ಭಾಷೆ ಕಲಿತು ಬಹುಮಾನ ಪಡೆಯಿರಿ

7

ಭಾಷೆ ಕಲಿತು ಬಹುಮಾನ ಪಡೆಯಿರಿ

Published:
Updated:
ಭಾಷೆ ಕಲಿತು ಬಹುಮಾನ ಪಡೆಯಿರಿ

ಕನ್ನಡದ ಮೊದಲ ಅರಸ ಮಯೂರವರ್ಮ. ಅವನ ಸ್ಮರಣೆಯಲ್ಲಿ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಮೂಲಕ ಮಕ್ಕಳಲ್ಲಿ ಭಾಷಾಜ್ಞಾನವನ್ನು ಬಿತ್ತಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ.

ಇದು ಕರ್ನಾಟಕದ ಬಹುದೊಡ್ಡ ಭಾಷಾಸ್ಪರ್ಧೆ. ಕಳೆದ ವರ್ಷ ಸಾಹಿತಿ ನಾ. ಡಿಸೋಜ ಹಾಗೂ ಕಾದಂಬರಿಕಾರ ಕುಂ. ವೀರಭದ್ರಪ್ಪ ನೇತೃತ್ವದಲ್ಲಿ ಪ್ರತಿಭಾವಂತ ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಗಿತ್ತು.‌ ಮೊದಲ ವರ್ಷದ ಪ್ರಯತ್ನ ಯಶಸ್ವಿಯಾದ ನಂತರ ಎರಡನೇ ಬಾರಿಗೆ ‘ಮಯೂರ ಕನ್ನಡ ಪ್ರತಿಭಾನ್ವೇಷಣೆ’ ಪರೀಕ್ಷೆ ಆಯೋಜಿಸಲಾಗಿದ್ದು, ಈ ವರ್ಷ ಚಿತ್ರನಟ ವಿಜಯ ರಾಘವೇಂದ್ರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪರೀಕ್ಷೆಯಲ್ಲಿ ವಿಜೇತರಾಗುವ ಮಕ್ಕಳಿಗೆ ಒಟ್ಟು ₹10ಲಕ್ಷ ರೂಪಾಯಿಗೂ ಅಧಿಕ ಪುರಸ್ಕಾರ ನೀಡಲಾಗುವುದು. ವೈಯಕ್ತಿಕವಾಗಿ ‘ಮಯೂರ ಅಕ್ಷರವೀರ ಪ್ರಶಸ್ತಿ’ ಹಾಗೂ ₹1ಲಕ್ಷ, ₹50ಸಾವಿರ ಹಾಗೂ ₹25 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ಈ ಪ್ರತಿಭಾನ್ವೇಷಣೆ ಪರೀಕ್ಷೆ 5ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿಯವರೆಗೆ 2 ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೆ ₹1ಲಕ್ಷ ರೂಪಾಯಿ ಮೌಲ್ಯದ ವಿಮೆ ಸೌಲಭ್ಯ, ಕಿಯೋನಿಕ್ಸ್ ಸಂಸ್ಥೆ ವತಿಯಿಂದ ₹500 ರೂಪಾಯಿ ರಿಯಾಯಿತಿ ಕೂಪನ್ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಕನ್ನಡ ಎಂದರೆ ಮೂಗು ಮುರಿಯುವ ಸಂದರ್ಭದಲ್ಲಿ ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಸ್ಪರ್ಧೆ. ವಿಜೇತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪುರಸ್ಕಾರ ನೀಡುವ ಮೂಲಕ ಶಾಲಾ ಮಕ್ಕಳು ಕನ್ನಡ ಭಾಷಾ ಅಧ್ಯಯನದಲ್ಲಿ ತೊಡಗಲು ಪ್ರೋತ್ಸಾಹಿಸುವ ಕೆಲಸ ಇದಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಂ. ನವೀನ್ ಕುಮಾರ್ ಸ್ಪರ್ಧೆಯ ಉದ್ದೇಶ ವಿವರಿಸಿದರು.

ಕಳೆದ ವರ್ಷ ಹಾವೇರಿ ಜಿಲ್ಲೆ ಬ್ಯಾಡಗಿ ಬಿಇಎಸ್ ಪ್ರೌಢಶಾಲೆಯ ವೀಣಾ ಕುಂಬಾರ ಪ್ರೌಢಶಾಲಾ ವಿಭಾಗದಲ್ಲಿ ಹಾಗೂ ತುಮಕೂರು ಜಿಲ್ಲೆ ಕುಣಿಗಲ್‌ನ ಸ್ವಾಮಿ ವಿವೇಕಾನಂದ ಶಾಲೆ ರಂಜನ್‌ ಪಿ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ₹1 ಲಕ್ಷ ಬಹುಮಾನ ಹಾಗೂ ‘ಮಯೂರ ಅಕ್ಷರವೀರ’ ಪ್ರಶಸ್ತಿ ಪಡೆದರು. ಶಿವಮೊಗ್ಗ ಅದಿಚುಂಚನಗಿರಿ ಶಾಲೆಯ ಅಲಂಪು ಅರಗ ಪ್ರೌಢಶಾಲಾ ವಿಭಾಗದಲ್ಲಿ ಹಾಗೂ ಸಾಗರದ ರಾಮಕೃಷ್ಣ ಶಾಲೆ ಸಮೃದ್ಧಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ₹50 ಸಾವಿರ ರೂಪಾಯಿ ದ್ವಿತೀಯ ಬಹುಮಾನ ಪಡೆದರು.ಎಂ.ನವೀನ್ ಕುಮಾರ್ ,ಸಂಸ್ಥೆ ಅಧ್ಯಕ್ಷ

ತೀರ್ಥಹಳ್ಳಿ ಸರ್ಕಾರಿ ಶಾಲೆಯ ಎಚ್.ಎಸ್. ಸಿಂಚನಾ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹಾಗೂ ಶಿಕಾರಿಪುರ ತಾಲ್ಲೂಕು ಹರಗಿ ಗ್ರಾಮದ ಸರ್ಕಾರಿ ಶಾಲೆಯ ಆಕಾಶದೀಪ ಪ್ರೌಢಶಾಲಾ ವಿಭಾಗದಲ್ಲಿ ತೃತೀಯ ₹25 ಸಾವಿರ ರೂಪಾಯಿ ಬಹುಮಾನ ಪಡೆದು, ಸ್ಪರ್ಧಾಳುಗಳಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ವರ್ಷ ರಾಜ್ಯದ 23 ಜಿಲ್ಲೆಗಳಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ‘ಪ್ರಜಾವಾಣಿ’ ಮತ್ತು ‘ಕಿಯೋನಿಕ್ಸ್’, ‘ಎಂ. ಎನ್. ಪಿಕಲ್ಸ್‌’ ಸಂಸ್ಥೆ ಸಹಯೋಗದೊಂದಿಗೆ ಎರಡನೇ ವರ್ಷದ ಸ್ಪರ್ಧೆಗೆ ಮಕ್ಕಳು, ಪೋಷಕರು ಉತ್ಸಾಹದಿಂದ ಕಾಯುತ್ತಿದ್ದಾರೆ ಎನ್ನುವ ವಿಶ್ವಾಸ ನವೀನ್ ಕುಮಾರ್‌ ಅವರದ್ದು.

***

ಪರೀಕ್ಷೆಯ ಮಾದರಿ

ಶುದ್ಧ ಕನ್ನಡ, ಪದರಚನೆ, ಅಕ್ಷರಮಂಥನ, ಪರ್ಯಾಯ ಪದ, ಅಕ್ಷರ ಅವಲೋಕನ, ಶಬ್ದಸಾಮರ್ಥ್ಯ, ಸುಳಿವು ಓದಿ ಪದ ಬರೆಯಿರಿ, ಪದತರ್ಕ, ಪದಕೌಶಲ, ಪದಮಂಥನ ಸೇರಿದಂತೆ ಹಲವು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ.

ಈ ವರ್ಷದ ವಿಶೇಷತೆ

ತಾಲ್ಲೂಕು ಮಟ್ಟದಲ್ಲಿ 60ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಅಲ್ಲಿ 85ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಅಂತಿಮವಾಗಿ ರಾಜ್ಯ ಮಟ್ಟದಲ್ಲಿ ವಿವಿಧ ಹಂತದಲ್ಲಿ ಪರೀಕ್ಷೆ, ಮೌಖಿಕ ಸಂದರ್ಶನ ನಡೆದ ಬಳಿಕ ಸ್ಪರ್ಧಾವಿಜೇತರನ್ನು ಘೋಷಣೆ ಮಾಡಲಾಗುವುದು.‌

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry