ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಕೆರೆ: ಆರಿದ ಬೆಂಕಿ, ನಿಲ್ಲದ ಹೊಗೆ

Last Updated 20 ಜನವರಿ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಶುಕ್ರವಾರ ಕಾಣಿಸಿಕೊಂಡಿದ್ದ ಬೆಂಕಿಯನ್ನು ಸತತ 28 ಗಂಟೆಗಳ  ಕಾರ್ಯಾಚರಣೆ ಮೂಲಕ ಬಹುತೇಕ ನಂದಿಸಲಾಗಿದೆ. ಆದರೆ, ಅಲ್ಲಲ್ಲಿ ಕೆಲವು ಕಡೆ ಹೊಗೆ ಕಾಣಿಸಿಕೊಳ್ಳುತ್ತಿದೆ.

‘ಸದ್ಯ ಎಲ್ಲಾ ಬೆಂಕಿಯ ಜ್ವಾಲೆಗಳನ್ನು ಸಂಪೂರ್ಣ ನಂದಿಸಿದ್ದೇವೆ. ಆದರೂ ಹೊಗೆಯಾಡುತ್ತಿದೆ. ಅಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೀಗಾಗಿ ಎರಡು ಅಗ್ನಿಶಾಮಕ ವಾಹನಗಳನ್ನು ಕೆರೆಯಂಚಿನಲ್ಲೇ ನಿಲ್ಲಿಸಿದ್ದೇವೆ.  10 ಸಿಬ್ಬಂದಿಯೂ ಸ್ಥಳದಲ್ಲೇ ಇರುತ್ತಾರೆ. ರಾತ್ರಿ ಏನಾದರೂ ಬೆಂಕಿ ಕಾಣಿಸಿಕೊಂಡರೆ ಪುನಃ ಕಾರ್ಯಾಚರಣೆ ಆರಂಭಿಸಲು ಸನ್ನದ್ಧರಾಗಿದ್ದೇವೆ’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಿರ್ದೇಶಕ ಕೆ.ಯು.ರಮೇಶ್‌ ‘ಪ್ರಜಾವಾಣಿ’ಗೆ ಹೇಳಿದರು.

ಮಾನವ ನಿರ್ಮಿತ ಘಟನೆ: ‘ಈ ಘಟನೆಯು ಮೇಲ್ನೋಟಕ್ಕೆ ಜನರೇ ನಡೆಸಿದ ಕೃತ್ಯದಂತೆ ಕಂಡುಬರುತ್ತಿದೆ. ಈ ಬಗ್ಗೆ ತನಿಖೆ ನಡೆಸಲಿದ್ದೇವೆ. ಸಮಗ್ರ ವರದಿ ಸಿದ್ಧಪಡಿಸಿ ಉನ್ನತ ಅಧಿಕಾರಿಗಳಿಗೆ ಕೊಡುತ್ತೇವೆ. ಬಳಿಕವೇ ನಿಖರ ಕಾರಣವನ್ನು ಬಹಿರಂಗಪಡಿಸಲಿದ್ದೇವೆ’ ಎಂದು ತಿಳಿಸಿದರು.

ಕೆರೆಯಂಚಿನ ಸುಮಾರು 70 ಎಕರೆ ಜಾಗದಲ್ಲಿ ಹೂಳು ತುಂಬಿಕೊಂಡಿದೆ. ಮನುಷ್ಯರು ಸರಾಗವಾಗಿ ಕೆರೆಯಲ್ಲೇ ನಡೆದುಕೊಂಡು ಒಂದು ದಡ
ದಿಂದ ಮತ್ತೊಂದು ದಡಕ್ಕೆ ಹೋಗಬಹುದಾದ ಸ್ಥಿತಿ ಇದೆ. ಅದೇ ಹೂಳಾಗಿ ಮಾರ್ಪಾಡಾಗಿರುವ ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿ, ಇಡೀ ಕೆರೆಯನ್ನೇ ಸುಟ್ಟಿದೆ.

ಶುಕ್ರವಾರ ಬೆಳಿಗ್ಗೆ 9.30 ಕೆರೆಯಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಮಧ್ಯಾಹ್ನದ ವೇಳೆ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಕೆರೆ ಪಕ್ಕವೇ ಇದ್ದ ಸೇನೆಯ ಸಿಬ್ಬಂದಿಯು ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ಆರಂಭಿಸಿದ್ದರು. ಬೆಂಕಿಯ ರುದ್ರನರ್ತನ ಹೆಚ್ಚಿದ್ದರಿಂದ ಬಹುಬೇಗನೇ ನಿಯಂತ್ರಣಕ್ಕೆ ಬಂದಿರಲಿಲ್ಲ.

ಪ್ರಖರವಾದ ವಿದ್ಯುತ್‌ ದೀಪಗಳ ನೆರವಿನಿಂದ ರಾತ್ರಿ ಇಡೀ ಕಾರ್ಯಾಚರಣೆ ನಡೆಸಲಾಯಿತು. ಶನಿವಾರ ಬೆಳಿಗ್ಗೆ ಬೆಂಕಿಯು ಸ್ವಲ್ಪ ಹತೋಟಿಗೆ ಬಂತು ಎನ್ನುವಷ್ಟರಲ್ಲಿ ಪುನಃ ಬೆಂಕಿಯ ಜ್ವಾಲೆಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತಿದ್ದವು. ಬೆಳಿಗ್ಗೆ 10 ಗಂಟೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲು ಸಿದ್ಧತೆ ನಡೆಸಿದ್ದವು. ಅಷ್ಟರಲ್ಲಿ ಇನ್ನೊಂದು ಜಾಗದಲ್ಲಿ ಒಮ್ಮೆಲೆ ಬೆಂಕಿ ಧಗ ಧಗನೇ ಉರಿಯಲಾರಂಭಿಸಿತ್ತು. ಹಾಗಾಗಿ ಕಾರ್ಯಾಚರಣೆಯನ್ನು ಮುಂದುವರಿಸಲಾಯಿತು.

ನಗರದ ಎಲ್ಲ ಕಚೇರಿಯಿಂದ ಸಿಬ್ಬಂದಿಯನ್ನು ಕರೆಸಲಾಯಿತು. ಆರು ಮಂದಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು, 10 ಜಿಲ್ಲಾ ಅಗ್ನಿಶಾಮಕ ಅಧಿಕಾರಿ, 76 ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ 11 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT