8 ಬಗೆಯ ಕ್ಯಾನ್ಸರ್‌ ಪತ್ತೆಗೆ ಒಂದೇ ಸಲ ರಕ್ತ ಪರೀಕ್ಷೆ!

7

8 ಬಗೆಯ ಕ್ಯಾನ್ಸರ್‌ ಪತ್ತೆಗೆ ಒಂದೇ ಸಲ ರಕ್ತ ಪರೀಕ್ಷೆ!

Published:
Updated:
8 ಬಗೆಯ ಕ್ಯಾನ್ಸರ್‌ ಪತ್ತೆಗೆ ಒಂದೇ ಸಲ ರಕ್ತ ಪರೀಕ್ಷೆ!

ನ್ಯೂಯಾರ್ಕ್‌: ಒಂದು ಸಲ ರಕ್ತ ಪರೀಕ್ಷೆ ಮಾಡುವ ಮೂಲಕ ಎಂಟು ಬಗೆಯ ಕ್ಯಾನ್ಸರ್‌ ಪತ್ತೆ ಹಚ್ಚುವ ವಿಧಾನವನ್ನು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಗ್ರಂಥಿ ವಿಜ್ಞಾನ ಮತ್ತು ರೋಗವಿಜ್ಞಾನ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

’ಕ್ಯಾನ್ಸರ್‌ಸೀಕ್‌’ (CancerSEEK) ವಿಧಾನದ ರಕ್ತ ಪರೀಕ್ಷೆ ಮೂಲಕ ಶೀಘ್ರವಾಗಿ ರೋಗ ಪತ್ತೆ ಹಚ್ಚುವುದರ ಜತೆಗೆ, ಎಂಟು ಸಾಮಾನ್ಯ ಬಗೆಯ ಕ್ಯಾನ್ಸರ್‌ಗಳಲ್ಲಿ ಯಾವ ಬಗೆಯದು, ದೇಹದ ಯಾವ ಭಾಗದಲ್ಲಿ ಉಂಟಾಗಿದೆ ಎಂಬುದನ್ನೂ ತಿಳಿಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಇದು ಯಾವುದೇ ಗಾಯ ಮಾಡದ ವಿಧಾನ. ಕಾಯಿಲೆ ಬಗ್ಗೆ ಬಹುವಿಶ್ಲೇಷಣೆ ಮಾಡಬಹುದಾದ ಪರೀಕ್ಷೆ. ಕ್ಯಾನ್ಸರ್‌ ಕಾಯಿಲೆಗಳ ಪ್ರೊಟೀನುಗಳು ಯಾವ ಹಂತದಲ್ಲಿವೆ ಮತ್ತು ಕ್ಯಾನ್ಸರ್‌ ವಂಶವಾಹಿಯಲ್ಲಿ ಇರುವ ದೋಷಗಳನ್ನು ಪತ್ತೆ ಹಚ್ಚುತ್ತದೆ.

ಅಂಡಾಶಯ, ಯಕೃತ್, ಹೊಟ್ಟೆ, ಮೇದೋಜೀರಕ, ಅನ್ನನಾಳ, ಕರುಳು, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ಗಳನ್ನು ಈ ವಿಧಾನದ ಮೂಲಕ ಪತ್ತೆ ಹಚ್ಚಬಹುದು. ಅಮೆರಿಕದ ಒಟ್ಟಾರೆ ಕ್ಯಾನ್ಸರ್‌ ರೋಗಿಗಳಲ್ಲಿ ಶೇಕಡ 60ರಷ್ಟು ಮಂದಿ ಈ ಎಂಟು ಬಗೆಯ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಇವುಗಳಲ್ಲಿ ಐದು ಬಗೆಯ ಕ್ಯಾನ್ಸರ್‌ ಪತ್ತೆ ಹಚ್ಚಲು ಸೂಕ್ತ ಪರೀಕ್ಷೆಗಳಿಲ್ಲ. ರೋಗ ಪತ್ತೆಯಾಗುವ ವೇಳೆಗೆ ಅವು ಶೇಕಡ 69ರಿಂದ ಶೇಕಡ 98ರವರೆಗೆ ಉಲ್ಬಣಿಸಿರುತ್ತವೆ.

‘ಒಟ್ಟು 1,005 ರೋಗಿಗಳನ್ನು ಈ ವಿಧಾನ ಬಳಸಿ ಪರೀಕ್ಷಿಸಲಾಗಿದೆ. ಸರಾಸರಿ ಶೇ 70ರಷ್ಟು ನಿಖರವಾಗಿ ರೋಗ ಪತ್ತೆ ಹಚ್ಚಿದ್ದೇವೆ. ಅತಿ ಹೆಚ್ಚು ಅಂದರೆ, ಅಂಡಾಶಯ ಕ್ಯಾನ್ಸರ್‌ ಅನ್ನು ಶೇ 98ರಷ್ಟು ನಿಖರವಾಗಿ ಮತ್ತು ಕಡಿಮೆ ಎಂದರೆ, ಸ್ತನ ಕ್ಯಾನ್ಸರ್‌ ಅನ್ನು ಶೇ 33ರಷ್ಟು ನಿಖರವಾಗಿ ಪತ್ತೆ ಹಚ್ಚಿದ್ದೇವೆ. ಇಂದು ಕ್ಯಾನ್ಸರ್‌ಗೆ ಇರುವ ವಿವಿಧ ಚಿಕಿತ್ಸಾ ಪದ್ಧತಿಗಳು ಕೆಲವೇ ರೋಗಿಗಳಿಗೆ ಮಾತ್ರ ಸಹಾಯಕವಾಗಿವೆ’ ಎಂದು ಜಾನ್ಸ್ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬರ್ಟ್ ವೋಗಲ್‌ಸ್ಟೀನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry