ಲಿಂಗ ಸಮಾನತೆಗೆ ಮಿಶ್ರ ಹಾಕಿ

7

ಲಿಂಗ ಸಮಾನತೆಗೆ ಮಿಶ್ರ ಹಾಕಿ

Published:
Updated:
ಲಿಂಗ ಸಮಾನತೆಗೆ ಮಿಶ್ರ ಹಾಕಿ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವಕಪ್‌ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹೊಸ ಪ್ರಯೋಗವೊಂದನ್ನು ಮಾಡಲಾಯಿತು. ಪುರುಷ ಮತ್ತು ಮಹಿಳೆಯರ ಮಿಶ್ರ ವಿಭಾಗವನ್ನು ಈ ಚಾಂಪಿಯನ್‌ಷಿಪ್‌ನಲ್ಲಿ ಅಳವಡಿಸಲಾಯಿತು. ರೈಫಲ್‌ ಮತ್ತು ಪಿಸ್ತೂಲು ವಿಭಾಗಗಳೆರಡರಲ್ಲೂ ‘ಮಿಶ್ರ ಸ್ಪರ್ಧೆ’ ಏರ್ಪಡಿಸಿದ ಅಂತರರಾಷ್ಟ್ರೀಯ ಶೂಟಿಂಗ್ ಕ್ರೀಡಾ ಫೆಡರೇಷನ್‌ಗೆ (ಐಎಸ್‌ಎಸ್‌ಎಫ್‌) ಎಲ್ಲ ಕಡೆಯಿಂದ ಪ್ರಶಂಸೆಯೂ ವ್ಯಕ್ತ ವಾಯಿತು.

ಮುಂದಿನ ತಿಂಗಳಲ್ಲಿ ಇಂಥದೇ ಮೊತ್ತೊಂದು ಪ್ರಯೋ ಗಕ್ಕೆ ಭಾರತ ಸಾಕ್ಷಿ ಯಾಯಿತು. ಪುಣೆಯಲ್ಲಿ ನಡೆದ ಫೈವ್‌–ಎ ಸೈಡ್‌ (ಐದು ಮಂದಿಯ ತಂಡ) ಹಾಕಿ ಟೂರ್ನಿಯ ಕೊನೆಯಲ್ಲಿ ‘ಮಿಶ್ರ ಹಾಕಿ’ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಇದು ಕೂಡ ಕ್ರೀಡಾ ಕ್ಷೇತ್ರದಲ್ಲಿ ಸದ್ದು ಹಾಗೂ ಸುದ್ದಿ ಮಾಡಿತು.

ಕ್ರೀಡೆಯಲ್ಲಿ ಮಹಿಳೆಯರು ಸಾಧನೆಯ ಶಿಖರಗಳಲ್ಲಿ ಮಿಂಚು ತ್ತಿದ್ದರೂ ಅವರನ್ನು ಪುರುಷರಿಗೆ ಸಮಾನವಾಗಿ ಕಾಣುವ ಕಣ್ಣು ಗಳು ಕಡಿಮೆ. ಸಂಘಟಕರು ಕೂಡ ಮಹಿಳೆಯರ ವಿಭಾಗದ ಸ್ಪರ್ಧೆಗಳನ್ನು ಕಡೆಗಣಿಸುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಲಿಂಗ ಸಮಾನತೆಗಾಗಿ ನಡೆದ ಈ ಪ್ರಯೋಗಗಳು ಮಹಿಳಾ ಕ್ರೀಡಾಪಟುಗಳಿಗೆ ಹೊಸ ಚೇತನ ತುಂಬಿತು.ಮಿಶ್ರ ಹಾಕಿ ಟೂರ್ನಿಯ ಪಂದ್ಯವೊಂದರ ನೋಟ

ಒಲಿಂಪಿಕ್ಸ್‌ ಕಡೆಗೆ ಹೆಜ್ಜೆ...

ಈ ಪ್ರಯೋಗಗಳ ಹಿಂದೆ ಸ್ಪಷ್ಟ ಉದ್ದೇಶವಿದೆ. ವಿಶ್ವ ಒಲಿಂಪಿಕ್‌ ಸಂಸ್ಥೆ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿವಿಧ ಕ್ರೀಡೆಗಳಲ್ಲಿ ಪುರುಷ ಮತ್ತು ಮಹಿಳೆಯರ ಮಿಶ್ರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುವ ಚಿಂತನೆ ನಡೆಸಿದೆ. ಇದರ ಸಿದ್ಧತೆ ಎಂಬಂತೆ ಶೂಟಿಂಗ್ ಮತ್ತು ಹಾಕಿಯಲ್ಲಿ ಇದನ್ನು ಅಳವಡಿಸಲಾಗಿದೆ. ಮಿಶ್ರ ಶೂಟಿಂಗ್‌ನಲ್ಲಿ ವಿಶ್ವದ ಖ್ಯಾತ ಶೂಟರ್‌ಗಳು ಗಮನ ಸೆಳೆದರೆ ಮಿಶ್ರ ಹಾಕಿಯಲ್ಲಿ ರಾಷ್ಟ್ರದ ಎಂಟು ತಂಡಗಳು ಸೆಣಸಿದವು. 10 ಮೀಟರ್ ಏರ್ ಪಿಸ್ತೂಲು ವಿಭಾಗದಲ್ಲಿ ಭಾರತದ ಹೀನಾ ಸಿಧು ಮತ್ತು ಜಿತು ರಾಯ್‌ ಚಿನ್ನ ಗೆದ್ದು ದೇಶದ ಪರವಾಗಿ ದಾಖಲೆ ಪುಸ್ತಕದಲ್ಲಿ ಹೆಸರು ಗಳಿಸಿದರು. 10 ಮೀಟರ್ ಏರ್ ರೈಫಲ್‌ನಲ್ಲಿ ಚೀನಾದ ವೂ ಮಿಂಗ್‌ಯಾಂಗ್ ಮತ್ತು ಸೂ ಬುಹಾನ್‌ ಚಿನ್ನ ಗೆದ್ದರೆ ಟ್ರ್ಯಾಪ್‌ ವಿಭಾಗದಲ್ಲಿ ಸ್ಪೇನ್‌ನ ಆಂಟೊನಿಯೊ ಬೈಲಾನ್‌ ಮತ್ತು ಬೀಟ್ರಿಜ್‌ ಮಾರ್ಟಿನೆಜ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಮಿಶ್ರ ಹಾಕಿಯ ಫೈನಲ್‌ನಲ್ಲಿ ಮಹಾರಾಷ್ಟ್ರವನ್ನು ಎದುರಿಸಿದ ಕರ್ನಾಟಕ ರನ್ನರ್ಸ್‌ ಅಪ್ ಆಯಿತು. ಮಹಾರಾಷ್ಟ್ರಕ್ಕೆ ಐಶ್ವರ್ಯಾ ಚೌಹಾಣ್‌, ದೇವಿಂದರ್ ವಾಲ್ಮೀಕಿ, ವಿಕಾಸ್ ಪಿಳ್ಳೆ ಮತ್ತು ವಿಕ್ರಮ್‌ ಯಾದವ್‌ ಗೋಲು ಗಳಿಸಿಕೊಟ್ಟರೆ ಕರ್ನಾಟಕ ಗಳಿಸಿದ ಮೂರೂ ಗೋಲುಗಳು ಪುರುಷ ಆಟಗಾರ ಪ್ರಧಾನ್‌ ಸೋಮಣ್ಣ ಅವರ ಸಾಮರ್ಥ್ಯದಿಂದ ಬಂದಿದ್ದವು. ಆದರೆ ಹರಿಯಾಣ ವಿರುದ್ಧದ ಸೆಮಿಫೈನಲ್‌ನಲ್ಲಿ ಕರ್ನಾಟಕದ ಪರ ಪವಿತ್ರಾ ಮತ್ತು ಮೌಸೀನ್‌ ಗೋಲು ಗಳಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲೂ ಮೌಸೀನ್ ಯಶಸ್ಸು ಸಾಧಿಸಿದ್ದರು. ಈ ಟೂರ್ನಿಯಲ್ಲಿ ಆಡಿದ ಆಟಗಾರ್ತಿಯರು ‘ಇದೊಂದು ಅಪೂರ್ವ ಅನುಭವ, ಹೊಸ ವಿಚಾರಗಳ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ ಟೂರ್ನಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರು ಮಹಿಳೆಯರು ಕಡ್ಡಾಯ

ಮಿಶ್ರ ಹಾಕಿಯಲ್ಲಿ ಕೇವಲ ಐದು ಮಂದಿ ಆಟಗಾರರು ಇರುತ್ತಾರೆ. ಇದರಲ್ಲಿ ಇಬ್ಬರು ಮಹಿಳೆಯರು ಇರಬೇಕೆಂಬುದು ನಿಯಮ. ಗೋಲ್‌ಕೀಪರ್‌ ಮಹಿಳೆ ಅಥವಾ ಪುರುಷರ ಪೈಕಿ ಯಾರೂ ಆಗಬಹುದು. ಈ ಅವಕಾಶವನ್ನೂ ಮಹಿಳೆಗೆ ನೀಡಿದರೆ ತಂಡದಲ್ಲಿ ಮೂವರು ಮಹಿಳೆಯರು ಇದ್ದಂತಾಗುತ್ತದೆ.

ಮಿಶ್ರ ಹಾಕಿ 30 ನಿಮಿಷಗಳದ್ದಾಗಿರುತ್ತದೆ. ಪಂದ್ಯದಲ್ಲಿ ತಲಾ 10 ನಿಮಿಷಗಳ ಮೂರು ಅವಧಿ ಇರುತ್ತದೆ. ಪ್ರತಿ ಅವಧಿಯ ನಡುವೆ ಮೂರು ನಿಮಿಷಗಳ ವಿರಾಮ ಇರುತ್ತದೆ. ಸಾಮಾನ್ಯವಾಗಿ ಹಾಕಿಯಲ್ಲಿ ನಿಗದಿತ ಪ್ರದೇಶದಿಂದ (ಶೂಟಿಂಗ್ ವೃತ್ತ) ಮಾತ್ರ ಗೋಲು ಗಳಿಸಲು ಅವಕಾಶ ಇರುತ್ತದೆ. ಆದರೆ ಮಿಶ್ರ ಹಾಕಿಯಲ್ಲಿ ಅಂಗಣದ ಯಾವ ಭಾಗದಿಂದ ಬೇಕಾದರೂ ಚೆಂಡನ್ನು ಗುರಿಯತ್ತ ಹೊಡೆಯಬಹುದು.

***ಕೋಮಲಾ ಬಿ.ಎನ್‌.'ಅವಕಾಶಕ್ಕಾಗಿ ಕಾಯುತ್ತಿರುವೆ'

'ನಮ್ಮ ಆಟಕ್ಕೂ ಪುರುಷರ ಆಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರ ಶೈಲಿಯನ್ನು ಅಳವಡಿಸಿಕೊಳ್ಳಲು ಮಿಶ್ರ ಹಾಕಿ ಪ್ರಯೋಜನಕಾರಿಯಾಗಿದೆ. ಪುಣೆಯಲ್ಲಿ ನಾವು ಪುರುಷರ ಜೊತೆಗೂಡಿ ನಾಲ್ಕು ಪಂದ್ಯಗಳನ್ನು ಆಡಿದ್ದೇವೆ. ದೈಹಿಕವಾಗಿ ಸದೃಢರಿರುವ, ಫಿಟ್‌ನೆಸ್‌ನಲ್ಲಿ ನಮಗಿಂತ ಬಲಿಷ್ಠರಾಗಿರುವ ಪುರುಷರು ಅಂಗಣದಲ್ಲಿ ನಮ್ಮೊಂದಿಗೆ ಆಡುವಾಗ ತುಂಬ ಮೃದು ಸ್ವಭಾವದವರಂತೆ ಕಂಡುಬರುತ್ತಾರೆ. ಮಿಶ್ರ ಹಾಕಿಯಲ್ಲಿ ಅವರು ಒರಟಾಗಿ ವರ್ತಿಸಲಿಲ್ಲ. ಪುರುಷರ ಜೊತೆಗೂಡಿ ಆಡಿದ ಪಂದ್ಯಗಳಿಂದ ನಾವು ಹೊಸ ವಿಷಯಗಳನ್ನು ಸಾಕಷ್ಟು ಕಲಿತಿದ್ದೇವೆ. ಮಾನಸಿಕವಾಗಿ ಸಬಲರಾಗಲು ಆ ಟೂರ್ನಿ ನೆರವಾಗಿದೆ. ಹರಿಯಾಣ ವಿರುದ್ಧ ಆಡಿದ ಸೆಮಿಫೈನಲ್‌ ಪಂದ್ಯವಂತೂ ಮರೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲೂ ಇಂಥ ಟೂರ್ನಿಯನ್ನು ಆಯೋಜಿಸಿದರೆ ಒಳ್ಳೆಯದು. ಅಂಥ ಅವಕಾಶಕ್ಕಾಗಿ ಕಾಯುತ್ತಿರುವೆ' ಎನ್ನುತ್ತಾರೆ ರಾಜ್ಯದ ಆಟಗಾರ್ತಿ ಕೋಮಲಾ ಬಿ.ಎನ್‌.

***

ಬೆಂಗಳೂರಿನಲ್ಲಿ ಮಿಶ್ರ ಹಾಕಿ?

ಪುಣೆಯಲ್ಲಿ ಪ್ರಾಯೋಗಿಕವಾಗಿ ನಡೆದ ಮಿಶ್ರ ಹಾಕಿಯ ಎರಡನೇ ಆವೃತ್ತಿಗೆ ಬೆಂಗಳೂರು ಆತಿಥ್ಯ ವಹಿಸಲಿದೆಯೇ...? ಹೌದು. ಮಿಶ್ರ ಹಾಕಿಯನ್ನು ಈ ಬಾರಿ ರಾಜ್ಯದಲ್ಲಿ, ಅದರಲ್ಲೂ ರಾಜಧಾನಿಯಲ್ಲಿ ಆಯೋಜಿಸಲು ಪ್ರಯತ್ನ ನಡೆಯುತ್ತಿದೆ. ಇದನ್ನು ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ಖಚಿತಪಡಿಸಿದ್ದಾರೆ.

‘ಬೆಂಗಳೂರಿನಲ್ಲಿ ಈ ಬಾರಿ ಮಿಶ್ರ ಹಾಕಿ ಆಯೋಜಿಸುವ ಚಿಂತನೆ ಇದೆ. ಇದಕ್ಕಾಗಿ ಹಾಕಿ ಇಂಡಿಯಾಗೆ ಪ್ರಸ್ತಾಪ ಕಳುಹಿಸಲಾಗುವುದು. ಅನುಮತಿ ಲಭಿಸಿದರೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry