6 ತಿಂಗಳಲ್ಲಿ ವೈದ್ಯ ಪದ್ಧತಿ ಕಲಿಕೆ ಸಾಧ್ಯವೇ

7
ರಾಷ್ಟ್ರೀಯ ವೈದ್ಯಕೀಯ ಮಸೂದೆ ವಿರೋಧಿ ಸಮ್ಮೇಳನದಲ್ಲಿ ವೈದ್ಯರ ಪ್ರಶ್ನೆ

6 ತಿಂಗಳಲ್ಲಿ ವೈದ್ಯ ಪದ್ಧತಿ ಕಲಿಕೆ ಸಾಧ್ಯವೇ

Published:
Updated:
6 ತಿಂಗಳಲ್ಲಿ ವೈದ್ಯ ಪದ್ಧತಿ ಕಲಿಕೆ ಸಾಧ್ಯವೇ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯು ಆಯುಷ್‌ (ಆಯರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ) ವೈದ್ಯರು ಆಧುನಿಕ ವೈದ್ಯ ಪದ್ಧತಿ ಅಭ್ಯಾಸಕ್ಕೆ 6 ತಿಂಗಳ ಬ್ರಿಡ್ಜ್‌ ಕೋರ್ಸ್‌ ಆರಂಭ ಮಾಡಬಹುದು ಎಂದು ಹೇಳಿದೆ. ಅದನ್ನು ಅಧ್ಯಯನ ಮಾಡಲು ಇಷ್ಟು ಕಡಿಮೆ ಅವಧಿ ಸಾಕಾಗುತ್ತದೆಯೇ ಎಂದು ವೈದ್ಯಕೀಯ ಸೇವಾ ಕೇಂದ್ರದ ಅಧ್ಯಕ್ಷೆ ಡಾ. ಕೆ. ಸುಧಾ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ನಡೆದ ಎಂಎನ್‌ಸಿ ವಿರೋಧಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಆಯುಷ್‌ ಪದ್ಧತಿಯಲ್ಲಿ ಅಧ್ಯಯನ ಮಾಡಿದ ವೈದ್ಯರಿಗೆ ಆಧುನಿಕ ಪದ್ಧತಿಯ ಔಷಧಿಯನ್ನು ನೀಡುವ ಅವಕಾಶ ಕೊಡುವುದು ಅವೈಜ್ಞಾನಿಕ’ ಎಂದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ (ಎಐಎಸ್‌ಇಸಿ) ಕಾರ್ಯದರ್ಶಿ ಕೆ. ಉಮಾ, ‘ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಭ್ರಷ್ಟಾಚಾರ ಮುಕ್ತಗೊಳಿಸಲು ಮಸೂದೆ ರೂಪಿಸುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ’ ಎಂದರು.

‘ಅಧಿಕಾರಿಗಳು, ರಾಜಕಾರಣಿಗಳು, ಕೆಲವೇ ಮಂದಿ ವೈದ್ಯರು ಸೇರಿ ಮಸೂದೆಯನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಅರಿವಿಲ್ಲ. ವೈದ್ಯಕೀಯ ಕ್ಷೇತ್ರದ ತಜ್ಞರ, ವಿದ್ಯಾರ್ಥಿಗಳ, ಜನರ ಅಭಿಪ್ರಾಯ ಪಡೆದಿಲ್ಲ. ಈ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು’ ಎಂದರು.

‘ಮಸೂದೆ ವೈದ್ಯಕೀಯ ಶಿಕ್ಷಣದ ವಾಣಿಜ್ಯೀಕರಣಕ್ಕೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿಲಿದ್ದಾರೆ’ ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ನ (ಎಐಡಿಎಸ್ಒ) ಅಧ್ಯಕ್ಷ ಎನ್‌.ಪ್ರಮೋದ್‌ ಕಳವಳ ವ್ಯಕ್ತಪಡಿಸಿದರು.

ನಿರ್ಣಯ: ಮಸೂದೆಯನ್ನು ಕೈ ಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಮಸೂದೆಯು ರಾಜ್ಯ ಸರ್ಕಾರದ ಅಧಿಕಾರವನ್ನೂ ಕಸಿದುಕೊಳ್ಳಲಿದೆ. ಹಾಗಾಗಿ ಇದನ್ನು ವಿರೋಧಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಮ್ಮೇಳನದಲ್ಲಿ  ನಿರ್ಣಯ ಕೈಗೊಳ್ಳಲಾಯಿತು.

ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಂಸತ್‌ ಸ್ಥಾಯಿ ಸಮಿತಿಗೆ ಮನವಿ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಎಐಎಸ್‌ಇಸಿ, ಐಎಂಎ, ಎಂಎಸ್‌ಸಿ, ಎಐಡಿಎಸ್‌ಒ ಸಂಸ್ಥೆಗಳು ಸೇರಿ ಈ ಸಮ್ಮೇಳನವನ್ನು ಆಯೋಜಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry