‘ಫಿಲ್ಮ್‌ಫೇರ್‌’ ಸಂಜೆಯಲ್ಲಿ ಪುಳಕದ ಮಳೆ

7

‘ಫಿಲ್ಮ್‌ಫೇರ್‌’ ಸಂಜೆಯಲ್ಲಿ ಪುಳಕದ ಮಳೆ

Published:
Updated:
‘ಫಿಲ್ಮ್‌ಫೇರ್‌’ ಸಂಜೆಯಲ್ಲಿ ಪುಳಕದ ಮಳೆ

ಬಾಲಿವುಡ್‌ ಅಡ್ಡಾ ಮುಂಬೈನಲ್ಲಿ ಶನಿವಾರ ಸಂಜೆ ವಿಶೇಷ ಝಲಕ್‌. ವರ್ಲಿಯ ಎನ್‌.ಎಸ್.ಸಿ.ಐ.ನಲ್ಲಿ  63ನೇ ಜಿಯೊ ಫಿಲ್ಮ್‌ಫೇರ್‌ ಪ್ರಶಸ್ತಿ ಪ್ರದಾನದ ಸಡಗರ. ನಾಮಕರಣಗೊಂಡಿದ್ದ ಸಿನಿಮಾಗಳಲ್ಲಿ ತೆರೆಯ ಮುಂದೆ ಮತ್ತು ಹಿಂದೆ ಶ್ರಮಿಸಿದ ಪ್ರತಿಯೊಬ್ಬರಲ್ಲೂ ಒಂಥರಾ ಕಾತರ. ತಾವು 2017ರಲ್ಲಿ ದುಡಿದ ಸಿನಿಮಾಗಳಿಗೆ ಫಿಲ್ಮ್‌ಫೇರ್‌ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಚಿಕೊಳ್ಳುವ ಉತ್ಸಾಹ. ಕೊನೆಗೂ ಒಂದಷ್ಟು ಮಂದಿ ನಿರೀಕ್ಷೆಯಂತೆ ಪ್ರಶಸ್ತಿಗಳನ್ನು ತೆಕ್ಕೆಗೆ ತೆಗೆದುಕೊಂಡರೆ ಇನ್ನು ಕೆಲವರಿಗೆ ನಂಬಲಾಗದ ಅಚ್ಚರಿ!

ನಿರೀಕ್ಷೆಯಂತೆ ಪ್ರಶಸ್ತಿ ಬಾಚಿಕೊಂಡವರಲ್ಲಿ ಮುಂಚೂಣಿಯಲ್ಲಿ ನಿಂತವರು ವಿದ್ಯಾ ಬಾಲನ್‌. ಮೊದಲ ಪೋಸ್ಟರ್‌ನಿಂದ ಹಿಡಿದು ಚಿತ್ರ ಬಿಡುಗಡೆಯಾದ ಮೇಲೂ, ಪ್ರಶಸ್ತಿಗೆ ಅರ್ಹವಾದ ಚಿತ್ರ ಎಂದೇ ಸುದ್ದಿ ಮಾಡಿದ ‘ತುಮ್ಹಾರಿ ಸುಲು’ನಲ್ಲಿನ ಅವರ ನಟನೆಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿಯ ಗರಿ ಮುಡಿಗೇರಿತು. ಹಿರಿಯ ನಟಿ ರೇಖಾ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ವಿದ್ಯಾ ಮಾತೇ ಹೊರಡದೆ ಅರೆಕ್ಷಣ ನಕ್ಕು ‘ಕಪ್ಪು ಸುಂದರಿ’ಯನ್ನು ಎದೆಗೊತ್ತಿಕೊಂಡರು. ‘ಅತ್ಯುತ್ತಮ ನಟ’ ಪ್ರಶಸ್ತಿ ಬಾಚಿಕೊಂಡ ಇರ್ಫಾನ್‌ ಖಾನ್‌, ‘ಹಿಂದಿ ಮೀಡಿಯಂ’ನಲ್ಲಿ ಅವಕಾಶ ಕೊಟ್ಟ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.

‘ಸೀಕ್ರೆಟ್‌ ಸೂಪರ್‌ಸ್ಟಾರ್‌’ನ ನಟಿ ಮೆಹೆರ್‌ ವಿಜ್‌ ‘ಉತ್ತಮ ಪೋಷಕ ನಟಿ’ ಪ್ರಶಸ್ತಿಗೆ ಪಾತ್ರರಾದರೆ, ಅದೇ ಚಿತ್ರದ ನಾಯಕಿ ಜೈರಾ ವಾಸಿಂ‌ ‘ವಿಮರ್ಶಕರ ಅತ್ಯುತ್ತಮ ನಟಿ’ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು.

ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳಿಂದ ಸುದ್ದಿ ಮಾಡಿದ ಕೊಂಕಣಾ ಸೇನ್‌ ಶರ್ಮಾ ‘ಎ ಡೆತ್‌ ಇನ್‌ ದಿ ಗಂಜ್‌’ಗೆ ಅತ್ಯುತ್ತಮ ಹೊಸ ನಿರ್ದೇಶಕ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡರು. ಜಯಾ ಬಚ್ಚನ್‌ ಮತ್ತು ಸೋನಾಲಿ ಬೇಂದ್ರೆ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಕೊಂಕಣಾ, ‘ಇಷ್ಟು ದೊಡ್ಡ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ’ ಎಂದು ಮನತುಂಬಿ ಹೇಳಿದರು. ‘ಬರೇಲಿ ಕಿ ಬರ್ಫಿ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಪಡೆದ ಅಶ್ವಿನಿ ಅಯ್ಯರ್‌ ತಿವಾರಿ ಅವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ‘ನ್ಯೂಟನ್‌’ಗೆ ಚಿತ್ರಕತೆ ಬರೆದ ಅಮಿತ್‌ ವಿ. ಮಸೂರ್‌ಕರ್‌ ನಿರೀಕ್ಷೆಯಂತೆ ‘ಉತ್ತಮ ಮೂಲ ಕತೆ ಪ್ರಶಸ್ತಿ’ ಗಳಿಸಿದರು. ಆಸ್ಕರ್‌ ಪ್ರಶಸ್ತಿಗೂ ನಾಮಕರಣಗೊಂಡಿರುವ ‘ನ್ಯೂಟನ್‌’ಗೆ ಈ ಬಾರಿ ಹಲವು ಪ್ರಶಸ್ತಿಗಳು ಬರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಮಿತ್‌ಗೆ ಸಿಕ್ಕಿದ ಪ್ರಶಸ್ತಿಯ ಹೊರತಾಗಿ ಉತ್ತಮ ಚಿತ್ರಕ್ಕಾಗಿ ನೀಡುವ ‘ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌’ ಪ್ರಶಸ್ತಿಯನ್ನು ಮಾತ್ರ ‘ನ್ಯೂಟನ್‌’ ಗಳಿಸಿತು.ಉಡುಗೆಯಿಂದ ಮಿಂಚಿದ ರಣವೀರ್‌ ಸಿಂಗ್‌

63ನೇ ಜಿಯೊ ಫಿಲ್ಮ್‌ಫೇರ್‌ ಪ್ರಶಸ್ತಿಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಕಿರುಚಿತ್ರಗಳಿಗೆ ಅವಕಾಶ ನೀಡಲಾಯಿತು. ನೀನಾ ಗುಪ್ತಾ ಮತ್ತು ಜಾಕಿ ಶ್ರಾಫ್‌ ನಟಿಸಿರುವ ‘ಖೂಜ್ಲಿ’ ಕಿರುಚಿತ್ರಕ್ಕಾಗಿ ಶ್ರಾಫ್‌ಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಅಲ್ಲದೆ ‘ಅತ್ಯುತ್ತಮ ಕಿರುಚಿತ್ರ’ ಪ್ರಶಸ್ತಿಯನ್ನು ‘ಜ್ಯೂಸ್‌’ಗಾಗಿ ನೀರಜ್‌ ಘಯ್ವಾನ್‌ ಪಡೆದರು.

‘ರೋಕೆ ನಾ ರುಕೇ ನೈನಾ’ ಹಾಡಿಗಾಗಿ (ಬದ್ರಿನಾಥ್‌ ಕಿ ದುಲ್ಹನಿಯಾ) ಅರಿಜಿತ್‌ ಸಿಂಗ್‌ ‘ಅತ್ಯುತ್ತಮ ಹಿನ್ನೆಲೆ ಗಾಯಕ’, ‘ಸೀಕ್ರೆಟ್‌ ಸೂಪರ್‌ಸ್ಟಾರ್‌’ನಲ್ಲಿ ‘ನಚ್‌ದಿ ಫಿರಾ’ ಹಾಡನ್ನು ಹಾಡಿದ ಮೇಘನಾ ಮಿಶ್ರಾ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’, ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹಿರಿ ‘ಜಿಯೊ ಜೀವಮಾನ ಸಾಧನೆ ಪ್ರಶಸ್ತಿ’ ಗಳಿಸಿದರು. ‘ಬರೋಬ್ಬರಿ 46 ವರ್ಷಗಳ ದುಡಿಮೆಗೆ ಸಂದ ಅತ್ಯುತ್ತಮ ಪ್ರಶಸ್ತಿ ಇದು. ಇದನ್ನು ನಾನು ನನ್ನ ಪತ್ನಿ ಮತ್ತು ಇಡೀ ಕುಟುಂಬಕ್ಕೆ ಸಮರ್ಪಿಸುತ್ತೇನೆ’ ಎಂದು ಹೇಳಿದಾಗ ಸೆಲೆಬ್ರಿಟಿಗಳು ಕರತಾಡನದ ಮಳೆ ಸುರಿಸಿದರು.

ಕರಣ್‌ ಜೋಹರ್‌ ಮತ್ತು ಶಾರುಕ್‌ಖಾನ್‌ ಕಾರ್ಯಕ್ರಮ ನಿರೂಪಣೆ ಎಂದಿನಂತೆ ಮನರಂಜನೆ ನೀಡಿತು. ರಣವೀರ್‌ ಸಿಂಗ್‌ ಅವರು ತಮ್ಮ ಉಡುಗೆ ತೊಡುಗೆಯಿಂದ ಕೇಂದ್ರಬಿಂದುವಾದರು. ಹಳೆಯ ಚಿತ್ರಗಳ ಚಿತ್ತಾರವಿರುವ ಸೂಟ್‌ ಧರಿಸಿದ್ದುದು ಇದಕ್ಕೆ ಕಾರಣ. ರಾಜ್‌ಕುಮಾರ್‌ ನೃತ್ಯ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry