‘ಪ್ರಜಾ ಪ್ರಭುತ್ವ’ – ತೂತುಬಾಯಿ ಮಾತು.

7

‘ಪ್ರಜಾ ಪ್ರಭುತ್ವ’ – ತೂತುಬಾಯಿ ಮಾತು.

Published:
Updated:
‘ಪ್ರಜಾ ಪ್ರಭುತ್ವ’ – ತೂತುಬಾಯಿ ಮಾತು.

ಪ್ರಜಾಪ್ರಭುತ್ವದಲ್ಲಿ ಮಾತು ಮಹತ್ವದ ಶಕ್ತಿಯಾಗಬೇಕು, ಏಕೆಂದರೆ ಪ್ರಭುತ್ವದಲ್ಲಿ ‘ಮಾತು’ ನಿರ್ಬಂಧಕ್ಕೆ ಒಳಪಟ್ಟಿತ್ತು. ಪ್ರಭುವನ್ನು ಪ್ರಶ್ನಿಸಿ ಯಾರೂ ಉಳಿಯುವಂತಿರಲಿಲ್ಲ. ರಾಜಾ ಪ್ರತ್ಯಕ್ಷ ದೇವರು ಎಂಬುದನ್ನು ಒಪ್ಪಿ ಬಾಳ ಬೇಕಿತ್ತು. ವಿರೋಧಿಸಿದವನ ಶಿರ ಹೋಯಿತ್ತು. ಹೀಗಾಗಿ ಪ್ರಭುವಿನ ಕಾರ್ಯವೈಖರಿ ಹಾಗೂ ಜೀವನ ವಿಧಾನದ ಬಗ್ಗೆ ಯಾರೂ ಚಕಾರ ಎತ್ತುವಂತಿರಲಿಲ್ಲ. ಇದಕ್ಕೆ ಹೊರತೆಂಬಂತೆ ಎಲ್ಲೋ ಕೆಲವು ಜನ ರಾಜರು ಮಾರುವೇಷದಲ್ಲಿ ತಮ್ಮ ರಾಜ್ಯವನ್ನು ತಾವೇ ಸುತ್ತಿ ಜನರ ಪಿಸುದನಿಯ ಮಾತುಗಳನ್ನು ಕೇಳಿ ತಮ್ಮ ಆಡಳಿತವೈಖರಿಯನ್ನು ಜನಸ್ನೇಹಿಯಾಗಿ ಬದಲಾಯಿಸಿಕೊಳ್ಳುತ್ತಿದ್ದರು.

ಇಂಥ ರಾಜರು ಅಪರೂಪ. ಪಂಪನೇ ಹೇಳಿದಂತೆ ಓಲಗಿಸಿ ಬಾಳ್ವುದೆ ಕಷ್ಟಂ ಇಳಾಧಿನಾಥರಂ – ಎಂಬುದು ವಾಸ್ತವ ಸತ್ಯ. ಆದರೆ ಇದು ಪ್ರಜಾಪ್ರಭುತ್ವದ ಕಾಲ. ಪ್ರಜಾಪ್ರತಿನಿಧಿಗಳು ಜನರ ಆಯ್ಕೆ. ಜನಪ್ರತಿನಿಧಿಗಳ ಕಾರ್ಯವೈಖರಿಯ ಬಗ್ಗೆ ಪ್ರತಿಕ್ರಿಯಿಸುವುದು ಜನರ ಹಕ್ಕು. ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರಜಾಪ್ರಭುತ್ವದ ಮೂಲಭೂತ ಶಕ್ತಿ. ಇಂಥ ಮೂಲಭೂತ ಹಕ್ಕು ಲಂಗು ಲಗಾಮು ಇಲ್ಲದ ಬತ್ತಲ ಕುದುರೆಯಲ್ಲ; ಅದೊಂದು ಸಾಮಾಜಿಕ ಹೊಣೆಯರಿತ ದಿವ್ಯ ಪ್ರಜ್ಞೆ.

‘ಅರ್ತ ಮಾಡ್ಕಂಡ್ ಅಂಗಲ್ ಇಂಗೆ ಅನ್ನೋರ್ ಮಾತು ಗಂಗೆ’. ಇದು ಪ್ರತಿಕ್ರಿಯೆಯ ಬಗ್ಗೆ ವಿಮರ್ಶೆಯ ಬಗ್ಗೆ ರಾಜರತ್ನಂ ಅವರ ಮಾತು. ಪ್ರಜಾಪ್ರಭುತ್ವದ ಕಾರ್ಯ ವೈಖರಿಯಲ್ಲಿ ಆಳುವಪಕ್ಷ-ವಿರೋಧಪಕ್ಷಗಳ ನಡುವಿನ ಪ್ರತಿಕ್ರಿಯೆ ಎಂಬುದು ಗಂಗೆ ಸ್ವರೂಪದಲ್ಲಿರಬೇಕು. ಗಂಗೆ ದಾಹಪರಿಹಾರಕ ಜೀವಜಲ. ಹಾಗೆಯೇ ಕೊಳೆಯನ್ನು ತೊಳೆಯುವ ನಿರ್ಮಲಜಲ.

ರಾಜಕಾರಣಿಗಳ ಮಾತು ಸಮಸ್ಯೆಗಳನ್ನು ಕುರಿತ ಗಂಗೆಯ ಗುಣದವುಗಳಾಗಬೇಕು. ಆದರೆ ಇಂದಿನ ಕೆಲವು ರಾಜಕಾರಣಿಗಳ ಮಾತು ಸಮಸ್ಯೆಗಳ ನಿವಾರಣೆಗಿಂತ ವ್ಯಕ್ತಿಗತ ನಿಂದನೆಯ ದಾರಿ ಹಿಡಿದಿರುವುದು ಅವರ ರಾಜನೀತಿಯ ನೈತಿಕ ಅಧಃ ಪತನಕ್ಕೆ ಕನ್ನಡಿ ಹಿಡಿಯುತ್ತಿದೆ. ತಾನು ವಿವೇಕಿಯಾದಲ್ಲದೆ ಜ್ಯೋತಿಯ ಬೆಳಗ ಕಾಣಲಾಗದು ಎನ್ನುತ್ತಾರೆ ಶರಣರು.

ಯಾವುದೇ ಮಾತನ್ನಾಡುವ ಮುನ್ನಾ ಆ ಮಾತಿನ ಗುರಿ ತನ್ನನ್ನು ಭೇದಿಸಿ ನಂತರ ಎದುರಾಳಿಯ ಕಡೆ ಹರಿಯಬೇಕು. ಆ ಗುರಿಗೆ ತಾನು ಬಲಿಹೋಗದ ನೈತಿಕಬಲದವನಾಗಿದ್ದರೆ ಎದುರಾಳಿಗೆ ಅದು ನೇರವಾಗಿ ತಾಗುತ್ತದೆ. ಅದು ತಪ್ಪಿ ತಾನೇ ಭ್ರಷ್ಠ ಘನಘೋರವಂಚಕನಾಗಿದ್ದರೆ ತನ್ನ ಮಾತಿನ ಗುರಿ ತನ್ನಲ್ಲೇ ನಟ್ಟು ಪರ್ಯವಸಾನವಾಗುತ್ತದೆ. ಆದ್ದರಿಂದಲೇ ಪ್ರಜಾ ಪ್ರಭುತ್ವದಲ್ಲಿ ಮಾತು ಜ್ಯೋತಿರ್ಲಿಂಗ ಸ್ವರೂಪಿಯಾಗಬೇಕು. ಕ್ರಿಯಾ ಶುದ್ಧಿ ಇಲ್ಲದವನ ಮಾತು ವ್ಯಕ್ತಿತ್ವದ ದುರ್ವಾಸನೆಯ ಅಪಾನವಾಯು. ಇಂಥ ಮಾತಾಳಿಗಳನ್ನು ಕುರಿತು ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮನ ಒಂದು ವಚನ ಇಂತಿದೆ.

ಮತ್ರ್ಯದ ಮನುಜರು ಸತ್ತರೆಲ್ಲ

ಕತ್ತಲೆಯೊಳು ಮುಳುಗಿ ಮಾತು ಕಲಿತುಕೊಂಡು

ತೂತುಬಾಯೊಳಗೆ ನುಡಿದು ಕಾತರಿಸಿ ಕಂಗೆಟ್ಟು

ಹೇಸಿಕೆಯಮಲದ ಕೊಣದಉಚ್ಚೆಯ ಬಾವಿಗೆ ಮೆಚ್ಚಿ

ಕಚ್ಚಿಯಾಡಿ ಹುಚ್ಚುಗೊಂಡರು ತಿರುಗುವ ಕತ್ತೆ ಮನುಜರ

ಮೆಚ್ಚರು ನಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ.

ಚುನಾವಣೆಯಲ್ಲಿ, ಪ್ರಜಾಪ್ರಭು ಮೆಚ್ಚುವುದು ಹುಚ್ಚುಗೊಂಡ ಮಾತಿನಮಲ್ಲವನ್ನಲ್ಲ ಮಾನಸಿಕ ಕೊಳಚೆ ಮಾತನ್ನಲ್ಲ, ಕ್ರಿಯಾಶುದ್ಧಿಯ ಕಾಯಕವನ್ನು; ಸತ್ಯ ಶುದ್ಧ ಕಾಯಕ ಜೀವಿಯನ್ನು. ಇದು ವಚನ ಧರ್ಮದ ಮಾತು-ಕೃತಿಗಳ ಸಾಂಗತ್ಯ ದರ್ಶನ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry