ್ನಾಟಕ ತಂಡದವರು ಈಗ ಮಹತ್ವದ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ವಿಘ್ನೇಶ್‌ ಗುಣಶೇಖರನ್ ಬಳಗ ಬಲಿಷ್ಠ ಸರ್ವಿಸಸ್‌ ವಿರುದ್ಧ ಸೆಣಸಲಿದೆ.

ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆ ಯುವ ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಹಂತಕ್ಕೆ ಅರ್ಹತೆ ಗಳಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಈ ಹೋರಾಟದತ್ತ ನೆಟ್ಟಿದೆ.

ಕರ್ನಾಟಕ ಮತ್ತು ಸರ್ವಿಸಸ್‌, ಅರ್ಹತಾ ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿವೆ. ಆದರೆ ಗೋಲು ಗಳಿಕೆಯಲ್ಲಿ ಕರ್ನಾಟಕ ಮುಂದಿದೆ. ರಾಜ್ಯ ತಂಡ 7 ಗೋಲು ಗಳನ್ನು ಬಾರಿಸಿದ್ದರೆ, ಸರ್ವಿಸಸ್‌ ಖಾತೆ ಯಲ್ಲಿ 6 ಗೋಲುಗಳಿವೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ ಕರ್ನಾಟಕ ‘ಎ’ ಗುಂಪಿನಿಂದ ಫೈನಲ್‌ ಹಂತಕ್ಕೆ ಲಗ್ಗೆ ಇಡಲಿದೆ.

‘ಸರ್ವಿಸಸ್‌ ಎದುರು ಡ್ರಾ ಮಾಡಿಕೊಂಡರೂ ನಾವು ಫೈನಲ್‌ ಹಂತಕ್ಕೆ ಲಗ್ಗೆ ಇಡಬಹುದು. ಹಾಗಂತ ಖಂಡಿತವಾಗಿಯೂ ಡ್ರಾ ಗಾಗಿ ಆಡು ವುದಿಲ್ಲ. ಪಂದ್ಯ ಗೆಲ್ಲಲು ನಮ್ಮ ಆಟ ಗಾರರು ಶಕ್ತಿ ಮೀರಿ ಪ್ರಯತ್ನಿಸಲಿದ್ದಾರೆ’ ಎಂದು ಕರ್ನಾಟಕ ತಂಡದ ಕೋಚ್‌ ಪಿ.ಮುರಳೀಧರನ್‌, ಪುದುಚೇರಿ ವಿರುದ್ಧದ ಪಂದ್ಯದ ಬಳಿಕ ಹೇಳಿದ್ದರು.

ಕರ್ನಾಟಕ ತಂಡ ಹಿಂದಿನ ಎರಡೂ ಹೋರಾಟಗಳಲ್ಲಿ ಸುಲಭವಾಗಿ ಗೆದ್ದಿತ್ತು. ಆದರೆ ಗೋಲು ಗಳಿಸುವ ಹಲವು ಅವಕಾಶಗಳನ್ನು ಕೈಚೆಲ್ಲಿತ್ತು. ಭಾನುವಾರ ಈ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದರೆ ಗೆಲುವು ಸುಲಭ.

ಹಿಂದಿನ ಪಂದ್ಯಗಳಲ್ಲಿ ಮಿಂಚಿರುವ ರಾಜೇಶ್‌, ಲಿಟನ್‌ ಶಿಲ್‌, ಶಹಬಾಜ್‌ ಖಾನ್‌ ಮತ್ತು ಅಮೋಸ್‌ ಅವರು ಸರ್ವಿಸಸ್‌ ವಿರುದ್ಧವೂ ಮೋಡಿ ಮಾಡುವ ವಿಶ್ವಾಸ ಹೊಂದಿದ್ದಾರೆ.

ನಾಯಕ ವಿಘ್ನೇಶ್‌, ಲಿಯೊನ್‌ ಅಗಸ್ಟೀನ್, ಎಸ್‌.ಕೆ. ಅಜರುದ್ದೀನ್‌, ಕೀತನ್‌ ರೇಮಂಡ್‌ ಸ್ಟೀಫನ್‌ ಮತ್ತು ಸುನಿಲ್‌ ಕುಮಾರ್‌ ಅವರೂ ಜವಾಬ್ದಾರಿ ಅರಿತು ಆಡಬೇಕಿದೆ.

ತಮಿಳುನಾಡಿಗೆ ಜಯ: ತಮಿಳು ನಾಡು ತಂಡದವರು ‘ಬಿ’ ಗುಂಪಿನ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದರು. ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಈ ತಂಡ 1–0 ಗೋಲಿನಿಂದ ಆಂಧ್ರಪ್ರದೇಶ ತಂಡವನ್ನು ಮಣಿಸಿತು.

ಎರಡೂ ತಂಡಗಳು ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದವು. ಹೀಗಾಗಿ ಮೊದಲರ್ಧ ಗೋಲುರಹಿತವಾಗಿ ಅಂತ್ಯ ಕಂಡಿತು.

ದ್ವಿತೀಯಾರ್ಧದಲ್ಲಿ ಭಿನ್ನ ರಣನೀತಿ ಹೆಣೆದು ಕಣಕ್ಕಿಳಿದಿದ್ದ ತಮಿಳುನಾಡಿಗೆ 57ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು.

ವಿಜಯ್‌ ನಾಗಪ್ಪನ್‌ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.

ಇಂದಿನ ಪಂದ್ಯಗಳು

‘ಎ’ ಗುಂಪು

ತೆಲಂಗಾಣ–ಪುದುಚೇರಿ

ಆರಂಭ: ಮಧ್ಯಾಹ್ನ 1.15ಕ್ಕೆ.

ಕರ್ನಾಟಕ–ಸರ್ವಿಸಸ್‌

ಆರಂಭ: ಸಂಜೆ 4ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT