ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲಿಂಗ್‌ ಕಿಡಿ ಲುಂಗಿ ಗಿಡಿ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

2015ರಲ್ಲಿ ಡೆಹ್ರಾಡೂನ್‌ನಲ್ಲಿ ವಿಶ್ವ ಮಟ್ಟದ ಜೂನಿಯರ್ ಕ್ರಿಕೆಟ್ ಟೂರ್ನಿ ನಡೆಯಿತು. ವಿಶ್ವದ ಎಂಟು ಪ್ರತಿಷ್ಠಿತ ಕಾಲೇಜು ತಂಡಗಳು ಅಂತಿಮ ಹಂತದಲ್ಲಿ ಶ್ರಮ ಒರೆಗೆ ಹಚ್ಚಿ ನೋಡಿದವು. ಅವುಗಳಲ್ಲಿ ಗೆದ್ದ ತಂಡ ದಕ್ಷಿಣ ಆಫ್ರಿಕಾದ ಅಸುಪೋಲ್ ಟಕ್ಸ್. 

ದಕ್ಷಿಣ ಆಫ್ರಿಕಾದ ಟೈಟನ್ಸ್ ಎಂಬ ದೇಸಿ ತಂಡಕ್ಕೆ ಆಟಗಾರರನ್ನು ಪುಂಖಾನುಪುಂಖವಾಗಿ ಒದಗಿಸುತ್ತಾ ಬಂದಿರುವುದು ಈ ಅಸುಪೋಲ್ ಟಕ್ಸ್. ಎ.ಬಿ. ಡಿವಿಲಿಯರ್ಸ್, ಫಾಫ್ ಡುಪ್ಲೆಸಿ, ಮಾರ್ನ್‌ ಮಾರ್ಕೆಲ್, ಕ್ರಿಸ್ ಮಾರಿಸ್, ಏಡನ್ ಮಾರ್ಕರಮ್‌ ಹಾಗೂ ಲುಂಗಿ ಗಿಡಿ- ಇವರೆಲ್ಲ ಟೈಟನ್ಸ್ ಹುರಿಯಾಳುಗಳೇ. ಕೊನೆಯ ಇಬ್ಬರು ಈಗ ಮುಖ್ಯರಾಗುತ್ತಾರೆ. 2015ರಲ್ಲಿ ಡೆಹ್ರಾಡೂನ್ ನಲ್ಲಿ ಗೆದ್ದ ತಂಡದ ನಾಯಕ ಆಗಿದ್ದವರು ಮಾರ್ಕರಮ್‌. ಸ್ಟ್ರೈಕ್ ಬೌಲರ್ ಹೊಣೆಗಾರಿಕೆ ನಿಭಾಯಿಸಿದ್ದವರು ಲುಂಗಿ ಗಿಡಿ.

ಅವರಿಬ್ಬರಲ್ಲಿ ಗಿಡಿ ಸದ್ಯದ ಕಣ್ಮಣಿ. ಭಾರತದ ವಿರುದ್ಧ ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬರೀ 39 ರನ್ ಕೊಟ್ಟು, ಆರು ಬ್ಯಾಟ್ಸ್ ಮನ್‌ಗಳನ್ನು ಔಟ್ ಮಾಡಿದ್ದು ವಿಶೇಷ. ಚೊಚ್ಚಿಲ ಟೆಸ್ಟ್‌ನಲ್ಲೇ ಒಟ್ಟು 7 ವಿಕೆಟ್ ಗಳಿಸಿದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಸಂದಿತು.

ಗಿಡಿ ಬಡ ಕುಟುಂಬದ ಹುಡುಗ. ಅವರ ಅಮ್ಮ ಮನೆಗೆಲಸ ಮಾಡಿ ಮಗನನ್ನು ಸಾಕಿದರು. ಅಪ್ಪನಿಗೆ ಹೇಳಿಕೊಳ್ಳುವಂಥ ಕೆಲಸವೇನು ಇರಲಿಲ್ಲ. ವಿದ್ಯಾರ್ಥಿವೇತನ ಪಡೆದು ಹಿಲ್ಟನ್ ಕಾಲೇಜಿನಲ್ಲಿ ಓದಿದ ಹುಡುಗನಿಗೆ ಕ್ರಿಕೆಟ್ ಆಮ್ಲಜನಕವಾಗಿ ಒದಗಿಬಂದಿತು. 2015ರಲ್ಲಿ ನಾರ್ದನ್ಸ್ ಕ್ರಿಕೆಟ್ ತಂಡದ ಪರವಾಗಿ ಆಡಲು ಆಯ್ಕೆಯಾಗಿ ಟ್ವೆಂಟಿ-20 ಆಟದಲ್ಲಿ ಪಳಗಿದರು. 2016ರಲ್ಲಿ ಆಫ್ರಿಕಾದ ಶ್ರೇಷ್ಠ ಟ್ವೆಂಟಿ-20 ಆಟಗಾರ ಎಂಬ ಗೌರವವೂ ಅವರದ್ದಾಯಿತು. ಕ್ವಾಜುಲು ನಟಾಲ್ ಪ್ರಾಂತ್ಯದ ಯುವ ಕ್ರಿಕೆಟಿಗರಲ್ಲಿ ಸದ್ಯ ಚಾಲ್ತಿಯಲ್ಲಿರುವ ಹೆಸರು ಲುಂಗಿ. ಪ್ರಿಟೋರಿಯಾ ವಿಶ್ವವಿದ್ಯಾಲಯದಲ್ಲಿ ಕ್ರಿಕೆಟ್ ಕೌಶಲಗಳನ್ನು ಉತ್ತಮಪಡಿಸಿಕೊಂಡ ಅವರು ಪಟಪಟನೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಬಂದವರು.

ಕಳೆದ ವರ್ಷ ಜನವರಿಯಲ್ಲಿ ಶ್ರಿಲಂಕಾ ಎದುರು ಟ್ವೆಂಟಿ-20 ಕ್ರಿಕೆಟ್ ಆಡಲು ಲುಂಗಿ ಆಯ್ಕೆಯಾದರು. ಮೊದಲ ಪಂದ್ಯದಲ್ಲೇ ಶ್ರೇಷ್ಠ ಆಟಗಾರ ಗೌರವ ಅವರದ್ದಾಯಿತು. ಏಕದಿನ ಪಂದ್ಯಗಳ ಸರಣಿಗೂ ಆಯ್ಕೆಯಾದರಾದರೂ ಹೊಟ್ಟೆಯ ಸ್ನಾಯುಗಳ ನೋವಿನಿಂದಾಗಿ ಆಟದಿಂದ ಹೊರಗುಳಿಯಬೇಕಾಯಿತು.

ಎರಡು ವಾರಗಳ ಹಿಂದೆ ಭಾರತದ ಎದುರು ಟೆಸ್ಟ್ ಆಡುವ ತಂಡ ಪ್ರಕಟವಾದಾಗ ಡೇಲ್ ಸ್ಟೇಯ್ನ್ ಹಾಗೂ ಮಾರ್ನ್ ಮಾರ್ಕೆಲ್ ಇಬ್ಬರೂ ಆಯ್ಕೆಯಾದರಲ್ಲ; ಆಗ ಕ್ರೀಡಾಭಿಮಾನಿಗಳು ಖುಷಿ ಪಟ್ಟಿದ್ದರು. ಆದರೆ, ಮೊದಲ ಟೆಸ್ಟ್ ಮುಗಿಯುವ ಮೊದಲೇ ಸ್ಟೇಯ್ನ್‌ ಪಾದದ ನೋವಿನಿಂದ ಕುಂಟತೊಡಗಿದಾಗ ಮುಂದೆ ಆ ಜಾಗಕ್ಕೆ ಯಾರು ಎಂಬ ಪ್ರಶ್ನೆ ಎದುರಾಯಿತು.

ಎರಡನೇ ಟೆಸ್ಟ್ ಪಂದ್ಯ ಶುರುವಾಗುವ 24 ಗಂಟೆ ಮೊದಲು ಲುಂಗಿ ಅವರಿಗೆ ಬುಲಾವು ಬಂದದ್ದು. ಕ್ರಿಸ್ ಮಾರಿಸ್ ಆಯ್ಕೆಯಾಗಬಹುದು ಎಂದೇ ಅನೇಕರು ಭಾವಿಸಿದ್ದರು. ಆದರೆ, 21 ವಯಸ್ಸಿನ ಲುಂಗಿ ಕಣಕ್ಕಿಳಿದಾಗ ಅನೇಕರಿಗೆ ಅಚ್ಚರಿ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಯ್ಕೆಗಾರರು ದೂರದೃಷ್ಟಿ ಇಟ್ಟುಕೊಂಡಿರುವುದು ಇದರಿಂದ ಸ್ಪಷ್ಟವಾಗಿದೆ. ಮಾರ್ಕೆಲ್ ಅವರಿಗೀಗ 33 ವರ್ಷ. ಫಿಲಾಂಡರ್‌ಗೂ 32 ತುಂಬಿದೆ. 22ರ ಹರೆಯದ ಕಗಿಸೊ ರಬಾಡ ಒಂದು ಕಡೆ. 21ರ ತುಪಾಕಿ ಲುಂಗಿ ಇನ್ನೊಂದು ಕಡೆ. ಈ ಇಬ್ಬರೂ ಕರಿ ಹುಡುಗರ ಬೌಲಿಂಗ್ ಜುಗಲ್ ಬಂದಿಯ ಭವಿಷ್ಯದ ಕುರಿತು ಕುತೂಹಲ ಮೂಡಿದೆ. ಸಲೀಸಾಗಿ ಪ್ರತಿ ಗಂಟೆಗೆ 140 ಕಿ.ಮೀ. ಕನಿಷ್ಠ ವೇಗದಲ್ಲಿ ಬೌಲ್ ಮಾಡಬಲ್ಲ ನೀಳಕಾಯದ ಲುಂಗಿ ಎಷ್ಟು ವರ್ಷ ತಂಡದ ಕಸುವಾಗಬಲ್ಲರೋ?

ವ್ಯತ್ಯಾಸವಂತೂ ಇಷ್ಟೆ: ರಬಾಡ ಅವರಪ್ಪ ವೈದ್ಯ, ಅಮ್ಮ ವಕೀಲೆ; ಲುಂಗಿಯ ಅಮ್ಮ ಮನೆಗೆಲಸದವರು, ಅಪ್ಪ ಕೂಲಿ ಕಾರ್ಮಿಕ.
***
ಲುಂಗಿ ಗಿಡಿ ಸಾಧನೆ

ಟೆಸ್ಟ್‌
ಪಂದ್ಯ 1
ಇನಿಂಗ್ಸ್‌ 2
ನೀಡಿದ ರನ್‌ 90
ವಿಕೆಟ್‌ 7
ಶ್ರೇಷ್ಠ ಬೌಲಿಂಗ್‌ 39ಕ್ಕೆ 6
ಇಕಾನಮಿ 3.41
ಸ್ಟ್ರೈಕ್‌ ರೇಟ್‌ 22.5

ಟ್ವೆಂಟಿ–20
ಪಂದ್ಯಗಳು 3
ನೀಡಿದ ರನ್‌ 44
ವಿಕೆಟ್‌ 6
ಶ್ರೇಷ್ಠ ಬೌಲಿಂಗ್‌ 19ಕ್ಕೆ4
ಇಕಾನಮಿ 5.50
ಸ್ಟ್ರೈಕ್ ರೇಟ್‌ 8.0

ಪ್ರಥಮ ದರ್ಜೆ
ಕ್ರಿಕೆಟ್‌

ಪಂದ್ಯಗಳು 10
ಇನಿಂಗ್ಸ್‌ 19
ನೀಡಿದ ರನ್‌ 724
ವಿಕೆಟ್‌ 38
ಶ್ರೇಷ್ಠ ಬೌಲಿಂಗ್‌ (ಇನಿಂಗ್ಸ್‌) 37ಕ್ಕೆ6
ಶ್ರೇಷ್ಠ ಬೌಲಿಂಗ್ (ಪಂದ್ಯ) 82ಕ್ಕೆ9
ಇಕಾನಮಿ 3.18
ಸ್ಟ್ರೈಕ್‌ ರೇಟ್‌ 35.9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT