ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

7
ಬಿಡಿಎ, ಬಿಬಿಎಂಪಿ, ಜಲಮಂಡಳಿ ನಡುವೆ ಹೊಂದಾಣಿಕೆ ಇಲ್ಲ

ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

Published:
Updated:
ಸಮನ್ವಯ ಕೊರತೆ: ನಲುಗುತ್ತಿದೆ ಜಲಮೂಲ

ಬೆಂಗಳೂರು: ಬೆಳ್ಳಂದೂರು ಕೆರೆಯ ನಿರ್ವಹಣೆ ಬಿಡಿಎಗೆ ಸಂಬಂಧಿಸಿದ್ದು. ಆದರೆ, ಇದಕ್ಕೆ ಸಂಸ್ಕರಿಸದ ತ್ಯಾಜ್ಯನೀರು ಸೇರದಂತೆ ತಡೆಯಬೇಕಾಗಿರುವುದು ಜಲಮಂಡಳಿ. ಕಸವನ್ನು ಸುರಿಯದಂತೆ ರಕ್ಷಣೆ ಒದಗಿಸಬೇಕಾಗಿರುವುದು ಬಿಬಿಎಂಪಿ. ಈ ಮೂರು ಸಂಸ್ಥೆಗಳ ಸಮನ್ವಯ ಕೊರತೆಯಿಂದಾಗಿ ಈ ಜಲಮೂಲದ ಒಡಲು ದಿನೇ ದಿನೇ ಕಲುಷಿತಗೊಳ್ಳುತ್ತಲೇ ಇದೆ.

ಈ ಮೂರು ಸಂಸ್ಥೆಗಳ ಸಮನ್ವಯ ಏರ್ಪಡುವಂತೆ ಮಾಡಿ, ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರವೂ ಕೈಕಟ್ಟಿ ಕೂತಿದೆ.

ಬೆಳ್ಳಂದೂರು ಕೆರೆ ಪುನರುಜ್ಜೀವನದ ಹೊಣೆ ಹೊತ್ತ ಇಲಾಖೆಗಳ ಕಾರ್ಯವೈಖರಿ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕವೂ ಈ ಸಂಸ್ಥೆಗಳು ಒಂದನ್ನೊಂದು ಬೊಟ್ಟು ಮಾಡುತ್ತಾ ಕಾಲಹರಣ ಮಾಡುತ್ತಿವೆ.

ಬೆಳ್ಳಂದೂರು ಕೆರೆಗೆ ಸೇರುತ್ತಿರುವ ಕೊಳಚೆ ನೀರು ನಿಲ್ಲುವವರೆಗೂ ಕೆರೆಯನ್ನು ಶುದ್ಧೀಕರಿಸಲು ಸಾಧ್ಯವಿಲ್ಲ ಎಂದು ಬಿಡಿಎ ಹೇಳಿದರೆ, ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಲು 2020ರವರೆಗೂ ಕಾಲಾವಕಾಶ ಬೇಕು ಎಂದು ಜಲಮಂಡಳಿ ಹೇಳುತ್ತಿದೆ. ಕೆರೆಗೆ ಕಸ ಸುರಿಯದಂತೆ ನೋಡಿಕೊಳ್ಳುವಲ್ಲಿ ಪಾಲಿಕೆ ವಿಫಲವಾಗಿದೆ.

ಎನ್‌ಜಿಟಿಯಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಎಚ್ಚೆತ್ತ ಬಿಡಿಎ, ಕೆರೆಯ ಕಳೆ ತೆಗೆಸಲು ಅಲ್ಪಾವಧಿ ಟೆಂಡರ್‌ ಕರೆದು ಗುತ್ತಿಗೆ ನೀಡಿತ್ತು. 2017ರ ಏಪ್ರಿಲ್‌ ಬಳಿಕ 19 ಸಾವಿರ ಟನ್‌ ಕಳೆಯನ್ನು ತೆಗೆಯಲಾಗಿತ್ತು. ಆದರೆ, ಕೆರೆಯಲ್ಲಿದ್ದ ಹುಲ್ಲನ್ನು ತೆಗೆದಿರಲಿಲ್ಲ. ಇದಕ್ಕೆ ₹3.35 ಕೋಟಿ ವೆಚ್ಚವಾಗಿದೆ.

ಕೆರೆಯ ಪುನಶ್ಚೇತನಕ್ಕೆ ತಾತ್ಕಾಲಿಕ ಹಾಗೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎನ್‌ಜಿಟಿ ಸೂಚಿಸಿತ್ತು. ತಾತ್ಕಾಲಿಕ ಕ್ರಮವಾಗಿ ಕಳೆ ತೆಗೆದು ತಂತಿ ಬೇಲಿ ಅಳವಡಿಸಲಾಗಿದೆ. ದೀರ್ಘಾವಧಿ ಕ್ರಮವಾಗಿ ಕೆರೆಯಲ್ಲಿರುವ ಹೂಳು, ಹುಲ್ಲು ತೆಗೆಯಬೇಕು. ಕೆರೆಗೆ ಕೊಳಚೆ ನೀರು ಸೇರದಂತೆ ತಡೆದರೆ ಮಾತ್ರ ಇದು ಸಾಧ್ಯ ಎಂದು ಹೆಸರು ಹೇಳಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಗರ, ಶ್ರೀನಿವಾಗಿಲು ಕಡೆಯಿಂದ ಬೆಳ್ಳಂದೂರು ಕೆರೆಗೆ ಪ್ರತಿದಿನ 10 ಕೋಟಿ ಲೀಟರ್‌ ಕೊಳಚೆ ನೀರು ಸೇರುತ್ತಿದೆ. ಕೆರೆಗೆ ಸೇರುವ ಎಲ್ಲ ನೀರನ್ನು ಶುದ್ಧೀಕರಿಸಲು ಎಸ್‌ಟಿಪಿ ಅಳವಡಿಸಲು ಜಲಮಂಡಳಿಯ ಅಧಿಕಾರಿಗಳು 2020ರವರೆಗೆ ಕಾಲಾವಕಾಶ ಕೋರಿದ್ದಾರೆ.

ಅನುದಾನದ ಕೊರತೆ: ಕೆರೆಗೆ ಸೇರುವ ಕೊಳಚೆ ನೀರನ್ನು ಬೇರೆಡೆ ತಿರುಗಿಸಿ ಜಲಮೂಲವನ್ನು ಶುದ್ಧೀಕರಿಸುವ  ಪ್ರಸ್ತಾವವನ್ನು ಸರ್ಕಾರಕ್ಕೆ ಹಾಗೂ ಎನ್‌ಜಿಟಿಗೆ ಸಲ್ಲಿಸಲಾಗಿದೆ. ಸರ್ಕಾರದಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಕೆರೆ ಅಭಿವೃದ್ಧಿ ಪಡಿಸಲು ಬಿಡಿಎ ಬಳಿ ಹಣ ಇಲ್ಲ. ಸರ್ಕಾರವು ಅನುದಾನ ನೀಡುವ ಅಗತ್ಯವಿದೆ ಎಂದರು.

**

‘ಕೊಳಚೆ ನೀರು ತಡೆಯುವುದು ಕಷ್ಟ’

ಬೆಳ್ಳಂದೂರು ಕೆರೆಗೆ ಸೇರುತ್ತಿರುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಗಟ್ಟುವುದು ಕಷ್ಟದ ಕೆಲಸ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು.

ಜಲಮಂಡಳಿ ವತಿಯಿಂದ ಎಷ್ಟೇ ಎಸ್‌ಟಿಪಿಗಳನ್ನು ನಿರ್ಮಿಸಿದರೂ, ಸಾರ್ವಜನಿಕರ ಸಹಕಾರವಿಲ್ಲದೆ ಇದು ಸಾಧ್ಯವಾಗದು ಎಂದು ಅವರು ಸ್ಪಷ್ಟಪಡಿಸಿದರು. ಕೆಲವು ಹೊಸ ಎಸ್‌ಟಿಪಿಗಳನ್ನು ನಿರ್ಮಿಸಲಾಗುತ್ತಿದ್ದು 2019ರ ಮಾರ್ಚ್‌ ವೇಳೆಗೆ ಇವು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

**

ಕೆರೆ ಸಂರಕ್ಷಣೆ ಕುರಿತ ಸಭೆ ನಾಳೆ

ಬೆಳ್ಳಂದೂರು ಕೆರೆಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನೇತೃತ್ವದಲ್ಲಿ ಇದೇ 22 ಸಭೆ ನಡೆಯಲಿದೆ. ಪಾಲಿಕೆ, ಬಿಡಿಎ, ಜಲಮಂಡಳಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ಕೆರೆಗೆ ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟುವ ಉದ್ದೇಶದಿಂದ ಸಿ.ಸಿ.ಟಿ.ವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry