‘ಹಿಟ್ ಅಂಡ್ ರನ್ ನಾನಲ್ಲ’

7

‘ಹಿಟ್ ಅಂಡ್ ರನ್ ನಾನಲ್ಲ’

Published:
Updated:
‘ಹಿಟ್ ಅಂಡ್ ರನ್ ನಾನಲ್ಲ’

ಕೊಪ್ಪಳ: ‘ಹಿಟ್ ಅಂಡ್ ರನ್ ನಾನಲ್ಲ. ಅದು ಸಿದ್ದರಾಮಯ್ಯ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿ.ಎಂ ಶಿಷ್ಯ ವರ್ತೂರು ಪ್ರಕಾಶ್ ಅವರು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ. ಆಪರೇಷನ್ ಕಮಲ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಿ.ಎಸ್.ಯಡಿಯೂರಪ್ಪ ಅವರಿಂದ ₹8 ಕೋಟಿ ಪಡೆದಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯ ಏನಾದರೂ ಉತ್ತರ ಕೊಟ್ಟಿದ್ದಾರೆಯೇ?, ಹಾರಿಕೆಯ ಉತ್ತರ ಕೊಟ್ಟು ಜಾರಿಕೊಳ್ಳುವುದೇ ಸಿದ್ದರಾಮಯ್ಯ ಅವರ ಜಾಯಮಾನ’ ಎಂದರು.

‘ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಈ ಹಿಂದೆ ವಿಶ್ವವಿದ್ಯಾಲಯಗಳ ಕುಲಪತಿಗಳು ದರೋಡೆಕೋರರು ಎಂದಿದ್ದರು. ಯಾರ ವಿರುದ್ಧವಾದರೂ ಕ್ರಮ ಆಗಿದೆಯೇ?, ಕ್ರಮ ಜರುಗಿಸಲು ಇವರ ಬಳಿ ಏನಾದರೂ ಇರಬೇಕಲ್ಲವೇ?, ಹೀಗೇ ಸುಮ್ಮನೆ ಹೇಳಿಕೆ ಕೊಡುತ್ತಾರೆ. ಅವರು ಕಷ್ಟಪಟ್ಟು ಬಂದವರಲ್ಲ. ಯಾವುದೋ ರಾಜಕೀಯ ಪಕ್ಷದ ಅಲೆಯಲ್ಲಿ ತೇಲಿ ಗೆದ್ದವರು’ ಎಂದರು.

‘ಗಣಿ ಇಲಾಖೆಯ ಅಕ್ರಮಗಳ ಕುರಿತ ವರದಿ ಹಿಂದೆ ಲೋಕಾಯುಕ್ತರು ಕೊಟ್ಟಿರುವಂಥದ್ದು. ಅದನ್ನು ನಾಲ್ಕು ವರ್ಷ ಎಂಟು ತಿಂಗಳು ಹಾಗೇ ಬಿಟ್ಟು, ಈಗ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿರುವಾಗ ಎಸ್ಐಟಿಗೆ ವಹಿಸಿದ್ದಾರೆ. ಕಾಂಗ್ರೆಸ್‌ನವರು ಎಲ್ಲಿ ದುರ್ಬಲರಿದ್ದಾರೋ ಅಂಥ ಕಡೆ ಬೇರೆ ಪಕ್ಷದವರನ್ನು ಹೆದರಿಸಿ, ಬೆದರಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಹುನ್ನಾರ ಇದಾಗಿದೆ’ ಎಂದು ಆರೋಪಿಸಿದರು.

‘ಸತ್ಯಾಂಶ ಹೊರತಂದು ಸರ್ಕಾರಕ್ಕೆ ಆಗಿರುವ ನಷ್ಟ ಭರ್ತಿ ಮಾಡಬೇಕು ಎಂಬ ಉದ್ದೇಶ ಇಲ್ಲಿಲ್ಲ. ಕಾಂಗ್ರೆಸ್ಸಿನ ಕುಂದಿರುವ ಶಕ್ತಿ ವೃದ್ಧಿಸಿಕೊಳ್ಳಲು ಎಸ್ಐಟಿ ಎಂಬ ಬ್ರಹ್ಮಾಸ್ತ್ರ ಬಿಡಲು ಹೊರಟಿದ್ದಾರೆ. ಅವರ ಬ್ರಹ್ಮಾಸ್ತ್ರಕ್ಕೆ ನಮ್ಮ ಪಕ್ಷದಲ್ಲಿ ಯಾರೂ ಹೆದರುವ ಪ್ರಶ್ನೆಯೇ ಇಲ್ಲ’ ಎಂದರು.

‘ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಬೆನ್ನೂ ಇಲ್ಲ, ಮೂಳೆಯೂ ಇಲ್ಲ. ಅದರಲ್ಲಿ ನನ್ನ ಪಾತ್ರ ಏನಿದೆ?, ಸುಮ್ಮನೆ ಪ್ರಕರಣ ಹಾಕಿ ಕೂತಿದ್ದಾರೆ. ಸರ್ಕಾರ ನಗೆಪಾಟಲಿಗೀಡಾಗಿದೆ. ಇದೊಂದೇ ಅಲ್ಲ, ಸರ್ಕಾರ ಹಲವು ಬಾರಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದೆ. ಜನರಿಗೆ ಕಾಂಗ್ರೆಸ್ಸೂ ಬೇಡ, ಬಿಜೆಪಿಯೂ ಬೇಡ. ರೈತರೂ ಇದೇ ಭಾವನೆಯಲ್ಲಿದ್ದಾರೆ. ಹೀಗಾಗಿ ಜೆಡಿಎಸ್‌ ಬೆಂಬಲಿಸುವ ಮನೋಭಾವ ಬಂದಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry