300 ಕೃತಿಗಳ ಡಿಜಿಟಲೀಕರಣ

7

300 ಕೃತಿಗಳ ಡಿಜಿಟಲೀಕರಣ

Published:
Updated:
300 ಕೃತಿಗಳ ಡಿಜಿಟಲೀಕರಣ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಭಾಷಾ ಸಂಸ್ಥಾನವು ಜಂಟಿಯಾಗಿ ಕನ್ನಡದ 300 ಕೃತಿಗಳನ್ನು ಡಿಜಿಟಲೀಕರಿಸಿ ಶೀಘ್ರವೇ ಅಂತರ್ಜಾಲಕ್ಕೆ ಸೇರ್ಪಡೆ ಮಾಡಲಿವೆ.

ಮೈಸೂರು ವಿ.ವಿ ಆರಂಭವಾಗಿ 100 ವರ್ಷ ಪೂರ್ಣಗೊಂಡಿದ್ದು, ಕುವೆಂಪು ಅವರ ಕನಸಿನ ಭಾಗವಾಗಿದ್ದ ಪ್ರಸಾರಾಂಗವೂ ಸೇರಿದಂತೆ ವಿ.ವಿ.ಯ ವಿವಿಧ ವಿಭಾಗಗಳು ಪ್ರಕಟಿಸಿರುವ ಮಹತ್ವದ ಕೃತಿಗಳ ಡಿಜಿಟಲ್‌ ಅವತರಣಿಕೆ ಹೊರತರಲಾಗುತ್ತಿದೆ. ಈ ಮೂಲಕ ಅಂತರ್ಜಾಲದಲ್ಲಿ ಕನ್ನಡ ಕೃತಿಗಳು ಸೇರ್ಪಡೆಯಾಗಲಿದ್ದು, ಕನ್ನಡದ ಬೆಳವಣಿಗೆಗೆ ಮಹತ್ವದ ಹೆಜ್ಜೆ ಎನ್ನಲಾಗಿದೆ.

ಏನಿದು ಡಿಜಿಟಲೀಕರಣ?: ಭಾರತೀಯ ಭಾಷಾ ಸಂಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಭಾರತವಾಣಿ’ ಯೋಜನೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಡುವೆ ಈ ಕುರಿತು ಒಪ್ಪಂದವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೃತಿಗಳು ಎಲ್ಲ ವೇದಿಕೆಗಳಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಮೈಸೂರು ವಿ.ವಿ ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪುರಾತತ್ವ ಸಂಶೋಧನಾ ಕೇಂದ್ರವು ಆರಂಭಗೊಂಡ ಕಾಲದಿಂದ ಪ್ರಕಟಿಸಿರುವ ಕೃತಿಗಳನ್ನು ಇದಕ್ಕಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಈ ಕೃತಿಗಳ ಎಲ್ಲ ಪುಟಗಳನ್ನು ಸ್ಕ್ಯಾನ್‌ ಮಾಡಿ, ಅದನ್ನು ಪಿಡಿಎಫ್‌ಗೆ (ಪೋರ್ಟಬಲ್‌ ಡಾಕ್ಯುಮೆಂಟ್ ಫಾರ್ಮ್ಯಾಟ್) ಪರಿವರ್ತಿಸಲಾಗುತ್ತದೆ. ಪುಸ್ತಕಗಳು ಪಿಡಿಎಫ್‌ನಲ್ಲಿ ಪರಿವರ್ತನೆಗೊಳ್ಳುತ್ತಿದ್ದಂತೆ ಅವನ್ನು ಡಿಜಿಟಲ್ ಲೋಕದಲ್ಲಿ ಸೇರಿಸಲು ಸಾಧ್ಯವಾಗುತ್ತದೆ. ನಂತರ, ಭಾರತವಾಣಿಯ ವೆಬ್‌ಸೈಟಿನಲ್ಲಿ (www.bharatavani.in) ಈ ಕೃತಿಗಳನ್ನು ಅಳವಡಿಸಲಾಗುತ್ತದೆ.

ಪಠ್ಯ ಸಂಪಾದನೆ: ಮೊದಲ ಹಂತದಲ್ಲಿ ಕೃತಿಗಳನ್ನು ಪಿಡಿಎಫ್‌ ಆಗಿ ಪರಿವರ್ತಿಸಲಾಗುತ್ತದೆ. ಆದರೆ, ಈ ಕೃತಿಗಳಲ್ಲಿರುವ ಪಠ್ಯವನ್ನು (Text) ಸಂಪಾದಿಸಲು ಸಾಧ್ಯವಿರುವುದಿಲ್ಲ. ಈ ಪಿಡಿಎಫ್‌ ಕೃತಿಗಳು ಛಾಯಾಚಿತ್ರದ ಸ್ವರೂಪ ಹೊಂದಿರುತ್ತವೆ. ಹಾಗಾಗಿ, ಮುಂದಿನ ಹಂತದಲ್ಲಿ ಪಠ್ಯವನ್ನು ಸಂಪಾದಿಸಲು ಸಾಧ್ಯವಾಗುವಂತೆ ವಿಶೇಷ ಸಾಫ್ಟ್‌ವೇರ್‌ಅನ್ನು ಇದಕ್ಕಾಗಿ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್ ಕನ್ನಡ ಪಠ್ಯವನ್ನು ನೀಡಲಿದ್ದು, ಅದನ್ನು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ವಿಶೇಷ.

‘ಭಾರತೀಯ ಭಾಷಾ ಸಂಸ್ಥಾನದಲ್ಲಿ 2015ರಲ್ಲಿ ‘ಭಾರತವಾಣಿ’ ಆರಂಭವಾದಾಗ ಮೈಸೂರು ವಿ.ವಿ.ಯ ಕೃತಿಗಳನ್ನು ಡಿಜಟೀಕರಣಗೊಳಿಸಬೇಕು ಎಂಬ ಚಿಂತನೆ ನಡೆದಿತ್ತು. ಆ ಕನಸು ಈಗ ನನಸಾಗುತ್ತಿದೆ. ಕನ್ನಡವನ್ನು ಬೆಳೆಸಬೇಕು ಎನ್ನುವುದು ಮೈಸೂರು ವಿ.ವಿ ಆಶಯಗಳಲ್ಲಿ ಒಂದು. ಅದಕ್ಕಾಗಿ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಡಿ.ಭಾರತಿ ತಿಳಿಸಿದರು.

ಇದಕ್ಕಾಗಿ ಮೈಸೂರು ವಿ.ವಿ ಯೋಜನಾ ನಿರ್ವಹಣೆ ಹಾಗೂ ಮೌಲ್ಯಮಾಪನ ಮಂಡಳಿಯ ಅಧ್ಯಕ್ಷ ಪ್ರೊ.ಯಶವಂತ ಡೋಂಗ್ರೆ ಅವರನ್ನು ನೇಮಿಸಿದೆ. ಇವರ ಉಸ್ತುವಾರಿಯಲ್ಲಿ ಕೃತಿಗಳ ಆಯ್ಕೆ ನಡೆಯಲಿದೆ. ‘ಭಾರತವಾಣಿ’ಯು ಈಗಾಗಲೇ ಕನ್ನಡದ ವಿವಿಧ ಕೃತಿಗಳನ್ನು ಡಿಜಿಟಲೀಕರಿಸಿದೆ. ಅದೇ ತಂತ್ರಜ್ಞಾನವನ್ನು ಬಳಸಿಕೊಂಡು ಮೈಸೂರು ವಿ.ವಿ ಕೃತಿಗಳ ಡಿಜಿಟಲೀಕರಣವೂ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry