‘ತಾಜ್ ಮಹಲ್ ಗುಲಾಬಿ’ ಕೃಷಿಯ ಸಾಧಕ

7

‘ತಾಜ್ ಮಹಲ್ ಗುಲಾಬಿ’ ಕೃಷಿಯ ಸಾಧಕ

Published:
Updated:
‘ತಾಜ್ ಮಹಲ್ ಗುಲಾಬಿ’ ಕೃಷಿಯ ಸಾಧಕ

‘ಗುಲಾಬಿ ಹೂ ಬೆಳೆಯುವ ಕೃಷಿಗೆ ಮನಸೋತ ಮೇಲೆ ನನ್ನ ವಿದ್ಯೆ ನನಗೆ ವಿವೇಕ ಕೊಟ್ಟಿದೆ’ ಎನ್ನುತ್ತಾರೆ ಗುಬ್ಬಿಯ ಎಂಬಿಎ ಪದವೀಧರ ಚಂದನ್. ಗುಬ್ಬಿ ಪಟ್ಟಣಕ್ಕೆ 1 ಕಿಲೋ ಮೀಟರ್ ದೂರದ ಕಬ್ಬಿಣ ಸೇತುವೆ ಪಾಳ್ಯದ ಸಮೀಪ ಪಾಲಿಹೌಸ್‌ನಲ್ಲಿ ತಾಜ್ ಮಹಲ್ ಗುಲಾಬಿ ಹೂ ಬೆಳೆದು ಎಲ್ಲರಿಂದ ಸೈ ಎನಿಸಿಕೊಂಡು ತಮ್ಮ ಗುಲಾಬಿ ಬೆಳೆದ ಯಶೋಗಾಥೆ ಬಿಚ್ಚಿಟ್ಟರು.

ಗಿಜಿಗುಡುವ ಬೆಂಗಳೂರು ಪಟ್ಟಣದಲ್ಲಿ ಸಿಕ್ಕ ಬ್ಯಾಂಕ್ ಉದ್ಯೋಗ ಬೇಡವೇ ಬೇಡ ಎಂದು ತನ್ನೂರಿಗೆ ಬಂದು ಅಪ್ಪ ಸಂಪಾದಿಸಿದ 1 ಎಕರೆ ಭೂಮಿಯಲ್ಲೇ ‘ಹೂ ಕೃಷಿ’ ಮಾಡಿದ್ದಾರೆ. ಈಗ ಇದು ಲಾಭದ ಉದ್ದಿಮೆ ಆಗಿದೆ.

ಓದುವಾಗ ದೊಡ್ಡ ದೊಡ್ಡ ಹುದ್ದೆಗೆ ಹೋಗುವ ಉದ್ಯೋಗದ ಕನಸು ಕಟ್ಟಿಕೊಂಡ ಇವರು ಎರಡು ಮೂರು ತಿಂಗಳು ತೋಟಗಾರಿಕೆ ಹಾಗೂ ಹೂ ಕೃಷಿಯ ಬಗ್ಗೆ ಅಧ್ಯಯನ ನಡೆಸಿ ವೈಜ್ಞಾನಿಕ ರೀತಿಯಲ್ಲಿ ಹೂ ಬೆಳೆಯುತ್ತಿದ್ದಾರೆ.

ಭೂಮಿ ತಗ್ಗು ಇದ್ದಿದ್ದರಿಂದ ಮಣ್ಣು ಸುರಿಸಿ ಎತ್ತರಿಸಲು ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಸರ್ಕಾರ, ಬ್ಯಾಂಕ್ ಸೇರಿದಂತೆ ತಾನು ಕೂಡಿಟ್ಟ ಹಣ ಸೇರಿಸಿ ₹ 60 ಲಕ್ಷ ಖರ್ಚು ಮಾಡಿ ಪಾಲಿಹೌಸ್ ನಿರ್ಮಿಸಿಕೊಂಡು ವರ್ಷಪೂರಾ ಬೇಡಿಕೆ ಇರುವ ಕೆಂಪು ತಾಜ್ ಮಹಲ್ ಗುಲಾಬಿ ಬೆಳೆಯುತ್ತಿದ್ದಾರೆ.

ಆರು ತಿಂಗಳ ಹಿಂದೆ (ಆಗಸ್ಟ್) ಪ್ರತಿ ಗಿಡಕ್ಕೆ ₹ 12ಯಂತೆ 30 ಸಾವಿರ ಪುಟ್ಟ ಗುಲಾಬಿ ಗಿಡಗಳನ್ನು ಮುಂಬೈನಿಂದ ತರಿಸಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ 120 ದಿನಕ್ಕೆ ಹೂ ಬಿಡಲು ಆರಂಭಿಸಿದ್ದು, ನಿತ್ಯ ಒಂದೂವರೆ ಸಾವಿರ ಹೂ ಕಟಾವು ಮಾಡುತ್ತಾರೆ. ಪ್ರತಿ ಹೂವಿಗೆ ₹ 4 ಲಾಭ ಸಿಗುತ್ತಿದ್ದು, ನಿತ್ಯ ₹ 6 ಸಾವಿರ ಸಿಗುತ್ತಿದೆ. ಸಾಗಾಣಿಕೆ, ಔಷಧಿ, ವಿದ್ಯುತ್ ಎಲ್ಲ ಖರ್ಚು ಕಳೆದು ಮೂರು ಸಾವಿರ ಲಾಭದ ಹಣವಾಗಿ ನೋಡುತ್ತಿದ್ದಾರೆ. ಈಗ ನಿರ್ಮಿಸಿರುವ ಪಾಲಿಹೌಸ್ ಉತ್ತಮ ದರ್ಜೆಯದ್ದಾಗಿದ್ದು, 15 ವರ್ಷಕ್ಕೂ ಅಧಿಕ ಬಾಳಿಕೆ ಬರಲಿದೆ.

ಉತ್ತಮ ದಳದಿಂದ ಕೂಡಿದ ಗುಲಾಬಿ ಹೂಗಳಿಗೆ ಬೇಡಿಕೆ ಇದೆ. ಪ್ರತಿ ಗುಲಾಬಿ ಗಿಡದಲ್ಲಿ ನಾಲ್ಕು ದಿನಳಿಗೆ ಒಮ್ಮೆ ಒಂದು ಹೂ ನೋಡಬಹುದು. ಗಿಡದ ಹಾರೈಕೆ ಉತ್ತಮವಿದ್ದರೆ ಹೆಚ್ಚು ಹೂಗಳನ್ನು ಗಿಡದಿಂದ ನಿರೀಕ್ಷಿಸಬಹುದು. ಇಲ್ಲಿ ಕಟಾವು ಮಾಡಿದ ಹೂಗಳನ್ನು ಬೆಂಗಳೂರಿನ ಐಸ್ಯಾಬ್ಗೆ (ಇಂಡಿಯನ್ ಫ್ಲೋರಿಕಲ್ಚರ್ ಅಸೋಶಿಯೇಷನ್) ಕೊಂಡೊಯ್ದು ನೇರ ಮಾರಾಟ ಮಾಡುವುದರಿಂದ ಆನ್‌ಲೈನ್ ಬಿಲ್ಲಿಂಗ್ ಪಡೆದು ಉತ್ತಮ ಲಾಭ ನೋಡುತ್ತಿದ್ದಾರೆ.

ಈ ಹೂ ತೋಟದಲ್ಲಿ ಕೆಲಸ ಮಾಡಲು ಒಡಿಸಾದಿಂದ ಮೂವರನ್ನು ಕರೆತರಲಾಗಿದೆ. ನೀರು ಹಾಯಿಸುವುದು, ಔಷಧಿ ಸಿಂಪಡಿಸುವುದು. ಪ್ರತಿ ಹೂವಿಗೆ ಪಾಲಿಥಿಕ್ ಕವರಿಂಗ್ ಮಾಡುವುದು. ಕಳೆ ಕೀಳುವುದು, ಹೂ ಕಟಾವು ಮಾಡುವುದು ಇವರ ದೈನಂದಿನ ಕೆಲಸ. ಬೇಸಿಗೆ ಬಿಸಿಲಿನ ಝಳಕ್ಕೆ ‘ಡೌನಿರೋಗ’, ಸಂಪಿನ ವಾತಾವರಣಕ್ಕೆ ‘ಬೂದಿರೋಗ’ ಹಾವಳಿ ಹೆಚ್ಚು. ಇಳುವರಿಯಲ್ಲಿ ಏರು ಪೇರು ಮಾಡುತ್ತದೆ. ಆದರೂ ವೈಜ್ಞಾನಿಕ ರೀತಿಯಲ್ಲಿ ಪಾಲಿಹೌಸ್ ನಿರ್ಮಿಸಿರುವುದರಿಂದ ತೆರೆದ ಪ್ರದೇಶದಲ್ಲಿ ಬೆಳೆದ ಗುಲಾಬಿ ಹೂವಿಗೆ ಹಬ್ಬುವ ರೋಗದಂತೆ ಇಲ್ಲಿ ಕಾಡದು ಎನ್ನುತ್ತಾರೆ ಚಂದನ್.

ಮಳೆಗಾಲದಲ್ಲಿ ಪಾಲಿಹೌಸ್ ಮೇಲೆ ಸುರಿಯುವ ಮಳೆನೀರು ಗುಲಾಬಿ ತೋಟಕ್ಕೆ ಬಳಕೆ ಆಗುತ್ತದೆ. ಹೆಚ್ಚಾದ ನೀರು ನೈಸರ್ಗಿಕ ಹಳ್ಳಕ್ಕೆ ಹರಿಯುವಂತೆ ಯೋಜನೆ ರೂಪಿಸಲಾಗಿದೆ. ಜೀವನ ನಿರ್ವಹಣೆಯಲ್ಲದೆ ಸಾಮಾಜಿಕ ಸ್ಥಾನಮಾನಕ್ಕೆ ಈ ಗುಲಾಬಿ ಬೆಳಯುವ ಪಾಲಿಹೌಸ್ ಆಧಾರವಾಗಿದೆ. ಸೋಲಾರ್ ಸೌಲಭ್ಯದಿಂದ ಕೊಳವೆಬಾವಿಯಲ್ಲಿ ನೀರೆತ್ತುವ ಕನಸು ನನಸಾಗಬೇಕಿದೆ. ಹಳೇ ಕೃಷಿ ಪದ್ಧತಿ ಬೇಸತ್ತವರಿಗೆ ಈ ಗುಲಾಬಿ ಕೃಷಿ ಪದ್ಧತಿ ಖುಷಿಯಿಂದ ಪಾಠ ಹೇಳುತ್ತಿದೆ ಎನ್ನಬಹುದು.

ಕಡಿಮೆ ನೀರು ಸಾಕು

ಈ ಹೂ ತೋಟಕ್ಕೆ ಕಡಿಮೆ ನೀರು ಬಳಕೆಯಾಗುತ್ತಿದೆ. ಪ್ರತಿ ದಿನ 12 ಸಾವಿರ ಲೀಟರ್ ನೀರಿನ ಅವಶ್ಯಕತೆ ಇದ್ದು, 2 ಇಂಚು ನೀರು ಚಿಮ್ಮುವ ಒಂದು ಕೊಳವೆಬಾವಿ ನೀರುಣಿಸುತ್ತದೆ. ನಿತ್ಯ ಅರ್ಧಗಂಟೆ ಚಾಲನೆಯಲ್ಲಿದ್ದರೆ ಸಾಕು 1 ಎಕರೆ ಪೂರಾ ಹನಿ ನೀರಾವರಿ ಮೂಲಕ ನೀರು ಹಾಯಿಸಬಹುದು. ನಾಟಿಗೊಬ್ಬರ ಬಳಕೆ ಅಷ್ಟಿರದ ಈ ಹೂವಿನ ಗಿಡಗಳಿಗೆ ರಾಸಾಯನಿಕ ಔಷಧಿ ಸಿಂಪಡಣೆ ಅತಿ ಅವಶ್ಯಕ.

ವರ್ಷ ಪೂರಾ ಬೇಡಿಕೆ

‘ಹೊಸ ವರ್ಷಾಚರಣೆ’, ‘ಪ್ರೇಮಿಗಳ ದಿನ’, ‘ಮದುವೆ ಸೀಸನ್’ ಅಷ್ಟೇ ಅಲ್ಲದೆ ವರ್ಷ ಪೂರಾ ಹೂವಿಗೆ ಬೇಡಿಕೆ ಇದೆ. ಪೂರೈಕೆ ಮಾಡೋದೆ ಕಷ್ಟವಾಗಿದ್ದು, ಉತ್ತಮ ದರ್ಜೆಯ ಹೂ ಬೆಳೆಯುವುದರಿಂದ ವಿದೇಶಗಳಿಗೆ ರಪ್ತು ಆಗುತ್ತದೆ. ವಿದೇಶಿಯರು ಅತಿಥಿ ಸತ್ಕಾರ, ಸಂತೋಷ ಕೂಟ, ಹುಟ್ಟುಹಬ್ಬಗಳಿಗೆ ಈ ಗುಲಾಬಿ ಹೂವಿನ ಗುಚ್ಚಗಳನ್ನು// ಬಳಸುವುದರಿಂದ ಇಲ್ಲಿನ ಹೂವಿಗೆ ಬೇಡಿಕೆ ಇದೆ. ಭಾರತದ ವಾತಾವರಣ ಸಮಶೀತೋಷ್ಣವಾದ್ದರಿಂದ ವರ್ಷಪೂರಾ ಹೂ ಬೆಳೆಯಬಹುದು ಎನ್ನುತ್ತಾರೆ ಹೂ ತೋಟದ ಮಾಲಿಕ// ಚಂದನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry