ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ

7

ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ

Published:
Updated:
ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ

ಚಿಕ್ಕಮಗಳೂರು: ‘ಕಮುನಿಸ್ಟರು, ಎಡಪಂಥೀಯರು, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ಆಂದೋಲನ ರೂಪಿಸಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ನಿರ್ಧರಿಸಿದೆ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಿಪಿಐ 12ನೇ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಎಲ್ಲ ಜನಪರ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿಕೊಂಡು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು. ಆದರೆ, ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಕೆಲಸ ಮಾಡುತ್ತಿಲ್ಲ. ಜಾತ್ಯತೀತ ವಾತಾವರಣ ನಿರ್ಮಿಸಲು ಈ ಕೆಲಸ ಮಾಡುವ ಅಗತ್ಯ ಇದೆ’ ಎಂದು ಸಲಹೆ ನೀಡಿದರು.

‘ಕೋಮುವಾದದ ವಿರುದ್ಧ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಆದರೆ ಅದನ್ನು ಬೇರು ಸಮೇತ ಕೀಳಲು ಕಾರ್ಯಕ್ರಮ ಇಲ್ಲ. ಕೇವಲ ಜಾತ್ಯತೀತದ ಬಗ್ಗೆ ಮಾತನಾಡಿದರೆ ಸಾಲದು. ದೇಶದ ಬಗ್ಗೆ ಕಾಳಜಿ ಇದ್ದರೆ ಕಾರ್ಯಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಕಾರ್ಪೊ ರೆಟ್‌ ಸಂಸ್ಥೆಗಳ ಭಿಕ್ಷೆ ಬಿಟ್ಟು, ದೇಶದ ಜನರನ್ನು ನಂಬಿ ರಾಜಕಾರಣ ಮಾಡಲು ಮುಂದಾಗಬೇಕು. ಆಗ ಬಿಜೆಪಿಯನ್ನು ಎದುರಿಸಲು ಸಾಧ್ಯವಾ ಗುತ್ತದೆ. ಇಲ್ಲದಿದ್ದರೆ ಕಾಂಗ್ರೆಸ್‌ ನಾಮಾವಶೇಷವಾಗುತ್ತದೆ’ ಎಂದರು.

‘ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಯಾವ ಪಕ್ಷವನ್ನು ಬೆಂಬಲಿಸುತ್ತದೆ ಎಂಬ ಅನುಮಾನ ಜನರನ್ನು ಕಾಡುತ್ತಿದೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಬೆಂಬಲ ಕಾಂಗ್ರೆಸ್‌ಗೊ ಅಥಾ ಬಿಜೆಪಿಗೊ ಎಂಬುದನ್ನು ಜೆಡಿಎಸ್‌ ಸ್ಪಷ್ಟಪಡಿಸಬೇಕು. ಇದರಿಂದ, ಪ್ರಜಾಸತ್ತಾತ್ಮಕ ಶಕ್ತಿಗಳು ಜೆಡಿಎಸ್‌ ಬಗ್ಗೆ ನಿಲುವು ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇಲೆ ದೊಡ್ಡ ಜವಾಬ್ದಾರಿ ಇದೆ. ರಾಜ್ಯದಲ್ಲಿ ಜನರು ನಿರ್ಭೀತಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕಿದೆ. ಅತ್ಯಾಚಾರ, ಅಪಹರಣ, ರಾಜಕೀಯ ಕೊಲೆಗಳನ್ನು ತಡೆಯಬೇಕಿದೆ. ಇದು ಎಲ್ಲ ಪಕ್ಷಗಳ ಜವಾಬ್ದಾರಿ’ ಎಂದರು.

‘ಬಿಜೆಪಿ ಎಂದರೆ ಮಿಸ್‌ಕಾಲ್‌ ಪಾರ್ಟಿ. ಏಕೆಂದರೆ, ಬಿಜೆಪಿಯವರಿಗೆ ಮಿಸ್‌ಕಾಲ್‌ ಕೊಟ್ಟರೆ ಪಕ್ಷದ ಸದಸ್ಯತ್ವ ಪಡೆಯಬಹುದು. ಅಲ್ಲಿ ಸದಸ್ಯರಾಗಲು ಚಳವಳಿ, ಹೋರಾಟದಲ್ಲಿ ಪಾಲ್ಗೊಂಡ ಹಿನ್ನೆಲೆ ಬೇಕಿಲ್ಲ. ಮೋದಿ ಅವರದು ಮಿಸ್‌ಕಾಲ್‌ ಸರ್ಕಾರ’ ವ್ಯಂಗ್ಯವಾಡಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಕೊಲೆಯಾದ ದೀಪಕ್‌ ರಾವ್‌ ಮತ್ತು ಬಶೀರ್‌ ಸಕ್ರಿಯ ರಾಜಕಾರಣಿಗಳಲ್ಲ. ಕೊಲೆ ಮಾಡಿದವರು ಮತಾಂಧ ಸಂಘಟನೆಯವರು. ಇದು ನಾಗರಿಕ ಸಂಘರ್ಷ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹುಲ್ಲಿನ ಬವಣೆ ಮೇಲೆ ಕುಳಿತು ಗಾಂಜಾ ಸೇದುವ ಕೆಲಸವನ್ನು ಮತಾಂಧ ನಾಯಕರು ಮಾಡಬಾರದು’ ಎಂದರು.

‘ಧರ್ಮಾಂಧರು ಬೇರೆ ಧರ್ಮೀಯರು ಬೇರೆ. ಎಲ್ಲ ಧರ್ಮದವರೂ ಕೂಡಿ ಬಾಳೋಣ ಎನ್ನುವರು ಧರ್ಮೀಯರು. ನನ್ನ ಧರ್ಮ ಮಾತ್ರ ಶ್ರೇಷ್ಠ, ಇನ್ನೊಂದು ಧರ್ಮದವರು ಇರಬಾರದು ಎನ್ನುವರು ಧರ್ಮಾಂಧರು. ಧರ್ಮಾಂದರ ಬಗ್ಗೆ ಧರ್ಮೀಯರು ಎಚ್ಚರದಿಂದ ಇರಬೇಕು’ ಎಂದು ಹೇಳಿದರು.

‘ಕೇಂದ್ರದಲ್ಲಿನ ಮೋದಿ ನೇತೃತ್ವದ ಸರ್ಕಾರವು ಹಣಕಾಸು ಪರಿಹಾರ ಮತ್ತು ಠೇವಣಿ ವಿಮಾ (ಎಫ್‌ಆರ್‌ಡಿಐ) ಮಸೂದೆ ಮಂಡಿಸಲು ಮುಂದಾಗಿದೆ. ಬ್ಯಾಂಕು ದಿವಾಳಿಯಾದರೆ ಗ್ರಾಹಕರ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಮಸೂದೆಯಲ್ಲಿ ಇದೆ. ಜನರ ಬ್ಯಾಂಕ್‌ ಖಾತೆಗೆ ಕನ್ನ ಹಾಕಲು ಮುಂದಾಗಿದೆ’ ಎಂದರು.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಬದಲಿಗೆ ಎಪಿಎಲ್‌ಎಂಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ತುಂಡು ಜಮೀನುಗಳಿಂದಾಗಿ ದೇಶದಲ್ಲಿ ಕೃಷಿ ಅಭಿವೃದ್ಧಿ ಆಗುತ್ತಿಲ್ಲ ಎಂದು ನೀತಿ ಆಯೋಗ ವರದಿ ನೀಡಿದೆ. ಹೀಗಾಗಿ, ಕಂಪನಿ ಕೃಷಿ ಜಾರಿಗೊಳಿಸುವ ಹುನ್ನಾರ ನಡೆದಿದೆ. ಇದು ಕಾರ್ಯಗತವಾದರೆ ಸಣ್ಣ ರೈತರು ಒಪ್ಪಂದದ ಕೃಷಿಯಡಿ (ಕಾಂಟ್ರಾಕ್ಟ್‌ ಅಗ್ರಿಕಲ್ಚರ್‌) ಜಮೀನುಗಳನ್ನು ಕಂಪನಿಗಳಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ, ಸಣ್ಣರೈತರ ಜಮೀನು ನುಂಗುವ ಪಿತೂರಿ ಇದು’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಎಂ.ರೇಣುಕಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಮುಖಂಡರಾದ ರಾಧಾಸುಂದರೇಶ್‌, ಜಿ.ರಘು, ಎಸ್‌.ವಿಜಯಕುಮಾರ್‌, ಕೆ.ಗುಣಶೇಖರನ್‌, ಎಚ್.ಟಿ.ರವಿಕುಮಾರ್‌ ಇದ್ದರು.

ಚಿಕ್ಕಮಗಳೂರು:‘ರಾಜ್ಯದಲ್ಲಿ ರೈತ, ದಲಿತ ಚಳವಳಿ, ಎಡಪಕ್ಷಗಳು, ದುಡಿಯುವ ವರ್ಗ, ಕಾಂಗ್ರೆಸ್‌ ಒಳಗೊಂಡ ರಾಜಕೀಯನ್ನು ಅಸ್ತಿತ್ವಕ್ಕೆ ತರಬೇಕಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮೇಲೆ ಮಹತ್ತರ ಜವಾಬ್ದಾರಿ ಇದೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್‌ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಸಿಪಿಐ 12ನೇ ಜಿಲ್ಲಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಜರಾತ್‌ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್‌ ಪಾಠ ಕಲಿಯುವುದಾದರೆ ಎಲ್ಲ ಪಕ್ಷಗಳು, ಜನರನ್ನು ವಿಶ್ವಾಸಕ್ಕೆ ರಾಜಕೀಯ ಪರ್ಯಾಯ ವೇದಿಕೆ ನಿರ್ಮಿಸಲು ಕಾಂಗ್ರೆಸ್‌ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಿಪಿಐ ರಾಜ್ಯ ಮತ್ತು ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜಕೀಯ ನಿರ್ಣಯ ಕೈಗೊಳ್ಳಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ದುಡಿಯುವ ವರ್ಗದವರ ಹಕ್ಕುಗಳನ್ನು ಬಿಜೆಪಿ ಮೊಟಕುಗೊಳಿ ಸುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಕಮ್ಯುನಿಸ್ಟ್‌ ಪಕ್ಷವು ಏಕಾಂಗಿಯಾಗಿ ಬಿಜೆಪಿ ಎದುರಿಸುವಷ್ಟು ಶಕ್ತಿ ಇಲ್ಲ. ಆದರೆ, ಸರ್ಕಾರಗಳನ್ನು ಬದಲಾವಣೆ ಮಾಡುವಂತಹ ವಾತಾವರಣ ಸೃಷ್ಟಿಸುವ ರಾಜಕೀಯ ಪ್ರಯತ್ನ, ಸೈದ್ಧಾಂತಿಕ ಬದ್ಧತೆ ಇದೆ’ ಎಂದು ಹೇಳಿದರು.

‘ಸಂವಿಧಾನ ಬದಲಾವಣೆ ಮಾಡಬೇಕು, ಇತಿಹಾಸವನ್ನು ಪುನರ್ರಚಿಸಬೇಕು ಎಂದು ಬಿಜೆಪಿ ಹವಣಿಸುತ್ತಿದ್ದು, ಜನಾದೇಶ ಪಡೆಯುವ ಸಂದರ್ಭದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಬಿಟ್ಟು, ಪ್ರಸ್ತಾಪಿಸದ ಅಂಶಗಳನ್ನು ಕಾರ್ಯಗತ ಮಾಡುತ್ತಿದೆ. ಬೆಲೆ ಏರಿಕೆ ತಡೆಯುತ್ತೇವೆ, ಕಪ್ಪು ಹಣ ವಾಪಸ್‌ ತರುತ್ತೇವೆ, ಸ್ವಾಮಿನಾಥನ್‌ ಆಯೋಗ ವರದಿ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು, ಆದರೆ ಇದಾವುದು ಆಗಿಲ್ಲ. ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸದ ಗರಿಷ್ಠ ಮುಖಬೆಲೆ ನೋಟು ಅಮಾನ್ಯ , ಸ್ವಚ್ಛ ಭಾರತ್‌, ಜಿಎಸ್‌ಟಿ ಕಾರ್ಯಗತ ಮಾಡಿದ್ದಾರೆ. ಲೋಕಪಾಲ ಮಸೂದೆ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದರು.

‘ಬಹುರಾಷ್ಟ್ರೀಯ ಕಾರ್ಪೋರೆಟ್‌ ಕಂಪನಿಗಳ ಹಿಡಿತದಲ್ಲಿ ಬಿಜೆಪಿ ಸಿಲುಕಿದ್ದು, ಈ ಕಂಪನಿಗಳ ದೇಣಿಗೆಗೆ ಪ್ರತಿಯಾಗಿ ಅವು ಹೇಳಿದಂತೆ ನಡೆದುಕೊಳ್ಳಬೇಕಾದ ಒತ್ತಡದಲ್ಲಿ ಬಿಜೆಪಿ ಇದೆ. ರಾಜಕೀಯ ದೊಂಬರಾಟ ನಡೆಯುತ್ತಿದೆ. ಮಹದಾಯಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಈವರೆಗೆ ಮಧ್ಯಪ್ರವೇಶ ಮಾಡಿಲ್ಲ. ದೇಶದ ಮುಂದೆ ಗಂಭೀರ ರಾಜಕೀಯ ಸವಾಲುಗಳು ಇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry