‘ವರಮಾನ ಹೆಚ್ಚುತ್ತಿದೆ; ಸಂತಸ ಕುಂದುತ್ತಿದೆ’

7

‘ವರಮಾನ ಹೆಚ್ಚುತ್ತಿದೆ; ಸಂತಸ ಕುಂದುತ್ತಿದೆ’

Published:
Updated:
‘ವರಮಾನ ಹೆಚ್ಚುತ್ತಿದೆ; ಸಂತಸ ಕುಂದುತ್ತಿದೆ’

ಧಾರವಾಡ: ‘ಎಲ್ಲರೂ ಚೆನ್ನಾಗಿದ್ದೀರಾ? ಕುಶಲ ತಾನೆ?’

ವೇದಿಕೆಯ ಮೇಲಿದ್ದ ಪತ್ರಕರ್ತ ನಾಗೇಶ ಹೆಗಡೆ ಸಭಿಕರಲ್ಲಿ ಹೀಗೆ ಕೇಳುವುದರ ಮೂಲಕವೇ ಮಾತು ಆರಂಭಿಸಿದರು. ಅವರ ಪ್ರಶ್ನೆಗೆ ತಕ್ಷಣ ‘ಆರಾಮು’ ಎಂಬ ಒಕ್ಕೊರಲ ಪ್ರತಿಕ್ರಿಯೆ ಬಂತು. ನಸುನಕ್ಕು ಮುಂದುವರಿದ ಅವರು ಹೇಳಿದ್ದು, ‘‘ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾರನ್ನೇ ಚೆನ್ನಾಗಿದ್ದೀರಾ ಎಂದು ಕೇಳಿದರೂ ಆರಾಮು ಎಂದೇ ಹೇಳುತ್ತಾರೆ. ಆದರೆ ವಿಶ್ವಸಂಸ್ಥೆ ಕಳೆದ ವರ್ಷ ಪ್ರಕಟಿಸಿದ ‘ವಿಶ್ವ ಸಂತಸ ಸೂಚ್ಯಂಕ’ದ ಪಟ್ಟಿಯಲ್ಲಿ ಜಗತ್ತಿನ 160 ದೇಶಗಳಲ್ಲಿ ನಾವು 122ನೇ ಸ್ಥಾನದಲ್ಲಿದ್ದೇವೆ. ಐದು ವರ್ಷಗಳ ಹಿಂದೆ 114ನೇ ಸ್ಥಾನದಲ್ಲಿದ್ದೆವು. ಅಂದರೆ ವರ್ಷದಿಂದ ವರ್ಷಕ್ಕೆ ನಮ್ಮ ಸಂತಸ ಕಡಿಮೆ ಆಗುತ್ತಿದೆ.’

ತಮ್ಮ ಮಾತನ್ನು ಇನ್ನಷ್ಟು ವಿಸ್ತರಿಸಿದ ಅವರು, ‘ನಮ್ಮೆಲ್ಲರ ಸರಾಸರಿ ವರಮಾನ ಒಂದು ಲಕ್ಷದ ಮೂರು ಸಾವಿರ ರೂಪಾಯಿ. ಕೇವಲ ಮೂವತ್ತು ವರ್ಷದ ಹಿಂದೆ ಇದು ಮೂವತ್ತು ಸಾವಿರ ರೂಪಾಯಿಗಳಾಗಿತ್ತು. ಅಂದರೆ ನಮ್ಮ ವರಮಾನ ಜಾಸ್ತಿಯಾಗುತ್ತಿದೆ, ಆದರೆ ಸಂತೋಷ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಂದು ಅಭಿವೃದ್ಧಿಯ ಅರ್ಥವನ್ನೇ ಪ್ರಶ್ನಿಸಬೇಕಾಗಿದೆ’ ಎಂದು ಮುಂದಿನ ಚರ್ಚೆಗೆ ತಳಹದಿ ಹಾಕಿದರು.

ಸಾಹಿತ್ಯ ಸಂಭ್ರಮದ ಕೊನೆಯ ದಿನ ‘ಅಭಿವೃದ್ಧಿ ಮತ್ತು ಪರಿಸರ’ ಎಂಬ ವಿಷಯದ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರ ಅಥವಾ ಪರಿಸರ ತಜ್ಞರು ಪರಿಭಾವಿಸುತ್ತಿರುವ ‘ಅಭಿವೃದ್ಧಿ’ಯ ವ್ಯಾಖ್ಯಾನಕ್ಕೂ ಜನರು ಅಪೇಕ್ಷೆಗೂ ವ್ಯತ್ಯಾಸವಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವ ಎರಡು ಪ್ರಸಂಗಗಳನ್ನು ನಿದರ್ಶನವಾಗಿ ನೀಡುವ ಮೂಲಕ ಪ್ರಜಾವಾಣಿ ವಿಶೇಷ ವರದಿಗಾರ ರವೀಂದ್ರ ಭಟ್ಟ ಚರ್ಚೆಗೆ ಚಾಲನೆ ನೀಡಿದರು. ನಾವು ಯಾವುದನ್ನು ಅಭಿವೃದ್ಧಿ ಅಥವಾ ಸೌಕರ್ಯ ಎಂದು ಭಾವಿಸಿರುತ್ತೇವೆಯೋ ಅದು ಪರಿಸರಕ್ಕೆ ಪೂರಕವಾಗಿರುತ್ತದೆಯೇ ಅಥವಾ ವಿರುದ್ಧವಾಗಿರುತ್ತದೆಯೇ ಎಂಬ ಸಂದೇಹ ಅವರ ಮಾತುಗಳಲ್ಲಿತ್ತು.

ಈ ಅನುಮಾನವನ್ನು ಇನ್ನಷ್ಟು ಖಚಿತಗೊಳಿಸುವ ರೀತಿಯಲ್ಲಿ ಲೇಖಕ ನರೇಂದ್ರ ರೈ ದೇರ್ಲ ಚರ್ಚೆಯನ್ನು ಮುಂದುವರಿಸಿದರು. ‘ಇಂದು ಜಗತ್ತಿನಲ್ಲಿ ಅಭಿವೃದ್ಧಿಯ ಪರಾಕಾಷ್ಠೆಯಲ್ಲಿ ಇರುವಂಥ ರಾಷ್ಟ್ರ ಚೀನಾದಲ್ಲಿ ಆಮ್ಲಜನಕವನ್ನು ಟಿನ್‌ನಲ್ಲಿ ತುಂಬಿ ಮಾರಾಟ ಮಾಡುವ ಒಂದು ಹೊಸ ಉದ್ಯಮ ಆರಂಭಗೊಂಡಿದೆ. ಆ ರಾಷ್ಟ್ರದ ಮಹಾನಗರದಲ್ಲಿ ಬದುಕುವ ಶೇ. 60ರಷ್ಟು ಜನ ಬಾಯಿಮುಚ್ಚಿಗೆಯನ್ನು ಹಾಕಿಕೊಂಡು ಓಡಾಡುತ್ತಾರಂತೆ. ಅಮೆರಿಕದಲ್ಲಿ ಒಬ್ಬ ವ್ಯಕ್ತಿ ನಾಲ್ಕು ಸಾವಿರ ಡಾಲರ್‌ ಅನ್ನು ಆಹಾರಕ್ಕೆ ಖರ್ಚು ಮಾಡುತ್ತಿದ್ದರೆ, ಎಂಟು ಸಾವಿರ ಡಾಲರ್‌ ಔಷಧಕ್ಕಾಗಿ ಖರ್ಚು ಮಾಡುತ್ತಿದ್ದಾನೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿಶ್ವವನ್ನು 15 ಸಲ ಸರ್ವನಾಶ ಮಾಡಬಲ್ಲಷ್ಟು ಅಣು ಬಾಂಬ್‌ಗಳು ನಮ್ಮಲ್ಲಿ ಈಗಾಗಲೇ ಇದೆ. ಆದರೆ ಈ ಜಗತ್ತಿನ ಜನರಿಗೆ ಉಸಿರಾಡಲು ಸಾಕಾಗುವಷ್ಟು ಆಮ್ಲಜನಕ ಇದೆಯೇ? ಪರಿಶುದ್ಧ ನೀರು, ವಿಷವಿಲ್ಲದ ಅನ್ನ ಬೆಳೆಯುವಂಥ ಮಣ್ಣು ಇದೆಯೇ ಎಂಬ ಕುರಿತೂ ನಾವು ಆಲೋಚಿಸಬೇಕಾಗಿದೆ’ ಎಂದರು.

‘ಅನಿಕೇತನ ಪ್ರಜ್ಞೆ’ಯ ಒಳಗೆ ಮನುಷ್ಯ ಮಾತ್ರ ಯಜಮಾನನಲ್ಲ. ಈ ಜಗತ್ತಿನಲ್ಲಿ ಇರುವೆ, ಕೋಗಿಲೆ, ಪಾರಿಜಾತದ ಗಿಡ, ನೀರಿನ ತೊರೆಗಳಿಗೆ ಇರುವಷ್ಟು ಮಹತ್ವ ಮಾತ್ರವೇ ಮನುಷ್ಯನಿಗೂ ಇರುತ್ತದೆ ಎಂಬ ಕುವೆಂಪು ಆಶಯವನ್ನು ನೆನಪಿಸಿಕೊಂಡ ಅವರು ‘ಕೃಷಿಯೇ ಈ ಜಗತ್ತಿನ ಮೊದಲ ಸಂಸ್ಕೃತಿ’ ಎಂಬ ಮಾತನ್ನೂ ಒತ್ತಿ ಹೇಳಿದರು.

ಅಭಿವೃದ್ಧಿಯ ವ್ಯಾಖ್ಯಾನಗಳ ಕುರಿತು ಚರ್ಚೆಯನ್ನು ಮರುಹೊರಳಿಸಿದ ಅರಣ್ಯ ಇಲಾಖೆ ಅಧಿಕಾರಿ ಟಿ.ವಿ. ಮಂಜುನಾಥ್, ‘ಆಸ್ಪತ್ರೆ, ಬಸ್‌ನಿಲ್ದಾಣ, ಹೋಟೆಲ್‌ ಹೀಗೆ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವೇ ಅಭಿವೃದ್ಧಿ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಹಾಗೆ ನಿರ್ಮಾಣವಾದ ಕಟ್ಟಡಗಳ ಬಳಕೆ ಯಾವ ರೀತಿ ಆಗುತ್ತಿವೆ. ಅವುಗಳ ತ್ಯಾಜ್ಯಗಳನ್ನು ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ನಾವು ಯೋಚಿಸುವುದೇ ಇಲ್ಲ’ ಎಂದು ಹೇಳಿದರು.

‘ಅಭಿವೃದ್ಧಿಯ ಹೆಸರಿನಲ್ಲಿ ಕೆರೆ, ಹಳ್ಳ, ಕೊಳ್ಳಗಳನ್ನು, ಪ್ರಾಣಿಗಳ ಆವಾಸಸ್ಥಾನಗಳನ್ನು ಮನುಷ್ಯ ಅತಿಕ್ರಮಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಪ್ರಕೃತಿ ತಾನೇ ತನ್ನ ಜಾಗಗಳನ್ನು ಹುಡುಕಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕಳೆದ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿರುವುದು, ಗ್ರಾಮಗಳಿಗೆ ಕಾಡು ಪ್ರಾಣಿಗಳು ನುಗ್ಗುತ್ತಿರುವುದು ಈ ಪ್ರಕ್ರಿಯೆಯ ಲಕ್ಷಣಗಳಾಗಿವೆ’ ಎಂಬುದು ಅವರ ಅಭಿಪ್ರಾಯ.

ಪರಿಸರ ಮನುಷ್ಯನ ಅಗತ್ಯ

ಗೋಷ್ಠಿಯ ಕೊನೆಯಲ್ಲಿ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದ್ದು ಮನುಷ್ಯನ ಅಗತ್ಯ ಎಂದು ಒತ್ತಿ ಹೇಳಿದ ಮಂಜುನಾಥ್‌, ‘ಯಾವುದೇ ಆಹಾರ ಸರಪಳಿಯಲ್ಲಿಯೂ ಮನುಷ್ಯನ ಪಾತ್ರ ಇಲ್ಲ. ಯಾವುದೇ ಪ್ರಾಣಿಗಳಿಗೆ, ನಿಸರ್ಗಕ್ಕೆ ಮನುಷ್ಯನ ಅಗತ್ಯ ಇಲ್ಲ. ಆದರೆ ಮನುಷ್ಯನಿಗೆ ಅವೆಲ್ಲವೂ ಬೇಕು. ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವುದೂ ಅವನ ಅಗತ್ಯವೇ ಆಗಿದೆ’ ಎಂದು ಹೇಳಿದರು.

ಸಂಪತ್ತಿನ ಅಸಮಾನ ಹಂಚಿಕೆ

ದೇಶದ ಆರ್ಥಿಕ ಶ್ರೀಮಂತಿಕೆ ಹೆಚ್ಚುತ್ತಿರುವುದರ ಜೊತೆಗೇ ಸೃಷ್ಟಿಯಾಗುತ್ತಿರುವ ವೈರುಧ್ಯಗಳ ಕಡೆಗೆ ಗಮನ ಸೆಳೆದ ನಾಗೇಶ ಹೆಗಡೆ, ‘ನಮ್ಮ ದೇಶದ ಶೇ. 80ರಷ್ಟು ಸಂಪತ್ತು ಶೇ. 20ರಷ್ಟು ಜನರ ಬಳಿ ಇದೆ. ಈ ಶ್ರೀಮಂತರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ ಸಾಮಾನ್ಯ ನಾಗರಿಕರ ಎಲ್ಲ ಸೌಕರ್ಯಗಳನ್ನೂ ಕಸಿದುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಸಂಪತ್ತಿನ ಅಸಮಾನ ಹಂಚಿಕೆಗೆ ಮನುಷ್ಯನ ಸಹಕರಿಸುವ ಮತ್ತು ನಿಯಂತ್ರಿಸುವ ಗುಣವೇ ಕಾರಣ ಎಂದು ವಿಶ್ಲೇಷಿಸಿದ ದೇರ್ಲ, ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದು ಹೀಗೆ:

‘ಒಂದು ಕರಡಿ ಇನ್ನೊಂದು ಕರಡಿಯ ಕೈಯಲ್ಲಿರುವ ಬಾಳೆಹಣ್ಣನ್ನು ಮುಟ್ಟದೆ, ಬಡಿಯದೇ ಬಗ್ಗಿಸಿಕೊಳ್ಳದೆ ವಶಪಡಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಮನುಷ್ಯ ಬರೀ ಮಾತಿನಿಂದಲೇ ಮರಳುಗೊಳಿಸಿ ಇನ್ನೊಬ್ಬ ಮನುಷ್ಯನ ಕೈಯಲ್ಲಿರುವ ಬಾಳೆಹಣ್ಣನ್ನು ವಶಪಡಿಸಿಕೊಳ್ಳಬಲ್ಲ. ಮರದಿಂದ ಬಿದ್ದ ಹಣ್ಣನ್ನು ಬೇರೆ ಪ್ರಾಣಿ ತೆಗೆದುಕೊಳ್ಳುವ ಮುಂಚೆ ವೇಗವಾಗಿ ಓಡಿ ದಕ್ಕಿಸಿಕೊಳ್ಳಬಲ್ಲ. ಅವನ ಈ ವೇಗ ಮತ್ತು ಸಹಕರಿಸುವ ಗುಣದಿಂದಾಗಿಯೇ ಇಂದು ಸಂಪತ್ತು ಕೆಲವೇ ಜನರ ಬಳಿಯಲ್ಲಿ ಸೇರಿಕೊಂಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry