ಕಪ್ಪು ಲೋಕಕ್ಕೆ ದೊಂದಿ ಬೆಳಕು

7

ಕಪ್ಪು ಲೋಕಕ್ಕೆ ದೊಂದಿ ಬೆಳಕು

Published:
Updated:
ಕಪ್ಪು ಲೋಕಕ್ಕೆ ದೊಂದಿ ಬೆಳಕು

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಸಂಪಿಗೆ ನನ್ನ ಹುಟ್ಟೂರು. ಅಲ್ಲಿಯೇ ಪಿಯುಸಿ ತನಕ ಓದಿದೆ. ನಮ್ಮದು ಸಂಪ್ರದಾಯಸ್ಥ ಕುಟುಂಬ. ಮನೆ, ಓದು, ಶಾಲೆ- ಇಷ್ಟೇ ನನ್ನ ಆಗಿನ ಪ್ರಪಂಚ. ಡಿಗ್ರಿ ಓದಲೆಂದು 1983ರಲ್ಲಿ ಬೆಂಗಳೂರಿಗೆ ಬಂದ ನಾನು ಮಹಾರಾಣಿ ಕಾಲೇಜಿಗೆ ಸೇರಿಕೊಂಡೆ. ನನ್ನ ಅಣ್ಣ ಎಸ್‌.ಆರ್‌. ಆರಾಧ್ಯ ಹೋರಾಟಗಾರ ಎಂದು ಗುರುತಿಸಿಕೊಂಡಿದ್ದರು. ಅಣ್ಣನ ಪ್ರಭಾವ ನನ್ನ ಮೇಲೆ ಆಗಿತ್ತು ಅನಿಸುತ್ತದೆ. ಹಾಗಾಗಿಯೇ ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾಜಮುಖಿ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ.

ಅಣ್ಣ ಹೋರಾಟಗಳಲ್ಲಿ ಭಾಗಿಯಾಗುವುದು ಅಪ್ಪ– ಅಮ್ಮನಿಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ಬೆಂಗಳೂರಿಗೆ ಬರುವಾಗ ಯಾವುದೇ ಕಾರಣಕ್ಕೂ ನಾನು ಹೋರಾಟದ ಬದುಕಿಗೆ ಧುಮುಕುವುದಿಲ್ಲ ಎಂದು ಅಪ್ಪನಿಗೆ ಮಾತು ನೀಡಿದ್ದೆ. ನಂತರವೇ ಅವರು ಒಪ್ಪಿಗೆ ಸೂಚಿಸಿ ಕಳುಹಿಸಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಆಗಿದ್ದೇ ಬೇರೆ.

ಕಾಲೇಜು ಸೇರಿದ ಮೇಲೆ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್ಐ) ಸೇರಿಕೊಂಡೆ. ನನ್ನ ನಂಬಿಕೆಗಳು, ಸಿದ್ಧಾಂತಗಳು, ಬದುಕಿನ ಗುರಿ ಬದಲಾದ ಕಾಲಘಟ್ಟ ಅದು. ನನ್ನ ಮೊದಲ ಹೋರಾಟದ ನೆನಪು ಇನ್ನೂ ಹಸಿಯಾಗಿದೆ. ಕುದುರೆಮೋತಿ ಸ್ವಾಮೀಜಿ ತನ್ನ ಭಕ್ತೆಯ ಮೇಲೆಯೇ ಅತ್ಯಾಚಾರ ಎಸಗಿದ್ದ. ಸ್ವಾಮೀಜಿಗೆ ಶಿಕ್ಷೆಯಾಗಬೇಕೆಂದು ಮೆರವಣಿಗೆಯಲ್ಲಿ ಘೋಷಣೆ ಕೂಗಿದ್ದೆ. ನಂತರ ನಾನು ಶಾಲೆಗಳ ಡೊನೇಷನ್‌, ಕಚೇರಿಗಳಲ್ಲಿ ಕಂಪ್ಯೂಟರೀಕರಣ, ಮಹಿಳೆಯರ ಮೇಲಿನ ಶೋಷಣೆ ವಿರೋಧಿ ಹೋರಾಟಗಳಲ್ಲಿ ತೊಡಗಿಸಿಕೊಂಡೆ. ಕೃಷಿ ಕೂಲಿಗಾರರು, ಬೀಡಿಕಾರ್ಮಿಕರು ಮತ್ತು ಹೆಂಚಿನ ಕಾರ್ಖಾನೆ ಕಾರ್ಮಿಕರ ಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದೆ.

ಡೊನೇಷನ್‌ ವಿರುದ್ಧದ ಪ್ರತಿಭಟನೆಗೆ ‘ಪಾರ್ಲಿಮೆಂಟ್‌ ಚಲೋ’ ಆಂದೋಲನ ಹಮ್ಮಿಕೊಂಡಿದ್ದೆವು. ರಾಜ್ಯದಿಂದ ನಾನೂ ಸೇರಿ ಸಾವಿರಾರು ವಿದ್ಯಾರ್ಥಿಗಳು ಹೋಗಿದ್ದೆವು. ರೈಲಿನಲ್ಲಿ ಟಿಕೆಟ್‌ ಇಲ್ಲದೇ ಪ್ರಯಾಣ. ಪ್ರತಿ ನಿಲ್ದಾಣದಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಆಗ ಅಲ್ಲೇ ರೈಲನ್ನು ನಿಲ್ಲಿಸಿ ಘೋಷಣೆ ಕೂಗಿ ಮತ್ತೆ ಆ ರೈಲನ್ನು ಮುಂದಕ್ಕೆ ಬಿಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತಿತ್ತು. ಸಂಘಟನೆಯಲ್ಲಿ ಸಕ್ರಿಯವಾಗಿದ್ದರಿಂದ ನನ್ನ ಜೊತೆಗೆ ನನ್ನ ಗೆಳತಿಯರನ್ನೂ ಹಾಸ್ಟೆಲ್‌ನಿಂದ ಹೊರ ಹಾಕಿದ್ದರು. ತೇಜಸ್ವಿನಿ ಶ್ರೀರಮೇಶ್, ಶಾಂತಕುಮಾರಿ... ನಾವೆಲ್ಲಾ ಸ್ನೇಹಿತೆಯರು. ಹಸಿವು, ಸಂಘಟನೆಯ ಬಗೆಗಿನ ಬದ್ಧತೆ, ಕಿಚ್ಚು ಎರಡೂ ಜಾಸ್ತಿ ಆಯಿತು. ಇದನ್ನು ಸಂಘಟನೆಯ ಭಾಗ ಅಂದುಕೊಂಡು ಮುಂದುವರಿದೆವು. ಕಾಲೇಜಿನಲ್ಲಿ ಇದಕ್ಕೆ ವಿರುದ್ಧ ವಾತಾವರಣ. ಆದರೆ, ಪ್ರಾಧ್ಯಾಪಕರಾದ ಲೋಹಿತಾಶ್ವ, ಕಮಲಾ ಹಂಪನಾ, ಡಾ.ಸಿದ್ಧಲಿಂಗಯ್ಯ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಆಗಲೇ ನಾನು ಜಯಕುಮಾರ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದು. ಜಯಕುಮಾರ್‌ ಹೋರಾಟದ ಮೂಲಕವೇ ಪರಿಚಯವಾದವರು. ವಿವಾಹಕ್ಕೆ ಅಪ್ಪ–ಅಮ್ಮನ ವಿರೋಧವಿತ್ತು. ಸಂಘಟನೆಯ ಬಲ ಬೆನ್ನಿಗಿತ್ತಲ್ವಾ? ಹೀಗಾಗಿ ನಮಗೆ ಒಂಟಿ ಭಾವನೆ ಕಾಡಲಿಲ್ಲ. ಮನಸ್ಸಿನಾಳದಲ್ಲಿ ಪೋಷಕರು ದೂರ ಮಾಡಿದ ನೋವು ಇತ್ತು. ಮಗಳು ಹುಟ್ಟುವವರೆಗೂ ಅಪ್ಪ– ಅಮ್ಮ ನನ್ನ ಮುಖವನ್ನೇ ನೋಡಿರಲಿಲ್ಲ.ಪತಿ ಹಾಗೂ ಮಗಳ ಜತೆ ಲೀಲಾ ಸಂಪಿಗೆ

ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿ ಮುಂದೇನು ಎಂದು ಯೋಚಿಸುತ್ತಿರುವಾಗಲೇ ಒಂದು ಅವಕಾಶ ಹುಡುಕಿಕೊಂಡು ಬಂತು. ಆಗ, 1993–94ರಲ್ಲಿ ಭಾರತದಲ್ಲಿ ಏಡ್ಸ್‌ ರೋಗದ ಲಕ್ಷಣಗಳು ಕಾಣಿಸಿದ್ದವು. ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭವಾಗಿದ್ದವು. ಲೈಂಗಿಕ ಕಾರ್ಯಕರ್ತೆಯರಲ್ಲಿ ಅರಿವು ಮೂಡಿಸಲು ಅವರ ಮಧ್ಯೆ ಕೆಲಸ ಮಾಡುವ ಒಬ್ಬ ಸಂಯೋಜಕಿ ಬೇಕಾಗಿತ್ತು. ನಾನು ಧೈರ್ಯ ಮಾಡಿ ಒಪ್ಪಿಕೊಂಡೆ. ಈಗ ಲೈಂಗಿಕ ಕಾರ್ಯಕರ್ತೆಯರ ಬಳಿ ಸುಲಭವಾಗಿ ಮಾತನಾಡಬಹುದು. ಆದರೆ ಆಗ ಅವರು ಯಾರು ಎಂಬುದನ್ನು ಸುಲಭವಾಗಿ ಪತ್ತೆ ಮಾಡಲು ಆಗುತ್ತಿರಲಿಲ್ಲ. ಬಸ್‌ ನಿಲ್ದಾಣಗಳಿಗೆ ಹೋಗಿ ದಿನವಿಡೀ ಕಾಯುತ್ತಿದ್ದೆ. ಬಸ್ಸಿಗೆ ಹತ್ತುವ ಹೆಂಗಸರ ನಡವಳಿಕೆಯಲ್ಲಿ ವ್ಯತ್ಯಾಸ ಗುರುತಿಸುತ್ತಿದ್ದೆ.

ವೇಶ್ಯಾಗೃಹಗಳು, ಲಾಡ್ಜ್‌ಗಳನ್ನು ಗುರುತು ಮಾಡಿಕೊಂಡೆ. ಕಳ್ಳಸಾಗಣೆಯಿಂದ ಈ ಜಾಲಕ್ಕೆ ದೂಡಲ್ಪಟ್ಟ ಹೆಣ್ಣುಮಕ್ಕಳಿದ್ದರು, ಆರ್ಥಿಕ ಸಂಕಷ್ಟದಿಂದ ಈ ವೃತ್ತಿಗೆ ಬಂದವರಿದ್ದರು. ಅವರೆಲ್ಲಾ ಅಸಹನೀಯ ನೋವು ಅನುಭವಿಸುತ್ತಿದ್ದರು. ನನ್ನ ಕೆಲಸ ಎಚ್‌ಐವಿ ಸೋಂಕಿನ ಬಗ್ಗೆ  ಅರಿವು ಮೂಡಿಸುವುದಾಗಿತ್ತು. ಆದರೆ ವೇಶ್ಯಾವಾಟಿಕೆ ಅವರಿಗೆ ಜೀವನೋಪಾಯ. ಹೊಟ್ಟೆಪಾಡಿನ ಎದುರು ಏಡ್ಸ್‌ ಅಥವಾ ಎಚ್‌ಐವಿ ಅವರಿಗೆ ಮುಖ್ಯವಿಷಯವೇ ಆಗಿರಲಿಲ್ಲ. ನಾನು ಹೋದ ಕಡೆಗಳಲ್ಲಿ ಇವಳು ಪೊಲೀಸರ ಏಜೆಂಟ್‌ ಇರಬಹುದು. ನಮ್ಮ ಜಾಲದ ಬಗ್ಗೆ ತಿಳಿದುಕೊಳ್ಳಲು ಬಂದಿರಬಹುದು ಎಂಬ ಅನುಮಾನ ದೃಷ್ಟಿಯಲ್ಲಿಯೇ ನನ್ನನ್ನು ಕಾಣುತ್ತಿದ್ದರು.

ನಾನು ಹಾಗೂ ನನ್ನ ಸಹಾಯಕಿ ಒಂದು ಬಾರಿ ಆರ್‌.ಟಿ. ನಗರದ ವೇಶ್ಯಾಗೃಹಕ್ಕೆ ಹೋಗಿದ್ದೆವು. ಅವರ ಬಳಿ ನಮ್ಮ ಉದ್ದೇಶವನ್ನು ಹಲವು ಬಾರಿ ವಿವರಿಸಿದರೂ ಮನವರಿಕೆಯಾಗುತ್ತಿರಲಿಲ್ಲ. ಏನೋ ಸ್ವಲ್ಪ ಅರ್ಥವಾಯಿತೇನೋ ಎನ್ನುವಷ್ಟರಲ್ಲಿ, ‘ಇವರಿಂದ ವ್ಯವಹಾರಕ್ಕೆ ನಷ್ಟವೇ ಜಾಸ್ತಿ. ಏಡ್ಸ್‌ ಇದೆ ಅಂತ ಗಿರಾಕಿಗಳಿಗೆ ಅನುಮಾನ ಬಂದರೆ ವ್ಯವಸ್ಥೆಯೇ ಬುಡಮೇಲಾಗುತ್ತೆ’ ಎನ್ನುವುದು ಆಕೆಯ ಆತಂಕ. ‘ನೀವೇ ಈ ವೃತ್ತಿಗೆ ಬಂದಾಗ ಇಲ್ಲಿನ ಕಷ್ಟ ಅರ್ಥ ಆಗುತ್ತೆ’ ಎಂದು ನಾವಿಬ್ಬರೂ ಇದ್ದ ಕೋಣೆಯ ಬಾಗಿಲು ಹಾಕಿಬಿಟ್ಟರು. ನಾವು ಸಮಾಧಾನ ಮಾಡಿದಷ್ಟೂ ಅವಳ ಸಿಟ್ಟು ಜಾಸ್ತಿ ಆಗುತ್ತಿತ್ತು. ಆಗ ಇದ್ದಬದ್ದ ಧೈರ್ಯ ಎಲ್ಲಾ ಒಟ್ಟು ಮಾಡಿ, ‘ನಾವೇ ಯುವತಿಯರು; ಇಂತಹ ಸ್ಥಳಕ್ಕೆ ಬರಬೇಕಾದರೆ ಕೈಬೀಸಿಕೊಂಡು ಬರುತ್ತೀವಾ? ಪೊಲೀಸರಿಗೆ, ಮಾಧ್ಯಮದವರಿಗೆ ತಿಳಿಸಿಯೇ ಬಂದಿದ್ದು’ ಎಂದಾಗ ಆಕೆ ಮನೆಯಿಂದ ಹೊರಹೋಗಲು ಬಿಟ್ಟಳು. ಬದುಕಿದೆಯಾ ಬಡಜೀವವೇ ಎಂದು ಮನೆಗೆ ವಾಪಸಾದೆವು.

ಇನ್ನೊಂದು ಬಾರಿ ಮಹದೇವಪುರದ ವೇಶ್ಯಾಗೃಹಕ್ಕೆ ಹೋಗಿದ್ದೆವು. ಆ ವೇಶ್ಯಾಗೃಹ ನಡೆಸುತ್ತಿದ್ದವಳ ಹೆಸರು ಹೇಳಿದರೇನೇ ಜನ ನಡುಗುತ್ತಿದ್ದರು. ಯಾವ ರೀತಿ ಮನವರಿಕೆ ಮಾಡಿಕೊಟ್ಟರೂ ನನ್ನ ಮಾತನ್ನು ಆಕೆ ಕೇಳಿಸಿಕೊಳ್ಳಲಿಲ್ಲ. ಅಲ್ಲಿಂದ ವಾಪಸಾಗಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಇಳಿದಿದ್ದೆ. ಸಿನಿಮಾದಲ್ಲಿ ತೋರಿಸುವಂತೆ 8–10 ಜನ ಸುತ್ತುವರಿದಿದ್ದರು. ಆ್ಯಸಿಡ್‌ ಹಾಕುತ್ತೇವೆ ಎಂದು ಬೆದರಿಸಿದರು. ಹೇಗೋ ಬಚಾವಾಗಿ ಬಂದೆ.

ದಿನ ಕಳೆದಂತೆ ಈ ಜಾಲದ ಕಬಂಧ ಬಾಹುಗಳು ಬಲು ದೊಡ್ಡವು. ಲೈಂಗಿಕ ಕಾರ್ಯಕರ್ತೆಯರ ನಂಬಿಕೆ ಗಳಿಸದೆ ಮನವೊಲಿಸಲು ಸಾಧ್ಯವಿಲ್ಲ ಎನಿಸಿತು. ಪೊಲೀಸ್‌ ಅಧಿಕಾರಿಗಳು ಅನೇಕ ಸಂದರ್ಭಗಳಲ್ಲಿ ನನ್ನನ್ನು ಅಪಾಯದಿಂದ ಪಾರುಮಾಡಿದ್ದರು. ಉಪ್ಪಾರಪೇಟೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕೆ.ವಿ.ಆರ್‌ .ಟ್ಯಾಗೋರ್‌, ಬಿ.ಕೆ. ಶಿವರಾಂ ಅವರ ಸಹಕಾರವನ್ನು ನಾನು ನೆನೆಯುತ್ತೇನೆ.

ಲೈಂಗಿಕ ಕಾರ್ಯಕರ್ತೆಯರಲ್ಲಿ ಏಡ್ಸ್‌/ಎಚ್‌ಐವಿ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸಲು ರಾಜ್ಯದಾದ್ಯಂತ ಸುತ್ತಾಡಲು ಆರಂಭಿಸಿದೆ. ಅವರ ಬದುಕಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲೆಂದು ವೇಶ್ಯಾವಾಟಿಕೆ ತಾಣಗಳೆನಿಸಿದ ಮುಂಬೈನ ಕಾಮಾಟಿಪುರ, ಕೋಲ್ಕತ್ತದ ಸೋನಾಗಚಿ, ಪುಣೆಯ ಬುದ್ವಾರ್‌ಪೇಟೆಗಳಲ್ಲಿ ಸುತ್ತಾಡಿದೆ. ಅಲ್ಲಿ ಒಂದೇ ಗಂಟೆಯಲ್ಲಿ ನಾಲ್ಕೈದು ಗಿರಾಕಿಗಳನ್ನು ತಣಿಸುತ್ತಿದ್ದ ಮಹಿಳೆಯರನ್ನು ಕಂಡೆ. ಅವರ ನಿರ್ಭಾವುಕತೆ, ತನ್ನ ದೇಹವನ್ನೇ ತನ್ನದಲ್ಲ ಎನ್ನುವಂತೆ ವರ್ತಿಸುವುದು ಗಮನಿಸಿದೆ.

ನನ್ನ ಕೆಲಸ ನನ್ನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ವೈಯಕ್ತಿಕ ಬದುಕು ಹಾಗೂ ವೃತ್ತಿಯ ಜೊತೆಗೆ ನಾನು ಅಂತರ ಕಾಯ್ದುಕೊಳ್ಳಬೇಕಿತ್ತು. ಲೈಂಗಿಕ ಕಾರ್ಯಕರ್ತೆಯರ ಮೂಲಕವೇ ಅರಿವು ಮೂಡಿಸುವ ಕೆಲಸ ಆರಂಭಿಸಿದೆ. ಇದು ಯಶಸ್ವಿಯಾಯಿತು. ಮಂಡ್ಯದಲ್ಲಿ ಮೊದಲಬಾರಿಗೆ ಏಡ್ಸ್‌ ನಿಯಂತ್ರಣ ಸಂಘಟನೆ ಆರಂಭವಾಯಿತು. ಈಗ ರಾಜ್ಯದಲ್ಲಿ 30 ನೋಂದಾಯಿತ ಸಂಘಟನೆಗಳು ಇವೆ.

ಪುನಃ ಪತ್ರಿಕೋದ್ಯಮಕ್ಕೆ ಹಿಂತಿರುಗಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ಆದರೆ ಮೂರು ವರ್ಷದ ನಂತರ ನನ್ನ ಯೋಚನೆ ಎಲ್ಲಾ ತಲೆಕೆಳಗಾಯಿತು. ಲೈಂಗಿಕ ಕಾರ್ಯಕರ್ತೆಯರಿಗೆ ನ್ಯಾಯ ಕೊಡಿಸಬೇಕು ಎಂದು ಮನಸ್ಸಿನಲ್ಲಿ ಜಾಗೃತವಾಯಿತು. ಅಷ್ಟರಲ್ಲಿ ನನಗೆ ಮಗಳು ಹುಟ್ಟಿದ್ದಳು. ಪತಿ ಜಯಕುಮಾರ್‌ ಅವರು ಮಗಳನ್ನು ನೋಡಿಕೊಳ್ಳುವುದು, ಮನೆ ಕೆಲಸದ ಹೊಣೆ ಹೊತ್ತುಕೊಂಡಿದ್ದರು. ನನ್ನ ಕೆಲಸಗಳಿಗೆ ಸಹಕಾರ, ಪ್ರೋತ್ಸಾಹ ನೀಡಿದರು. ಮಗಳು ದೀಪಿಕಾ ಅಪ್ಪನ ಜೊತೆ ಬೆಳೆದಿದ್ದೇ ಜಾಸ್ತಿ.

ಎಚ್‌ಐವಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂಬ ವರದಿಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಅದನ್ನು ಗಮನಿಸಿದ ಸಚಿವರೊಬ್ಬರು, ‘ಎಲ್ಲಾ ವೇಶ್ಯೆಯರೂ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಾನು ಪತ್ರಿಕೆಯೊಂದಕ್ಕೆ ‘ಶಾಸಕರ ಭವನದ ಹೂದೋಟದಲ್ಲಿ’ ಎಂಬ ಲೇಖನ ಬರೆದೆ. ‘ಯಾರನ್ನೂ ಬಲವಂತವಾಗಿ ಎಚ್‌ಐವಿ ಪರೀಕ್ಷೆಗೆ ಒಳಪಡಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿಲ್ಲ. ಆ ಬಡಪಾಯಿಗಳ ಮೇಲೆ ಯಾಕೆ ಕಣ್ಣು? ನಗರದ ಎಲ್ಲಾ ವೇಶ್ಯಾಗೃಹಗಳ ಮಾಹಿತಿ ಕಲೆ ಹಾಕಿ. ಲೈಂಗಿಕ ಕಾರ್ಯಕರ್ತೆಯರ ಮನವೊಲಿಸಿ ಪರೀಕ್ಷೆ ನಡೆಸಿ’ ಎಂದು ಒತ್ತಾಯಿಸಿದ್ದೆ. ಆ ಲೇಖನ ಹೆಚ್ಚು ಚರ್ಚೆಗೊಳಗಾಯಿತು.

ಇಂತಹ ಚರ್ಚೆ, ಮಾತುಕತೆ ಅಥವಾ ಬರಹಗಳಲ್ಲಿ ನನ್ನ ಮಾತಿಗೆ ಧೃಡೀಕರಣ ಪತ್ರ, ಹೇಗೆ ರುಜುವಾತು ಮಾಡ್ತೀರಿ ಎಂಬ ಪ್ರಶ್ನೆ ಬರುತ್ತಿತ್ತು. ಆಗ ನಾನು ಪಿಎಚ್‌.ಡಿ ಮಾಡುವ ನಿರ್ಧಾರ ಮಾಡಿದೆ. ಈ ವಿಷಯದ ಬಗ್ಗೆ ಪಿಎಚ್‌.ಡಿ ಮಾಡಿದವಳು ನಾನೊಬ್ಬಳೇ. ಎಲ್ಲಾ ಅರ್ಹತೆಗಳಿದ್ದರೂ ಯಾವ ಮಾರ್ಗದರ್ಶಕರೂ ನನಗೆ ಮಾರ್ಗದರ್ಶನ ಮಾಡಲು ಒಪ್ಪಲಿಲ್ಲ. ಕೊನೆಗೆ ಹಂಪಿ ವಿಶ್ವವಿದ್ಯಾಲಯದಲ್ಲಿ ಡಾ.ಹಿ.ಚಿ. ಬೋರಲಿಂಗಯ್ಯ ಅವರು ನನ್ನ ಮಾರ್ಗದರ್ಶಕರಾದರು. ‘ವೇಶ್ಯಾವಾಟಿಕೆ– ಒಂದು ಅಧ್ಯಯನ’ ನನ್ನ ಪಿಎಚ್‌.ಡಿ ವಿಷಯ.

ಮಾಜಿ ದೇವದಾಸಿಯರು ಅಥವಾ ಲೈಂಗಿಕ ಕಾರ್ಯಕರ್ತೆಯರಿಗೆ ವರ್ಷಕ್ಕೊಂದು ಎಮ್ಮೆ, ಆಡು ಅಥವಾ ಕುರಿ ಕೊಟ್ಟು ಸಾಕಿಕೊಳ್ಳಿ ಎಂದರೆ ಸಾಲದು. ಸರ್ಕಾರದ ಪುನರ್ವಸತಿ ಚಿಂತನೆಯೇ ಅವೈಜ್ಞಾನಿಕ. ಇಂಥವರಿಗೆ ಬದುಕುಕಟ್ಟಿಕೊಡಲು ಸರ್ಕಾರಕ್ಕೆ ಪೂರ್ಣ ಬದ್ಧತೆ, ಇಚ್ಛಾಶಕ್ತಿ ಬೇಕು. ಮುಳ್ಳಿನ ರಾಶಿ ಮೇಲೆ ಬಿದ್ದ ಬಟ್ಟೆಯನ್ನು ನಾಜೂಕಾಗಿ ಎತ್ತಿಡುವಂತಹ ತಾಳ್ಮೆ ಬೇಕು. ಇಂಥ ಮಹಿಳೆಯರ ಸುತ್ತಲೂ ಒಂದು ಕರಾಳಲೋಕ ಇರುತ್ತದೆ. ವ್ಯಸನಗಳು ಆಕೆಯನ್ನು ಅಂಟಿಕೊಂಡಿರುತ್ತವೆ. ಏಕಾಏಕಿ ಪುನವರ್ವಸತಿ ಎಂದು ಎಮ್ಮೆ ಕೊಡಿಸಿದರೆ ಆಗಲ್ಲ. ಅವಳಿಗೆ ಮಾನಸಿಕ ಧೈರ್ಯ, ಚಿಕಿತ್ಸೆ ನೀಡಬೇಕು.

ಇವತ್ತಿಗೂ ಇಂತಹ ಸೌಕರ್ಯ ಇಲ್ಲ. ಕೊನೇಪಕ್ಷ ಆಕೆಗೆ ಮಾನವ ಹಕ್ಕುಗಳು ಸಿಗಲಿ ಎಂದು ಹೋರಾಟ ಮಾಡಿದೆವು. ಇದೆಲ್ಲದರ ಫಲ ಎಂಬಂತೆ ಈಗ ಅವರಿಗೂ ರೇಷನ್‌ ಕಾರ್ಡ್‌, ಬಾಡಿಗೆ ಮನೆ ಸಿಗುವಂತಾಗಿದೆ ಎಂಬುದೇ ಸಣ್ಣ ಸಂತೋಷ. ನನ್ನ ಬದುಕಿನುದ್ದಕ್ಕೂ ಈ ಹೋರಾಟ ಮುಂದುವರಿಯುತ್ತದೆ.

***


ತಂದೆ–ತಾಯಿ: ರಾಜಶೇಖರ್‌, ಗಿರಿಜಮ್ಮ
ವಿದ್ಯಾಭ್ಯಾಸ: ಕನ್ನಡ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ, ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ
ಪತಿ: ಜಯಕುಮಾರ್‌
ಮಗಳು: ದೀಪಿಕಾ
ಕೃತಿಗಳು: ವೇಶ್ಯಾವಾಟಿಕೆ ಒಂದು ಅಧ್ಯಯನ, ಉಸೀನಾ, ಮೌನ ಸಹಗಮನ, ಬುದ್ಧನಿಲ್ಲದ ಆಮ್ರಪಾಲಿ, ವೇಶ್ಯೆಯರು ಒಂದು ಆಧುನಿಕ ಬುಡಕಟ್ಟೇ?, ಒಲಿಂಪಿಕ್ಸ್‌ ಎಂಬ ಕೆಂಪುದೀಪ, ಆನುದೇವ ಅನುಮಾನಗಳ ಕಂತೆ
ಸಂಪರ್ಕ ಸಂಖ್ಯೆ: 77603 26835

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry