7

ತ್ಯಾಜ್ಯದ ಕೇಂದ್ರ ಈ ಹೂವಿನ ಕುಂಟೆ

Published:
Updated:
ತ್ಯಾಜ್ಯದ ಕೇಂದ್ರ ಈ ಹೂವಿನ ಕುಂಟೆ

ದೇವನಹಳ್ಳಿ: ಅನೇಕ ವಿವಿಧ ಜಾತಿಯ ಹೂಗಳನ್ನು ನೀಡುತ್ತಿದ್ದ ಬಯಲು ಪ್ರದೇಶದ ನೀರನ್ನು ಸಂಗ್ರಹಿಸಿಕೊಳ್ಳುವ ಹೂವಿನ ಕುಂಟೆ ಇಂದು ರಾಶಿ ರಾಶಿ ತ್ಯಾಜ್ಯಗಳ ಕೇಂದ್ರ ಸ್ಥಾನವಾಗಿರುವುದು ಸ್ಥಳೀಯರಿಗೆ ಆತಂಕದ ಕ್ಷಣವನ್ನು ತಂದೊಡ್ಡಿದೆ.

ಕನ್ನಮಂಗಲ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಗ್ರಾಮ ಪಂಚಾಯಿತಿ, ತನ್ನಲ್ಲಿ ಕ್ರೋಡೀಕರಣಗೊಂಡ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿ ಪರಿಸರ ಸಂರಕ್ಷಣೆ, ಆಡಳಿತ ನಿರ್ವಹಣೆ, ಉದ್ಯೋಗ ಖಾತ್ರಿ ಯೋಜನೆಗಳನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿತ್ತು. ಇದರಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳೂ ಲಭಿಸಿದ್ದವು. ಇಂತಹ ಗ್ರಾಮ ಪಂಚಾಯಿತಿ ಕಟ್ಟಡದ ಸನಿಹದಲ್ಲಿರುವ ಹೂಕಟ್ಟೆಯ ವಿಶಾಲ ಪ್ರದೇಶದಲ್ಲಿ ರಾತ್ರೋರಾತ್ರಿ ಕಸ ಸುರಿದು ಬೆಂಕಿ ಹಚ್ಚುತ್ತಿರುವವರು ಯಾರು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ 7ರ ರಸ್ತೆ ಬದಿಯಲ್ಲಿ ಇರುವ ಕನ್ನಮಂಗಲ ಗ್ರಾಮದಿಂದ ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಲು ಕೇವಲ ನೂರು ಮೀಟರ್‌ ಅಂತರವಿದೆ. ಸದಾ ಗಿಜಿಗುಡುವ ಜನಸಂದಣಿ ಪ್ರದೇಶದಲ್ಲಿ ಎಲ್ಲಿಂದ, ಹೇಗೆ, ಯಾವ ಸಂದರ್ಭದಲ್ಲಿ ಕಸದ ತ್ಯಾಜ್ಯ ಸುರಿಯುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ, ಬೆಳಿಗ್ಗೆ ನೋಡಿದರೆ ಕಸದ ರಾಶಿಗಳಿರುತ್ತವೆ ಜತೆಗೆ ಬೆಂಕಿ ಉರಿಯುತ್ತಿರುತ್ತದೆ. ವಿಪರೀತ ಹೊಗೆ, ದುರ್ವಾಸನೆ, ಇದು ಕಳೆದ ಎರಡು ತಿಂಗಳಿಂದ ನಿರಂತರವಾಗಿದೆ. ಇಡಿ ರಾತ್ರಿ ಹೊಗೆಯ ಕಮಟು ವಾಸನೆ ಯಾರಿಗೆ ಹೇಳೋದು ಎಂಬುದು ಅರ್ಥವಾಗುತ್ತಿಲ್ಲ ಎಂಬುದು ಸ್ಥಳೀಯರ ಆತಂಕ.

ಸರ್ಕಾರಿ ಜಾಗವಾಗಿರುವ ಹೂಕುಂಟೆ ವ್ಯಾಪ್ತಿಯ ಜಾಗದ ಅಕ್ಕಪಕ್ಕದಲ್ಲಿ ಅನೇಕ ಪ್ರತಿಷ್ಠಿತ ಖಾಸಗಿ ವಸತಿ ಸಮುಚ್ಚಯಗಳು ನಿರ್ಮಾಣವಾಗುತ್ತಿವೆ. ಕಟ್ಟಡ ಬಳಸಿ ವ್ಯರ್ಥವಾಗಿರುವ ವಿವಿಧ ರೀತಿಯ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ಬಹುತೇಕ ಕುಂಟೆ ಅಸ್ತಿತ್ವ ಕಳೆದುಕೊಂಡು ಹೆಸರನ್ನು ಮಾತ್ರ ಉಳಿಸಿಕೊಂಡಿದೆ. ಸ್ಥಳೀಯ ಮೌಲ್ಯಯುತ ಸರ್ಕಾರಿ ಜಾಗವನ್ನು ಸಂಬಂಧಿಸಿದ ಇಲಾಖೆ ಕಬಳಿಕೆಗೆ ಅವಕಾಶ ಕೊಡದೆ ಸಂರಕ್ಷಣೆಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯ ನಿವಾಸಿ ಶ್ರೀನಿವಾಸ್ ಒತ್ತಾಯ.

ತಪಾಸಣೆ ಮಾಡಲಿ: ಕನ್ನಮಂಗಲ ಗ್ರಾಮ ಎಲ್ಲಾ ರೀತಿಯಿಂದ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದೆ, ಶಿಕ್ಷಣ, ಮೂಲ ಸೌಲಭ್ಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಎಲ್ಲಾ ರೀತಿ ನಿರ್ವಹಣೆಯಾಗುತ್ತಿದೆ. ಯಾರು, ಯಾವ ಉದ್ದೇಶದಿಂದ ತ್ಯಾಜ್ಯ ಸುರಯುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಂಬಂಧಿಸಿದ ಇಲಾಖೆ ಸಿಬ್ಬಂದಿ ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್ .

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಪ್ರಸ್ತುತ 72 ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಕಸತ್ಯಾಜ್ಯ ವಿಲೇವಾರಿ ಮಾಡಿ ಸಾದಹಳ್ಳಿ ಗ್ರಾಮದ ಬಳಿ ಬೃಹತ್ ತೊಟ್ಟಿಗಳಲ್ಲಿ ಸಾವಯವ ಗೊಬ್ಬರ ನಿರ್ಮಾಣ ಮಾಡಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.

ಇಲತೊರೆ ಗ್ರಾಮದ ಬಳಿ ಒಣ ಮತ್ತು ಘನ ತ್ಯಾಜ್ಯ ಸಂಸ್ಕರಣ ಘಟಕ ಜಪಾನ್ ತಂತ್ರಜ್ಞಾನ ಬಳಸಿ ನಿರ್ಮಾಣಕ್ಕೆ ಜಾಗ ಸ್ವಾಧೀನ ಪ್ರಕ್ರಿಯೆಯಲ್ಲಿದೆ. ಪ್ರಸ್ತುತ ಹೂಕಟ್ಟೆ ಬಳಿ ಸುರಿಯುತ್ತಿರುವ ತಾಜ್ಯ ಯಾರೆಂಬುದು ಗೊತ್ತಿಲ್ಲ. ತಡೆಗೋಡೆ ನಿರ್ಮಾಣಕ್ಕೆ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯವಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಕಸವೇ..

ಸ್ಥಳೀಯ ನಿವಾಸಿ ಭಜಂತ್ರಿ ಮಂಜುನಾಥ್‌ ಮಾತನಾಡಿ, ದೇವನಹಳ್ಳಿ ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಕಳೆದ ವರ್ಷ ಬಿಬಿಎಂಪಿ ಕಸ ವಿಲೇವಾರಿ ಗುತ್ತಿಗೆ ಪಡೆದ ಖಾಸಗಿ ಲಾರಿಗಳು ಟನ್‌ ಗಟ್ಟಲೆ ಕಸ ಸುರಿದಿದ್ದವು, ಕಸದ ರಾಶಿಯನ್ನು ಗಮನಿಸಿದಾಗ ಬೆಂಗಳೂರಿನ ವಿವಿಧ ಮಳಿಗೆಗಳ ಹೆಸರಿನ ಪ್ಲಾಸ್ಟಿಕ್‌ ಚೀಲ, ದಿನ ಬಳಕೆ ತ್ಯಾಜ್ಯವಿದೆ. ಬೆಂಗಳೂರಿನ ಕಸವನ್ನು ಇಲ್ಲಿ ಸುರಿದಿರುವ ಶಂಕೆ ಇದೆ ಎಂದು ಆತಂಕ ಸೂಚಿಸಿದರು.

ವಿವಿಧ ಮಾದರಿಯ ತ್ಯಾಜ್ಯದಿಂದ ಪೂರ್ಣ ಪ್ರದೇಶದ ವಾತಾವರಣ ಹದಗೆಟ್ಟಿದೆ. ಉಸಿರಾಡುವುದು ಕಷ್ಟಕರವಾಗಿದೆ. ಘನ ತ್ಯಾಜ್ಯದಿಂದ ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯರ ನಿದ್ದೆಗೆಡಿಸುತ್ತಿರುವ ತ್ಯಾಜ್ಯದ ರಾಶಿಯಿಂದ ಮತ್ತೊಂದು ಕೊಳಕು ಮಂಡೂರು ಆಗಬಾರದು ಎನ್ನುತ್ತಾರೆ ಭಜಂತ್ರಿ.

* * 

ರಾತ್ರಿ ಗಸ್ತಿನಲ್ಲಿರುವ ಪೊಲೀಸರು ತ್ಯಾಜ್ಯ ವಾಹನಗಳ ತಪಾಸಣೆ ನಡೆಸಬೇಕು. ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು

ಸರಸ್ವತಿ ಮಂಜುನಾಥ್

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry