ಪಾಕ್‌ನಿಂದ ಶೆಲ್‌ ದಾಳಿ: ಯುದ್ಧಭೀತಿಯಲ್ಲಿ ಗ್ರಾಮಸ್ಥರು, 40 ಸಾವಿರ ಮಂದಿ ಸ್ಥಳಾಂತರ

7

ಪಾಕ್‌ನಿಂದ ಶೆಲ್‌ ದಾಳಿ: ಯುದ್ಧಭೀತಿಯಲ್ಲಿ ಗ್ರಾಮಸ್ಥರು, 40 ಸಾವಿರ ಮಂದಿ ಸ್ಥಳಾಂತರ

Published:
Updated:
ಪಾಕ್‌ನಿಂದ ಶೆಲ್‌ ದಾಳಿ: ಯುದ್ಧಭೀತಿಯಲ್ಲಿ ಗ್ರಾಮಸ್ಥರು, 40 ಸಾವಿರ ಮಂದಿ ಸ್ಥಳಾಂತರ

ಆರ್‌.ಎಸ್‌.ಪುರ(ಜಮ್ಮು): ಭಾರತ–ಪಾಕಿಸ್ತಾನ ಗಡಿಯಲ್ಲಿ ಕಳೆದ ಮೂರು ದಿನಗಳಿಂದ ಪಾಕಿಸ್ತಾನ ಸೇನೆ ನಡೆಸುತ್ತಿರುವ ಭಾರಿ ಶೆಲ್‌ ದಾಳಿಯಿಂದಾಗಿ ಗಡಿ ಭಾಗದ ಗ್ರಾಮಗಳು ನಿರ್ಜನವಾಗಿವೆ.

ಶೆಲ್‌ ದಾಳಿಯ ಭೀತಿಯಿಂದ ಗಡಿಯಲ್ಲಿರುವ ಅರ್ನಿಯಾ ಪಟ್ಟಣದ 18 ಸಾವಿರ ಮಂದಿ ಸೇರಿದಂತೆ ಒಟ್ಟು 40 ಸಾವಿರ ಜನರು ಗ್ರಾಮಗಳನ್ನು ತೊರೆದಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾನುವಾರು ಮತ್ತು ಆಸ್ತಿಗಳನ್ನು ನೋಡಿಕೊಳ್ಳಲು ಕೆಲವೇ ಮಂದಿ ಮಾತ್ರ ಗ್ರಾಮಗಳಲ್ಲಿ ಉಳಿದುಕೊಂಡಿದ್ದಾರೆ. ಕೃಷಿ ಚಟುವಟಿಕೆ ಸ್ಥಗಿತವಾಗಿದ್ದು, 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮೂರು ದಿನ ರಜೆ ಘೋಷಿಸಿವೆ. ಶೆಲ್ ದಾಳಿಯಲ್ಲಿ 131 ‌ಜಾನುವಾರುಗಳು ಮೃತಪಟ್ಟಿದ್ದು, 93 ಜಾನುವಾರು ಗಾಯಗೊಂಡಿವೆ. 94 ಕಟ್ಟಡ, ಮನೆಗಳಿಗೆ ಹಾನಿಯಾಗಿದೆ.

ಯುದ್ಧಭೂಮಿಯ ಅನುಭವ

ಶೆಲ್‌ ದಾಳಿಗೆ ಪ್ರತ್ಯುತ್ತರ ನೀಡಲು ಗಡಿ ಭದ್ರತಾ ಪಡೆಯ ಸಿಬ್ಬಂದಿ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಗ್ರಾಮಗಳ ಸಮೀಪ ಇರುವ ಗಡಿ ನಿಯಂತ್ರಣ ರೇಖೆ ಮತ್ತು ಹೊಲಗಳಲ್ಲಿ ಬೀಡು ಬಿಟ್ಟಿದ್ದಾರೆ.

‘ನಾವು ಯಾವುದೋ ಯುದ್ಧಭೂಮಿಯಲ್ಲಿದ್ದಂತೆ ಅನಿಸುತ್ತಿದೆ. ಬಾಂಬು ಮತ್ತು ಗುಂಡಿನ ಮೊರೆತ ಕೇಳಿಸುತ್ತಿದೆ’ ಎಂದು ಗಡಿಭಾಗದ ಭಯಭೀತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

‘ಈ ಪ್ರಮಾಣದ ಶೆಲ್ ದಾಳಿ, ಮಾರ್ಟರ್ ಬಾಂಬ್ ದಾಳಿಯನ್ನು 1965 ಮತ್ತು 1971ರ ಯುದ್ಧಗಳಲ್ಲಿ ನೋಡಿದ್ದೆ. ಆನಂತರ ಈಗಲೇ ನೋಡುತ್ತಿರುವುದು’ ಎಂದು ಗಡಿ ಭಾಗದ ಗ್ರಾಮದ 80 ವರ್ಷದ ಯಶ್‌ಪಾಲ್‌ ತಿಳಿಸಿದ್ದಾರೆ.

‘ಗಡಿಯೊಳಗೆ ನುಗ್ಗಲು ಹಿಂಜರಿಯಲ್ಲ’

ಲಖನೌ: ಸ್ವಂತ ನೆಲದಲ್ಲಿ ಮಾತ್ರವಲ್ಲ ಅಗತ್ಯ ಬಿದ್ದರೆ ಗಡಿ ದಾಟಿ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ಆ ದೇಶದ ಗಡಿಯೊಳಗೆ ನುಗ್ಗಿದ ಭಾರತೀಯ ಯೋಧರು ಉಗ್ರರನ್ನು ಕೊಂದು ಹಾಕಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ಪಾಕ್‌ಗೆ ವಿಶ್ವಸಂಸ್ಥೆಯ ತಂಡ

ಇಸ್ಲಾಮಾಬಾದ್‌: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸೈಯದ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ತನ್ನ ಆದೇಶವನ್ನು ಪಾಕಿಸ್ತಾನ ಎಷ್ಟರಮಟ್ಟಿಗೆ ಪಾಲಿಸಿದೆ ಎಂಬುದನ್ನು ಪರಿಶೀಲಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ವಿಚಾರಣಾ ತಂಡ ಈ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ.

ತಂಡವು ಇದೇ 25 ಮತ್ತು 26ರಂದು ಪಾಕಿಸ್ತಾನಕ್ಕೆ ಬರಲಿದೆ ಎಂಬ ಅಧಿಕಾರಿಯೊಬ್ಬರ ಹೇಳಿಕೆ ಆಧರಿಸಿ ‘ಡಾನ್‌’ ವರದಿ ಮಾಡಿದೆ.

ಹಫೀಜ್‌ ಮತ್ತು ಆತನಿಗೆ ಸಂಬಂಧಿಸಿದ ಭಯೋತ್ಪಾದನಾ ಗುಂಪುಗಳ ವಿರುದ್ಧ ಪಾಕಿಸ್ತಾನವು ಸಮರ್ಪಕವಾಗಿ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕ ಮತ್ತು ಭಾರತ ಆರೋಪಿಸಿವೆ. ಇದರೊಂದಿಗೆ ಜಾಗತಿಕ ಒತ್ತಡವೂ ಹೆಚ್ಚುತ್ತಿರುವ ಕಾರಣ ವಿಶ್ವಸಂಸ್ಥೆಯ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದೆ.

‘ಇದು ವಾಡಿಕೆಯ ಭೇಟಿ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಜಮಾತ್‌–ಉದ್‌–ದವಾ (ಜೆಯುಡಿ) ಮುಖ್ಯಸ್ಥ ಹಫೀಜ್‌ನನ್ನು ಪಾಕಿಸ್ತಾನವು ಕಳೆದ ನವೆಂಬರ್‌ನಲ್ಲಿ ಗೃಹಬಂಧನದಿಂದ ಬಿಡುಗಡೆಗೊಳಿಸಿದೆ.

*

-ಜಮ್ಮುನ ಆರ್‌.ಎಸ್‌. ಪುರ ವಲಯದಲ್ಲಿ ಪಾಕಿಸ್ತಾನ ಪಡೆಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿಡಿಸಿದ ಮಾರ್ಟರ್‌ ಶೆಲ್‌ಗಳನ್ನು ತೋರಿಸುತ್ತಿರುವ ಮಹಿಳೆಯರು. -ಪಿಟಿಐ ಚಿತ್ರ

*



-ಪಾಕಿಸ್ತಾನ ಪಡೆಗಳು ಭಾರಿ ಶೆಲ್‌ ದಾಳಿ ನಡೆಸಿದ್ದರಿಂದ ಆರ್‌.ಎಸ್‌. ಪುರ ವಲಯದಲ್ಲಿರುವ ಗಡಿ ಗ್ರಾಮ ಜೋರಾದಿಂದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದರು. -ಪಿಟಿಐ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry