ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನನ್ನು ವರಿಸುವ ತಾಯಿಯ ಕತೆ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಗ್ರೀಕ್‍ನ ‘ಇಡಿಪಸ್’ ವಿಶ್ವದ ಗಮನ ಸೆಳೆದ ಪುರಾತನ ನಾಟಕ. ತನ್ನ ತಾಯಿಯನ್ನೇ ಮದುವೆಯಾಗುವ ಇಡಿಪಸ್, ನಂತರ ದೇಶ ತೊರೆಯುತ್ತಾನೆ. ಇದನ್ನು ಲಂಕೇಶ್ ಅವರು ‘ದೊರೆ ಇಡಿಪಸ್‌’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು.

ಈ ಕತೆಯನ್ನೇ ಹೋಲುವ ಜಾನಪದ ಕತೆಯೊಂದು ಕನ್ನಡದಲ್ಲಿ ಇದೆ. ಈ ಕತೆಗೆ ‘ಹಡೆದವ್ವ ಬರೆದ ಹಣೆಬರಹ’ ಎಂಬ ಹೆಸರಿನ ನಾಟಕ ರೂಪ ನೀಡಿದವರು ರಂಗಕರ್ಮಿ ಜಯಲಕ್ಷ್ಮಿ ಪಾಟೀಲ. ‘ನಾಟಕ ಬೆಂಗ್ಳೂರು’ ರಂಗೋತ್ಸವದಲ್ಲಿ ಈ ನಾಟಕ ಸೋಮವಾರ (ಜ.22) ಪ್ರದರ್ಶನಗೊಳ್ಳುತ್ತಿದೆ.

‘ಜಗತ್ತಿನ ಪ್ರಸಿದ್ಧ ನಾಟಕ ಇಡಿಪಸ್ ಹೋಲುವ ಜಾನಪದ ಕತೆಯೊಂದು ನಮ್ಮಲ್ಲಿ ಇದೆ ಎಂದು ಕೇಳಿದಾಗ ಸಂತೋಷ ಮತ್ತು ಆಶ್ಚರ್ಯ ಆಯಿತು. ಈ ಕಾರಣಕ್ಕಾಗಿಯೇ ಈ ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು’ ಎಂದು ಹೇಳುತ್ತಾರೆ ನಾಟಕದ ನಿರ್ದೇಶಕ ಕೆ.ಎಸ್.ಡಿ.ಎಲ್ ಚಂದ್ರು.

‘ಶಟವಿ ಹೆಸರಿನ ತಾಯಿ ಮತ್ತು ಆಕೆಯ ಮಗಳು ಒಂದು ಹಳ್ಳಿಯಲ್ಲಿ ವಾಸವಿರುತ್ತಾರೆ. ತಾಯಿ ಪ್ರತಿದಿನ ಮಧ್ಯರಾತ್ರಿ ಮನೆಯಿಂದ ಹೊರಹೋಗುತ್ತಾಳೆ. ಇದನ್ನು ಗಮನಿಸಿದ ಮಗಳು ಆಕೆಯ ಮೇಲೆ ಅಂಶಯ ಪಡುತ್ತಾಳೆ. ಅವರಿಬ್ಬರ ನಡುವಿನ ಸಂವಾದದಲ್ಲಿ ಮಗಳಿಗೆ, ತನ್ನ ತಾಯಿಯು ನವಜಾತ ಶಿಶುವಿನ ಹಣೆಬರಹ ಬರೆಯುವ ಕೆಲಸ ಮಾಡುತ್ತಾಳೆ ಎಂದು ತಿಳಿಯುತ್ತದೆ. ಹಾಗಿದ್ದರೆ ನನ್ನ ಹಣೆಬರಹವನ್ನು ಏನೆಂದು ಬರೆದಿರುವೆ ಎಂದು ಮಗಳು ಕೇಳುತ್ತಾಳೆ. ‘ನೀನು ನಿನ್ನ ಮಗನೊಂದಿಗೆ ಸಂಸಾರ ಮಾಡುತ್ತೀಯ’ ಎಂದು ಬರೆದಿರುವೆ ಎಂದು ತಾಯಿ ಹೇಳಿದಾಗ, ಮಗಳು ಇದನ್ನು ನಾನು ತಪ್ಪಿಸುತ್ತೇನೆ ಎಂದು ಶಪಥ ಮಾಡಿ ಕಾಡು ಸೇರುತ್ತಾಳೆ. ಆಕೆ ತನ್ನ ಮಗನನ್ನೇ ಹೇಗೆ ವರಿಸುತ್ತಾಳೆ, ಮುಂದೇನಾಗುತ್ತದೆ ಎನ್ನುವುದನ್ನು ನಾಟಕ ನೋಡಿಯೇ ತಿಳಿಯಿರಿ’ ಎನ್ನುತ್ತಾರೆ ನಿರ್ದೇಶಕ ಚಂದ್ರು.

ಈ ನಾಟವನ್ನು ಅಭಿನಯಿಸುತ್ತಿರುವವರು ‘ರೂಪಾಂತರ’ ಹವ್ಯಾಸಿ ಕಲಾವಿದರ ತಂಡ. ಕಳೆದ 28 ವರ್ಷಗಳಿಂದ ಈ ನಾಟಕ ತಂಡ ದೇಶದ ಬೇರೆ ಬೇರೆ ಭಾಗಗಳಲ್ಲಿ ನಾಟಕ ಪ್ರದರ್ಶನ ನೀಡಿದೆ. ತಂಡದ ಸದಸ್ಯರುಗಳು ಯಾರೂ ರಂಗ ಶಿಕ್ಷಣ ಪಡೆದವರಲ್ಲ. ತಮ್ಮ ಆಸಕ್ತಿಯ ಕಾರಣದಿಂದಾಗಿ ತಂಡ ಕಟ್ಟಿಕೊಂಡು ನಾಟಕ ಆಡುತ್ತಿದ್ದಾರೆ.

ಈ ತಂಡ ಹೆಚ್ಚಾಗಿ ಪ್ರಸಿದ್ಧರ ಕತೆ, ಕಾದಂಬರಿಗಳನ್ನು ನಾಟಕ ರೂಪಕಕ್ಕೆ ಒಗ್ಗಿಸಿ ಆಡುತ್ತಾರೆ. ರಂಗ ಪ್ರಯೋಗ ಮಾತ್ರವಲ್ಲದೆ, ಸಂವಾದ, ಪ್ರಸ್ತಕ ಪ್ರದರ್ಶನ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಈ ರಂಗತಂಡ.
***
ನಾಟಕ : ಹಡೆದವ್ವ ಬರೆದ ಹಣೆ ಬರಹ
ರಚನೆ : ಜಯಲಕ್ಷ್ಮಿ ಪಾಟೀಲ್
ನಿರ್ದೇಶನ : ಕೆಎಸ್‌ಡಿಎಲ್ ಚಂದ್ರು
ಆಯೋಜನೆ : ನಾಟಕ ಬೆಂಗ್ಳೂರು
ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ
ಸಮಯ : ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT