ಐಷಾರಾಮಿ ಹೋಟೆಲ್‌ ಮೇಲೆ ಉಗ್ರರ ದಾಳಿ: ಆರು ಮಂದಿ ಹತ್ಯೆ

7

ಐಷಾರಾಮಿ ಹೋಟೆಲ್‌ ಮೇಲೆ ಉಗ್ರರ ದಾಳಿ: ಆರು ಮಂದಿ ಹತ್ಯೆ

Published:
Updated:
ಐಷಾರಾಮಿ ಹೋಟೆಲ್‌ ಮೇಲೆ ಉಗ್ರರ ದಾಳಿ: ಆರು ಮಂದಿ ಹತ್ಯೆ

ಕಾಬೂಲ್: ಕಾಬೂಲ್‌ನ ಐಷಾರಾಮಿ ಹೋಟೆಲ್ ಮೇಲೆ ಭಯೋತ್ಪಾದಕರು ಶನಿವಾರ ರಾತ್ರಿ ದಾಳಿ ನಡೆಸಿ ಆರು ಮಂದಿಯನ್ನು ಹತ್ಯೆ ಮಾಡಿದ್ದಾರೆ. ತಾಲಿಬಾನ್‌ ಉಗ್ರರು ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.

ವಿಶೇಷ ಕಾರ್ಯಪಡೆಗಳು ಹೆಲಿಕಾಪ್ಟರ್ ಬಳಸಿ ಆರು ಅಂತಸ್ತಿನ ಹೋಟೆಲ್ ಕಟ್ಟಡದ ಮೇಲ್ಛಾವಣಿ ಮೇಲೆ ಬಂದಿಳಿದು ಕಾರ್ಯಾಚರಣೆ ನಡೆಸಿದರು. 12 ತಾಸು ನಡೆದ ದಾಳಿ ಪ್ರತಿದಾಳಿಯಲ್ಲಿ ವಿಶೇಷ ಕಾರ್ಯಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ. ಉಗ್ರರು ಒತ್ತೆ ಇರಿಸಿಕೊಂಡಿದ್ದ 150 ಜನರನ್ನು ಪಾರುಮಾಡಲಾಗಿದೆ. ಇವರಲ್ಲಿ 40 ವಿದೇಶಿಗರಿದ್ದರು ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹಿಮಿ ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ನಡೆಯುತ್ತಿದ್ದ ಮಾಹಿತಿ ತಂತ್ರಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಫ್ಗನ್ ದೂರ ಸಂಪರ್ಕದ ಪ್ರಾದೇಶಿಕ ನಿರ್ದೇಶಕ ಅಜೀಜ್ ತಯೆಬ್, ಉಗ್ರರು ಹೋಟೆಲ್‌ ಪ್ರವೇಶಿಸಿದ್ದನ್ನು ನೋಡಿದ್ದಾಗಿ ಹೇಳಿದ್ದಾರೆ.

‘ಒಂದೇ ಕ್ಷಣದಲ್ಲಿ ಎಲ್ಲವೂ ಅಸ್ತವ್ಯಸ್ತವಾಯಿತು. ಕಂಬವೊಂದರ ಹಿಂದೆ ಅಡಗಿಕೊಂಡು ನೋಡುತ್ತಿದ್ದೆ. ಕೆಲವು ಸೆಕೆಂಡ್‌ಗಳ ಹಿಂದೆ ಸಂತಸದಲ್ಲಿದ್ದ ಜನರು ಗಾಬರಿಯಲ್ಲಿ ಅರಚಿಕೊಂಡು ಓಡುವುದನ್ನು ನೋಡಿದೆ. ಕೆಲವರು ಗುಂಡೇಟಿಗೆ ಗುರಿಯಾಗಿ ಕೆಳಕ್ಕುರುಳಿದರು’ ಎಂದು ತಯೆಬ್ ‍ತಾವು ನೋಡಿದ ಪರಿಸ್ಥಿತಿ ವಿವರಿಸಿದ್ದಾರೆ.

ದಾಳಿ ವೇಳೆ ಸಿಕ್ಕಿಹಾಕಿಕೊಂಡ ಜನರು, ಹೋಟೆಲ್‌ನ ಮೇಲ್ಛಾವಣಿ ಏರಿ ಅಲ್ಲಿಂದ ಪಾರಾಗಲು ಯತ್ನಿಸುತ್ತಿದ್ದ ದೃಶ್ಯಗಳನ್ನು ಅಫ್ಗಾನಿಸ್ತಾನದ ಟೊಲೊ ಸುದ್ದಿ ಸಂಸ್ಥೆ ಪ್ರಸಾರ ಮಾಡಿತು. ಈ ವೇಳೆ ಒಬ್ಬ ವ್ಯಕ್ತಿ ಹಿಡಿತ ಕಳೆದುಕೊಂಡು ಕಟ್ಟಡದಿಂದ ಕೆಳಗೆ ಜಾರಿಬಿದ್ದ ದೃಶ್ಯವೂ ಪ್ರಸಾರವಾಯಿತು.

‘ದಾಳಿಕೋರರು ಹೋಟೆಲ್ ಒಳಗೆ ಇರುವ ಕುರಿತು ತಿಳಿದಿಲ್ಲ. ಆದರೆ ಮೊದಲನೆ ಮಹಡಿಯಿಂದ ಗುಂಡಿನ ದಾಳಿ ನಡೆಯುತ್ತಿರುವ ಸದ್ದು ಕೇಳಿಬರುತ್ತಿದೆ. ನಾವು ಕೋಣೆಯಲ್ಲಿ ಅಡಗಿ ಕುಳಿತಿದ್ದೇವೆ. ಭದ್ರತಾ ಪಡೆಗಳು ನಮ್ಮನ್ನು ರಕ್ಷಿಸಬೇಕು ಎಂದು ಬೇಡಿಕೊಳ್ಳುತ್ತೇನೆ’ ಎಂದು ಹೋಟೆಲ್‌ನಲ್ಲಿದ್ದ ವ್ಯಕ್ತಿಯೊಬ್ಬರು ಸುದ್ದಿಸಂಸ್ಥೆಗೆ ಕರೆ ಮಾಡಿ ತಿಳಿಸಿದ್ದರು ಎಂದು ವರದಿ ಆಗಿದೆ. ಆದರೆ ನಂತರದಲ್ಲಿ ಆ ವ್ಯಕ್ತಿಯ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ.

18 ಅಧಿಕಾರಿಗಳ ಹತ್ಯೆ: ಮತ್ತೊಂದೆಡೆ ಬಲ್ಖ್ ಪ್ರಾಂತದಲ್ಲಿ ಶನಿವಾರ ಮಧ್ಯರಾತ್ರಿ ಪೊಲೀಸರ ಮನೆಗಳನ್ನು ಹುಡುಕಿದ ತಾಲಿಬಾನ್‌ ಉಗ್ರರು ಕನಿಷ್ಠ 18 ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಉಪ ಆಯುಕ್ತ ಅಬ್ದುಲ್ ರಜಿಕ್ ಖದೆರಿ ಈ ವಿಷಯ ತಿಳಿಸಿದ್ದಾರೆ.

ಬಾಂಬ್ ದಾಳಿ: 12 ಮಂದಿ ಸಾವು

ಕಾಬುಲ್: ಹೇರತ್ ಪ್ರಾಂತದ ರಸ್ತೆಬದಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದಾರೆ.

ಈವರೆಗೆ ಯಾರೂ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಆದರೆ ಅಫ್ಗನ್ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡಿರುವ ತಾಲಿಬಾನಿಗಳೇ ಈ ದಾಳಿ ನಡೆಸಿರಬಹುದು ಎಂದು ಪೊಲೀಸ್ ಇಲಾಖೆ ವಕ್ತಾರ ಅಬ್ದುಲ್ ಅಹದ್ ವಲಿಜ್ದಾ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry