ಹೈದರಾಬಾದ್ ಹತ್ತಿರ ಬ್ಯಾಡ್ಮಿಂಟನ್ ದೂರ!

7

ಹೈದರಾಬಾದ್ ಹತ್ತಿರ ಬ್ಯಾಡ್ಮಿಂಟನ್ ದೂರ!

Published:
Updated:
ಹೈದರಾಬಾದ್ ಹತ್ತಿರ ಬ್ಯಾಡ್ಮಿಂಟನ್ ದೂರ!

ಬ್ಯಾಡ್ಮಿಂಟನ್ ‘ತವರು’ ಎಂದೇ ಹೆಸರಾಗಿರುವ ಹೈದರಾಬಾದ್‌ನಿಂದ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಜ್ವಾಲಾ ಗುಟ್ಟಾ, ಕಿದಂಬಿ ಶ್ರೀಕಾಂತ್ ಹೀಗೆ ಸಾಕಷ್ಟು ಕ್ರೀಡಾಪಟುಗಳು ಉದಯವಾಗಿದ್ದು, ರಾಷ್ಟ್ರ, ಅಂತರ ರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಅವರಿಂದ ಸ್ಫೂರ್ತಿ ಪಡೆದು ಸಾಕಷ್ಟು ಮಂದಿ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಆದರೆ, ಕೇವಲ ಮೂರೂವರೆ ಗಂಟೆಗಳ ಪ್ರಯಾಣದ ಅಂತರದಲ್ಲಿರುವ ಹೈದರಾಬಾದ್ ಕರ್ನಾಟಕ ಭಾಗದ ಕೇಂದ್ರಸ್ಥಾನವಾಗಿರುವ ಕಲಬುರ್ಗಿಯಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆ ಆಶಾದಾಯಕವಾಗಿಲ್ಲ.

ಈ ಭಾಗದ ಇತರ ಜಿಲ್ಲೆಗಳಲ್ಲಿಯೂ ಬ್ಯಾಡ್ಮಿಂಟನ್‌ಗೆ ಪ್ರೋತ್ಸಾಹ ಮತ್ತು ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ.

ಕಳೆದ ನಾಲ್ಕು ವರ್ಷಗಳ ಅಂತರದಲ್ಲಿ ಕಲಬುರ್ಗಿಯಲ್ಲಿ ಮೂರು ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಗಳು ನಡೆದಿವೆ. 2015ರ ಟೂರ್ನಿಯಲ್ಲಿ 1,100, 2016ರಲ್ಲಿ 1,260 ಮತ್ತು 2018ರಲ್ಲಿ 1,400 ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಟೂರ್ನಿಗಳಲ್ಲಿ ಹೈ.ಕ ಜಿಲ್ಲೆಗಳ ಬೆರಳೆಣಿಕೆಯಷ್ಟು ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದಾರೆ. ಜನವರಿ 21ರಂದು ಮುಕ್ತಾಯವಾದ ಈ ವರ್ಷದ ಟೂರ್ನಿಯಲ್ಲಿ ಕಲಬುರ್ಗಿಯ ನಾಲ್ಕು, ರಾಯಚೂರಿನ ಇಬ್ಬರು ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದರು.

ಕಲಬರ್ಗಿಯಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಸಾಕ್ಷಿ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ 25 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಆರು ಸಿಂಥೆಟಿಕ್ ಮ್ಯಾಟ್ ಬ್ಯಾಡ್ಮಿಂಟನ್ ಕೋರ್ಟ್‌ಗಳಿವೆ.

ರಾಯಚೂರಿನಲ್ಲಿ 2, ಬೀದರ್‌ನಲ್ಲಿ 4, ಕೊಪ್ಪಳದಲ್ಲಿ 1, ಬಳ್ಳಾರಿಯಲ್ಲಿ ನಾಲ್ಕು ಬ್ಯಾಡ್ಮಿಂಟನ್‌ ಕೋರ್ಟ್‌ಗಳಿವೆ. ಒಟ್ಟು 150ಕ್ಕೂ ಹೆಚ್ಚು ಮಂದಿ ತರಬೇತಿ ಪಡೆಯುತ್ತಿದ್ದಾರೆ. ಯಾದಗಿರಿಯಲ್ಲಿ ಕೋರ್ಟ್‌ ಸೇರಿ ಯಾವುದೇ ಮೂಲಸೌಕರ್ಯ ಇಲ್ಲ. ಕಲಬುರ್ಗಿಯ ಇಬ್ಬರು ಕ್ರೀಡಾಪಟುಗಳು ಹೈದರಾ ಬಾದ್‌ನ ಗೋವರ್ಧನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಸ್ಥಳೀಯ ಆಟಗಾರ ಶುಭಂ ಬಳ್ಳೋಡ್ಗಿಕರ್ 2015ರಲ್ಲಿ 13 ವರ್ಷದೊಳಗಿನವರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ. ಆದರೆ, ಈ ಬಾರಿ ಅರ್ಹತಾ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದಾನೆ. ಆತ ಈಗ ಒಂಭತ್ತನೇ ತರಗತಿ ಓದುತ್ತಿದ್ದು, ಬ್ಯಾಡ್ಮಿಂಟನ್ ಅಭ್ಯಾಸಕ್ಕೆ ಹೆಚ್ಚು ಸಮಯ ಸಿಗುತ್ತಿಲ್ಲ. ಈ ಭಾಗದಲ್ಲಿ ಪೋಷಕರು, ಶಾಲೆಗಳಿಂದಲೂ ಬ್ಯಾಡ್ಮಿಂಟನ್‌ಗೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಮಕ್ಕಳಿಗೆ ಆಟಕ್ಕಿಂತ ಓದಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಬೇಸರದಿಂದ ನುಡಿಯುತ್ತಾರೆ ಟೂರ್ನಿಯ ಸಂಘಟಕ ಯೋಗೇಶ್ ಪಾಟೀಲ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಐಎ) ಕೇವಲ ಮೆಟ್ರೊ ನಗರಗಳು, ಏರ್‌ಪೋರ್ಟ್ ಇರುವ ನಗರಗಳಿಗೆ ಮಾತ್ರ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸಲು ಅನುಮತಿ ನೀಡುತ್ತಿತ್ತು. 2015ರಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮೂಲಕ ಬಿಐಎಗೆ ಮನವಿ ಸಲ್ಲಿಸಿ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲು ಅನುಮತಿ ಪಡೆಯಲಾಯಿತು. ಆ ಟೂರ್ನಿ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನೈಸಾ ಕಾರ್ಯಪ್ಪ ಅವರ ಆಟದ ವೈಖರಿ. ಪ್ರಜಾವಾಣಿ ಚಿತ್ರಗಳು/ಪ್ರಶಾಂತ್ ಎಚ್‌.ಜಿ

ಅದಾದ ಬಳಿಕ ಆಯೋಜಿಸಿದ ಎರಡು ಟೂರ್ನಿಗಳು ಯಶಸ್ಸು ಕಂಡವು. ಈಗ ಟೂರ್ನಿ ಆಯೋಜನೆಯಲ್ಲಿ ಕಲಬುರ್ಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಎನ್ನುತ್ತಾರೆ ಅವರು.

ಟೂರ್ನಿ ಆಯೋಜಿಸಲು ಕನಿಷ್ಠ ₹ 25–30 ಲಕ್ಷ ವೆಚ್ಚವಾಗುತ್ತದೆ. ಬಿಐಎ ನಿಯಮಾವಳಿ ಪ್ರಕಾರ ಸಿಂಗಲ್ಸ್‌ನಲ್ಲಿ ಒಂದರಿಂದ 16 ರ‍್ಯಾಂಕಿಂಗ್‌ ಮತ್ತು ಡಬಲ್ಸ್‌ನಲ್ಲಿ 1 ರಿಂದ 8 ರ‍್ಯಾಂಕಿಂಗ್‌ ಇರುವ ಆಟಗಾರರಿಗೆ ಊಟದ ವ್ಯವಸ್ಥೆ ಮಾಡಬೇಕು. ಆದರೆ, ಆಟಗಾರರು, ಅವರ ಪೋಷಕರು, ಕೋಚ್‌, ಸಿಬ್ಬಂದಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದೇವೆ. ಇದಕ್ಕೆ ಬೇರೆ ಬೇರೆ ರಾಜ್ಯಗಳ ಕ್ರೀಡಾಪಟುಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿ 1998ರಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆರಂಭ ವಾಯಿತು. ಅಲ್ಲಿಂದ 2007ರವರೆಗೆ ಕನಿಷ್ಠ ತಾಲ್ಲೂಕುಮಟ್ಟದ ಟೂರ್ನಿಗಳು ಸಹ ನಡೆಯಲಿಲ್ಲ.

ಆ ನಂತರ ಟೂರ್ನಿಗಳು ನಡೆಯುತ್ತಿವೆ. ಬ್ಯಾಡ್ಮಿಂಟನ್ ಬೆಳವಣಿಗೆಗೆ ಈ ಭಾಗದಲ್ಲಿ ಹೆಚ್ಚು ಪ್ರೋತ್ಸಾಹ, ಜಾಗೃತಿ ಅಗತ್ಯ ಮೂಡಿಸುವುದು ಅಗತ್ಯ ಎಂದು ಪೋಷಕರೊಬ್ಬರು ಹೇಳಿದರು.

***

ಹೈ.ಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸ್ಥಾಪನೆಗೆ ಚಿಂತನೆ

ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬ್ಯಾಡ್ಮಿಂಟನ್‌ಗೆ ಹೆಚ್ಚಿನ ಪ್ರೋತ್ಸಾಹ, ಮೂಲಸೌಕರ್ಯ ಕಲ್ಪಿಸಬೇಕಾದ ಅಗತ್ಯ ಇದೆ. ಆ ನಿಟ್ಟಿನಲ್ಲಿ ಕೆಲಸ ಮಾಡಲು ಹೈ.ಕ ಬ್ಯಾಡ್ಮಿಂಟನ್‌ ಸಂಸ್ಥೆ ಸ್ಥಾಪಿಸುವ ಚಿಂತನೆ ನಡೆದಿದೆ ಎನ್ನುತ್ತಾರೆ ಯೋಗೇಶ್ ಪಾಟೀಲ್‌.

ಬೈಲಾ ಸಹ ಸಿದ್ಧವಾಗಿದೆ. ಪ್ರತಿ ಜಿಲ್ಲೆಯಿಂದ 6 ಜನ ಸದಸ್ಯರು ಅಸೋಸಿಯಷೇನ್‌ನಲ್ಲಿ ಇರಲಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆದು ಈ ಭಾಗದ ಆರೂ ಜಿಲ್ಲೆಗಳಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿ ಆಯೋಜನೆ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುವುದು. ಈ ಭಾಗದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂಬುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.15 ವರ್ಷದೊಳಗಿನ ಅಖಿಲ ಭಾರತ ಸಬ್ ಜೂನಿಯರ್ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲವ ಟಿ.ವಡಕಲ್ ಅವರ ಆಟದ ವೈಖರಿ

***

ಆರಂಭದಲ್ಲಿ ಮನೆಯಿಂದ ಉತ್ತಮ ಪ್ರೋತ್ಸಾಹ ಸಿಕ್ಕಿರಲಿಲ್ಲ. ಶಾಲಾ ಹಂತದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಮನೆಯಲ್ಲಿ ಈಗ ಪ್ರೋತ್ಸಾಹಿಸುತ್ತಿದ್ದಾರೆ. ಸದ್ಯ ಸಾಕ್ಷಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ರ‍್ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬ ಕನಸಿದೆ.

ಶುಭಂ ಜೇವರ್ಗಿ,  ಬ್ಯಾಡ್ಮಿಂಟನ್ ಕ್ರೀಡಾಪಟು

**


ಇಂತಹ ಟೂರ್ನಿಗಳಲ್ಲಿ ಮಕ್ಕಳು ಹೆಚ್ಚು ಪಾಲ್ಗೊಳ್ಳುವುದರಿಂದ ಅವರಿಗೆ ಬೇರೆ ರಾಜ್ಯಗಳ ಕ್ರೀಡಾಪಟುಗಳ ತಂತ್ರಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅಲ್ಲದೆ, ಉತ್ತಮ ಅನುಭವ ಸಿಗುತ್ತದೆ. ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಸಾಧನೆ ಮಾಡಲು ಬಿಡಬೇಕು.

ಝರೀನಾ ಕಾರ್ಯಪ್ಪ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry