ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

7

ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

Published:
Updated:
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

ಕೊಪ್ಪಳ: ರಾಜ್ಯದಲ್ಲಿ ಹತ್ಯೆಗಳು ಮತ್ತು ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಆದರೆ ರಾಜ್ಯ ಸರ್ಕಾರ ಇವುಗಳ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾದ  ಉಸ್ತುವಾರಿ ರಮೇಶ ನಾಯ್ಡು ಹೇಳಿದರು.

ನಗರದ ಹೊಸಪೇಟೆ ರಸ್ತೆಯಲ್ಲಿ ಶನಿವಾರ ಜಿಲ್ಲಾ ಬಿಜೆಪಿ ಹಾಗೂ ಯುವ ಮೋರ್ಚಾದ ಆಶ್ರಯದಲ್ಲಿ ಕೃಷ್ಣಾ ಬಿ.ಸ್ಕೀಂ ಕೊಪ್ಪಳ ಏತ ನೀರಾವರಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಒತ್ತಾಯಿಸಿ 'ನೀರು ಹರಿಸಿ ರೈತರ ಉಸಿರು ಉಳಿಸಿ' ಎಂಬ ಘೋಷವಾಕ್ಯದ ಅಡಿ ನಡೆದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹತ್ಯೆಗಳು ರಾಜಕೀಯ ಕಾರಣಕ್ಕಾಗಿ ಆಗಿವೆ. ಸಾಲಬಾಧೆಗೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇವುಗಳನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬದಲಿಗೆ ಹತ್ಯೆ ಮಾಡುವವರಿಗೆ ರಕ್ಷಣೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅವರಿಗೆ ಆಡಳಿತ ನಡೆಸಲು ಅರ್ಹತೆ ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆ ನನ್ನದು. ಕೃಷ್ಣ ನದಿಯ ನೀರನ್ನೇ ನಾವು ಬಳಸುತ್ತೇವೆ. ಆದರೆ, ಇಲ್ಲಿಂದ ಬರಿ 60 ಕಿ.ಮೀ ದೂರದಲ್ಲಿರುವ ಕೃಷ್ಣೆಯ ನೀರು ಕೊಪ್ಪಳ ಭಾಗಕ್ಕೆ ಸಿಗುತ್ತಿಲ್ಲ. ಈ ಶಾಂತಿಯುತವಾದ ಪಾದಾಯಾತ್ರೆಯಲ್ಲಿ ರೈತನ ಮಗನಾಗಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ. ರೈತರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಎಲ್ಲರ ಹಸಿವು ನೀಗುತ್ತದೆ. ಈ ನಿಟ್ಟಿನಲ್ಲಿ ರೈತ ಸ್ನೇಹಿ ಬಿ.ಎಸ್‍.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿ, ಈ ಭಾಗದ ನಾವು ಅತಿವೃಷ್ಟಿ, ಅನಾವೃಷ್ಟಿಯ ಕಾರಣದಿಂದಾಗಿ ನಮ್ಮದು ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ್ದೇವೆ. ಇಲ್ಲಿನ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಂದಿನ ಸಿಎಂ ಜಗದೀಶ ಶೆಟ್ಟರ್‍ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸಿಂಗಟಾಲೂರು ಏತ ನೀರಾವರಿ ಮತ್ತು ಕೃಷ್ಣಾ ಬಿ.ಸ್ಕೀಂ ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು. ಇದರಿಂದ ಈ ಭಾಗದ ಎಲ್ಲ ರೈತರಿಗೂ ಖುಷಿ ಆಯಿತು. ಆದರೆ, ಮುಂದೆ ಈ ವಿಷಯವನ್ನೇ ಮುಂದಿಟ್ಟುಕೊಂಡು ಬಂದ ಕಾಂಗ್ರೆಸ್‍ ಸರ್ಕಾರ ಯೋಜನೆಗೆ ಮಹತ್ವ ನೀಡಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ 'ನಮ್ಮ ನಡಿಗೆ ಕೃಷ್ಣೆಯ ಕಡೆಗೆ' ಎಂದು ಬಳ್ಳಾರಿಯಿಂದ ಬಾಗಲಕೋಟೆಯವರೆಗೆ ಕಾಲ್ನಡಿಗೆ ನಡೆಸಿದರು. ಅಂದು ಅವರು ಈ ಯೋಜನೆಗೆ ಪ್ರತಿವರ್ಷ ₹ 10 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಕೂಡಲ ಸಂಗಮದಲ್ಲಿ ದೇವರ ಮೇಲೆ ಆಣೆ ಮಾಡಿದ್ದರು. 4 ವರ್ಷದಲ್ಲಿ ₹ 6.5 ಸಾವಿರ ಕೋಟಿ ಮಾತ್ರ ಖರ್ಚು ಮಾಡುವ ಮೂಲಕ ಕಾಂಗ್ರೆಸ್‍ ರೈತರ ಭರವಸೆ ಹುಸಿಗೊಳಿಸಿದೆ. ಇದನ್ನು ಖಂಡಿಸಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.  ಫೆಬ್ರುವರಿ ಅಂತ್ಯದ ಒಳಗೆ ಹಣ ಬಿಡುಗಡೆ ಮಾಡದಿದ್ದರೆ ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಶಾಸಕ ಇಕ್ಬಾಲ್‍ ಅನ್ಸಾರಿ ಪೊಲೀಸರ ಮೇಲೆ ಒತ್ತಡ ಹಾಕಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಅವರು ಇಕ್‍ ಬಾರ್‍ ಅನ್ಸಾರಿ ಆಗಿದ್ದಾರೆ ಎಂದರು.

ಸಂಸದ ಸಂಗಣ್ಣ ಕರಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್‍, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೆ.ಶರಣಪ್ಪ, ಮಾಜಿ ಸಂಸದ ಶಿವರಾಮಗೌಡ, ಮುಖಂಡರಾದ ಅಂದಣ್ಣ ಅಗಡಿ, ಬಸವರಾಜ್‍ ದಡೇಸ್ಗೂರ್‍, ವಿಧಾನಪರಿಷತ್‌ ಸದಸ್ಯ ಅಮರನಾಥ್ ಪಾಟೀಲ, ಹಾಲಪ್ಪ ಆಚಾರ್‍, ಚಂದ್ರಶೇಖರ್‍ ಕವಲೂರು, ಸಿ.ವಿ.ಚಂದ್ರಶೇಖರ್‍, ನವೀನ್‍ ಗುಳಗಣ್ಣನವರ, ಗಿರೇಗೌಡ್ರ ಇದ್ದರು.

ಪಟಾಕಿ ಸಿಡಿಸಿ ಸಂಭ್ರಮ: ಕೃಷ್ಣಾ ಬಿ.ಸ್ಕೀಂ, ಕೊಪ್ಪಳ ಏತ ನೀರಾವರಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮತ್ತು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿರುವ ಸು‍ಳ್ಳು ಮೊಕದ್ದಮೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕುಷ್ಟಗಿಯ ಕಲಾಲ ಬಂಡಿಯಿಂದ ಜ.17ರಂದು ಆರಂಭವಾದ ಬಿಜೆಪಿ ಪಾದಯಾತ್ರೆ ಶನಿವಾರ ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅಶೋಕ ವೃತ್ತ ಹಾಗೂ ಬಸವೇಶ್ವರ ವೃತ್ತದ ಬಳಿ ಪಟಾಕಿ ಸಿಡಿಸಿದರು.

ಪಟಾಕಿ ಸಿಡಿಸಿ ಸಂಭ್ರಮ

ಕೃಷ್ಣಾ ಬಿ.ಸ್ಕೀಂ, ಕೊಪ್ಪಳ ಏತ ನೀರಾವರಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮತ್ತು ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿರುವ ಸು‍ಳ್ಳು ಮೊಕದ್ದಮೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕುಷ್ಟಗಿಯ ಕಲಾಲ ಬಂಡಿಯಿಂದ ಜ.17ರಂದು ಆರಂಭವಾದ ಬಿಜೆಪಿ ಪಾದಯಾತ್ರೆ ಶನಿವಾರ ಕೊಪ್ಪಳ ನಗರಕ್ಕೆ ಆಗಮಿಸಿತು. ನಾಲ್ಕು ದಿನಗಳ ಕಾಲ ಪಾದಯಾತ್ರೆಯಲ್ಲಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು. ಪಾದಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಅಶೋಕ ವೃತ್ತ ಹಾಗೂ ಬಸವೇಶ್ವರ ವೃತ್ತದ ಬಳಿ ಪಟಾಕಿ ಸಿಡಿಸಿದರು.

* * 

ಎರಡೂ ಏತ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಗೆ ಪಾದಯಾತ್ರೆ ಮೂಲಕ ಎಚ್ಚರಿಸಿದ್ದೇವೆ. ಹಣ ಬಿಡುಗಡೆ ಮಾಡದಿದ್ದರೆ ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಶರಣು ತಳ್ಳಿಕೇರಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಯುವ ಮೋರ್ಚಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry