‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

7

‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

Published:
Updated:
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

ಮಾನ್ವಿ: ‘ಸ್ಥಳೀಯ ಯುವ ಬರಹಗಾರರು ವಿನೂತನ ಪ್ರಯೋಗಗಳ ಮೂಲಕ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪರಂಪರೆ ಸೃಷ್ಟಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹಿರಿಯ ಕತೆಗಾರ ಡಾ.ಅಮರೇಶ ನುಗಡೋಣಿ ಹೇಳಿದರು.

ಶನಿವಾರ ತಾಲ್ಲೂಕಿನ ಪೋತ್ನಾಳದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಜಿಲ್ಲಾ ಸಾಹಿತ್ಯ: ಇತ್ತೀಚಿನ ಬೆಳವಣಿಗೆಗಳು’ ಗೋಷ್ಠಿಯಲ್ಲಿ ಅವರು ‘ಸೃಜನಶೀಲ ಸಾಹಿತ್ಯ’ ಕುರಿತು ವಿಷಯ ಮಂಡಿಸಿದರು.

‘ಶಾಂತರಸರ ಪರಂಪರೆಯಿಂದ ಪ್ರಭಾವಿತರಾದ ರಾಯಚೂರಿನ ಕತೆಗಾರರು ರಾಜ್ಯದ ಇತರೇ ಭಾಗದ ಕತೆಗಾರರಿಗಿಂತ ಭಿನ್ನ ಎಂಬುದನ್ನು ನಾಡಿನ ವಿಮರ್ಶಕರು ಗುರುತಿಸಿದ್ದಾರೆ. ರಾಯಚೂರಿನ ಕತೆಗಾರರು ತಮ್ಮ ಬಹುತೇಕ ಕಥೆಗಳಲ್ಲಿ ಮಹಿಳೆ, ಜಮಿನ್ದಾರಿಕೆಯ ಶೋಷಣೆ ಪ್ರಧಾನ ಅಂಶಗಳನ್ನಾಗಿಸಿಕೊಂಡು ಗಟ್ಟಿತನದ ಸಾಹಿತ್ಯ ಬರೆದಿದ್ದಾರೆ. ಜಿಲ್ಲೆಯ ಹಿರಿಯರಾದ ಶಾಂತರಸ ಮತ್ತು ಜಂಬಣ್ಣ ಅಮರಚಿಂತ ಕನ್ನಡದಲ್ಲಿ ಗಜಲ್‌ ಸಾಹಿತ್ಯದ ಹೊಸ ಪರಂಪರೆ ಸೃಷ್ಟಿಸಿದರು. ಶಾಂತರಸರು ತಮ್ಮ ಗಜಲ್‌ಗಳಲ್ಲಿ ಪ್ರೇಮ ಮತ್ತು ನೋವುಗಳನ್ನು ಅಭಿವ್ಯಕ್ತಿಗೊಳಿಸಿದರು. ಜಂಬಣ್ಣ ಅಮರಚಿಂತ ಅವರು ತಮ್ಮ ಗಜಲ್‌ಗಳಲ್ಲಿ ಪ್ರೇಮ ಮತ್ತು ನೋವುಗಳನ್ನು ಸಾಮಾಜಿಕಗೊಳಿಸಿದರು’ ಎಂದು ಅವರು ಅಭಿಪ್ರಾಯಪಟ್ಟರು.

‘ಈಚೆಗೆ ಯುವಕವಿ ರಮೇಶ ಅರೋಲಿ ತಮ್ಮ ‘ಜುಲುಮೆ’ ಕವನ ಸಂಕಲನದಲ್ಲಿ ಅಧುನಿಕತೆಯ ತಲ್ಲಣಗಳನ್ನು ಜನಪದ ಲಯದ ಮೂಲಕ ಬರೆದು ಹೊಸ ಪರಂಪರೆ ಸೃಷ್ಟಿಸಿದ್ದಾರೆ. ಪ್ರಸ್ತುತ ಯುವ ಕವಿ ಆರೀಫ್ ರಾಜಾ ತಮ್ಮ ಹೊಸ ಎರಡು ಕವನ ಸಂಕಲನಗಳ ಮೂಲಕ ಹೊಸ ಪ್ರಯೋಗ ಪರಿಚಯಿಸಿದ್ದಾರೆ. ರಾಜಶೇಖರ ನೀರಮಾನ್ವಿ ಮತ್ತು ಕಲಿಗಣನಾಥ ಗುಡದೂರು ಅವರು ತಮ್ಮ ಕೆಲವು ಕಥೆಗಳಲ್ಲಿ ಗತಕಾಲದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಕತೆ, ನಾಟಕಗಳನ್ನು ಬರೆದಿದ್ದಾರೆ. ಯುವ ಕವಿ ಬಸವರಾಜ ಹೃತ್ಸಾಕ್ಷಿ ತಮ್ಮ ಮೊದಲ ‘ಕಸಬಾರಿಗೆ ಪಾದ’ ಕವನ ಸಂಕಲನದಲ್ಲಿ ತನ್ನ ನೆಲದ ಸತ್ವವನ್ನು ಭಾಷೆಗೆ ಇಳಿಸಿ ಪದ್ಯಗಳನ್ನು ರಚಿಸಿದ್ದಾರೆ. ಚಿದಾನಂದ ಸಾಲಿ ಮತ್ತಿತರರು ಗಜಲ್‌ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿದ್ದಾರೆ. ಬರಹಗಾರರು ಗಜಲ್‌ ವ್ಯಾಕರಣ ಅನುಸರಿಸಿ ಬರೆಯದೆ, ತಮ್ಮ ವಿಷಯದ ಮೂಲ ಅಭಿವ್ಯಕ್ತಿಗೆ ಆದ್ಯತೆ ನೀಡಬೇಕು’ ಎಂದು ಡಾ.ನುಗಡೋಣಿ ಸಲಹೆ ನೀಡಿದರು.

‘ರೈತರ ಸಾವು, ಮಹಿಳೆಯರ ಮೇಲಿನ ಅತ್ಯಾಚಾರ ಕುರಿತು ಎಷ್ಟು ಕಥೆ, ಕಾವ್ಯಗಳನ್ನು ಬರೆಯಲಾಗಿದೆ ಎಂಬುದನ್ನು ಪರಾಮರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಮಹಾಂತೇಶ ನವಲಕಲ್‌ ತಮ್ಮ ಇತ್ತೀಚಿನ ಕಥೆಯಲ್ಲಿ ಪ್ರಯತ್ನಿಸಿದ್ದಾರೆ’ ಎಂದು ಅವರು ತಿಳಿಸಿದರು.

ವೀರನಗೌಡ ಗುಮಗೇರಿ ‘ಜಿಲ್ಲೆಯ ಸೃಜನೇತರ ಸಾಹಿತ್ಯ’ ಕುರಿತು ವಿಷಯ ಮಂಡಿಸಿದರು. ಕವಿ ಭೀಮೋಜಿರಾವ್‌ ಜಗತಾಪ್‌ ಹಾಗೂ ಅಮರೇಶ ಬಲ್ಲಿದವ ಮಾತನಾಡಿದರು. ಡಾ.ಚೆನ್ನಬಸವ ಚಿಲ್ಕರಾಗಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ದೇವದುರ್ಗದ ಕಸಾಪ ಅಧ್ಯಕ್ಷ ಮೋಹಿನುದ್ದೀನ್‌ ಕಾಟಮಳ್ಳಿ, ಹನುಮರೆಡ್ಡಿ ಪಾಟೀಲ್‌ ಮಿಯ್ಯಾಪುರ, ಮೌನೇಶ ಗೋನಾಳ, ಅಬ್ದುಲ್‌ ಅಜೀಜ್‌, ಖುತೀಜಾ ಪರ್ವಿನ್‌, ಶರಣಬಸವ ಪಾಟೀಲ್‌ ಇದ್ದರು. ಸುಭಾಷ್‌ ಪಾಟೀಲ್‌ ನಿರೂಪಿಸಿದರು. ಬಸವರಾಜ ಬ್ಯಾಗವಾಟ ಸ್ವಾಗತಿಸಿದರು. ಎ.ಪ್ರಕಾಶ ಪಾಟೀಲ್‌ ವಂದಿಸಿದರು.

ಖುಷಿ ನೀಡಿದ ಸಮ್ಮೇಳನ

ಮಾನ್ವಿ: ತಾಲ್ಲೂಕಿನ ಪೋತ್ನಾಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಎರಡನೇ ದಿನ ಶನಿವಾರ ಕೂಡ ಬಂದ ಅಧಿಕ ಸಂಖ್ಯೆಯ ಸಾಹಿತ್ಯಾಸಕ್ತರ ಆಗಮನದಿಂದ ಸಂಘಟಕರಲ್ಲಿ ಖುಷಿ ಕಂಡು ಬಂದಿತು.

ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ವಿಶೇಷವಾಗಿತ್ತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಸಹ ವಿವಿಧ ಸಾಹಿತಿಗಳ ಭಾಷಣಗಳನ್ನು ಕುತೂಹಲದಿಂದ ಆಲಿಸಿದರು.

ಸಾಹಿತ್ಯಾಸಕ್ತರು ಸಮಾಧಾನದಿಂದ ಕುಳಿತು ಎಲ್ಲಾ ಗೋಷ್ಠಿಗಳನ್ನು ವಿಚಾರಗಳನ್ನು ಆಲಿಸಿದರು. ಮಧ್ಯಾಹ್ನ ರುಚಿಯಾದ ಊಟ ಸವಿದರು. ಊಟಕ್ಕೆ ಖಡಕ್‌ ರೊಟ್ಟಿ, ಲಡ್ಡು, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. ಎಲ್ಲರಿಗೂ ಸಮರ್ಪಕವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ ಮತ್ತಿತರ ಗಣ್ಯರು ಕನ್ನಡಾಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಗೋಷ್ಠಿಗಳ ಮಧ್ಯೆ ವಿವಿಧ ಕಲಾವಿದರು ಸಂಗೀತ, ಗಾಯನ ಕಾರ್ಯಕ್ರಮ ನಡೆಸಿಕೊಟ್ಟು ಗಮನ ಸೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry