ಸಿರಿಯಾ ಪ್ರವೇಶಿಸಿದ ಟರ್ಕಿ ಪಡೆಗಳು

7

ಸಿರಿಯಾ ಪ್ರವೇಶಿಸಿದ ಟರ್ಕಿ ಪಡೆಗಳು

Published:
Updated:

ಹಸ್ಸಾ: ಟರ್ಕಿ ಪಡೆಗಳು ಭಾನುವಾರ ಸಿರಿಯಾದ ಕುರ್ದಿಶ್‌ ನಿಯಂತ್ರಣದಲ್ಲಿದ್ದ ಆಫ್ರಿನ್‌ ಪ್ರದೇಶ ಪ್ರವೇಶಿಸಿವೆ.

ಈ ಪ್ರದೇಶದಲ್ಲಿರುವ ‘ವೈಪಿಜಿ’ ಎಂದು ಕರೆಯಲಾಗುವ ‘ಪೀಪಲ್ಸ್‌ ಪ್ರೊಟೆಕ್ಷನ್‌ ಯೂನಿಟ್‌’ ಸಂಘಟನೆಯನ್ನು ಹೊರಹಾಕಲು ಟರ್ಕಿ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ವೈಪಿಜಿಯನ್ನು ಟರ್ಕಿ ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸಿದೆ.

‘ಸಿರಿಯಾದಲ್ಲಿ ವೈಪಿಜಿ ನಿಯಂತ್ರಣದಲ್ಲಿದ್ದ ಪ್ರದೇಶಕ್ಕೆ ಟರ್ಕಿ ಪಡೆಗಳು ಪ್ರವೇಶಿಸಿದ್ದು, ಶಸ್ತ್ರಾಸ್ತ್ರ ಸಂಗ್ರಹಾರದ ಮೇಲೆಯೂ ದಾಳಿ ನಡೆಸಲಾಗಿದೆ’ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ದಿರಿಮ್‌ ತಿಳಿಸಿದ್ದಾರೆ.

ಆದರೆ, ಐಎಸ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕ ವೈಪಿಜಿಗೆ ಬೆಂಬಲ ನೀಡಿತ್ತು. ಹೀಗಾಗಿ, ಈ ಕಾರ್ಯಾಚರಣೆಯಿಂದ ಟರ್ಕಿ ಮತ್ತು ಅಮೆರಿಕ ನಡುವಣ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕನಿಷ್ಠ ರಷ್ಯಾ ಬೆಂಬಲವಾದರೂ ಬೇಕು ಎಂದು ವಿಶ್ಲೇಷಿಸಲಾಗಿದೆ.

ಇದೇ ವಿಷಯಕ್ಕೆ ಫ್ರಾನ್ಸ್‌ ಸಹ ಟರ್ಕಿಗೆ ಎಚ್ಚರಿಕೆ ನೀಡಿದೆ. ಟರ್ಕಿ ನಡೆಯಿಂದ ಐಎಸ್‌ ವಿರುದ್ಧದ ಕಾರ್ಯಾಚರಣೆಗೆ ತೊಡಕಾಗಲಿದೆ ಎಂದು ತಿಳಿಸಿದೆ.

ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡಾಗಾನ್‌, ‘ಕಡಿಮೆ ಅವಧಿಯಲ್ಲಿ ಕಾರ್ಯಾಚರಣೆ ಅಂತ್ಯಗೊಳ್ಳಲಿದೆ. ಆದರೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಮತ್ತು ಈ ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸುವವರು ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಆಫ್ರಿನ್‌ ಪ್ರದೇಶದಲ್ಲಿ ಐಎಸ್‌ ಸಂಘಟನೆ ಚಟುವಟಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry