ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

7

ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

Published:
Updated:
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

ಭಾಲ್ಕಿ: ಸರ್ಕಾರಿ ಆಸ್ಪತ್ರೆಗಳೆಂದರೆ ಅಸ್ವಚ್ಛತೆ, ಮೂಲಸೌಕರ್ಯ ಕೊರತೆ, ರೋಗಿಗಳ ಬಗ್ಗೆ ನಿಷ್ಕಾಳಜಿ ಇರುತ್ತದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಆದರೆ, ತಾಲ್ಲೂಕಿನಿಂದ 20 ಕಿ.ಮೀ ದೂರದಲ್ಲಿರುವ ನಿಟ್ಟೂರ (ಬಿ) ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಕೇಂದ್ರ ಇದಕ್ಕೆ ಅಪವಾದ ಎಂಬಂತಿದ್ದು, ರೋಗಿಗಳು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. 1968ರಲ್ಲಿ ಆಸ್ಪತ್ರೆ ಪ್ರಾರಂಭವಾಗಿದ್ದು, 2006ರಲ್ಲಿ ಮೇಲ್ದರ್ಜೆಗೇರಿದೆ. ಆಸ್ಪತ್ರೆ ಆವರಣ ಹಸಿರು ಗಿಡಗಳಿಂದ ಕಂಗೊಳಿಸುತ್ತಿದ್ದು, ಸುಸಜ್ಜಿತ ಕಿರು ಉದ್ಯಾನ ಹೊಂದಿದೆ.

ಆಹ್ಲಾದಕರ ವಾತಾವರಣದಲ್ಲಿ ರೋಗಿಗಳಿಗೆ ವಿಶ್ರಾಂತಿ ಪಡೆಯಲು ಅಗತ್ಯ ಆಸನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ತುರ್ತು ನಿಗಾ ಘಟಕದಲ್ಲಿ ಆಧುನಿಕ ಸೌಕರ್ಯಗಳಿಂದ ಕೂಡಿರುವ ಬೆಡ್‌ ವ್ಯವಸ್ಥೆ ಇದೆ. ಪ್ರಮುಖ ಕೋಣೆಗಳಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

ದಿನದ ಎಲ್ಲ ಸಮಯದಲ್ಲೂ ಹೆರಿಗೆ ನಡೆಸಲು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ಲಭ್ಯ ಇರುತ್ತಾರೆ. ಹೆರಿಗೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಂದ ತಾಯಿ–ಮಗುವನ್ನು ರಕ್ಷಿಸಲು ಆಕ್ಸಿಜನ್‌ ಸಿಲಿಂಡರ್‌, ಸಿಜೇರಿಯನ್‌ಗೆ ಅಗತ್ಯ ಉಪಕರಣ, ದಿನದ ಎಲ್ಲ ಸಮಯ ಆಂಬುಲೆನ್ಸ್‌, ಬಿಸಿ ನೀರಿನ ಸೌಕರ್ಯ ಇದೆ ಎಂದು ನೇತ್ರಾಧಿಕಾರಿ ಸುನೀಲ್‌ ಬಿಜಾಪೂರ, ಇಮ್ಯಾನುವೆಲ್‌ ತಿಳಿಸುತ್ತಾರೆ.

ಸುತ್ತಮುತ್ತಲಿನ ನಾಲ್ಕು ಆರೋಗ್ಯ ಕೇಂದ್ರಗಳ ಗ್ರಾಮಗಳಾದ ಹಜನಾಳ, ಹೆಡಗಾಪೂರ, ಬಾಳೂರು, ಬೀರಿ (ಬಿ), ಬೀರಿ (ಕೆ), ಠಾಣಾ ಕುಶನೂರ, ಹಲಬರ್ಗಾ ಸೇರಿದಂತೆ ಸುಮಾರು ಹದಿನೆಂಟು ಹಳ್ಳಿಗಳ ರೋಗಿಗಳು ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.

ಇಲ್ಲಿ ತಿಂಗಳಿನಲ್ಲಿ ಎರಡು ಸಾರಿ ಕುಟುಂಬ ಕಲ್ಯಾಣ ಯೋಜನೆ ಅಡಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಶಿಬಿರ ನಡೆಸಲಾಗುತ್ತದೆ. ಪ್ರತಿ ಶುಕ್ರವಾರ ಮಾನಸಿಕ ರೋಗಿಗಳ ಶಿಬಿರ, ಪ್ರತಿ ತಿಂಗಳ 9ನೇ ದಿನಾಂಕದಂದು ಎಎಂಎಸ್‌ಎಂಎ ಯೋಜನೆ ಅಡಿ ಗರ್ಭಿಣಿಯರ ಸದೃಢ ಆರೋಗ್ಯಕ್ಕಾಗಿ ವಿವಿಧ ರೀತಿಯ ಪರೀಕ್ಷೆ ನಡೆಸಲಾಗುತ್ತದೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭಿಸುವ ಉತ್ತಮ ಸೌಕರ್ಯ, ಸ್ವಚ್ಛತೆ, ಆಧುನಿಕ ವೈದ್ಯಕೀಯ ಉಪಕರಣಗಳ ಲಭ್ಯತೆ, ಸಿಬ್ಬಂದಿಯ ಕಾರ್ಯಕ್ಷಮತೆ ಸೇರಿದಂತೆ ಇತರ ಪ್ರಮುಖ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ 2009 ರಲ್ಲಿ ನಮ್ಮ ಸಮುದಾಯ ಕೇಂದ್ರಕ್ಕೆ ರಾಜ್ಯದಲ್ಲಿಯೇ 2ನೇ ಉತ್ತಮ ಸಮುದಾಯ ಆರೋಗ್ಯ ಕೇಂದ್ರ ಪ್ರಶಸ್ತಿ ನೀಡಿ ಗೌರವಿಸಿದೆ. 2010 ರಲ್ಲಿ ಸಮುದಾಯ ಕೇಂದ್ರದ ಆಡಳಿತಾಧಿಕಾರಿ ಆಗಿದ್ದ ರಾಜೇಂದ್ರ ನಿಟ್ಟೂರಕರ್‌ ಅವರಿಗೆ ವೈದ್ಯಶ್ರೀ ಪ್ರಶಸ್ತಿ ಲಭಿಸಿದೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಆದರೆ, ಅರಿವಳಿಕೆ ತಜ್ಞರು, ಸ್ಕ್ಯಾನಿಂಗ್ ತಜ್ಞರ ಹುದ್ದೆ ಖಾಲಿ ಇದ್ದು, ರೋಗಿಗಳಿಗೆ ತೊಂದರೆ ಆಗುತ್ತಿದೆ. ಖಾಲಿ ಹುದ್ದೆಗಳನ್ನು ತುಂಬಲು ಕ್ರಮಕೈಗೊಂಡರೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ರೋಗಿಗಳ ಒತ್ತಾಯ.

* * 

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತುರ್ತು ಕ್ರಮ ಕೈಗೊಂಡು ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಲಾಗುವುದು.

ಸಂತೋಷ ಕಾಳೆ,

ಆಡಳಿತಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry