ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹಗಳ ಪ್ರಯೋಜನದ ಅರಿವಿಲ್ಲದೆ ಟೀಕೆ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಾಹ್ಯಾಕಾಶ ಯೋಜನೆಗಳಿಗೆ ಹಣ ವ್ಯಯಿಸುವುದು ವ್ಯರ್ಥ ಎಂದು ಅನೇಕರು ಹಗುರವಾಗಿ ಮಾತನಾಡುತ್ತಾರೆ. ಉಪಗ್ರಹಗಳಿಂದ ಪ್ರಯೋಜನ ಪಡೆದವರೇ, ಈ ಬಗ್ಗೆ ಅರಿವಿಲ್ಲದವರೇ ಇಂಥ ಟೀಕೆ ಮಾಡುತ್ತಿರುವುದು ವಿಪರ್ಯಾಸ’ ಎಂದು ವಿಜ್ಞಾನಿ ಹಾಲ್ಡೊಡ್ಡೇರಿ ಸುಧೀಂದ್ರ ಬೇಸರ ವ್ಯಕ್ತಪಡಿಸಿದರು.

ಸಂವಾದ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಾಹ್ಯಾಕಾಶದಲ್ಲಿ ಭಾರತದ ಬೆರಗು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಾಹನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಮುಂಚೂಣಿಯಲ್ಲಿದೆ. ಪಾಶ್ಚಾತ್ಯ ದೇಶಗಳಿಂದ ಉಪಕರಣಗಳನ್ನು ಎರವಲು ಪಡೆದು ಉಪಗ್ರಹ ಉಡಾವಣೆ ಮಾಡುವ ಹಂತದಿಂದ, ನಮ್ಮದೇ ರಾಕೆಟ್‌ ಬಳಸಿ ಬೇರೆ ದೇಶಗಳ ಉಪಗ್ರಹ ಉಡಾಯಿಸುವ ಹಂತಕ್ಕೆ ತಲುಪಿದ್ದೇವೆ. ರೇಡಿಯೊ, ಟೆಲಿವಿಷನ್, ಮೊಬೈಲ್‌ ಹಾಗೂ ಅಂತರ್ಜಾಲವನ್ನು ಬಳಸುವ ಪ್ರತಿಯೊಬ್ಬರೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಾಗಿ ಬಂದ ಹಾದಿಯನ್ನು ತಿಳಿಯಲೇಬೇಕು’ ಎಂದು ಹೇಳಿದರು.

‘ಉಪಗ್ರಹ ಉಡಾವಣೆಯ ಲೆಕ್ಕಾಚಾರ ಸ್ವಲ್ಪ ತಪ್ಪಿದರೂ, ಅದು ಮತ್ತೊಂದು ದೇಶದ ಮೇಲೆ ಸಿಡಿಸುವ ಕ್ಷಿಪಣಿಯಾಗುತ್ತದೆ. ಈ ಎಲ್ಲಾ ಎಚ್ಚರಿಕೆಗಳನ್ನು ಇಟ್ಟುಕೊಂಡು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶ ಮಾತ್ರ ಹೆಚ್ಚು ದೂರಸಂವೇದಿ ಉಪಗ್ರಹಗಳನ್ನು ಕಾರ್ಯನಿರ್ವಹಣೆ ಯೋಗ್ಯ ಸ್ಥಿತಿಯಲ್ಲಿ ಇಟ್ಟುಕೊಂಡಿದೆ’ ಎಂದರು.

ಬಾಹ್ಯಾಕಾಶ ತ್ಯಾಜ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಾಹ್ಯಾಕಾಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ ಚೀನಾದ ಉಪಗ್ರಹಗಳೇ ಹೆಚ್ಚಿವೆ ಎಂಬ ಅಂಶ ತಿಳಿದು ಬಂದಿದೆ. ಭಾರತವೂ ತ್ಯಾಜ್ಯ ನಿರ್ಮೂಲನೆ ಬಗ್ಗೆ ಚಿಂತಿಸುತ್ತಿದೆ. ಅನೇಕ ಉಪಯೋಗಕ್ಕಾಗಿ ಒಂದು ಉಪಗ್ರಹ ಉಡಾವಣೆ ಮಾಡುವುದು, ಉಪಗ್ರಹಗಳ ಜೀವಿತಾವಧಿಯನ್ನು ಹೆಚ್ಚು ಮಾಡುವುದು ಈ ರೀತಿಯ ಪ್ರಯತ್ನಗಳು ಇಲ್ಲಿ ಆಗುತ್ತಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT