ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

7

ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

Published:
Updated:
ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

ಉಡುಪಿ: ಫೇಸ್‌ಬುಕ್‌ ಆನ್‌ಲೈನ್‌ ಸಮೀಕ್ಷೆಯಲ್ಲಿ ಮಾಜಿ ಶಾಸಕ ಬಿಜೆಪಿ ರಘುಪತಿ ಭಟ್ ಪ್ರತಿಸ್ಪರ್ಧಿ ರಾಘವೇಂದ್ರ ಕಿಣಿ ಅವರಿಗಿಂತ ಭಾರಿ ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸ್ಥಾನದಲ್ಲಿ ಇದ್ದಾರೆ. ಅವರದ್ದೇ ಪಕ್ಷದ ಸುಪ್ರಸಾದ ಶೆಟ್ಟಿ, ರಾಘವೇಂದ್ರ ಕಿಣಿ ಕೂಡಾ ಸ್ಪರ್ಧೆ ನೀಡುವ ಮೂಲಕ ಅಚ್ಚರಿಯ ಭರವಸೆ ಮೂಡಿಸಿದ್ದಾರೆ.

ಉಡುಪಿಯವರೇ ಆದ ಮೂರೂ ಮಂದಿ ಬಿಜೆಪಿ ಮುಖಂಡರು ಪರಸ್ಪರ ಸ್ಪರ್ಧೆ ನಡೆಸುತ್ತಿರುವುದು ಯಾಕೆ? ಇಂತಹ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಸ್ಪರ್ಧೆ ಏರ್ಪಟ್ಟಿರುವುದು ಉಡುಪಿ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಯಾರು ಎಂಬ ಫೇಸ್‌ಬುಕ್‌ ಆನ್‌ಲೈನ್ ಮತದಾನದ ಸಮೀಕ್ಷೆಯಲ್ಲಿ. ಕುಂದಾ ಪುರದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ  ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ರಾಕೇಶ್ ಮಲ್ಲಿ ಅವರ ಮಧ್ಯೆ ಸ್ಪರ್ಧೆ ಇರುವುದು ಇದರಲ್ಲಿ ಗೊತ್ತಾಗಿದೆ.

ಉಡುಪಿ ಜಿಲ್ಲೆಯಲ್ಲಿಯೂ ಟಿಕೆಟ್ ಪೈಪೋಟಿ ಜೋರಾಗಿದೆ. ಬಿಜೆಪಿಯಲ್ಲಿ ಒಂದೊಂದು ಕ್ಷೇತ್ರದಲ್ಲಿ ಮೂರ್ನಾಲ್ಕು ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದಾರೆ. ಇದರ ಮಧ್ಯೆಯೇ ನಾಯಕರ ಬೆಂಬಲಿಗರು ಆನ್‌ಲೈನ್ ತಂತ್ರಾಂಶ ಬಳಸಿ ನಡೆಸುತ್ತಿರುವ ಸಮೀಕ್ಷೆಗಳು ಕುತೂಹಲಕಾರಿ. ಟಿಕೆಟ್‌ ಹಂಚಿಕೆ ಮೇಲೆಯೂ ಇದು ಪರಿಣಾಮ ಬೀಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಉಡುಪಿ ವಿಧಾನಸಭಾ ಕ್ಷೇತ್ರ ಸಮೀಕ್ಷೆಯಲ್ಲಿ ರಘುಪತಿ ಭಟ್‌, ರಾಘವೇಂದ್ರ ಕಿಣಿ, ಸುಪ್ರಸಾದ ಶೆಟ್ಟಿ, ಕೆ. ಉದಯ್ ಕುಮಾರ್ ಶೆಟ್ಟಿ ಹಾಗೂ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಇದ್ದಾರೆ. ಯಾರು ಉಡುಪಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಬೇಕು ಎಂದು ಪ್ರಶ್ನೆ ಕೇಳಲಾಗಿದೆ.

ಒಟ್ಟು 7,356 ಮಂದಿ ಮತದಾನ ಮಾಡಿದ್ದಾರೆ. ರಘುಪತಿ ಭಟ್ ಅವರು 3,173 ಮತ ಪಡೆದು ದೊಡ್ಡ ಅಂತರದಿಂದ ಮುಂದಿದ್ದಾರೆ. ಎರಡನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು ರಾಘವೇಂದ್ರ ಕಿಣಿ 1,929 ಹಾಗೂ ಸುಪ್ರಸಾದ ಶೆಟ್ಟಿ 1,854 ಮತ ಪಡೆದುಕೊಂಡಿದ್ದಾರೆ. ಆದರೆ ಹಿರಿಯ ನಾಯಕ ಕೆ. ಉದಯ್ ಕುಮಾರ್ ಶೆಟ್ಟಿ ಅವರಿಗೆ 270 ಹಾಗೂ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರಿಗೆ 130 ಮತಗಳು ಮಾತ್ರ ಸಿಕ್ಕಿವೆ. ಎರಡು ಬಾರಿ ಶಾಸಕರಾಗಿರುವ ಭಟ್ಟರಿಗೆ ಯುವ ನಾಯಕರು ತೀವ್ರ ಪೈಪೋಟಿ ನೀಡುತ್ತಿರುವುದು ಗಮನಿಸಬೇಕಾದ ಅಂಶ.

ಕುಂದಾಪುರ ಕ್ಷೇತ್ರದ ಫಲಿತಾಂಶ ಉಡುಪಿಗಿಂತಲೂ ಕುತೂಹಲಕಾರಿ. ಗೆಲುವಿನ ಹ್ಯಾಟ್ರಿಕ್ ಬಾರಿಸಿರುವ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಹೊಸಮುಖ ಕಾಂಗ್ರೆಸ್‌ನ ರಾಕೇಶ್ ಮಲ್ಲಿ ಅವರು ತೀವ್ರ ಪೈಪೋಟಿ ನೀಡಿದ್ದಾರೆ. ಈ ಸಮೀಕ್ಷೆಯಲ್ಲಿ ಒಟ್ಟು 7,669 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಹಾಲಾಡಿ ಅವರು 3,590 ಹಾಗೂ ರಾಕೇಶ್ ಮಲ್ಲಿಗೆ 3,557 ಮತ ಚಲಾವಣೆಯಾಗಿವೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ 255 ಮತ ಪಡೆದರೆ, ನೋಟ (ಮೇಲಿನ ಯಾರೂ ಅಲ್ಲ) 249 ಮತ ಪಡೆದಿದೆ.

ದೊಡ್ಡ ದೊಡ್ಡ ಸಂಸ್ಥೆಗಳು ರಾಜ್ಯದಾದ್ಯಂತ ನಡೆಸುವ ಸಮೀಕ್ಷೆಗಳಲ್ಲಿ ಸ್ಯಾಂಪಲ್‌ಗಳು ಸಾಮಾನ್ಯವಾಗಿ ಮೂರಂಕಿ ದಾಟುವುದಿಲ್ಲ. ಆದರೆ ಇಲ್ಲಿ ಸಾವಿರಾರು ಮಂದಿ ತಮ್ಮ ಆಯ್ಕೆ ಹೇಳಿದ್ದಾರೆ. ನಾಯಕರು ಟಿಕೆಟ್ ಸಿಗುವುದೋ ಇಲ್ಲವೋ ಎಂಬ ಚಿಂತೆಯಲ್ಲಿ ಇರುವಾಗಲೇ ನಡೆಯುತ್ತಿರುವ ಆನ್‌ಲೈನ್ ಸಮೀಕ್ಷೆಗಳು ಕುತೂಹಲ ಕೆರಳಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry