4

ಕೆಪಿಎಲ್‌ – ಐಪಿಎಲ್‌ ಕನಸಿಗೆ ಮೊದಲ ಹೆಜ್ಜೆ...

Published:
Updated:
ಕೆಪಿಎಲ್‌ – ಐಪಿಎಲ್‌ ಕನಸಿಗೆ ಮೊದಲ ಹೆಜ್ಜೆ...

‘ಈಗಿನ ಪ್ರತಿ ಆಟಗಾರನಿಗೂ ಕೆಪಿಎಲ್‌ ಮತ್ತು ಐಪಿಎಲ್‌ ಟೂರ್ನಿಗಳಲ್ಲಿ ಆಡಬೇಕೆನ್ನುವ ಕನಸಿದೆ. ಅದಕ್ಕೆ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ ಮೊದಲ ಹೆಜ್ಜೆಯಾಗಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಇದಕ್ಕಿಂತ ಉತ್ತಮ ವೇದಿಕೆ ಇನ್ನೊಂದಿದೆಯೇ’ –ಎಚ್‌ಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಹುಬ್ಬಳ್ಳಿ ನೈಟ್ಸ್ ತಂಡದ ಕೋಚ್‌ ಎಂ.ಜಿ. ಅರ್ಮು ಗಮ್ ಅವರ ಪ್ರಶ್ನೆಯಿದು. ಹುಬ್ಬಳ್ಳಿಯಲ್ಲಿ ಎರಡು ವಾರ ನಡೆದ ಎಚ್‌ಪಿಎಲ್‌ ಈ ಭಾಗದ ಕ್ರಿಕೆಟಿಗರಲ್ಲಿನ ಪ್ರತಿಭೆಗೆ ಸಾಣೆ ಹಿಡಿಯಲು ವೇದಿಕೆಯಾಯಿತು.

ಕೆಪಿಎಲ್‌ಗೆ ಉತ್ತಮ ಅವಕಾಶ

ಎಚ್‌ಪಿಎಲ್‌ ಟೂರ್ನಿಯಿಂದ ಈ ಭಾಗದ ಪ್ರತಿಭೆಗಳಿಗೆ ಉತ್ತಮ ಅವಕಾಶಗಳು ಸಿಕ್ಕಿವೆ. ಟೂರ್ನಿ ಯಲ್ಲಿ ಆಡಿದ ಸ್ವಪ್ನಿಲ್‌ ಯಳವೆ, ರಾಕೇಶ ಭದ್ರಾಪುರ, ರೋಹನ ಕದಮ್‌, ಶಿಶಿರ್ ಭವಾನೆ, ಸಮರ್ಥ ಊಟಿ, ಪ್ರತೀಕ ಪಾಟೀಲ, ಕೌಸ್ತುಬ್‌, ಜೀಶನ್‌ ಅಲಿ ಸೈಯದ್‌, ಕಿಶೋರ್‌ ಕಾಮತ್‌, ನಿತಿನ್ ಭಿಲ್ಲೆ ಹೀಗೆ ಹಲವಾರು ಆಟಗಾರರು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿಶೋರ್‌ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು.

ಕೆಪಿಎಲ್‌ನಲ್ಲಿ ಆಡುವ ಹುಬ್ಬಳ್ಳಿ ಟೈಗರ್ಸ್ ತಂಡ ತನ್ನ ತಂಡದ ಶಕ್ತಿ ಹೆಚ್ಚಿಸಿಕೊಳ್ಳುವ ಸಲು ವಾಗಿ ಎಚ್‌ಪಿಎಲ್‌ ಟೂರ್ನಿಯನ್ನು ವೇದಿಕೆ ಮಾಡಿಕೊಂಡಿದೆ. ಮೊದಲ ಬಾರಿಗೆ ಟೈಗರ್ಸ್‌ ತಂಡ ಎಚ್‌ಪಿಎಲ್‌ನಲ್ಲಿ ಕಣಕ್ಕಿಳಿದಿತ್ತು.

ಉತ್ತರ ಪ್ರದೇಶ ಮೂಲದ ಪ್ರವೀಣ್‌ ದುಬೆ ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿ ಆಡಿದ್ದರು. ಆರ್‌.ಸಿ.ಬಿ. ತಂಡದಲ್ಲಿಯೂ ಸ್ಥಾನ ಪಡೆದಿದ್ದರು. ಸ್ಪಿನ್ನರ್‌ ಅನಿರುದ್ಧ ಜೋಶಿ, ಅಬ್ರಾರ್‌ ಖಾಜಿ, ವೇಗದ ಬೌಲರ್‌ ಎಚ್.ಎಸ್‌. ಶರತ್‌, ಸ್ಟಾಲಿನ್‌ ಹೂವರ್‌ ಅವರು ವಿವಿಧ ಟೂರ್ನಿಗಳಲ್ಲಿ ರಾಜ್ಯಗಳನ್ನು ಪ್ರತಿನಿಧಿಸಿದ್ದಾರೆ. ಈಗ ಎಚ್‌ಪಿಎಲ್‌ನಲ್ಲಿಯೂ ಕಣಕ್ಕಿಳಿದಿದ್ದಾರೆ.

‘ಕ್ಲಬ್‌ ಮಟ್ಟದ ಟೂರ್ನಿಗಳಿಗಷ್ಟೇ ಸೀಮಿತವಾಗಿದ್ದ ಬಹುತೇಕ ಆಟಗಾರರು ಎಚ್‌ಪಿಎಲ್‌ನಲ್ಲಿ ಅವ ಕಾಶ ಪಡೆಯುತ್ತಿದ್ದಾರೆ. ಇದರಿಂದ ಅವರಿಗೆ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತಿದೆ. ರಾಜ್ಯ ರಣಜಿ ತಂಡದಲ್ಲಿ ಆಡಿರುವ ಶರತ್‌, ಅಬ್ರಾರ್‌ ಖಾಜಿ ಟೂರ್ನಿಯಲ್ಲಿ ಭಾಗವಹಿಸಿರುವುದರಿಂದ ಹೊಸಬರಿಗೆ ಅನುಕೂಲವಾಗಿದೆ’ ಎಂದು ನಿಲೇ ಕಣಿ ಚಾಲೆಂಜರ್ಸ್ ತಂಡದ ಕೋಚ್‌ ಶಿವಾಜಿ ವಡ್ಡರ ಹೇಳಿದರು.

ಪ್ರತಿಭಾ ಶೋಧ

ಪ್ರತಿ ವರ್ಷದ ಎಚ್‌ಪಿಎಲ್‌ ಟೂರ್ನಿ ಆರಂಭಕ್ಕೂ ಮೊದಲು ಸಂಘಟಕರು ಪ್ರತಿಭಾ ಶೋಧ ಶಿಬಿರ ನಡೆಸುತ್ತಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ಆಟಗಾರರನ್ನು ಗುರುತಿಸಿ ಶಿಬಿರಕ್ಕೆ ಕರೆತರುತ್ತಾರೆ. ಶಿಬಿರದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದರೆ ಅವರನ್ನು ಆಟಗಾರರ ಆಯ್ಕೆ ಪಟ್ಟಿಗೆ ಸೇರ್ಪಡೆ ಮಾಡುತ್ತಾರೆ.

ಇದರಿಂದ ಗ್ರಾಮೀಣ ಭಾಗದ ಅನೇಕ ಆಟಗಾ ರರಿಗೆ ಕೆಪಿಎಲ್‌ ಟೂರ್ನಿಗಳಲ್ಲಿ ಸ್ಥಾನ ಪಡೆಯಲು ಅವಕಾಶ ಸಿಕ್ಕಿದೆ. ಇನ್ನೂ ಕೆಲವರು ‘ಕ್ಯಾಚ್‌ಮೆಂಟ್‌’ ಆಟಗಾರರಾಗಿ ಕೆಪಿಎಲ್‌ನ ಭಾಗವಾಗಿದ್ದಾರೆ.

ಹೊನಲು ಬೆಳಕಿನ ಪ್ರಯೋಗ

ದೊಡ್ಡ ಟೂರ್ನಿಗಳಲ್ಲಿ ಆಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಎಚ್‌ಪಿಎಲ್‌ ಸಂಘಟಕರು ಪ್ರತಿ ವರ್ಷ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೆಪಿಎಲ್‌ ಮತ್ತು ಐಪಿಎಲ್‌ ಟೂರ್ನಿಗಳಿಗೆ ನಡೆಯುಂತೆಯೇ ಇಲ್ಲಿಯೂ ಆಟಗಾರರ ಹರಾಜು ನಡೆದಿತ್ತು.

ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನೂ ಆಯೋಜಿಸಲಾಗಿತ್ತು.

‘ಎಚ್‌ಪಿಎಲ್‌ನಲ್ಲಿ ಹಗಲಿನಲ್ಲಿ ಪಂದ್ಯಗಳನ್ನು ಆಡಿ ಬೇರೆ ಟೂರ್ನಿಗಳಲ್ಲಿ ಆಡಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಹೊಸ ಪ್ರಯೋಗ ಮಾಡಿದ್ದೇವೆ’ ಎಂದು ಟೂರ್ನಿಯ ಸಂಘಟನಾ ಸಮಿತಿ ಸದಸ್ಯ ಶಿವಾನಂದ ಗುಂಜಾಳ ತಿಳಿಸಿದರು.

***

‘ಕಾಲಕ್ಕೆ ತಕ್ಕಂತೆ ಟೂರ್ನಿ’

ಕ್ರಿಕೆಟ್‌ ಬಗ್ಗೆ ಮೊದಲಿದ್ದ ಅಭಿಪ್ರಾಯ ಈಗ ಬದಲಾಗಿದೆ. ಐಸಿಸಿ ಮತ್ತು ಬಿಸಿಸಿಐ ಕೂಡ ಟಿ–20 ಮಾದರಿಯನ್ನು ಒಪ್ಪಿಕೊಂಡ ಮೇಲೆ ಈಗಿನ ಯುವಕರು ಚುಟುಕು ಕ್ರಿಕೆಟ್‌ಗೆ ಒತ್ತುಕೊಡುತ್ತಿದ್ದಾರೆ. ಆಟಗಾರರು ಕೂಡ ಇದೇ ಮಾದರಿ ಇಷ್ಟಪಡುತ್ತಾರೆ. ಆದ್ದರಿಂದ ಬದಲಾದ ಕಾಲಕ್ಕೆ ತಕ್ಕಂತೆ ಟೂರ್ನಿ ಆಯೋಜಿಸುವುದು ಅನಿವಾರ್ಯ.

ಕ್ಲಬ್‌ ಮಟ್ಟದಲ್ಲಿ ಈಗ ಸಾಕಷ್ಟು ಟೂರ್ನಿಗಳು ನಡೆಯುತ್ತಿವೆ. ಆದರೆ ಬಹಳಷ್ಟು ಆಟಗಾರರು ಎಚ್‌ಪಿಎಲ್‌, ಕೆಪಿಎಲ್‌, ಐಪಿಎಲ್‌ನಲ್ಲಿ ಆಡಲು ಬಯಸುತ್ತಾರೆ. ಇದರಿಂದ ಅವರಿಗೆ ಹಣ ಲಭಿಸುತ್ತದೆ. ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ತಲಾ 10 ಓವರ್‌ಗಳ ಪಂದ್ಯಗಳನ್ನು ಆಡಿಸುವಂತೆಯೂ ಅನೇಕರು ದುಂಬಾಲು ಬೀಳುತ್ತಿದ್ದಾರೆ. ಆದ್ದರಿಂದ ಬದಲಾವಣೆ ಅನಿವಾರ್ಯ.

ಬಾಬಾ ಭೂಸದ, ಬಿ.ಡಿ.ಕೆ. ಸ್ಪೋರ್ಟ್ಸ್‌ ಫೌಂಡೇಷನ್‌ ಟ್ರಸ್ಟಿ

***

ತಂಡಕ್ಕೆ ಮರಳಲು ವೇದಿಕೆ: ಶರತ್‌

ಕೆಪಿಎಲ್‌ ಮತ್ತು ಐಪಿಎಲ್‌ ಟೂರ್ನಿಗಳಲ್ಲಿ ಸ್ಥಾನ ಪಡೆಯಲು ಎಚ್‌ಪಿಎಲ್‌ ಉತ್ತಮ ಅವಕಾಶ. ಹೋದ ವರ್ಷವೂ ಹಲವು ಆಟಗಾರರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿಯೇ ಕೆಪಿಎಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದರು.

ದೊಡ್ಡ ಟೂರ್ನಿಗಳಲ್ಲಿ ಆಡುವಾಗ ಅಲ್ಲಿನ ವಾತಾವರಣ, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕಾಗುತ್ತದೆ. ಈ ಟೂರ್ನಿಯಿಂದ ಹೊಸ ಅನುಭವಗಳು ಆಗಿವೆ. ನಾನು ಪ್ರತಿನಿಧಿಸುವ ಮುಂಡಗೋಡ ಮಾನ್‌ಸ್ಟರ್ಸ್‌ ತಂಡದಲ್ಲಿಯೂ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ನಾನೊಬ್ಬ ಕ್ರಿಕೆಟಿಗ, ಯಾವ ಟೂರ್ನಿಯಾದರೂ ಚಿಂತೆಯಿಲ್ಲ ಸದಾಕಾಲ ಆಡುತ್ತಲೇ ಇರಬೇಕು ಎಂದು ಬಯಸುತ್ತೇನೆ. ತಳಮಟ್ಟದಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡಿದರೆ ಮುಂದೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ.

ಎಚ್‌.ಎಸ್‌. ಶರತ್‌, ಮುಂಡಗೋಡ ಮಾನ್‌ಸ್ಟರ್ಸ್‌ ತಂಡದ ಆಟಗಾರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry