4

ಐಪಿಎಲ್‌ಗೂ ಯುಡಿಆರ್‌ಎಸ್ ಕಣ್ಗಾವಲು..

Published:
Updated:
ಐಪಿಎಲ್‌ಗೂ ಯುಡಿಆರ್‌ಎಸ್ ಕಣ್ಗಾವಲು..

ಹತ್ತು ವರ್ಷಗಳ ಹಿಂದಿನ ಮಾತು. ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಆಗಿನ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ವಿಪರೀತ ಅಸಮಾಧಾನಗೊಂಡಿದ್ದರು. ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ವಿರುದ್ಧ ಟೀಕೆ ಮಾಡಿದ್ದರು. ನಂತರದ  ಏಳು ವರ್ಷಗಳ ಕಾಲ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಆರ್‌ಎಸ್ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸುತರಾಂ ಒಪ್ಪಿರಲಿಲ್ಲ. ತಂತ್ರಜ್ಞಾನ ಅಳವಡಿಕೆಯಲ್ಲಿ ಹಲವು ಬದಲಾವಣೆಗಳ ಬೇಡಿಕೆ ಇಟ್ಟಿತ್ತು.

14 ತಿಂಗಳುಗಳ ಹಿಂದಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ನಿಯಮ ಅನುಷ್ಠಾನಗೊಳಿಸಲು ಒಪ್ಪಿತ್ತು. ಇದೀಗ ಬಿಸಿಸಿಐ ಮತ್ತೊಂದು ಹೆಜ್ಜೆ  ಇಡಲು ಹೊರಟಿದೆ. ಈ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯಲ್ಲಿ ಡಿಆರ್‌ಎಸ್‌ ಜಾರಿಗೆ ತರುವ ಸಿದ್ಧತೆ ನಡೆಸಿದೆ. ಇದಕ್ಕೆ ಪೂರ್ವಭಾವಿಯಾಗಿ ಹೋದ ತಿಂಗಳು ವಿಶಾಖಪಟ್ಟಣದಲ್ಲಿ ಹತ್ತು ಜನ ಅಂಪೈರ್‌ಗಳ ಕಾರ್ಯಾಗಾರವನ್ನೂ ನಡೆಸಲಾಗಿತ್ತು. ಹೋದ ವರ್ಷದ ಐಪಿಎಲ್‌ನಲ್ಲಿ ಡಿಆರ್‌ಎಸ್ ಜಾರಿಗೊಳ್ಳುವ ಮಾತುಗಳು ಕೇಳಿಬಂದಿದ್ದವು. ಆದರೆ ನಂತರ ಅದು ಕಾರ್ಯಗತವಾಗಿರಲಿಲ್ಲ.

ಸಮಯ ಹೆಚ್ಚಳವಾಗುವುದೇ?

ಸ್ಪಾಟ್‌ ಫಿಕ್ಸಿಂಗ್ ಮತ್ತಿತರ ಹಗರಣಗಳು ಸದ್ದು ಮಾಡಿದರೂ ಐಪಿಎಲ್‌ ಪ್ರಖ್ಯಾತಿ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಅಲ್ಲಗಳೆಯಲಾಗದು. ಆಡುವ ಹುಡುಗರಿಗೆ ಹಣದ ಹೊಳೆ, ಪ್ರಾಯೋಜಕರಿಗೆ ಪ್ರಚಾರದ ಸುಗ್ಗಿ ಮತ್ತು ನೋಡುಗರಿಗೆ ಭರ್ಜರಿ ಮನರಂಜನೆ ನೀಡುವ ಟೂರ್ನಿಯಲ್ಲಿ ಪಾರದರ್ಶಕತೆ ತರುವ ಸವಾಲು ಹೆಚ್ಚಿದೆ. ಟ್ವೆಂಟಿ–20  ಮಾದರಿಯ ಪಂದ್ಯಗಳಲ್ಲಿ ಆಟದ ವೇಗ ಹೆಚ್ಚಿರುತ್ತದೆ. ಅದಕ್ಕೆ ತಕ್ಕಂತೆ  ಅಂಪೈರ್‌ಗಳೂ ನಿರ್ಣಯ ನೀಡಬೇಕಾಗುತ್ತದೆ. ಮಾನವಸಹಜ ತಪ್ಪುಗಳಾಗುತ್ತವೆ. ಆದರೆ ಅದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿರ್ಣಯಗಳನ್ನು ಪ್ರಶ್ನಿಸಲು ಆಟಗಾರರಿಗೆ ಅವಕಾಶ ನೀಡಲು ಡಿಆರ್‌ಎಸ್ ಸೂಕ್ತ.

‘ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿಯೂ ಡಿಆರ್‌ಎಸ್  ಜಾರಿಗೆ ತರುವುದು ಒಳ್ಳೆಯದೇ. ಇದರಲ್ಲಿ ಕೆಲವು ವಿಷಯಗಳ ಕುರಿತು ಚಿಂತನೆ ನಡೆಸುವ ಅವಶ್ಯಕತೆಯೂ ಇದೆ. ಐಪಿಎಲ್‌ನಲ್ಲಿ ಬಂದರೂ ಒಳ್ಳೆಯದೇ. ಆದರೆ ಇಲ್ಲಿ ಟ್ವೆಂಟಿ–20 ಮಾದರಿಯಲ್ಲಿ ಎರಡೂ ತಂಡಗಳಿಗೆ ತಲಾ ಒಂದು ಡಿಆರ್‌ಎಸ್ ಅವಕಾಶ ಕೊಟ್ಟರೆ ಅಂದಾಜು 8 ರಿಂದ 10 ನಿಮಿಷಗಳ ಅವಧಿ ಬೇಕಾಗಬಹುದು. ಆದ್ದರಿಂದ ಪಂದ್ಯದ ಅವಧಿಗೆ ಹೆಚ್ಚುವರಿ 10 ನಿಮಿಷಗಳನ್ನು ಸೇರ್ಪಡೆ ಮಾಡಿದರೆ ಅಷ್ಟರ ಮಟ್ಟಿಗೆ ಆಟದ ವೇಗ ಕಡಿಮೆಯಾಗುತ್ತದೆ. ಆದರೆ ನಿಖರ ನಿರ್ಣಯಗಳು ಸಿಗುವುದರಿಂದ ಟೂರ್ನಿಯ ಗುಣಮಟ್ಟ ಹೆಚ್ಚು ತ್ತದೆ’ ಎಂದು ಕರ್ನಾ ಟಕದ ಹಿರಿಯ ಅಂಪೈರ್ ವಿನೀತ್ ಕುಲಕರ್ಣಿ ಅಭಿಪ್ರಾಯ ಪಡುತ್ತಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಪಂದ್ಯಗಳಲ್ಲಿ ಡಿಆರ್ ಎಸ್‌ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎರಡೂ ತಂಡಗಳ ಆಟಗಾರರು ವಿಫಲರಾದರು. ಟೆಸ್ಟ್‌ನಲ್ಲಿ ಈ ನಿಯಮ ಜಾರಿಗೆ ಬಂದು ಸುಮಾರು ಒಂದೂವರೆ ವರ್ಷ ಕಳೆದರೂ ಇನ್ನೂ ಆಟಗಾರರಲ್ಲಿ ನಿಖರತೆ ಮೂಡಿಲ್ಲ. ಐಪಿಎಲ್‌ನಲ್ಲಿ ಪ್ರತಿಯೊಂದು ಎಸೆತದಲ್ಲಿಯೂ ರನ್ ಅಥವಾ ವಿಕೆಟ್ ಗಳಿಕೆಯ ಪೈಪೋಟಿ ತಾರಕಕ್ಕೇರಿರುತ್ತದೆ.

ಇಂತಹ ಸಂದರ್ಭದಲ್ಲಿ ಮುಖ್ಯವಾಗಿ ಬೌಲರ್, ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್‌ಗಳು ಡಿಆರ್‌ಎಸ್‌ ಅವಕಾಶ ಬಳಸಿಕೊಳ್ಳುವ ಸೂಕ್ಷ್ಮ ಮತ್ತು ಚಾಣಾಕ್ಷತೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ಫ್ರಾಂಚೈಸ್‌ಗಳು ತಮ್ಮ ಆಟಗಾರರಿಗೆ ವಿಶೇಷ ತರಬೇತಿ ನೀಡಬೇಕು ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಈ ವಾರ ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹಲವು ಹೊಸ ಪ್ರತಿಭೆಗಳು ಅವಕಾಶ ಗಿಟ್ಟಿಸುವ ನಿರೀಕ್ಷೆಯಲ್ಲಿವೆ. ಅನುಭವಿ ಹುಲಿಗಳು  ಹಣದ ದೊಡ್ಡ ಥೈಲಿ ಸಿಗುವ ಕನಸು ಕಾಣುತ್ತಿವೆ.  ಆ ನಂತರ ಎಂಟು ತಂಡಗಳು ಏಪ್ರಿಲ್‌ನಲ್ಲಿ ಕಣಕ್ಕಿಳಿಯಲಿವೆ. ಹೊಸ ತಂತ್ರಜ್ಞಾನದೊಂದಿಗೆ ಡಿಆರ್‌ಎಸ್‌ ಪದ್ಧತಿಯನ್ನೂ  ಅಂಗಳಕ್ಕಿಳಿಸಲು ಆಯೋಜಕರು ಸಿದ್ಧವಾಗುತ್ತಿದ್ದಾರೆ.ಎಲ್‌ಬಿಡಬ್ಲ್ಯುಗೆ ಮನವಿ ಸಲ್ಲಿಸಿದ ಬೌಲರ್‌

***

ಡಿಆರ್‌ಎಸ್‌ನ ಹಾದಿ

* 2008ರ ಜೂನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯಲ್ಲಿ ಡಿಆರ್‌ಎಸ್ ಪದ್ಧತಿಯನ್ನು ಪ್ರಾಯೋಗಿಕವಾಗಿ ಬಳಸಲಾಯಿತು.

* ಆಗಸ್ಟ್‌ನಲ್ಲಿ ಈ ಪದ್ಧತಿಯಲ್ಲಿ ಔಟಾದ ಮೊದಲ ಆಟಗಾರ ವೀರೇಂದ್ರ ಸೆಹ್ವಾಗ್. ಆ ಪ್ರಕರಣದಲ್ಲಿ ಅಂಪೈರ್ ಎಲ್‌ಬಿಡಬ್ಲ್ಯು ನೀಡಿರಲಿಲ್ಲ. ಆದರೆ ಶ್ರೀಲಂಕಾ ಡಿಆರ್‌ಎಸ್‌ಗೆ ಮನವಿ ಸಲ್ಲಿಸಿತ್ತು. ಅದರಲ್ಲಿ ಎಲ್‌ಬಿ ಆಗಿದ್ದು ಪತ್ತೆಯಾಗಿತ್ತು.

* 2009ರ ಮಾರ್ಚ್‌ನಲ್ಲಿ  ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಟೆಸ್ಟ್‌ನಲ್ಲಿ ಡಿಆರ್‌ಎಸ್‌ನಲ್ಲಿ ಹಾಟ್‌ಸ್ಪಾಟ್ ತಂತ್ರಜ್ಞಾನವನ್ನು ಐಸಿಸಿ ಅಳವಡಿಸಿತು.

* 2009ರ ನವೆಂಬರ್‌ನಲ್ಲಿ ಆತಿಥೇಯ ದೇಶಗಳು ಡಿಆರ್‌ಎಸ್ ವೆಚ್ಚ ಭರಿಸಬೇಕು ಎಂದು ನಿಯಮ ಮಾಡಿತು. ಆದರೆ ಅದಕ್ಕಾಗಿ ದುಬಾರಿ ವೆಚ್ಚವಾಗಲಿದೆ ಎಂದು ಕೆಲವು ದೇಶಗಳ ಕ್ರಿಕೆಟ್‌ ಸಂಸ್ಥೆಗಳು  ಆಕ್ಷೇಪಿಸಿದವು. ಅದರಲ್ಲಿ ಬಿಸಿಸಿಐ ಮುಂಚೂಣಿಯಲ್ಲಿತ್ತು.

* 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಡಿಆರ್‌ಎಸ್  ಜಾರಿಯಾಯಿತು.  ಎಲ್ಲ ಪಂದ್ಯಗಳಲ್ಲಿ ಬಾಲ್ ಟ್ರ್ಯಾಕಿಂಗ್ ಇತ್ತು.

* 2011ರ ಜೂನ್‌ನಲ್ಲಿ ಹಾಟ್‌ ಸ್ಪಾಟ್ ಇರುವ ಡಿಆರ್‌ಎಸ್‌ ಪದ್ಧತಿಯನ್ನು ಎಲ್ಲ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಜಾರಿಗೊಳಿಸಲು ಐಸಿಸಿ ಸೂಚಿಸಿತು. ಆದರೆ, ಬಿಸಿಸಿಐ ಅದನ್ನು ವಿರೋಧಿಸಿತು.

* 2015ರಲ್ಲಿ ಐಸಿಸಿ ತಾಂತ್ರಿಕ ಸಮಿತಿಯಲ್ಲಿರುವ ಅನಿಲ್ ಕುಂಬ್ಳೆ ಅವರ ತಂಡವು ಹಲವು ತಜ್ಞರ ಸಲಹೆಗಳನ್ನು ಪಡೆದು ನಿಯಮದಲ್ಲಿ ಹಲವು ಸುಧಾರಣೆಗಳನ್ನು ಮಾಡಿತು.

* 2016ರ ನವೆಂಬರ್‌ನಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಡಿಆರ್‌ಎಸ್‌ ಜಾರಿಗೊಳಿಸಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಮ್ಮತಿ ಸೂಚಿಸಿದರು. ನಂತರ ಏಕದಿನ ಸರಣಿಯಲ್ಲಿಯೂ ಜಾರಿಗೊಂಡಿತು.

***

ಕ್ರಿಕೆಟ್‌ನಲ್ಲಿ ಈಗಾಗಲೇ ಡಿಆರ್‌ಎಸ್‌ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಐಪಿಎಲ್‌ನಲ್ಲಿಯೂ ಬರಲಿ. ತಂತ್ರಜ್ಞಾನ ಬಳಕೆಯಲ್ಲಿರುವ ಕೆಲವು ಸಂಸ್ಯೆಗಳನ್ನು ಬಗೆಹರಿಸುವತ್ತಲೂ ಚಿಂತನೆ ಅಗತ್ಯ. ಒಟ್ಟಿನಲ್ಲಿ ಡಿಆರ್‌ಎಸ್‌ ಬಳಕೆಯಿಂದ ಆಟಗಾರರು ಮತ್ತು ಆಯೋಜಕರು ಇಬ್ಬರಿಗೂ ಶ್ರೇಯಸ್ಸಾಗಲಿದೆ.

–ಶಾವೀರ್ ತಾರಾಪುರ್, ಹಿರಿಯ ಅಂತರರಾಷ್ಟ್ರೀಯ ಅಂಪೈರ್

ಎಲ್‌ಬಿಡಬ್ಲ್ಯು ಕುರಿತ ಕೆಲವು ನಿರ್ಣಯಗಳು ಹೆಚ್ಚು ಪ್ರಶ್ನಾರ್ಹವಾಗಿರುತ್ತದೆ. ಇಲ್ಲಿ ತಂತ್ರಜ್ಞಾನವು ಮತ್ತಷ್ಟು ನಿಖರವಾಗುವ  ಅವಶ್ಯಕತೆ ಇದೆ. ಆದರೆ ಒಟ್ಟಿನಲ್ಲಿ ಇಂತಹ ಪದ್ಧತಿ ಇರುವುದು ಮುಖ್ಯ.

–ವಿನೀತ್ ಕುಲಕರ್ಣಿ, ಹಿರಿಯ ಅಂಪೈರ್

ನಿರ್ಣಯಗಳ ಕುರಿತು ಸಂಶಯ ಬಂದಾಗ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳು ಪ್ರಶ್ನಿಸಲು ಇದು ಸದವಕಾಶ. ಇದರಿಂದ ಆಟಗಾರರಿಗೆ ಹೆಚ್ಚು ಅನುಕೂಲ ಮತ್ತು ಫಲಿತಾಂಶವೂ ನಿಖರವಾಗಿ ಹೊರಹೊಮ್ಮುತ್ತದೆ.

–ದೊಡ್ಡಗಣೇಶ್, ಕೆಎಸ್‌ಸಿಎ ಆಯ್ಕೆ ಸಮಿತಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry