ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

7

ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

Published:
Updated:
ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

ಜೇವರ್ಗಿ: ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಿದರೆ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಶುಕ್ರವಾರ ಪಟ್ಟಣದ ದೇವರಮನಿ ಲೇಔಟ್ ಮೈದಾನದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ವತಿಯಿಂದ ನಡೆದ ಕುಮಾರಪರ್ವ ಹಾಗೂ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂರು ದಶಕಗಳಿಂದ ಜನಪರ, ರೈತರ ಪರ ನಿರಂತರ ಹೋರಾಟ ನಡೆಸುತ್ತಿರುವ ಕೇದಾರಲಿಂಗಯ್ಯ ಹಿರೇಮಠ ಅವರನ್ನು ಜೇವರ್ಗಿ ಕ್ಷೇತ್ರದ ಜನರು ಶಾಸಕರನ್ನಾಗಿ ಆಯ್ಕೆ ಮಾಡಿ ಕಳಿಸಿದರೆ. ಅವರಿಗೆ ಸಚಿವ ಸ್ಥಾನ ನೀಡಲಾಗುವುದು. ನಾನು ರಾಜ್ಯದ ಮುಖ್ಯಮಂತ್ರಿಯಾದರೆ, ವಿಧಾನಸೌಧದಲ್ಲಿ ಕೂತು ಕಾಲಹರಣ ಮಾಡಲ್ಲ’ ಎಂದರು.

‘ಗ್ರಾಮ ವಾಸ್ತವ್ಯದ ಮೂಲಕ ಜನಸಾಮಾನ್ಯರ ಬಳಿಗೆ ತೆರಳಿ ಅವರ ಸಮಸ್ಯೆ ಆಲಿಸಿದ್ದೇನೆ. ರಾಜ್ಯದಲ್ಲಿ ಜೆಡಿಎಸ್‌ಗೆ 113 ಸ್ಥಾನಗಳನ್ನು ಗೆಲ್ಲಿಸುವ ಉದ್ದೇಶದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಜೆಡಿಎಸ್‌ ಸರ್ಕಾರ ರಚನೆಯಾದರೆ ಇಸ್ರೇಲ್ ಮಾದರಿಯಲ್ಲಿ ಕೃಷಿ ಪದ್ಧತಿ ಜಾರಿಗೆ ತರಲಾಗುವುದು’ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ನೀಡಬೇಡಿ ಎಂದು ಅವರು ಮನವಿ ಮಾಡಿದರು. ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ತಾಲ್ಲೂಕಿನ ಮತದಾರರಿಗೆ ಮನವಿ ಮಾಡಿದರು. ಬಹಿರಂಗ ಸಭೆಗೂ ಮುಂಚೆ ಪಟ್ಟಣದ ರಿಲಯನ್ಸ್ ಬಂಕ್ ನಿಂದ ವೇದಿಕೆವರೆಗೆ ಬೈಕ್ ರ‍್ಯಾಲಿ ನಡೆಯಿತು.

ಸಮಾವೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಜನ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಸಚಿವರಾದ ಎಂ.ಸಿ.ಮನಗೂಳಿ, ಬಂಡೆಪ್ಪ ಕಾಶಂಪುರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್,

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಹಿರೇಮಠ, ದೇವೆಗೌಡ ತೆಲ್ಲೂರ್, ಮನೋಹರ ಪೊದ್ದಾರ್, ನಾಸೀರ್ ಹುಸೇನ್ ಉಸ್ತಾದ್, ಅಮೀನರೆಡ್ಡಿ ಯಾಳಗಿ, ಅಲ್ತಾಫ್ ಮಹಿಮೂದ್ ಸಾಬ್, ಉಸ್ತಾದ್ ವದಾಹತ್ ಹುಸೇನ್, ನಿಖಿತರಾಜ್ ಮೌರ್ಯ, ಬಸವರಾಜ ಖಾನಗೌಡ, ಶಂಕರ ಕಟ್ಟಿಸಂಗಾವಿ, ಎಸ್.ಎಸ್.ಸಲಗರ್, ಮಹಿಬೂಬ್ ಇನಾಮದಾರ, ಶೇಖ್ ಫರೀದ್ ಮಳ್ಳಿಕರ್,ಮಲ್ಲಿಕಾರ್ಜುನ ಕುಸ್ತಿ, ಶಿವಾನಂದ ದ್ಯಾಮಗೊಂಡ, ಶರಣು ಹೊಸಮನಿ, ಎಸ್.ಕೆ.ಹೇರೂರ, ಪ್ರಭು ಜಾಧವ್, ಸದಾನಂದ ಪಾಟೀಲ, ಚಂದ್ರಶೇಖರ ಮಲ್ಲಾಬಾದ್, ಮಹಾಂತಯ್ಯ ಹಿರೇಮಠ, ನಿಂಗಣ್ಣ ರದ್ದೇವಾಡಗಿ, ಸಿದ್ದು ಮಾವನೂರ, ಶಿವಶಂಕರ ಜವಳಗಾ, ಮಹ್ಮದ್ ಹನೀಫ್ ಬಾಬಾ, ಭಗವಂತರಾಯಗೌಡ ಅಂಕಲಗಾ, ರುದ್ರಗೌಡ ಹಾವಳಗಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸದಾಶಿವ ಆಯೋಗ ತಿರಸ್ಕಾರಕ್ಕೆ ಮನವಿ

ಜೇವರ್ಗಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬಂಜಾರಾ ಸೇವಾ ಸಂಘ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

‘ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಕಾರಣ ತಾವು ಸದಾಶಿವ ಆಯೋಗದ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಅವರು ಕೋರಿದರು.

ಬಂಜಾರಾ ಸೇವಾ ಸಂಘದ ಅಧ್ಯಕ್ಷ ಪ್ರಭು ಜಾಧವ್, ಧನರಾಜ್ ರಾಠೋಡ, ಲಕ್ಷ್ಮಣ ಪವಾರ ಮಾವನೂರ, ಚಂದ್ರಶೇಖರ ರಾಠೋಡ ಬಳಬಟ್ಟಿ, ಬಾಬುರಾವ್ ಜಾಧವ್ ಜೈನಾಪುರ, ಮಾನಸಿಂಗ್ ಮುತ್ತಕೋಡ, ಆಕಾಶ ಕಾಖಂಡಕಿ, ಎಂ.ಎಸ್.ಜಾಧವ್ ಉಪಸ್ಥಿತರಿದ್ದರು.

* *

ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ದುರಾಡಳಿತದಿಂದ ಬೇಸತ್ತ ರಾಜ್ಯದ ಜನರು ಜೆಡಿಎಸ್‌ಗೆ ಒಮ್ಮೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ರಾಜ್ಯದೆಲ್ಲೆಡೆ ಜೆಡಿಎಸ್ ಪರ ಅಲೆ ಎದ್ದಿದೆ.

ಎಚ್.ಡಿ.ಕುಮಾರಸ್ವಾಮಿ

ಅಧ್ಯಕ್ಷ, ಜೆಡಿಎಸ್‌ ರಾಜ್ಯ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry