25ಕ್ಕೆ ರಾಜ್ಯ, ಫೆ.4ಕ್ಕೆ ಬೆಂಗಳೂರು ಬಂದ್‌

7

25ಕ್ಕೆ ರಾಜ್ಯ, ಫೆ.4ಕ್ಕೆ ಬೆಂಗಳೂರು ಬಂದ್‌

Published:
Updated:
25ಕ್ಕೆ ರಾಜ್ಯ, ಫೆ.4ಕ್ಕೆ ಬೆಂಗಳೂರು ಬಂದ್‌

ಹುಬ್ಬಳ್ಳಿ: ಮಹದಾಯಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ,  ಜ.25ರಂದು ಕರ್ನಾಟಕ ಬಂದ್‌ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

ಈ ವಿಷಯವಾಗಿ, ಫೆ.3ರೊಳಗೆ ಪ್ರಧಾನಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಫೆ.4ರಂದು ಬೆಂಗಳೂರು ಬಂದ್‌ ನಡೆಸುವ ಮೂಲಕ ಅವರಿಗೆ ಹೋರಾಟದ ಬಿಸಿ ಮುಟ್ಟಿಸಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಂಗಳೂರಿಗೆ ಬರಲಿರುವ ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಅಲ್ಲದೇ ಅವರು ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಅಲ್ಲಿ ಹೋರಾಟಗಾರರು ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಗೆ ಅಡ್ಡಿ: ವಾಟಾಳ್‌ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಸಭಾಂಗಣಕ್ಕೆ ಬಂದ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖಂಡರು, ‘ಮಹದಾಯಿ ವಿಷಯವಾಗಿ ಪದೇ ಪದೇ ಬಂದ್‌ ನಡೆಸುತ್ತಿರುವುದರಿಂದ ಇಲ್ಲಿನ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ. ಇದರ ಬದಲು, ಗೋವಾ ರಾಜ್ಯಕ್ಕೆ ಹಾಗೂ ಪ್ರಧಾನಿಗೆ ಬಿಸಿ ಮುಟ್ಟಿಸುವ ಹೋರಾಟ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಜ.25ರ ಬದಲು ಫೆ 4ರಂದು ಕರ್ನಾಟಕ ಬಂದ್‌ಗೆ ಕರೆ ನೀಡಬೇಕು’ ಎಂದು ಸಮನ್ವಯ ಸಮಿತಿ ಗೌರವ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಅಧ್ಯಕ್ಷ ಲೋಕನಾಥ ಹೆಬಸೂರ, ಸಂಚಾಲಕರಾದ ಅಮೃತ ಇಜಾರಿ, ಮಹೇಶ ಪತ್ತಾರ, ವಿಕಾಸ ಸೊಪ್ಪಿನ, ಕುಮಾರಸ್ವಾಮಿ ಹಿರೇಮಠ ಒತ್ತಾಯಿಸಿದರು. ಇದರಿಂದ ಪತ್ರಿಕಾಗೋಷ್ಠಿಯಲ್ಲಿ ಕೆಲ ಹೊತ್ತು ಗದ್ದಲ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಳಿಕ ಸಮನ್ವಯ ಸಮಿತಿಯ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ವಾಟಾಳ್‌, ‘ಈಗಾಗಲೇ ಜ.25ರಂದು ಕರ್ನಾಟಕ ಬಂದ್‌ ನಡೆಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ಅಂದಿನ ಬಂದ್‌ ಅನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ, ಫೆ.4ರಂದು ಪ್ರಧಾನಿ ಬೆಂಗಳೂರಿಗೆ ಬರುತ್ತಿರುವುದರಿಂದ ಅಂದು ಬೆಂಗಳೂರು ಬಂದ್‌ ಮಾಡೋಣ’ ಎಂದು ಹೇಳಿದರು.

ಇದಕ್ಕೆ ಸಮ್ಮತಿಸಿದ ಮಹದಾಯಿ ಹೋರಾಟಗಾರರು, ‘ಬೆಂಗಳೂರು ಬಂದ್‌ ನಡೆಸುವ ಮೂಲಕ ಪ್ರಧಾನಿಗೆ ಅಂದು ಒಂದು ಹನಿ ನೀರು ಸಿಗದಂತೆ ಮಾಡೋಣ. ಉತ್ತರ ಕರ್ನಾಟಕ ಭಾಗದ ಸಾವಿರಾರು ರೈತರು, ಹೋರಾಟಗಾರರು ಬೆಂಗಳೂರು ಬಂದ್‌ನಲ್ಲಿ ಭಾಗವಹಿಸುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry