ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಿಸಸ್‌ ಸದ್ದಡಗಿಸಿದ ಕರ್ನಾಟಕ ತಂಡ

Last Updated 21 ಜನವರಿ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ತವರಿನ ಅಂಗಳದಲ್ಲಿ ಕರ್ನಾಟಕ ತಂಡದವರಿಂದ ಮೂಡಿ ಬಂದ ಅಪೂರ್ವ ಆಟ ಕಂಡು ಭಾನುವಾರ ಸರ್ವಿಸಸ್‌ ಆಟಗಾರರು ಬೆರಗಾದರೆ, ಎಸ್‌. ರಾಜೇಶ್‌, ಎಸ್‌.ಕೆ.ಅಜರುದ್ದೀನ್‌ ಮತ್ತು ಸೊಲೈಮಲೈನ್‌ ಅವರ ಕಾಲ್ಚಳಕದಲ್ಲಿ ಅರಳಿದ ಗೋಲುಗಳು ಉದ್ಯಾನನಗರಿಯ ಫುಟ್‌ಬಾಲ್‌ ಪ್ರಿಯರ ಮನ ಸೆಳೆದವು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ 4–1 ಗೋಲುಗಳಿಂದ ಗೆದ್ದಿತು.

ಈ ಮೂಲಕ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ಲೀಗ್‌ಗೆ ಅರ್ಹತೆ ಗಳಿಸಿತು. ಐದು ವರ್ಷಗಳ ನಂತರ ರಾಜ್ಯ ತಂಡದಿಂದ ಈ ಸಾಧನೆ ಮೂಡಿಬಂದಿತು.

ಲೀಗ್‌ನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದ್ದ ಉಭಯ ತಂಡಗಳಿಗೆ ಭಾನುವಾರದ ಹೋರಾಟ ‘ಫೈನಲ್‌’ ಎನಿಸಿತ್ತು. ಕ್ವಾರ್ಟರ್‌ ಫೈನಲ್‌ ಲೀಗ್‌ಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಮಹತ್ವದ್ದೆನಿಸಿದ್ದ ಈ ಹಣಾಹಣಿಯಲ್ಲಿ ಬಲಿಷ್ಠ ಸರ್ವಿಸಸ್‌, ಸುಲಭವಾಗಿ ಆತಿಥೇಯರನ್ನು ಹಣಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ ವಿಘ್ನೇಶ್‌ ಗುಣಶೇಖರನ್‌ ಬಳಗ ಆಟದ ಎಲ್ಲಾ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದು ಈ ನಿರೀಕ್ಷೆಯನ್ನು ತಲೆಕೆಳಗಾಗಿಸಿತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಸರ್ವಿಸಸ್‌ ಶುರುವಿನಿಂದಲೇ ಆಕ್ರಮಣಕಾರಿಯಾಗಿ ಆಡಿತು. ಎರಡನೇ ನಿಮಿಷದಲ್ಲಿ ಈ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಎದುರಾಳಿ ಆಟಗಾರ ಬಾರಿಸಿದ ಚೆಂಡನ್ನು ಕರ್ನಾ ಟಕದ ಗೋಲ್‌ಕೀಪರ್‌ ಸಿ.ಪಿ. ಶಾಯಿನ್‌ ಖಾನ್‌ ಅಮೋಘ ರೀತಿಯಲ್ಲಿ ತಡೆದರು.

ಐದನೇ ನಿಮಿಷದಲ್ಲಿ ಕರ್ನಾಟಕ ತಂಡಕ್ಕೆ ಮುನ್ನಡೆ ಪಡೆಯುವ ಅವಕಾಶ ಸಿಕ್ಕಿತ್ತು. ಆದರೆ ರಾಜೇಶ್‌ ಇದನ್ನು ಕೈಚೆಲ್ಲಿದರು. ಏಳನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಸರ್ವಿಸಸ್‌ ಆಟಗಾರ ವಿಫಲರಾದರು. ಮರು ನಿಮಿಷದಲ್ಲಿ (10) ಎಸ್‌.ಕೆ.ಅಜರುದ್ದೀನ್‌, ಆತಿಥೇ ಯರ ಗೋಲಿನ ಬೇಟೆಗೆ ಮುನ್ನುಡಿ ಬರೆದರು.

ಚೆಂಡನ್ನು ಡ್ರಿಬಲ್‌ ಮಾಡುತ್ತಾ ಆವರಣ ಪ್ರವೇಶಿಸಿದ ಅವರನ್ನು ಸರ್ವಿಸಸ್‌ ಆಟಗಾರ ತಳ್ಳಿ ನೆಲಕ್ಕೆ ಬೀಳಿಸಿದರು. ಹೀಗಾಗಿ ಪೆನಾಲ್ಟಿ ಸಿಕ್ಕಿತು. ಈ ಅವಕಾಶದಲ್ಲಿ ಅಜರುದ್ದೀನ್‌ 30 ಗಜ ದೂರದಿಂದ ಬಾರಿಸಿದ ಚೆಂಡು ಎದುರಾಳಿ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ ಎದ್ದಿತು. ಅಭಿಮಾನಿಗಳು ಚಪ್ಪಾಳೆ ತಟ್ಟಿ ಆಟಗಾರರನ್ನು ಅಭಿನಂದಿಸಿದರು.

ಆ ನಂತರ ಸರ್ವಿಸಸ್‌ ಗುಣಮಟ್ಟದ ಆಟ ಆಡಿತು. ಸುರೇಶ್‌ ಮೆಯಿಟಿ ಮತ್ತು ಮುಖೇಶ್‌ ಕುಮಾರ್ ಅವರ ಗೋಲು ಗಳಿಕೆಯ ಪ್ರಯತ್ನಗಳು ವಿಫಲವಾದವು. ಕರ್ನಾಟಕದವರೂ ಸಿಕ್ಕ ಅವಕಾಶಗಳ ಲಾಭ ಎತ್ತಿಕೊಳ್ಳಲಿಲ್ಲ.

ರಾಜೇಶ್‌ ಮೋಡಿ: ದ್ವಿತೀಯಾರ್ಧ ದಲ್ಲಿ ಕರ್ನಾಟಕದ ಆಟ ಇನ್ನಷ್ಟು ಅರಳಿತು. 49ನೇ ನಿಮಿಷದಲ್ಲಿ ಮುಂಚೂಣಿ ವಿಭಾಗದ ಆಟಗಾರ ರಾಜೇಶ್‌ ಮೋಡಿ ಮಾಡಿದರು. ಸುನಿಲ್‌ ಕುಮಾರ್‌ ಒದ್ದು ಕಳುಹಿಸಿದ ಚೆಂಡನ್ನು ಅವರು ಗುರಿ ಮುಟ್ಟಿಸಿದರು. 72ನೇ ನಿಮಿಷದಲ್ಲೂ ಅಭಿ ಮಾನಿಗಳ ಮನ ಗೆದ್ದರು.

ಚೆಂಡನ್ನು ಡ್ರಿಬಲ್‌ ಮಾಡುತ್ತಾ ಆವರಣ ಪ್ರವೇಶಿಸಲು ಯತ್ನಿಸುತ್ತಿದ್ದ ನಾಯಕ ವಿಘ್ನೇಶ್‌ ಅವರನ್ನು ತಡೆಯಲು, ಸರ್ವಿಸಸ್‌ ತಂಡದ ರಕ್ಷಣಾ ವಿಭಾಗದ ಆಟಗಾರರು ಧಾವಿಸಿದರು. ಇದನ್ನು ಗಮನಿಸಿದ ವಿಘ್ನೇಶ್‌ ಚೆಂಡನ್ನು ಎದುರಾಳಿ ಗೋಲುಪೆಟ್ಟಿಗೆಯ ಸನಿಹವಿದ್ದ ರಾಜೇಶ್‌ ಅವರತ್ತ ತಳ್ಳಿದರು. ಅದನ್ನು ನಿಯಂತ್ರಣಕ್ಕೆ ಪಡೆದ ರಾಜೇಶ್‌, ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿದರು.

ಅವಕಾಶ ಕೈಚೆಲ್ಲಿದ ಸರ್ವಿಸಸ್‌: ಕೊನೆಯ 15 ನಿಮಿಷಗಳ ಆಟ ಬಾಕಿ ಇದ್ದಾಗ ಸರ್ವಿಸಸ್‌, ಗೋಲು ಗಳಿಸುವ ಎರಡು ಅವಕಾಶಗಳನ್ನು ಕೈಚೆಲ್ಲಿತು. ಹೆರೋಜಿತ್‌ ಸಿಂಗ್‌ ಬಾರಿಸಿದ ಚೆಂಡನ್ನು ಆತಿಥೇಯ ಗೋಲ್‌ಕೀಪರ್‌ ಶಾಯಿನ್‌ ಬಲಕ್ಕೆ ಜಿಗಿದು ತಡೆದರು.

ತಮ್‌ ಸಿಂಗ್‌ ತಲೆ ತಾಗಿಸಿ ಕಳುಹಿಸಿದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ತಾಗಿ ಅಂಗಳದಿಂದ ಆಚೆ ಹೋಯಿತು. ಹೀಗಿದ್ದರೂ ಈ ತಂಡದ ಆಟಗಾರರು ಛಲ ಬಿಡದೆ ಸೆಣಸಿದರು. 86ನೇ ನಿಮಿಷದಲ್ಲಿ ಹೆರೋಜಿತ್‌ ಸಿಂಗ್‌, ಗೋಲು ಗಳಿಸಿದ್ದರಿಂದ ತಂಡ ಹಿನ್ನಡೆ ತಗ್ಗಿಸಿಕೊಂಡಿತು. 89ನೇ ನಿಮಿಷದಲ್ಲಿ ಸೊಲೈಮಲೈನ್‌ ಗೋಲು ದಾಖಲಿಸಿ ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹೊತ್ತಿಸಿದರು.

ಜಯದ ಖಾತೆ ತೆರೆದ ತೆಲಂಗಾಣ
ತೆಲಂಗಾಣ ತಂಡ ಸಂತೋಷ್‌ ಟ್ರೋಫಿ ದಕ್ಷಿಣ ವಲಯ ಅರ್ಹತಾ ಚಾಂಪಿಯನ್‌ಷಿಪ್‌ನಲ್ಲಿ ಜಯದ ಖಾತೆ ತೆರೆಯಿತು.

ಭಾನುವಾರ ನಡೆದ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ತೆಲಂಗಾಣ 4–0 ಗೋಲುಗಳಿಂದ ಪುದುಚೇರಿ ತಂಡವನ್ನು ಸೋಲಿಸಿತು.
ವಿಜಯಿ ತಂಡದ ಮದನ್‌ಕುಮಾರ್‌ (14 ಮತ್ತು 64) ಮತ್ತು ಸೈಯದ್‌ ಅಬಿದ್‌ ಹುಸೇನ್‌ (18 ಮತ್ತು 60) ತಲಾ ಎರಡು ಗೋಲು ದಾಖಲಿಸಿದರು.

*

ಪಂದ್ಯ ವೀಕ್ಷಿಸಿದ ಪುನೀತ್‌
ನಟ ಪುನೀತ್ ರಾಜಕುಮಾರ್‌, ಭಾನುವಾರ ಕರ್ನಾಟಕ ಮತ್ತು ಸರ್ವಿಸಸ್‌ ನಡುವಣ ಪಂದ್ಯ ವೀಕ್ಷಿಸಿದರು. ಗಣ್ಯರ ಗ್ಯಾಲರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಕುಳಿತಿದ್ದ ಅವರು ಎಸ್‌.ಕೆ.ಅಜರುದ್ದೀನ್‌ ಗೋಲು ಗಳಿಸಿದಾಗ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

*
ಈ ಗೆಲುವು ಖುಷಿ ನೀಡಿದೆ. ಐದು ವರ್ಷಗಳ ನಂತರ ಕ್ವಾರ್ಟರ್‌ ಫೈನಲ್‌ ಲೀಗ್‌ಗೆ ಅರ್ಹತೆ ಗಳಿಸಿರುವುದರಿಂದ ಸಂತಸ ಇಮ್ಮಡಿಸಿದೆ. 
-ಪಿ.ಮುರಳೀಧರನ್‌, ಕರ್ನಾಟಕ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT